ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತ ರೈತ ಕುಟುಂಬದ ಪ್ರತಿಭಟನೆ

Last Updated 20 ಜೂನ್ 2017, 8:58 IST
ಅಕ್ಷರ ಗಾತ್ರ

ಹಾಸನ: ‘ಜಮೀನಿನಲ್ಲಿ  ಬೆಳೆದಿದ್ದ ನೂರಾರು ಮರಗಳನ್ನು ಕಡಿದು ಹಾಕಿ ದೌರ್ಜನ್ಯ ನಡೆಸಿರುವವರ ವಿರುದ್ಧ  ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿ ಹೊಳೆನರಸೀಪುರ ತಾಲ್ಲೂಕಿನ ಟಿ.ಅಂಕನಹಳ್ಳಿ ಗ್ರಾಮದ ತಿಮ್ಮೇಗೌಡ ಮತ್ತು ಕುಟುಂಬದವರು ಸೋಮವಾರ ಪ್ರತಿಭಟನೆ ನಡೆಸಿದರು.

‘ಟಿ.ಅಂಕನಹಳ್ಳಿ ಸರ್ವೆ ನಂ. 18 ರಲ್ಲಿ ಐದು ಎಕರೆ ಪಿತ್ರಾರ್ಜಿತ ಜಮೀನಿನಲ್ಲಿ ನೂರಾರು ಮರಗಳನ್ನು (ನೀಲಗಿರಿ, ಗೊಬ್ಬಳಿ, ಆಲದ ಮರ) ಬೆಳೆಯಲಾಗಿದೆ. ಪಿತ್ರಾರ್ಜಿತವಾಗಿ ಬಂದಂತಹ ಜಮೀನು ನಮ್ಮ ಸ್ವಾಧೀನದಲ್ಲಿ ಇದ್ದು, ಸಾಗುವಳಿ ಮಾಡಲಾಗುತ್ತಿದೆ. ಆದರೆ, ಗ್ರಾಮದ ದೊಡ್ಡೇಗೌಡ ಮತ್ತು ಅವರ ಮಕ್ಕಳು ಜಮೀನನ್ನು ಲಪಟಾಯಿಸಲು ಕುತಂತ್ರ ರೂಪಿಸಿದ್ದಾರೆ’ ಎಂದು ತಿಮ್ಮೇಗೌಡ ಆರೋಪಿಸಿದರು.

‘ಪಿತ್ರಾರ್ಜಿತ ಆಸ್ತಿಯ ಮೇಲೆ ಕಣ್ಣು  ಹಾಕಿದ್ದು, ನಮ್ಮ ಜಮೀನಿನ 20 ಗುಂಟೆಯಲ್ಲಿ ಬೆಳೆದಿದ್ದ ಮರಗಳನ್ನು ಕಡಿದು ಹಾಕಿ ದೌರ್ಜನ್ಯ ಎಸಗಿದ್ದಾರೆ. ದೊಡ್ಡೇಗೌಡರ ಮಗ ಪೊಲೀಸ್ ಅಧಿಕಾರಿಯಾಗಿದ್ದು, ಅಧಿಕಾರದ ದರ್ಪ ಹಾಗೂ ಕುಮ್ಮಕ್ಕಿನಿಂದ ಅವರ ಸಹೋದರರು ಭಾನುವಾರ ಬೆಳಿಗ್ಗೆ ಜಮೀನಿಗೆ ನುಗ್ಗಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ದೂರಿದರು.

‘ಮರ ಕತ್ತರಿಸುವ ಯಂತ್ರದ ಮೂಲಕ ಜಮೀನಿನಲ್ಲಿ ಇದ್ದಂತಹ ವಿವಿಧ ಜಾತಿಯ ಮರಗಳನ್ನು ಕಡಿದು ಹಾಕಿದ್ದಾರೆ. ಅದನ್ನು ತಡೆಯಲು ಬಂದವರನ್ನೇ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.  ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಮರಗಳು ಹಾಗೂ ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಹೇಳಿದರು.

‘ ಈ ಘಟನೆ ಬಳಿಕ ದೊಡ್ಡೇಗೌಡರ ಮಕ್ಕಳು ಜಮೀನಿನಿಂದ ಅಕ್ರಮವಾಗಿ ಕೆಲವು ಮರಗಳನ್ನು ಸಾಗಿಸಿದ್ದಾರೆ. ನಮಗೆ ರಕ್ಷಣೆ ಇಲ್ಲದಂತಾಗಿದೆ. ಅರಣ್ಯ ಇಲಾಖೆಯವರು ಕೂಡಲೇ ತಪ್ಪಿತಸ್ಥರ ವಿರುದ್ಧ   ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿ  ಜಿಲ್ಲಾಧಿಕಾರಿ ವಿ.ಚೈತ್ರಾ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಿಮ್ಮೇಗೌಡ, ಜವರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT