ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಆರೋಗ್ಯದ ಮಹಾದರ್ಶನ

Last Updated 21 ಜೂನ್ 2017, 4:56 IST
ಅಕ್ಷರ ಗಾತ್ರ

ಈಗ ಯೋಗ ಎನ್ನುವುದನ್ನು ಅಭ್ಯಾಸ ಎನ್ನುವುದರ ಜೊತೆಗೆ ಮಾಡುತ್ತಿದ್ದೇವೆ. ಇದು ಎಕ್ಸರ್‌ಸೈಸ್ ಎನ್ನುವುದಕ್ಕೆ ಸಮಾನವಾಗಿ ಇದೆ. ಭಾರತೀಯ ಜಿಮ್ ಎಂತಲೂ ವಿಶ್ವವ್ಯಾಪಿ ಭಾರತೀಯ ವ್ಯಾಯಮ ಎಂತಲೂ ಇದಕ್ಕೆ ಈಗ ಮನ್ನಣೆ. ದೇಹದ ಜೊತೆಗೆ ಮಾನಸಿಕ ದಾರ್ಢ್ಯವೂ ಯೋಗದಿಂದ ಆಗುತ್ತದೆ ಎನ್ನುವುದು ಇದರ ಹಿರಿಮೆ. ಇದೆಲ್ಲ ಸರಿಯೆ. ಆದರೆ ಇಲ್ಲಿಯೇ ಕೆಲವು ಗೊಂದಲಗಳೂ ಅಡ್ಡದಾರಿಗಳೂ ಇರುವುದು.

‘ಯೋಗ’ ಎಂಬ ಪದಕ್ಕೆ ಸೇರುವುದು ಸೇರಿಸುವುದು ಎಂಬರ್ಥಗಳು ಗೊತ್ತೇ ಇವೆ. ದೇಹ-ಮನಸ್ಸು; ಆತ್ಮ-ಪರಮಾತ್ಮ ಇವುಗಳ ಜೋಡಣೆ ಎಂದು ಸಾಮಾನ್ಯವಾಗಿ ಉದ್ಘೋಷಿತವಾಗುತ್ತಿರುತ್ತದೆ. ಈ ವಿಷಯಗಳ ಬಗ್ಗೆ ಈ ದೇಶದ ಹಲವಾರು ದೃಷ್ಟಿಕೋನಗಳನ್ನು ತಮ್ಮಿಚ್ಛೆಯಂತೆ ಬೆರೆಸುವುದೂ ಇದೆ.

ಅಷ್ಟೆ ಅಲ್ಲ, ಯೋಗದ ವಿಧಾನಗಳನ್ನೂ, ಅದರ ಧ್ಯೇಯಗಳನ್ನೂ ಅದರ ಭಾಗಗಳನ್ನೂ ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಬಳಸಿಕೊಳ್ಳುವ ನಿರಂತರ ಪ್ರಕ್ರಿಯೆ ಈ ದೇಶದ ಬಹುಮುಖಿ ಸಂಸ್ಕೃತಿಯ ದ್ಯೋತಕ. 800 ವರ್ಷಗಳಿಗೂ ಹಿಂದಿನಿಂದಲೇ ಯೋಗಿ-ಜೋಗಿ-ಜಂಗಮ ಎನ್ನುವಂತಹ ಕೂಡು ಶಬ್ದಗಳಲ್ಲಿ ಸಂಸ್ಕೃತವಿಧಾನದ ಯೋಗಿಗಳೂ ಪ್ರಾಕೃತವಿಧಾನದ ಜೋಗಿಗಳೂ ಸಂಗಮಿಸಿದ್ದಾರೆ.

ಯೋಗಿನಿಗಣಗಳು ಜೋಗಿಣಿಯರಾಗಿ ಜೋಗತಿ ಜೋಗೆರಪ್ಪಗಳಾಗಿ ಒಂದೊಮ್ಮೆ ಪವಾಡ ಮಾಡುವವರಾಗಿ ಈಗ ಅವಹೇಳನಕ್ಕೆ ಒಳಗಾದವರಾಗಿಯೂ ಇದ್ದಾರೆ. ಹೊಸ ಜೋಗೇರರು ಹುಟ್ಟಿಕೊಳ್ಳುತ್ತಿದ್ದಾರೆ. ಹರಪ್ಪ–ಮೊಹೆಂಜೊದಾರಗಳು ಮತ್ತು ವೇದಗಳ ಕಾಲದಿಂದ ಹಿಡಿದು ಯೊಗ–ಡೇವರೆಗೆ ಯೋಗದ ಚರ್ಯೆಯೇ ಭಾರತೀಯ ಸಂಸ್ಕೃತಿಯ ಚಲನಶೀಲತೆಗೆ ಒಂದು ಸೂಚನೆ.

ಯೋಗ ಎಂದೊಡನೆ ಯೋಗ್ಯವಾಗಿಯೇ ಮನಸ್ಸಿಗೆ ಬರುವುದು ಕ್ರಿ.ಪೂ. 1-2ಶತಮಾನದ ಪತಂಜಲಿಯ ಯೋಗಸೂತ್ರಗಳು. ಪತಂಜಲಿ ತನ್ನ ಕಾಲದವರೆಗಿನ ಯೋಗವಿಧಾನವನ್ನು ಒಂದು ಶಾಸ್ತ್ರದ ಚೌಕಟ್ಟಿಗೆ ತಂದಾತ. ಅವನನ್ನು ವೈದಿಕ ಪರಂಪರೆಯ ಹೆಗ್ಗಳಿಕೆಯ ಮಾತಾದ ಮಹರ್ಷಿ ಪದದಿಂದ ಸಂಬೋಧಿಸಿದೆ. ಅಲ್ಲಿ ಯೋಗವೆಂದರೆ ಚಿತ್ತವೃತ್ತಿ–ನಿರೋಧ. ಅದರ ಫಲಸ್ವರೂಪ ಅವಸ್ಥಾನ. ಇದು ಆಗುವುದು ಸಮಾಧಿಯಲ್ಲಿ ನೆಲೆಗೊಂಡಾಗ.

ಚಿತ್ತದ ಸ್ವರೂಪ ವಿವರಿಸಿ ಅದರ ಹೊರಮುಖವಾಗಿರುವ ವೃತ್ತಿಗಳನ್ನು ಮತ್ತು ಸಲ್ಲದ ಒಳಗಿನ ಜಾಡುಗಳನ್ನು ತಪ್ಪಿಸುವ ಪ್ರತ್ಯಾಹಾರ, ಹೊಸ ದಾರಿ ಹಿಡಿಸುವ ಧಾರಣ, ಚಿತ್ತದ ಅನ್ಯವೃತ್ತಿಗಳು ಧಾರಣಕ್ಕೆ ಅಡ್ಡಿಬರದಂತೆ ಸತತ ಪ್ರಯತ್ನದಿಂದ ಏಕಾಗ್ರಗೊಳಿಸುವ ಧ್ಯಾನ; ಧ್ಯಾನದ ಗೀಳೂ ಹೋಗಿ ಸಮಚಿತ್ತತೆಯ ಸಮಾಧಿ – ಇವು ಮಾನಸಿಕ ಅಭ್ಯಾಸಗಳು. ಇದಕ್ಕೆ ಪೂರಕವಾಗಿ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಅಪರಿಗ್ರಹ ಎಂಬ ಯಮಗಳೂ (ವ್ಯವಸ್ಥೆಯನ್ನು ಹತೋಟಿಗೆ ತರುವವು); ಶುಚಿ, ಸಂತೋಷ, ತಪಸ್ಸು (ಇದರಲ್ಲಿ ಉಪವಾಸಾದಿಗಳು ಸೇರುತ್ತವೆ), ಸ್ವಾಧ್ಯಾಯ, ಈಶ್ವರಪ್ರಣಿಧಾನ ಎಂಬ ನಿಯಮಗಳೂ ಶಿಸ್ತನ್ನು ತರುತ್ತವೆ.

ಆಗ ಆಸನ ಎಂದರೆ ಮುಂದೆ ಪ್ರತ್ಯಾಹಾರಾದಿಗಳನ್ನು ಮಾಡುವುದಕ್ಕೆ ಶ್ರಮವಾಗದೆ ಆದರೆ ನಿದ್ದೆಹೋಗದೆ ಸ್ಥಿರವೂ ಸುಖವೂ ಆದ ಭಂಗಿಯನ್ನು ಅಭ್ಯಸಿಸಬೇಕು. ಭಾವನೆಗಳ ವ್ಯತ್ಯಯದಿಂದ ಪ್ರಾಣ, ಎಂದರೆ ಉಚ್ಛ್ವಾಸ–ನಿಶ್ವಾಸಗಳು ಏರುಪೇರಾಗುತ್ತವೆ. ಹಾಗಾಗದೆ ದೇಹ-ಮನಸ್ಸುಗಳ ಮಧ್ಯವರ್ತಿಯಾದ ಪ್ರಾಣವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಪ್ರಾಣಾಯಾಮ. ಧಾರಣ–ಧ್ಯಾನ–ಸಮಾಧಿಗಳು ಸಂಪೂರ್ಣ ಅಂತರಂಗದವು. ಅವು ಮೂರು ಸೇರಿ ಸಂಯಮವಾಗುತ್ತದೆ. ಇದರಿಂದ ಹಲವಾರು ಚಿಚ್ಛಕ್ತಿಗಳು ಪ್ರಕಟಗೊಳ್ಳುತ್ತವೆ. ಆದರೆ ಸ್ವರೂಪ ಜ್ಞಾನವೇ ಪರಮಗುರಿ.

ಯೋಗವನ್ನೂ ಒಂದು ದರ್ಶನವೆಂದು ಪರಿಗಣಿಸಿದೆ. ಪೂರ್ವಮೀಮಾಂಸೆ-ಉತ್ತರಮೀಮಾಂಸೆ; ನ್ಯಾಯ-ವೈಶೇಷಿಕ ಎಂದಂತೆ ಸಾಂಖ್ಯ–ಯೋಗ ಎನ್ನುವುದನ್ನು ಯುಗಲಶಾಸ್ತ್ರವೆಂದು ಪರಿಗಣಿಸಲಾಗುತ್ತದೆ. ಮೀಮಾಂಸಾಶಾಸ್ತ್ರ ಶಬ್ದಪ್ರಾಮಾಣ್ಯಕ್ಕೂ, ನ್ಯಾಯಶಾಸ್ತ್ರ ತರ್ಕಕ್ಕೂ ಪ್ರಾಶಸ್ತ್ಯವನ್ನು ನೀಡಿದರೆ, ಯೋಗವು ಪ್ರತ್ಯಕ್ಷದಿಂದ ಅಲೌಕಿಕ ಪ್ರತ್ಯಕ್ಷಕ್ಕೆ ಅಥವಾ ಅಪರೋಕ್ಷಜ್ಞಾನಕ್ಕೆ ಮಹತ್ವ ನೀಡುತ್ತದೆ. ಇದಕ್ಕೆ ಪ್ರಮೇಯ ಸಿದ್ಧಾಂತಗಳನ್ನು ಸಾಂಖ್ಯಶಾಸ್ತ್ರ ಒದಗಿಸುತ್ತದೆ.

ಅಲ್ಲಿನ ಮುಖ್ಯ ಪ್ರಮೇಯ ಪುರುಷ ಮತ್ತು ಪ್ರಕೃತಿ. ಪುರುಷ ವೇದಾಂತದ ‘ಆತ್ಮ’ ಎನ್ನುವುದಕ್ಕೆ ಸಂವಾದಿ. ಪ್ರಕೃತಿ ಎನ್ನುವುದು ಆ ಪುರುಷ ಗುರುತಿಸುವ ಬುದ್ಧಿ-ಅಹಂಕಾರ- ಮನಸ್ಸು ಎಂಬ ಅಂತಃಕರಣಗಳನ್ನೂ, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಎಂಬ ಬಹಿಃಕರಣಗಳನ್ನೂ, ಜ್ಞಾನೇಂದ್ರಿಯಗಳ ಸಂಪರ್ಕಕ್ಕೆ ಬರುವ ಐದು ತನ್ಮಾತ್ರಗಳನ್ನೂ ಸ್ಥೂಲಪ್ರಪಂಚದ ಐದು ಭೂತಗಳನ್ನೂ ಕೂಡಿಕೊಂಡ ಪ್ರಪಂಚ ಎಂದರೆ ಹೊರ ಮತ್ತು ಒಳ ಪ್ರಪಂಚ ಎರಡೂ.

ಈ ಪ್ರಪಂಚ ವಿಕೃತಿ, ಅದರ ಮೂಲ ಪ್ರಕೃತಿ. ಇದು ಸತ್ವ, ರಜಸ್ ಮತ್ತು ತಮೊಗುಣಗಳಿಂದ ಕೂಡಿದೆ. ಈ ಪ್ರಪಂಚ ಸೃಷ್ಟಿಯಲ್ಲಿ ಪುರುಷ ಇದು ನಾನೆ, ಇದು ನನ್ನದೇ ಎಂದು ಸಿಲುಕಿಕೊಂಡಿದ್ದಾನೆ. ಅದರಿಂದ ಬಿಡಿಸಿಕೊಂಡು ಕೈವಲ್ಯ. ಸಾಂಖ್ಯ-ಜ್ಞಾನದ, ಯೋಗ-ಅಭ್ಯಾಸದ ಗುರಿ. ಅದರಿಂದ ಯೊಗಸೂತ್ರಕ್ಕೆ ವ್ಯಾಖ್ಯಾನ ಬರೆದ ಭೋಜನು ಪ್ರಕೃತಿ-ಪುರುಷರ ವಿಯೋಗವೇ ಯೋಗ ಎಂದ!

ಸಾಂಖ್ಯ–ಯೋಗಗಳು ಪರಮಪುರುಷಾರ್ಥಸಾಧನವೆಂದು ಲೋಕದಲ್ಲಿ ಪ್ರಸಿದ್ಧವಾದವು, ಶಿಷ್ಠರು ಒಪ್ಪಿರುವವು, ಶ್ರುತಿಯಲ್ಲೂ ಸೂಚಿತವಾದವು, ಅದರಿಂದಲೇ ಅದನ್ನು ಮೊದಲಿಗೆ ವಿರೋಧಿಸಿದರೂ, ವೇದವಿರುದ್ಧವಲ್ಲದ ಅವು ನಿಃಶ್ರೇಯಸ್ಸಿಗೆ ಅನುಕೂಲವೇ ಎಂದು ‘ಏತೇನ ಯೋಗಃ ಪ್ರತ್ಯುಕ್ತಃ’ ಎಂಬ ವೇದಾಂತಸೂತ್ರದ ಭಾಷ್ಯದಲ್ಲಿ ಹೇಳುತ್ತಾರೆ. ಹೀಗೆ ಹೊಂದಿಸಿಕೊಳ್ಳುವ ಪ್ರವೃತ್ತಿ ಭಗವದ್ಗೀತೆಯಲ್ಲಿ ಢಾಳಾಗಿ ಕಾಣಬಹುದು.

ಅಲ್ಲಿನ ನಾಲ್ಕನೇ ಅಧ್ಯಾಯದ ಮೊದಲಲ್ಲಿ ಕೃಷ್ಣ ನಾನೇ ಮೊದಲು ವಿವಸ್ವಾನನಿಗೆ ಹೇಳಿ ಅವನು ಮನುವಿಗೆ ಹೇಳಿಕೊಟ್ಟು, ಇಕ್ಷ್ವಾಕು ಮೊದಲಾದವರಲ್ಲಿ ಹರಿದ ಪರಂಪರೆ, ಕಾಲಕ್ರಮದಲ್ಲಿ ನಷ್ಟವಾಯಿತು. ಈ ಯೋಗವನ್ನು ನಾನು ನಿನಗೆ ಈಗ ಮತ್ತೆ ಹೇಳುತ್ತೇನೆ – ಎಂದದ್ದು.

ಯೋಗದ ಪರಂಪರೆ ರಾಜಮಾರ್ಗದಲ್ಲಿದ್ದು ಅಲ್ಲಿಂದ ಕಳಚಿ ಪುನಃ ಪ್ರತಿಷ್ಠೆಗೆ ಬರುವುದನ್ನು ಹೇಳುವಾಗ ಮತ್ತು ಅಲ್ಲಿಯೇ ‘ಯೋ ಯೋ ಯಾಂ ಯಾಂ ತನೂ ಬಹಕ್ತಃ ...’ ಯಾರು ಹೇಗೆ ಯಾವ ತನುವಿನಲ್ಲಿ ನನ್ನನ್ನು ಭಜಿಸುತ್ತಾರೊ ಅವರ ಶ್ರದ್ಧೆಯನ್ನು ನಾನು ಹಾಗೇ ಕಾಪಾಡುತ್ತೇನೆ – ಎಂಬ ಮಾತಿನ ಜೊತೆಗೆ ತೆಗೆದುಕೊಂಡರೆ ಹಲವು ಸಾಧನಗಳ ಯೋಗ ರಾಜಮಾರ್ಗವನ್ನು ಹೇಗೋ, ಒಳದಾರಿಗಳಲ್ಲೂ ಹಾಗೆ ನುಸುಳಿ ಹೋಗಿದೆ ಎಂದು ತಿಳಿಯುತ್ತದೆ.

ಭಗವದ್ಗೀತೆಯಲ್ಲೆ ವೇದದ ಯಜ್ಞ ಶಬ್ದವನ್ನು ತಪೋಯಜ್ಞ, ಜಪಯಜ್ಞ, ಜ್ಞಾನಯಜ್ಞ ಎಂದೆಲ್ಲ ರೀತಿಯಲ್ಲಿ ನಿರ್ವಚಿಸಿದಂತೆ ಯೋಗ ಎನ್ನುವುದನ್ನೂ ಕರ್ಮಯೊಗ, ಜ್ಞಾನಯೋಗ, ಭಕ್ತಿಯೋಗ ಎಂದು ಪುನರ್ನಿರ್ವಚಿಸಿದೆ. ಕ್ಷೇತ್ರ–ಕ್ಷೇತ್ರಜ್ಞಯೋಗ ಎಂಬ 13ನೇ ಅಧ್ಯಾಯದಲ್ಲಿ ಸಾಂಖ್ಯ–ಯೋಗವನ್ನೇ ವೇದಾಂತಕ್ಕೆ ಅಳವಡಿಸಿದೆ.

ಕ್ಷೇತ್ರ ಎಂದರೆ ಪ್ರಕೃತಿ, ಕ್ಷೇತ್ರಜ್ಞ ಎಂದರೆ ಪುರುಷ ಎನ್ನುವುದೂ ಹಳೆಯ ಪರಿಭಾಷೆಯೇ ಪರಿಭಾಷೆಗಳನ್ನು ಬದಲಿಸಿಕೊಳ್ಳುತ್ತಾ, ಹೊಂದಿಸಿಕೊಳ್ಳುತ್ತಾ, ಸೇರಿಸಿಕೊಳ್ಳುತ್ತಾ ಕಾಣಾದ-ಪಾಣೀನೀಯ ಸರ್ವಶಾಸ್ತ್ರೋಪಕಾರಕವಾದಂತೆ ಯೋಗ ಸರ್ವದರ್ಶನ, ಸಾಧನೋಪಕಾರಕವಾಗಿದೆ.

ಬುದ್ಧನು ಸತಿ ಎಂಬ ಧ್ಯಾನದ ಬಗ್ಗೆ ಕೊಟ್ಟ 140 ಉಪದೇಶಗಳನ್ನು ‘ಸಂಯುತ್ತನಿಕಾಯ’ದ ಸತಿಸಂಯುತ್ತ ಒಟ್ಟು ಮಾಡಿದೆ. ಇವೆಲ್ಲವೂ ಶೀಲದ ಬಲದಿಂದಲೇ ಸಂಗತವಾಗುವವು. ಬೌದ್ಧಧರ್ಮದ ಪಂಚಶೀಲಗಳಲ್ಲಿ ಮೊದಲ ನಾಲ್ಕು ಅಹಿಂಸ, ಸತ್ಯ, ಅಸ್ತೇಯ, ಬ್ರಹ್ಮಚರ್ಯಗಳು, ಯೋಗದಲ್ಲಿ ಯಮಗಳೆಂದು ಪ್ರಸಿದ್ಧವಾಗಿವೆ.

ಧಾರಣ ಧ್ಯಾನಗಳಲ್ಲೂ, ಕಾಮನೆಗಳನ್ನು ತೊಡೆದುಹಾಕಲು ಹೆಣವೇ ಮುಂತಾದವುಗಳ ಬಗ್ಗೆ ಗಮನ ಕೇಂದ್ರೀಕರಿಸುವುದು ಒಂದಾದರೆ, ದ್ವೇಷಾಸೂಯೆ ಮುಂತಾದವಕ್ಕೆ ಪ್ರತಿಯಾಗಿ ಮೈತ್ರೀ, ಕರುಣ, ಮುದಿತಾ ಉಪೇಕ್ಷಾ ಎಂಬ ಬ್ರಹ್ಮವಿಹಾರಗಳ, ಎಂದರೆ ಚಿತ್ತದ ಭಾವನೆಗಳನ್ನು ಹಸನಗೊಳಿಸುವ ಭಾವನಾ ಧ್ಯಾನಗಳು ಬೌದ್ಧಧರ್ಮದಲ್ಲಿ ಅಭ್ಯಸಿಸುವುದುಂಟು.

ಯೋಗಕ್ಕೆ ಅಡ್ಡಬರುವ ದುಃಖದೌರ್ಮನಸ್ಯಗಳನ್ನು ಪರಿಹರಿಸಲು ಯೋಗಸೂತ್ರವೂ ಇವನ್ನು ಹೇಳುತ್ತದೆ. ಬುದ್ಧನು ಯೋಗದ ಕ್ರಮಗಳನ್ನು ಅದರ ಸಾಂಖ್ಯದ ವಿವರಗಳಿಂದ ಬಿಡಿಸಿ ಸ್ವತಂತ್ರ ತಂತ್ರವಾಗಿ ಬಳಸಿಕೊಂಡವರಲ್ಲಿ ಪ್ರಮುಖ. ಚಿತ್ತಕ್ಕೇ ಗಮನ ಕೊಡುವ ವಿಧಾನವನ್ನೇ ಸ್ವತಂತ್ರಗೊಳಿಸಿ ಮುಂದೆ ಬೌದ್ಧಧರ್ಮದ ಶಾಖೆಗಳಲ್ಲಿ ಯೋಗಾಚಾರವೆಂಬ ಪಂಥವೇ ಒಂದಾಯಿತು.

ಸಮಾಧಿ-ಧ್ಯಾನ-ಧಾರಣಗಳು ಎಲ್ಲ ಶ್ರಮಣಪರಂಪರೆಗಳ ಮುಖ್ಯ ಸಾಧನವೇ ಆಗಿವೆ. ಜೈನರಲ್ಲಿ ಶುಕ್ಲಧ್ಯಾನವೇ ಮುಂತಾದ ಧ್ಯಾನಗಳೂ ಪ್ರಸಿದ್ಧ. ಕೈವಲ್ಯವೇ ಅಲ್ಲಿನ ಅಂತಿಮ ಗುರಿ. ‘ಪುರುಷಾರ್ಥಶೂನ್ಯಾನಾಂ ಗುಣಾನಾಂ ಪ್ರತಿಪ್ರಸವಃ ಕೈವಲ್ಯಂ ಸ್ವರೂಪಪ್ರತಿಷ್ಠಾ ವಾ ಚಿತಿಶಕ್ತಿರೇತಿ’ ಎಂಬ ಯೊಗಸೂತ್ರದ ಕೊನೆಯ ಮಾತು ಬೌದ್ಧ ಮತ್ತು ಜೈನ ಪರಿಭಾಷೆಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡಿರುವುದು ಗಮನಾರ್ಹ.

ಇಲ್ಲಿಯೇ ಯೋಗದ ಬಲದಿಂದ ಚಿತಿಶಕ್ತಿ ಬರುತ್ತದೆ ಎನ್ನುವುದು ಆ ಚಿಚ್ಛಕ್ತಿಯನ್ನೇ ಮುಖ್ಯವಾಗಿಸಿಕೊಂಡ ತಂತ್ರಶಾಸ್ತ್ರದ ಯೋಗವನ್ನೂ ಹೇಳುತ್ತದೆ. ದೇಶದ ಎಲ್ಲೆಡೆ ವಿವಿಧ ತಂತ್ರಗಳು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದು ಯೋಗದ ಒಳದಾರಿಗಳು ಈ ತಂತ್ರದ ಅನೇಕ ಅಂಶಗಳನ್ನು ತನ್ನಲ್ಲಿ ಅಡಕ ಮಾಡಿಕೊಂಡಿದೆ.

ಸಾಂಖ್ಯದರ್ಶನ ಭೌತಿಕ ದೇಹದೊಳಗೊಂದು ಸೂಕ್ಷ್ಮದೇಹವಿದೆ ಎಂದಿದ್ದರೆ, ತಂತ್ರ ದೇಹವ್ಯಾಪಕವಾಗಿ, ಆದರೆ ದೇಹ ಮೀರಿದ ಷಟ್ಚಕ್ರಗಳನ್ನು ಹೇಳಿ ಅವುಗಳನ್ನು ಉದ್ಬೋಧಿಸುವ ಕ್ರಿಯಾ ಮತ್ತು ಮುದ್ರಾಗಳನ್ನು ಅಭ್ಯಾಸದ ಭಾಗವಾಗಿ ಮಾಡಿದವು. ಶೈವ, ನಾಥ, ಸಿದ್ಧಪಂಥಗಳು ಇವನ್ನು ಹೆಚ್ಚಾಗಿ ಬಳಸಿದವು. ಆದಿನಾಥ, ಗೋರಖನಾಥ ಮತ್ತು ಸಿದ್ಧರ ಗುರು-ಪರಂಪರೆ ಹೇಳುವ ಹಠಯೋಗ ಯಮನಿಯಮಗಳ ಸ್ಥಾನದಲ್ಲಿ ಧೌತಿ ಮುಂತಾದ ಷಟ್ಕರ್ಮಗಳನ್ನು ತಿಳಿಸುತ್ತವೆ.

ಈಗ ಅಭ್ಯಾಸದಲ್ಲಿರುವ ಅನೇಕ ಆಸನಗಳನ್ನೂ ಪ್ರಾಣಾಯಾಮ ಪ್ರಭೇದಗಳನ್ನೂ ಕ್ರಿಯಾ ಮತ್ತು ಮುದ್ರಾಗಳನ್ನೂ ತಿಳಿಸುವವು. ಪ್ರಾಯಃ 15ನೇ ಶತಮಾನದಿಂದ ಈಚಿನವಾದ ಹಠಯೋಗಪ್ರದೀಪಿಕೆ, ಘೇರಂಡಸಂಹಿತೆಗಳು. ಪಾತಂಜಲ ಯೋಗಸೂತ್ರ ಪರಂಪರೆಯಲ್ಲಿ ಈ ವಿವರಗಳಿಲ್ಲ. ಆದರೆ ಜೈನ, ಬೌದ್ಧ, ತಂತ್ರ ಆಗಮ ಗ್ರಂಥಗಳಲ್ಲಿ ಮತ್ತು ಶಿಲ್ಪಗಳಲ್ಲಿ ವಿವಿಧಾಸನಗಳ ಉಲ್ಲೇಖಗಳಿವೆ. ಬಹುಪಾಲು ಆಸನಗಳು ಪ್ರಾಣಿಗಳನ್ನು ನೋಡಿ ಕಲಿತವು. ಹಲವು ಪ್ರಾಣಿಗಳ ಅನುಕರಣ ಜಾನಪದೀಯ ವಿಧಿರಂಗಗಳಲ್ಲಿವೆ.

ಋಗ್ವೇದ 10-136ನೇ ಕೇಶೀಮುನಿಸೂಕ್ತ ವಾತಸ್ಯಾನುಧ್ರಾಜಿಂ. ಅಪ್ಸರಸಾಂ ಗಂಧರ್ವಾಣಾಂ ಮೃಗಾಣಾಂ ಚರಣೇ ಚರನ್ ಉನ್ಮಾದಿತಾ ಮೌನೇಯೇನ ವಾತ – ಎಂದೆಲ್ಲ ವರ್ಣಿಸಿರುವುದು ಆಸನಪ್ರಾಣಾಯಾಮಗಳಿಂದ ಉನ್ಮಾದಿತರನ್ನೇ ಎನ್ನುವಂತಿದೆ. ಹರಪ್ಪದ ಪಶುಪತಿ ಎಂದು ಗುರುತಿಸುವ ಮೊಹರೂ ಇದನ್ನೇ ಹೇಳುವಂತಿದೆ. ಹೀಗೆ ಇವು ಪ್ರಾಚೀನವೂ ಅರ್ವಾಚೀನವೂ ಹೌದು.

ಒಂದು ಎಚ್ಚರ ಏನೆಂದರೆ ನಮ್ಮ ದೇಶದಲ್ಲಿ ತಪಸ್ಸು ಮಾಡಿ ಬಲ ಪಡೆದ ರಾಕ್ಷಸರ ಹಾವಳಿಯೇ ಪುರಾಣದ ತುಂಬ. ಆದ್ದರಿಂದ ಯಮನಿಯಮಗಳಿಲ್ಲದ ಮೈತ್ರ್ಯಾದಿ ಭಾವನಾಬಲವಿಲ್ಲದ ಯೋಗ ಅಪಾಯಕಾರಿ, ರಾಕ್ಷಸೀಯ. ಇದರಲ್ಲಿ ಭ್ರಷ್ಟರಾಗುವುದು ತಪ್ಪಬೇಕು.

ಬುದ್ಧ ಮತ್ತು ಯೋಗ
ಬುದ್ಧನ ಕಾಲಕ್ಕೇ ಸಾಂಖ್ಯ-ಯೋಗವಿಧಾನವು ಪ್ರಸಿದ್ಧ ಮತ್ತು ಪ್ರಭಾವಶಾಲಿ. ಊರು ತೊರೆದು ಸನ್ಯಾಸಿಯಾಗಿ ಹೊರಟ ಬುದ್ಧ ಮೊದಲು ಜಿಜ್ಞಾಸುವಾಗಿ ತಿಳಿದದ್ದು ಅರಾಢಕಾಲಾಮನಿಂದ ಸಾಂಖ್ಯ-ಯೋಗ. ಇದರಿಂದ ತೃಪ್ತನಾಗದೆ ಉದ್ರಕನಲ್ಲಿ ಹೋಗಿ ಇದಕ್ಕಿಂತ ಮೇಲಿನ ಧ್ಯಾನಗಳನ್ನು ಅಭ್ಯಸಿಸಿದ. ಸ್ವತಂತ್ರನಾಗಿ ಗಯಾದಲ್ಲಿ ತಾನು ಕಲಿತೆಲ್ಲ ವಿಧಾನಗಳನ್ನು ಮೀರಿ ತಾನೇ ಬೋಧಿಯನ್ನು ಪಡೆದ. ಶೀಲ-ಸಮಾಧಿ-ಪ್ರಜ್ಞೆಗಳಿಂದ ಮುಪ್ಪುರಿಗೊಂಡ ಅಷ್ಟಾಂಗಮಾರ್ಗವನ್ನು ಬೋಧಿಸಿದ. ‘ಸಮ್ಮಾದಿಠ್ಠಿ’ ಸರಿಯಾದ ದೃಷ್ಟಿ ಎಂಬ ಪ್ರಜ್ಞೆಗೆ ಸಮ್ಮಾಸಮಾಧಿ ಬೇಕು. ಅದಕ್ಕೆ ‘ಸಮ್ಮಾಸತಿ’ ಎಂಬ ಧ್ಯಾನಕ್ರಮ ಮುಖ್ಯ.

ಯೋಗಗಳು ಹಲವು
‘ಯೋಗ’ ಎನ್ನುವ ಶಬ್ದವನ್ನು ಗುರಿಯನ್ನು ಆಧರಿಸಿ ಅಥವಾ ಸಾಧನೆಯನ್ನು ಆಧರಿಸಿ, ಶಿವ–ಯೋಗ, ಮಂತ್ರ–ಯೋಗ ಮುಂತಾಗಿ ಕರೆದಿದ್ದಾರೆ. ಯೋಗಫಲಗಳನ್ನೂ ವಿಶೇಷಗಳನ್ನೂ ಆಧರಿಸಿ ಯೋಗದೃಷ್ಟಿ, ಯೋಗೈಶ್ವರ್ಯ ಮುಂತಾಗಿ ಹೇಳುವುದೂ ಇದೆ. ಇಲ್ಲೆಲ್ಲ ಅದು ಅಲೌಕಿಕ ಎಂದೇ ಅರ್ಥ. ಉಪಾಸನೆಗಳನ್ನು ಯೋಗ ಎಂದಿದೆ.

ಈ ನೆಲೆಯಲ್ಲಿಯೇ ಸಂಗೀತವನ್ನು ಸಂಗೀತನಾದಯೋಗ ಎನ್ನುತ್ತಾರೆ. ನಾಟ್ಯಶಾಸ್ತ್ರದಲ್ಲಿಯೇ ನಾಟ್ಯವನ್ನು ನಾಟ್ಯಯೋಗ ಎಂದೂ ಹೆಸರಿಸಿದೆ. ಯೋಗ ಎಂಬ ಶಬ್ದದ ಬಳಕೆಯಾಗದೆಯೇ ರಾಜಯೋಗ ಎನಿಸಿಕೊಂಡಿರುವ ಯೋಗದ ಅನೇಕ ಭಾಗಗಳು ವೇದ, ತಂತ್ರ, ಜೈನ, ಬೌದ್ಧ, ಸಿದ್ಧ ಪರಂಪರೆಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT