ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ತ ಡೊಮೈನ್‌ ನೇಮ್‌ ಆಯ್ಕೆ ಹೇಗೆ?

Last Updated 21 ಜೂನ್ 2017, 6:58 IST
ಅಕ್ಷರ ಗಾತ್ರ

ವ್ಯವಹಾರದ ಬೆಳವಣಿಗೆಯಲ್ಲಿ ಆಯಾ ಕಂಪೆನಿಗಳ ವೆಬ್‌ಸೈಟ್‌ಗಳೂ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಕಂಪೆನಿಯ ಲಾಭ – ನಷ್ಟ ನಿರ್ಧರಿಸುವ ಅಂಶಗಳಲ್ಲಿ ವೆಬ್‌ಸೈಟ್‌ಗಳ ಡೊಮೈನ್‌ ನೇಮ್‌ ಕೂಡಾ ಒಂದು. ಕಂಪೆನಿಯ ವೆಬ್‌ಸೈಟ್‌ಗಾಗಿ ಸೂಕ್ತ ಡೊಮೈನ್‌ ನೇಮ್‌ ಆಯ್ಕೆ ಈಗ ವ್ಯವಹಾರದ ಒಂದು ಭಾಗವೇ ಆಗಿದೆ.

ಜನರಿಕ್‌ ಟಾಪ್‌ ಲೆವೆಲ್ ಡೊಮೈನ್‌ (gTLD) ನೇಮ್‌ಗಳ ಸಂಖ್ಯೆ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. .biz, .name, .pro ಇಂತಹ ಡೊಮೈನ್‌ಗಳನ್ನು gTLD ಎಂದು ಕರೆಯಲಾಗುತ್ತದೆ. ಕಳೆದ ಮೂರು ವರ್ಷಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಇಂಥ ಡೊಮೈನ್ ನೇಮ್‌ಗಳು ನೋಂದಣಿಗಾಗಿ ಲಭ್ಯವಿವೆ. ಮೊದಲೆಲ್ಲಾ .com, .net, .org ನಂತಹ ಸುಮಾರು 22 ಡೊಮೈನ್‌ ನೇಮ್‌ಗಳು ಮಾತ್ರ ಲಭ್ಯವಿದ್ದವು.

ಇತ್ತೀಚೆಗೆ ಬಹುತೇಕ ಕಂಪೆನಿಗಳು ತಮ್ಮ ವ್ಯವಹಾರ ತಂತ್ರ ಬದಲಿಸುವ ಜತೆಗೆ ತಮ್ಮ ವೆಬ್‌ಸೈಟ್‌ನ ಡೊಮೈನ್‌ ನೇಮ್‌ ಅನ್ನು ಬದಲಿಸುವುದೂ ಸಾಮಾನ್ಯವಾಗಿದೆ. ಹೀಗೆ ಡೊಮೈನ್‌ ನೇಮ್‌ ಬದಲಿಸುವುದು ವ್ಯವಹಾರದಲ್ಲಿ ಬದಲಾವಣೆ ತರಲಿದೆ ಎಂಬ ನಂಬಿಕೆಯೂ ಇದೆ.

.com ಡೊಮೈನ್‌
ಸುಮಾರು 30 ವರ್ಷಗಳ ಕಾಲ .com ಡೊಮೈನ್‌ ನೇಮ್‌ ಒಂದೇ ಹೆಚ್ಚು ಚಾಲನೆಯಲ್ಲಿತ್ತು. ದೊಡ್ಡ ಕಂಪೆನಿಗಳು, ಸುದ್ದಿ ಸಂಸ್ಥೆಗಳು, ವ್ಯವಹಾರ ಸೇವಾ ಸಂಸ್ಥೆಗಳು .com ಡೊಮೈನ್‌ ನೇಮ್‌ ಅನ್ನೇ ತಮ್ಮ ವೆಬ್‌ಸೈಟ್‌ಗಾಗಿ ಬಳಸುತ್ತಿದ್ದವು. ಆದರೆ ಈಗ .com ಗೆ ಪರ್ಯಾಯವಾಗಿ ಹೊಸ ಡೊಮೈನ್‌ ನೇಮ್‌ಗಳು ಲಭ್ಯವಿವೆ. ಆದರೂ ಜನರು .com ಡೊಮೈನ್‌ ನೇಮ್‌ನಿಂದಲೇ ಸರ್ಚ್‌ ಮಾಡುವುದು ಹೆಚ್ಚು ರೂಢಿ.

ಜನರೇನೋ .com ಡೊಮೈನ್‌ ನೇಮ್‌ನಿಂದಲೇ ಸರ್ಚ್‌ ಮಾಡುವುದು ಹೆಚ್ಚು. ಹಾಗೆಂದು gTLD ಯನ್ನು ಕಡೆಗಣಿಸಿ ಎಂದು ನಾನು ಹೇಳುವುದಿಲ್ಲ. gTLDಗಳಲ್ಲೂ ಸಾಕಷ್ಟು ವಿಶ್ವಾಸಾರ್ಹ ಡೊಮೈನ್‌ ನೇಮ್‌ಗಳಿವೆ. ಆದರೆ ಕಂಪೆನಿಗಳು ಹಣ ಮತ್ತು ಸಮಯವನ್ನು ಇಂಥ ಡೊಮೈನ್‌ ನೇಮ್‌ಗಳಿಗಾಗಿ ಮೀಸಲಿಡಬೇಕಾಗುತ್ತದೆ. ಸೂಕ್ತ ಡೊಮೈನ್‌ ನೇಮ್ ಆಯ್ಕೆಗಾಗಿ ಸಾಕಷ್ಟು ಎಚ್ಚರ ವಹಿಸಬೇಕಾದ್ದು ಅಗತ್ಯ.

ಹೊಸ ಡೊಮೈನ್‌ ನೇಮ್‌ ಕಂಪೆನಿಗಳ ಬ್ರಾಂಡ್‌ ವರ್ಚಸ್ಸನ್ನು ಬದಲಿಸಬಲ್ಲದು ಎಂಬುದೂ ಕೂಡ ನಿಜ. ಆದರೆ, ಎಲ್ಲಾ ಸಂದರ್ಭದಲ್ಲೂ ಈ ಅಂಶ ಕೆಲಸ ಮಾಡುವುದಿಲ್ಲ ಎಂಬುದನ್ನೂ ನಾವು ಗಮನಿಸಬೇಕು. ಹಳೆಯ ಡೊಮೈನ್‌ ನೇಮ್‌ನಿಂದ ಹೊಸತಿಗೆ ಬದಲಾಗುವಾಗ ಸಾಕಷ್ಟು ಬಾರಿ ಯೋಚಿಸಬೇಕಾಗುತ್ತದೆ. ಜನರು ಮೂರು ದಶಕದಿಂದ .com ನಿಂದಲೇ ಸರ್ಚ್‌ ಮಾಡುತ್ತ ಬಂದಿದ್ದಾರೆ ಎಂಬುದು ಸದಾ ನಮ್ಮ ಪ್ರಜ್ಞೆಯಲ್ಲಿರಬೇಕು.

ಹೊಸದಾಗಿ gTLD ಬಳಸುವಾಗ ಅದು ಗ್ರಾಹಕರಿಗೆ ಸುಲಭವಾಗಿ ಹುಡುಕಲು ಸಾಧ್ಯವೇ, ಎಲ್ಲಾ ಬ್ರೌಸರ್‌ಗಳಲ್ಲೂ ಈ ಹೊಸ ಡೊಮೈನ್‌ ನೇಮ್‌ ತೆರೆದುಕೊಳ್ಳುತ್ತದೆಯೇ, ಹೊಸ ಡೊಮೈನ್‌ ನೇಮ್‌ನಿಂದ ಯಾವುದಾದರೂ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತವೆಯೇ ಎಂಬುದನ್ನು ಪರೀಕ್ಷಿಸಬೇಕು. ಎಲ್ಲವೂ ಸರಿ ಇದೆ ಎಂದು ಖಾತರಿಪಡಿಸಿಕೊಂಡ ಬಳಿಕವೇ ಹೊಸ ಡೊಮೈನ್‌ ನೇಮ್‌ ಹೋಸ್ಟ್‌ ಮಾಡಬೇಕು.

ಹೊಸ ಡೊಮೈನ್‌ ಸಂಕಷ್ಟ
ಆನ್‌ಲೈನ್‌ ವ್ಯವಹಾರದಲ್ಲಿ ಸಾಕಷ್ಟು ಅನುಭವವಿರುವ ಕಂಪೆನಿಗಳೂ ಕೂಡ ಹೊಸ ಡೊಮೈನ್‌ ನೇಮ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಉದಾಹರಣೆಗಳಿವೆ. ಅಮೆರಿಕದ ಆನ್‌ಲೈನ್‌ ರಿಟೇಲ್‌ ಕಂಪೆನಿ overstock.com 2011ರಲ್ಲಿ ತನ್ನ ಡೊಮೈನ್‌ ನೇಮ್‌ಅನ್ನು o.co ಎಂದು ಬದಲಿಸಿತ್ತು. ಇದರಿಂದ ಕಂಪೆನಿ ಭಾರೀ ಪ್ರಮಾಣದ ನಷ್ಟ ಅನುಭವಿಸಬೇಕಾಯಿತು.

ಕಂಪೆನಿಯ ಡೊಮೈನ್‌ ನೇಮ್‌ ಬದಲಾದ ಬಳಿಕ ಜನ ಸಾಮಾನ್ಯವಾಗಿ O.com ಎಂದು ಟೈಪಿಸಿ ಕಂಪೆನಿಯ ವೆಬ್‌ಸೈಟ್‌ ಹುಡುಕುತ್ತಿದ್ದರು. ಆದರೆ, ಅವರಿಗೆ ಬರುತ್ತಿದ್ದುದು error ಸಂದೇಶ. ಹೊಸ ಡೊಮೈನ್‌ ನೇಮ್‌ನಿಂದ ಕೈ ಸುಟ್ಟುಕೊಂಡ ಬಳಿಕ ಕಂಪೆನಿ ಮತ್ತೆ ಹಳೆಯ ಡೊಮೈನ್‌ ನೇಮ್‌ಗೆ ವೆಬ್‌ಸೈಟ್‌ ವಿಳಾಸ ಬದಲಿಸಿಕೊಂಡಿತು. ಆದರೆ, ಕಂಪೆನಿ ನಷ್ಟದಿಂದ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು.

ಭಾರತದ ಡೊಮೈನ್‌ ನೇಮ್‌ಗಳ ಮೇಲೆ ಹಿಂದಿ ಇಲ್ಲವೇ ಪ್ರಾದೇಶಿಕ ಭಾಷೆಗಳ ಪ್ರಭಾವವೂ ಇದೆ. ಕ್ವಿಕರ್‌ಡಾಟ್‌ಕಾಮ್‌, ನೌಕರಿಡಾಟ್‌ಕಾಮ್‌, ಸುವಿಧಾಡಾಟ್‌ಕಾಮ್‌ ಮುಂತಾದ ವೆಬ್‌ಸೈಟ್‌ಗಳನ್ನು ಗಮನಿಸಿದರೆ ಈ ವಿಷಯ ಸ್ಪಷ್ಟವಾಗುತ್ತದೆ. ಭಾರತದ ಬಹುತೇಕ ಕಂಪೆನಿಗಳ ಡೊಮೈನ್ ನೇಮ್‌ ಇನ್ನೂ .com ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಜನರ ಹುಡುಕಾಟದಲ್ಲಿ .com ಬಹಳ ಮುಖ್ಯ ಪಾತ್ರ ವಹಿಸಿರುವುದು ಕಂಡುಬರುತ್ತದೆ.

ಡೊಮೈನ್‌ ನೇಮ್‌ ಚಿಕ್ಕದಾಗಿದ್ದ ಮಾತ್ರಕ್ಕೆ ಅದು ಅತ್ಯುತ್ತಮ ಎಂಬ ತೀರ್ಮಾನಕ್ಕೆ ಬರುವಂತಿಲ್ಲ. ನಿಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುವವರ ವಿಶ್ವಾಸದ ಮೇಲೆ ನಿಮ್ಮ ಡೊಮೈನ್‌ ನೇಮ್‌ ಎಷ್ಟು ಗ್ರಾಹಕ ಸ್ನೇಹಿ ಎಂಬುದು ನಿರ್ಧಾರವಾಗುತ್ತದೆ. ಆದರೆ, ಒಂದು ವೆಬ್‌ಸೈಟ್‌ ಅನ್ನು ಬ್ರ್ಯಾಂಡ್‌ ಆಗಿ ಬೆಳೆಸುವುದು ಸುಲಭದ ಮಾತೇನಲ್ಲ.

ಭಾರತದಲ್ಲಿ ಉಬರ್‌, ಫ್ಲಿಪ್‌ಕಾರ್ಟ್‌ ಮುಂತಾದ ಪ್ರಮುಖ ಬ್ರಾಂಡ್‌ ವೆಬ್‌ಸೈಟ್‌ಗಳ ಡೊಮೈನ್‌ ನೇಮ್‌ .com ಆಗಿರುವುದನ್ನು ಗಮನಿಸಿದರೆ ಭಾರತದಲ್ಲಿ ಅಂತರ್ಜಾಲ ಜಾಲಾಡುವವರ ಹುಡುಕಾಟದ ಮನಸ್ಥಿತಿಗೆ .com ಒಗ್ಗಿಹೋಗಿದೆ ಎಂಬುದು ತಿಳಿಯುತ್ತದೆ.

ಭಾರತ ಮಾತ್ರವಲ್ಲ ವಿಶ್ವದಲ್ಲೇ .com ಹೆಚ್ಚು ಸರ್ಚ್‌ ಮಾಡುವ ಡೊಮೈನ್‌ ಆಗಿ ಇಂದಿಗೂ ತನ್ನ ಬ್ರ್ಯಾಂಡ್‌ ಉಳಿಸಿಕೊಂಡಿದೆ. ಫೇಸ್‌ಬುಕ್, ಆ್ಯಪಲ್‌ನಂತಹ ಕಂಪೆನಿಗಳು ಕೂಡಾ ತಮ್ಮ ಡೊಮೈನ್‌ ನೇಮ್‌ ಅನ್ನು .com ಆಗಿರಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಎಲ್ಲಕ್ಕೂ ಮುಖ್ಯವಾಗಿ ನಿಮ್ಮ ಡೊಮೈನ್‌ ನೇಮ್‌ ನಿಮ್ಮ ಸಾಧನೆಯ ಕತೆಯನ್ನು ಹೇಳುವಂತಿರಬೇಕು. ಅದೇ ನಿಮ್ಮ ವೆಬ್‌ಸೈಟ್‌ನ ವಿಶ್ವಾಸ ಬಹುಕಾಲ ಉಳಿಯುವಂತೆ ಮಾಡುತ್ತದೆ.  ಇಂತಹ ಸಾಕಷ್ಟು ಯಶೋಗಾಥೆಗಳು ಅಂತರ್ಜಾಲ ಜಗತ್ತಿನಲ್ಲಿ ನಮಗೆ ಕಾಣಸಿಗುತ್ತವೆ.
ಮನೀಶ್ ದಲಾಲ್‌
ವೆರಿಸೈನ್‌ ಕಂಪೆನಿಯ ಏಷ್ಯಾ ವಲಯದ ಉಪಾಧ್ಯಕ್ಷ
(‘ವೆರಿಸೈನ್‌’ ಡೊಮೈನ್‌ ನೇಮ್‌ ಸೇವೆ ಒದಗಿಸುವ ಜಾಗತಿಕ ಕಂಪೆನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT