ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಜಾರಿಗೆ ದಿನಗಣನೆ...

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಳ್ಳದ ಕಾರಣಕ್ಕೆ ಮುಂದೂಡಬೇಕು ಎನ್ನುವ ಹಕ್ಕೊತ್ತಾಯದ ಮಧ್ಯೆಯೇ 10 ದಿನಗಳ ನಂತರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ದೇಶದಾದ್ಯಂತ ಜಾರಿಗೆ ಬರುವುದು ಖಚಿತವಾಗಿದೆ. ಮುಂದೂಡಿಕೆ ಕುರಿತ ಊಹಾಪೋಹಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಪೂರ್ಣ ವಿರಾಮ ಹಾಕಿದೆ.

ದೇಶಿ ಉದ್ದಿಮೆ –ವಹಿವಾಟು ಹೊಸ ತೆರಿಗೆ ವ್ಯವಸ್ಥೆಗೆ ರೂಪಾಂತರಗೊಳ್ಳುವ ಈ ಹಂತದಲ್ಲಿ ದೇಶದಾದ್ಯಂತ ಗ್ರಾಹಕ ಬಳಕೆ ಸರಕುಗಳಿಗೆ ಸಂಬಂಧಿಸಿದಂತೆ ವ್ಯಾಪಕ ಚಟುವಟಿಕೆಗಳು ನಡೆಯುತ್ತಿವೆ. ಜುಲೈ 1ರ ಮುಂಚೆ ತಮ್ಮ ದಾಸ್ತಾನು ಕರಗಿಸಿ ನಷ್ಟದ ಹೊರೆ ಕಡಿಮೆ ಮಾಡಿಕೊಳ್ಳಲು ಗೃಹ ಬಳಕೆ ಸರಕು, ಬೈಕ್‌ ಮತ್ತು ಕಾರುಗಳ ಮಾರಾಟಕ್ಕೆ ಭಾರಿ ರಿಯಾಯ್ತಿಗಳ ಕೊಡುಗೆ ಒಡ್ಡಲಾಗುತ್ತಿದೆ.

ಕೆಲವರು ತಯಾರಿಕೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ತಮ್ಮ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಲು ವಿವಿಧ   ವರ್ತಕ ಸಂಘಟನೆಗಳು ಪ್ರತಿಭಟನೆ – ಬಂದ್‌ ಆಚರಿಸುತ್ತಿವೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಜಿಎಸ್‌ಟಿ ಜಾರಿಗೆ ದಿನಗಣನೆ ಆರಂಭವಾಗಿದೆ.

ವಜ್ರ, ಹಾರ್ಡ್‌ವೇರ್‌, ಜವಳಿ ಮತ್ತು  ದವಸ ಧಾನ್ಯಗಳ ಸಗಟು ವರ್ತಕರು ಸೂರತ್‌, ಲಖನೌ, ಅಹ್ಮದಾಬಾದ್‌, ರಾಂಚಿ, ದೆಹಲಿ, ಭೋಪಾಲ್‌, ಅಮೃತಸರಗಳಲ್ಲಿ ತಮ್ಮ ಕೆಲ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ಬಂದ್‌ ಕೂಡ ಆಚರಿಸಿದ್ದಾರೆ.

ಅನೇಕ ಉದ್ದಿಮೆ ವಹಿವಾಟುಗಳು ಸನ್ನದ್ಧಗೊಂಡಿರದ ಕಾರಣಕ್ಕೆ ಮುಂದೂಡಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಕೂಡ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.

ಶೇ 28ರ ತೆರಿಗೆ ಹಂತದಲ್ಲಿ ಕೇವಲ ವಿಲಾಸಿ  ಮತ್ತು ಆರೋಗ್ಯಕ್ಕೆ ಹಾನಿಕರವಾದ ಸರಕು ಮತ್ತು ಸೇವೆಗಳನ್ನು ತರಬೇಕು ಎನ್ನುವುದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಹಕ್ಕೊತ್ತಾಯವಾಗಿದೆ. ಈ ಬೇಡಿಕೆಯನ್ನು ಮಂಡಳಿಯು ಪರಿಗಣನೆಗೆ ತೆಗೆದುಕೊಂಡಿಲ್ಲ.

ಈ ತೆರಿಗೆ  ಹಂತವೇ ವರ್ತಕರ ಸಮುದಾಯದ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ. ಇಂತಹ ಅಸಂಗತ, ಅಸಮಾನತೆ, ವಿರೋಧಾಭಾಸಗಳೇ ಉತ್ತಮ ತೆರಿಗೆ ವ್ಯವಸ್ಥೆಯಾಗಿರುವ ಜಿಎಸ್‌ಟಿ ಜಾರಿಗೆ ಸಂಬಂಧಿಸಿದ ಉತ್ಸಾಹ ಉಡುಗಿಸಲಿವೆ ಎನ್ನುವ ಅಭಿಪ್ರಾಯ ಉದ್ಯಮ ವಲಯದಲ್ಲಿ ಇದೆ.

ವ್ಯತಿರಿಕ್ತ ಪರಿಣಾಮ
ಈ ಎಲ್ಲ ಚಟುವಟಿಕೆಗಳು ಮುಂಬರುವ ದಿನಗಳಲ್ಲಿ (ಅಲ್ಪಾವಧಿ) ಆರ್ಥಿಕ ವೃದ್ಧಿ ದರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಅಸಂಘಟಿತ ವಲಯವು ಹೊಸ ವ್ಯವಸ್ಥೆಗೆ ಬದಲಾಗಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳ ದಿರುವುದು ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆಯೂ ಇದೆ. 2017–18ನೆ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ 7.2 ರಿಂದ ಶೇ 7.5ರಷ್ಟು ಇರಲಿದೆ ಅಂದಾಜಿಸಲಾಗಿದೆ. ಆದರೆ, ಇಲ್ಲಿ ಜಿಎಸ್‌ಟಿ ಬೀರಲಿರುವ ಪರಿಣಾಮಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಜಿಎಸ್‌ಟಿ ಜಾರಿಗೆ ತಂದಿರುವ ಆಸ್ಟ್ರೇಲಿಯಾ, ಮಲೇಷ್ಯಾ, ಕೆನಡಾ ಮತ್ತು ಸಿಂಗಪುರಗಳಲ್ಲಿ ಜಿಎಸ್‌ಟಿ ಜಾರಿಗೆ ತಂದ ವರ್ಷದ ಕೆಲ ತ್ರೈಮಾಸಿಕ ಅವಧಿಗಳಲ್ಲಿ ಜಿಡಿಪಿ ಕುಸಿತ ದಾಖಲಿಸಿದೆ. ಕೆಲವು ದೇಶಗಳಲ್ಲಿ ಹಣದುಬ್ಬರವೂ ಏರಿಕೆ ಕಂಡಿದೆ. ಭಾರತದಲ್ಲಿಯೂ ಅಲ್ಪಾವಧಿಯಲ್ಲಿ ಆರ್ಥಿಕ ವೃದ್ಧಿ ದರ ಕುಂಠಿತಗೊಳ್ಳಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಗೆ ಬದಲಾಗುವ ಸಂದರ್ಭದಲ್ಲಿ ಎದುರಾಗುವ ಕೆಲ ಪ್ರತಿಕೂಲತೆಗಳು ಆರ್ಥಿಕ ಬೆಳವಣಿಗೆ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿವೆ.

ಅಲ್ಪಾವಧಿಯಲ್ಲಿನ ಈ ಪ್ರತಿಕೂಲತೆಗಳನ್ನು  ಬದಿಗಿಟ್ಟು ನೋಡಿದರೆ, ದೀರ್ಘಾವಧಿಯಲ್ಲಿ ಜಿಎಸ್‌ಟಿಯು ದೇಶಿ ಆರ್ಥಿಕತೆಗೆ ಒಳಿತನ್ನೇ ಉಂಟು ಮಾಡಲಿದೆ. ಎರಡರಿಂದ ಮೂರು ವರ್ಷಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಭಾರಿ ಉತ್ತೇಜನ ಸಿಗುವ ನಿರೀಕ್ಷೆ ಇದೆ. ತೆರಿಗೆ ಸಂಗ್ರಹ ಹೆಚ್ಚಳ ಮತ್ತು ಚಾಲ್ತಿ ಖಾತೆ ಸಮತೋಲನ ಕಾಯ್ದುಕೊಳ್ಳಲು ಗಮನಾರ್ಹ ಕೊಡುಗೆಯನ್ನೂ ನೀಡಲಿದೆ.

ಏಕರೂಪದ ತೆರಿಗೆ ವ್ಯವಸ್ಥೆಯು ಸರಕು ಮತ್ತು ಸೇವೆಗಳ ವಹಿವಾಟಿನ ಸ್ವರೂಪವನ್ನು ಸರಳೀಕರಣಗೊಳಿಸಿದೆ. ಉದ್ದಿಮೆ –ವಹಿವಾಟು ನಡೆಸಲು ಪೂರಕ ವಾತಾವರಣವನ್ನೂ ಕಲ್ಪಿಸಿಕೊಡಲಿದೆ.ಹೊಸ ವ್ಯವಸ್ಥೆಗೆ ಸೂಕ್ತವಾಗಿ ಹೊಂದಿಕೊಳ್ಳಲು ಸಂಘಟಿತ ರಿಟೇಲ್‌ ಮಾರಾಟ ಸಂಸ್ಥೆಗಳು ಮುಂದಾಗಿವೆ.

ಆಧುನಿಕ ವ್ಯಾಪಾರ – ವಹಿವಾಟಿಗೆ ‘ಜಿಎಸ್‌ಟಿ’ಯು ಎಲ್ಲರಿಗೂ ಸಮಾನ ಅವಕಾಶ ಒದಗಿಸಿ ಕೊಡಲಿದೆ.  ಒಟ್ಟಾರೆ ವಹಿವಾಟಿನ ಸ್ವರೂಪವು ಸಂಘಟಿತ ರೂಪದಲ್ಲಿ ಇರಲಿದೆ. ಯಾವುದೇ ಕಾರಣಕ್ಕೂ ಗ್ರಾಹಕರು ಅಸಮಾಧಾನಗೊಳ್ಳದಂತೆ ನೋಡಿಕೊಳ್ಳುವುದು ಸಂಘಟಿತ ರಿಟೇಲ್‌ ಮಾರಾಟ ಸಂಸ್ಥೆಗಳು ಎದುರಿಸುವ ಅತಿದೊಡ್ಡ ಸವಾಲಾಗಿದೆ. ತೆರಿಗೆ ದರಗಳು ಸಂಕೀರ್ಣ ಸ್ವರೂಪದಲ್ಲೇನೂ ಇಲ್ಲ. ಹೀಗಾಗಿ ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮವನ್ನೇನೂ ಬೀರುವ ಸಾಧ್ಯತೆಗಳಿಲ್ಲ. ಆದರೆ, ಉದ್ಯಮಿಗಳು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಮತ್ತು ಇ–ವೇ ಬಿಲ್ಸ್‌ ಬಗ್ಗೆ ಇನ್ನಷ್ಟು ಸ್ಪಷ್ಟತೆಯ ನಿರೀಕ್ಷೆಯಲ್ಲಿ ಇದ್ದಾರೆ.

ಐ.ಟಿ ಅನುಮಾನ
ಸಾಫ್ಟ್‌ವೇರ್‌ ಅಳವಡಿಕೆ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಎದುರಾಗಿರುವ ಸಮಸ್ಯೆಗಳ ಕಾರಣಕ್ಕೆ ತೆರಿಗೆದಾರರು ಹೊಸ ವ್ಯವಸ್ಥೆಗೆ ವಲಸೆ ಹೋಗಲು ಕೆಲ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ. ಹಾಲಿ ತೆರಿಗೆದಾರರು ಜಿಎಸ್‌ಟಿಗೆ ವರ್ಗಾವಣೆಗೊಳ್ಳಲು  ಸರ್ವರ್‌ ನಿರಂತರವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಇದಕ್ಕಾಗಿ ಐ.ಟಿ  ಮೂಲ ಸೌಕರ್ಯವನ್ನು ಸೂಕ್ತ ರೀತಿಯಲ್ಲಿ ಪರೀಕ್ಷಿಸಲಾಗಿದೆಯೇ ಎಂದು ಅಸೋಚಾಂನ  ಮಹಾ ಕಾರ್ಯದರ್ಶಿ ಡಿ. ಎಸ್‌. ರಾವತ್‌ ಪ್ರಶ್ನಿಸಿದ್ದಾರೆ.

ಪರಿಹಾರ ಕಾಣದ ಇ–ವೇ ಬಿಲ್‌
ಇ–ವೇ ಬಿಲ್‌ (e-way bill ) ಕರಡು ನಿಯಮಾವಳಿಗಳ ಪ್ರಕಾರ, ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳ ರಾಜ್ಯದ ಒಳಗಿನ  ಅಥವಾ ಹೊರ ರಾಜ್ಯಗಳ ಸಾಗಾಣಿಕೆಯನ್ನು ಜಿಎಸ್‌ಟಿಎನ್‌ ಅಂತರ್ಜಾಲ ತಾಣದಲ್ಲಿ ನೋಂದಾಯಿಸಬೇಕು.  ತೆರಿಗೆ ಪಾವತಿ ತಪ್ಪಿಸುವುದು ಇದರ  ಮುಖ್ಯ ಉದ್ದೇಶವಾಗಿದೆ.

ಸರಕು ಕ್ರಮಿಸುವ ದೂರ ಆಧರಿಸಿ (ಒಂದು ದಿನಕ್ಕೆ 100 ಕಿ.ಮೀ) ಮತ್ತು 15 ದಿನಗಳಿಗೆ (1,000 ಕಿ.ಮೀ)  ಜಿಎಸ್‌ಟಿಎನ್‌ ಇ–ವೇ ಬಿಲ್ ತಯಾರಿಸುತ್ತದೆ. ಸರಕು ಸಾಗಣೆ ಹಂತದಲ್ಲಿ ತೆರಿಗೆ ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿ ತೆರಿಗೆ ಪಾವತಿ ತಪ್ಪಿಸುವ ಬಗ್ಗೆ ತಪಾಸಣೆ ನಡೆಸಬಹುದಾಗಿದೆ.

₹ 50 ಸಾವಿರದ ಮಿತಿ ನಿಗದಿಪಡಿಸಿರುವುದು ತುಂಬ ಕಡಿಮೆ ಮೊತ್ತವಾಯಿತು. ಸಾಗಣೆ ಪ್ರಕ್ರಿಯೆ ಪೂರ್ಣಗೊಳ್ಳಲು ನಿಗದಿಪಡಿಸಿರುವ ಸಮಯ ಪಾಲನೆ ಸಾಧ್ಯವಾಗಲಾರದು ಎಂದು ಉದ್ಯಮ ವಲಯ ತನ್ನ ಆತಂಕ ವ್ಯಕ್ತಪಡಿಸಿದೆ.

ಎಲ್ಲ ಬಗೆಯ ಸರಕುಗಳಿಗೆ ಇ–ವೇ ಬಿಲ್‌ ಅನ್ವಯಿಸಬೇಕು ಎಂದೂ ವರ್ತಕರು ಬಯಸಿದ್ದಾರೆ. ಇದಕ್ಕೆ ಸಂಬಂಧಿಸಿದ ಮೂಲ ಸೌಕರ್ಯ ಅಳವಡಿಸಲು ಇನ್ನೂ ಎರಡು ತಿಂಗಳ ಕಾಲಾವಕಾಶ ಬೇಕಾಗಿದೆ ಎಂದು ಈಗ ಸರ್ಕಾರವೇ ಹೇಳಿದೆ. ಅಲ್ಲಿಯವರೆಗೆ ಸದ್ಯಕ್ಕೆ ಜಾರಿಯಲ್ಲಿ ಇರುವ ವ್ಯವಸ್ಥೆಯೇ ಮುಂದುವರೆಯಲಿದೆ.

ಹೆಚ್ಚುವರಿ ಲಾಭಕ್ಕೆ ಕಡಿವಾಣ
ಕರಡು ನಿಯಮಗಳ ಪ್ರಕಾರ, ಯಾವುದೇ ವರ್ತಕ ಅಥವಾ ಉದ್ದಿಮೆ ಸಂಸ್ಥೆಯು ಜಿಎಸ್‌ಟಿಯ ಕಡಿಮೆ ತೆರಿಗೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ, ಹೆಚ್ಚುವರಿ ಲಾಭ ಮಾಡಿಕೊಳ್ಳುವ ಕುರಿತ ದೂರುಗಳನ್ನು ಇತ್ಯರ್ಥಪಡಿಸಲು ಪ್ರಾಧಿಕಾರ ರಚಿಸಲು ಉದ್ದೇಶಿಸಲಾಗಿದೆ.

ಸುಗಮ ಜಾರಿ ನಿರೀಕ್ಷೆ
ಅತ್ಯಂತ ಸಮಗ್ರ ಸ್ವರೂಪದ ಪರೋಕ್ಷ ತೆರಿಗೆ ಸುಧಾರಣೆ ಜಾರಿ ದಿನ ಹತ್ತಿರ ಬರುತ್ತಿದ್ದಂತೆ ಸರ್ಕಾರದ ಮಟ್ಟದಿಂದ ಹಿಡಿದು ಸಣ್ಣ ವರ್ತಕರು, ಉದ್ಯಮ ಲೋಕದ ಎಲ್ಲ ಭಾಗಿದಾರರು ಹೊಸ ವ್ಯವಸ್ಥೆಯು ಸುಗಮವಾಗಿ ಜಾರಿಗೆ ಬರುವುದನ್ನು ಎದುರು ನೋಡುತ್ತಿದ್ದಾರೆ. ಸರ್ಕಾರ, ಉದ್ಯಮ ಮತ್ತು ತೆರಿಗೆ ಪಾವತಿದಾರರ ಹಂತದಲ್ಲಿ ವಿವಿಧ ಸಿದ್ಧತೆಗಳೂ ನಡೆಯುತ್ತಿವೆ.

ಜಿಎಸ್‌ಟಿ ಮಂಡಳಿ
ಹದಿನೇಳು ಬಾರಿ ಸಭೆ ಸೇರಿರುವ ಜಿಎಸ್‌ಟಿ ಮಂಡಳಿಯು ಬಹುತೇಕ ವಿಷಯಗಳಲ್ಲಿ ಎಲ್ಲ ರಾಜ್ಯಗಳು ಸಹಮತಕ್ಕೆ ಬರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಜ್ಯದಿಂದ ರಾಜ್ಯಕ್ಕೆ ಸಾಗಾಣಿಕೆಯಾಗುವ ಸರಕುಗಳಿಗೆ ಸಂಬಂಧಿಸಿದ ವಿವಾದಾತ್ಮಕ ‘ಇ–ವೇ ಬಿಲ್‌’ಗೆ ಇನ್ನೂ ಪರಿಹಾರ ಕಂಡುಕೊಳ್ಳಲು ಮಾತ್ರ ಸಾಧ್ಯವಾಗಿಲ್ಲ.

ಉದ್ಯಮಿಗಳು ತಮ್ಮ ಅನುಮಾನಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವುದಕ್ಕೆ ನೆರವಾಗಲು ಟ್ವಿಟರ್‌ ಖಾತೆ (@askGST_GoI—) ಆರಂಭಿಸಲಾಗಿದೆ. ರಾಜ್ಯದಲ್ಲಿಯೂ ವಾಣಿಜ್ಯ ತೆರಿಗೆ ಇಲಾಖೆಯು ಪ್ರತಿಯೊಂದು ಜಿಲ್ಲೆಯಲ್ಲಿ ಕಾರ್ಯಾಗಾರ ಏರ್ಪಡಿಸಿ ಉದ್ಯಮಿಗಳಿಗೆ ಹೊಸ ವ್ಯವಸ್ಥೆ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದೆ.

ಬ್ಯಾಂಕ್‌ಗಳ ಸಿದ್ಧತೆ
ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ತಮ್ಮ ಐ.ಟಿ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ಬ್ಯಾಂಕ್‌ಗಳು ರಾಜ್ಯವಾರು ವರಮಾನ ಮತ್ತು ತೆರಿಗೆ ಪಾವತಿ ಅಂಕಿ ಅಂಶಗಳನ್ನು ನಿರ್ವಹಣೆ ಮಾಡಬೇಕಾಗಿದೆ. ಜಿಎಸ್‌ಟಿಗೆ ಪೂರಕವಾದ ಐ.ಟಿ ವ್ಯವಸ್ಥೆ ಅಳವಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಬೆಲೆಪಟ್ಟಿ ಸಿದ್ಧಪಡಿಸಲು ಸಾಧ್ಯವಾಗದೆ ‘ಉದ್ಯಮ ಗ್ರಾಹಕರು’ ಇನ್‌ಪುಟ್‌ ಕ್ರೆಡಿಟ್‌ ಪಡೆಯಲು ಸಾಧ್ಯವಾಗಲಾರದು.

ಸಣ್ಣ ಉದ್ದಿಮೆಗಳು
ಸಣ್ಣ ಪ್ರಮಾಣದ ಉದ್ದಿಮೆದಾರರು  ಸಂಕೀರ್ಣ ಸ್ವರೂಪದ ಜಿಎಸ್‌ಟಿ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಸರಳವಾಗಿ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಅವರೆಲ್ಲ ಲೆಕ್ಕಪತ್ರ ತಪಾಸಿಗರ ಬಳಿ ಎಡತಾಕುತ್ತಿದ್ದಾರೆ.

ಸೇವಾ ಸೌಲಭ್ಯ
ತೆರಿಗೆ ಪಾವತಿದಾರರು ಜಿಎಸ್‌ಟಿಎನ್‌ ಅಂತರ್ಜಾಲ ತಾಣದಲ್ಲಿ ತಮ್ಮ ರಿಟರ್ನ್ಸ್‌ಗಳನ್ನು ನೇರವಾಗಿ ಸಲ್ಲಿಸಬಹುದು. ಅಪ್ಲಿಕೇಷನ್‌ ಸರ್ವಿಸ್‌ ಪ್ರೊವೈಡರ್ಸ್‌ (ಎಎಸ್‌ಪಿ) ಮತ್ತು ಜಿಎಸ್‌ಟಿ ಸುವಿಧಾ ಪ್ರೊವೈಡರ್ಸ್‌ (ಜಿಎಸ್‌ಪಿ)  ಮೂಲಕವೂ ಸುಲಭ ಮತ್ತು ತ್ವರಿತವಾಗಿ ರಿಟರ್ನ್ಸ್‌ಗಳನ್ನು ಸಲ್ಲಿಸಬಹುದು.

ಜಿಎಸ್‌ಟಿಎನ್‌ ನೆಟ್‌ವರ್ಕ್‌
85 ಲಕ್ಷದಷ್ಟು ನೋಂದಾಯಿತ ತೆರಿಗೆದಾರರು ಜಿಎಸ್‌ಟಿ ಸಂಪರ್ಕ ಜಾಲಕ್ಕೆ (ಜಿಎಸ್‌ಟಿಎನ್‌) ಸೇರ್ಪಡೆಯಾಗಲಿದ್ದಾರೆ. ಕೋಟ್ಯಂತರ ವಹಿವಾಟು ನಿರ್ವಹಿಸಲು ‘ಜಿಎಸ್‌ಟಿಎನ್‌’ಗೆ ಸುಸಜ್ಜಿತ ತಂತ್ರಜ್ಞಾನದ ಮೂಲ ಸೌಕರ್ಯಗಳು ಇರಬೇಕಾಗಿದೆ. ಸಣ್ಣ – ಪುಟ್ಟ ದೋಷಗಳೂ ದೊಡ್ಡ ಅಡಚಣೆ ಉಂಟು ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT