ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಅಪಘಾತ: ವಿಮೆ ಪರಿಹಾರ ಮತ್ತಷ್ಟು ಸರಳ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಮೋಟಾರ್‌ ವಾಹನ ಮಸೂದೆಯಲ್ಲಿ ವಿಮೆಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ತರಲಾಗಿದೆ. ಗ್ರಾಹಕರ ಹಿತಾಸಕ್ತಿ ಜತೆಗೆ ಅಕ್ರಮಗಳಿಗೆ ಕಡಿವಾಣ ಹಾಕಲು ವಿಮೆ ಪರಿಹಾರ ಪಡೆಯುವ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಈ ಮೂಲಕ ವಿಮಾ ಕಂಪೆನಿಗಳ ಹಿತಾಸಕ್ತಿ ಕಾಪಾಡುವ ಪ್ರಯತ್ನವನ್ನೂ ಮಾಡಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಜನ ವಾಹನ ಅಪಘಾತಗಳಲ್ಲಿ ಸಾವಿಗೀಡಾಗುತ್ತಿದ್ದಾರೆ.ರಸ್ತೆ ಸಾರಿಗೆ ಸಚಿವಾಲಯದ ಅಂಕಿ–ಅಂಶಗಳ ಪ್ರಕಾರ ಪ್ರತಿ ವರ್ಷ 5ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, 1.5 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ. ಈ ಅಪಘಾತಗಳಲ್ಲಿ ಹಲವರು ಗಾಯಗೊಳ್ಳುತ್ತಾರೆ.

ಭಾರತದಲ್ಲಿ ಪ್ರತಿ ವರ್ಷ ಮೂರು ಲಕ್ಷ ಮಂದಿ ಮೂರು ಲಕ್ಷ ‘ಥರ್ಡ್‌ ಪಾರ್ಟಿ’ ವಿಮೆ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ದಾಖಲಿಸಲಾಗುತ್ತಿದೆ. ಇದೇ ರೀತಿ ಪ್ರತಿ ವರ್ಷ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ‘ಥರ್ಡ್‌ ಪಾರ್ಟಿ’ ಕ್ಲೇಮ್‌ಗಳಿಗೆ ಸಂಬಂಧಿಸಿದಂತೆ 2.5 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತದೆ.

ಚಾಲನೆ ಸಮಯದಲ್ಲಿನ ಶಿಸ್ತಿನ ಕೊರತೆ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸದ ಕಾರಣ ಅಪಘಾತಗಳು ಹೆಚ್ಚುತ್ತಿವೆ. ರಸ್ತೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ್ದ ಮೋಟಾರ್‌ ವಾಹನ ತಿದ್ದುಪಡಿ ವಿಧೇಯಕ–2016ಕ್ಕೆ ಲೋಕಸಭೆಯಲ್ಲಿ ಅನುಮೋದನೆ ನೀಡಿತು.

ಈ ವಿಧೇಯಕದ ಮೂಲಕ ಕಳೆದ 30 ವರ್ಷಗಳಿಂದ ಜಾರಿಯಲ್ಲಿದ್ದ ಮೋಟಾರ್‌ವಾಹನ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಕಡಿಮೆ ಮಾಡುವುದು ಮತ್ತು ಚಾಲಕರ  ವರ್ತನೆಯನ್ನು ಬದಲಾಯಿಸುವುದು ಈ ಕಾಯ್ದೆಯ ತಿದ್ದುಪಡಿಯ ಉದ್ದೇಶವಾಗಿತ್ತು.

ಈ ಕಾಯ್ದೆಯಲ್ಲಿ ‘ಥರ್ಡ್‌ ಪಾರ್ಟಿ’ಗೆ ಸಂಬಂಧಿಸಿದ ವಿಮೆಯ ಬಗ್ಗೆ ಪ್ರಸ್ತಾಪಿಸಲಾಗಿತ್ತು. ‘ಥರ್ಡ್‌ ಪಾರ್ಟಿ’ ವಿಮೆ ಮಾಡುವುದು ಕಾನೂನು ಪ್ರಕಾರ  ಕಡ್ಡಾಯ.

ಹೀಗಾಗಿಯೇ ಕಾನೂನು ಮತ್ತು ಹೆಚ್ಚುತ್ತಿರುವ ಅಪಘಾತಗಳಿಂದಾಗಿ ‘ಥರ್ಡ್ ಪಾರ್ಟಿ’ ವಿಮೆ ಬಗ್ಗೆ ತಿದ್ದುಪಡಿ ಮಾಡಿರುವ ಕುರಿತು ತಿಳಿದುಕೊಳ್ಳುವುದು  ಅಗತ್ಯ.

ಈ ಹೊಸ ಕಾನೂನಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ವಿಧಿಸುವ ದಂಡದಲ್ಲಿ ಹೆಚ್ಚಳ ಮಾಡಲಾಗಿದೆ. ವಿಮೆ ಇಲ್ಲದೆ ಸಂಚರಿಸುವವರಿಗೆ ವಿಧಿಸುವ ದಂಡವನ್ನು ₹1ಸಾವಿರದಿಂದ ₹2ಸಾವಿರಕ್ಕೆ ಹೆಚ್ಚಿಸಲಾಗಿದೆ. ಜತೆಗೆ ‘ಥರ್ಡ್‌ ಪಾರ್ಟಿ’ ಕ್ಲೇಮ್‌ಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ನಿಗದಿತ ಗಡುವು ವಿಧಿಸಲಾಗಿದೆ. ಘಟನೆ ನಡೆದ ಆರು ತಿಂಗಳ ಒಳಗೆ ವಿಮೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬೇಕು ಮತ್ತು ವಿಮೆ ಕಂಪೆನಿಯು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ವಿಮಾ ಪರಿಹಾರ ನೀಡಬೇಕು.

ತ್ವರಿತ ಗತಿಯಲ್ಲಿ ವಿಮೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಣ ಪಾವತಿಸುವ ವ್ಯವಸ್ಥೆಯಲ್ಲೂ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ವಾಹನ ಚಲಾಯಿಸುವ ವ್ಯಕ್ತಿಯ ಯಾವುದೇ ತಪ್ಪು ಇಲ್ಲದಿದ್ದರೆ ಗಾಯಗೊಂಡವರಿಗೆ ಕನಿಷ್ಠ ₹2.5ಲಕ್ಷ ಮತ್ತು ಸಾವಿಗೀಡಾದವರಿಗೆ ₹5 ಲಕ್ಷ ಪಾವತಿಸಲು ಸೂಚಿಸಲಾಗಿದೆ.

ಆದರೆ, ವಿಧೇಯಕದಲ್ಲಿ ಇನ್ನೊಂದು ಪ್ರಮುಖ ನಿಯಮಾವಳಿ ರೂಪಿಸಲಾಗಿದೆ. ವಾಹನ ಚಾಲಕನ ತಪ್ಪು ಇಲ್ಲದಿರುವ ಸಂದರ್ಭದಲ್ಲಿ ನಿರ್ದಿಷ್ಟ ಪರಿಹಾರವನ್ನು ನಿಗದಿಪಡಿಸಿಲ್ಲ. ಡಿಕ್ಕಿ ಹೊಡೆದು ಪರಾರಿಯಾಗುವ ‘ಹಿಟ್‌ ಆ್ಯಂಡ್‌ ರನ್‌’ ಪ್ರಕರಣಗಳಲ್ಲಿ ದೊರೆಯುವ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಈ ಮೊದಲು ದೊರೆಯುತ್ತಿದ್ದ ₹25 ಸಾವಿರ ಪರಿಹಾರವನ್ನು ₹2ಲಕ್ಷಕ್ಕೆ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ನೀಡುತ್ತಿದ್ದ ₹12,500 ಬದಲಿಗೆ ₹50ಸಾವಿರಕ್ಕೆ ಹೆಚ್ಚಿಸಲಾಗಿದೆ.

ರಸ್ತೆ ಅಪಘಾತ ಸಂಭವಿಸಿದ ಬಳಿಕ ಗಂಭೀರವಾಗಿ ಗಾಯಗೊಂಡವರ ಜೀವ ಉಳಿಸಲು ಹಣ ಪಡೆಯದೆ ತುರ್ತು ಚಿಕಿತ್ಸೆ ನೀಡಲು ವಿಶೇಷವಾದ ನಿಧಿ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.

ಸಮರ್ಪಕ ವಾಹನ ಚಾಲನೆಯ ಪರವಾನಗಿ ಇಲ್ಲದೆ ಅಥವಾ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಮತ್ತು ವಿಮೆ ಪ್ರಿಮಿಯಂ ಪಾವತಿಸದವರಿಗೆ ವಿಮೆ ಪರಿಹಾರ ದೊರೆಯುವುದಿಲ್ಲ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಪ್ರಸ್ತುತ ವಿಮೆ ಪಾವತಿಸುವ ಮೊತ್ತವನ್ನು ವಿಮಾ ಪ್ರಾಧಿಕಾರ ನಿಗದಿಪಡಿಸುತ್ತಿದೆ. ಇತ್ತೀಚೆಗೆ ಪ್ರಾಧಿಕಾರ ಪ್ರಿಮಿಯಂ ಪಾವತಿಸುವ ದರವನ್ನು ಕಡಿಮೆ ಮಾಡಿದೆ.

ಈ ತಿದ್ದುಪಡಿ ವಿಧೇಯಕದಲ್ಲಿ ಉತ್ತರದಾಯಿತ್ವಕ್ಕೆ ಒತ್ತು ನೀಡಲಾಗಿದೆ.  ಜತೆಗೆ ಹಣ ಇಲ್ಲದೆ ಚಿಕಿತ್ಸೆ ನೀಡುವಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕರ ಹಿತಾಸಕ್ತಿ ಕಾಪಾಡಲಾಗಿದೆ. ಅಕ್ರಮಗಳಿಗೆ ಕಡಿವಾಣ ಹಾಕಲು ಸಹ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.
-ಮನೋಹರ ಭಟ್ಟ
(ಬಜಾಜ್‌ ಅಲಯನ್ಸ್‌ ಜನರಲ್‌ ಇನರನ್ಸ್‌ನಲ್ಲಿ ಮೋಟಾರ್‌ ಇನ್ಸೂರೆನ್ಸ್‌ ಮುಖ್ಯಸ್ಥರು)

*
ಜಿಎಸ್‌ಟಿ ಬಿಲ್‌ ಬುಕ್‌ ಸಲ್ಯೂಷನ್‌ ತಂತ್ರಾಂಶ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಹೊಂದಿಕೊಳ್ಳಲು ಅನುಕೂಲ ಆಗುವಂತೆ ಹೊಸ ಹೊಸ ತಂತ್ರಾಂಶಗಳು ಅಭಿವೃದ್ಧಿಯಾಗುತ್ತಿವೆ.  ಸಣ್ಣ ಪ್ರಮಾಣದ ಉದ್ಯಮಗಳಿಗೆ (ಎಂಎಸ್‌ಎಂಇ) ಜಿಎಸ್‌ಟಿ ವ್ಯವಸ್ಥೆಗೆ ಒಗ್ಗಿಕೊಳ್ಳಲು ಅನುಕೂಲವಾಗುವಂತೆ ಕ್ಲಿಯರ್‌ ಟ್ಯಾಕ್ಸ್‌  ಸಂಸ್ಥೆಯು ‘ಬಿಲ್‌ ಬುಕ್‌ ಸಲ್ಯೂಷನ್‌’ ತಂತ್ರಾಂಶ ಬಿಡುಗಡೆ ಮಾಡಿದೆ.

ಎಸ್‌ಎಂಇಗಳ ಬಲರ್ಧನೆಯಲ್ಲದೆ, ಹಲವು ವರ್ಗದ ಸಂಘ ಸಂಸ್ಥೆಗಳ ಅಡಿಯಲ್ಲಿ ಬರುವ ವ್ಯಾಪಾರಸ್ಥರು, ವಿತರಕರು ಮತ್ತು ಡೀಲರ್‌ಗಳು ಜಿಎಸ್‌ಟಿ ವ್ಯಾಪ್ತಿಗೆ ಬಂದು ನಿಖರವಾದ ಜಿಎಸ್‌ಟಿ ರಿಟರ್ನ್‌ ಫೈಲ್‌ ಮಾಡಲು ಈ ತಂತ್ರಾಂಶ ನೆರವಾಗಲಿದೆ ಎಂದು ಕ್ಲಿಯರ್‌ ಟ್ಯಾಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಚಿತ್ ಗುಪ್ತಾ ತಿಳಿಸಿದ್ದಾರೆ.

ಜಿಎಸ್‌ಟಿ ಅಳವಡಿಕೆ ನಂತರ ಸಮಗ್ರ ಜಿಎಸ್‌ಟಿಗೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರಕ್ಕೆ ಮತ್ತು ದೈನಂದಿನ ವ್ಯವಹಾರ ಹಾಗೂ ಜಿಎಸ್‌ಟಿ ಫೈಲಿಂಗ್‌ ಬಗ್ಗೆ ತರಬೇತಿ ನೀಡಲು ಸಂಸ್ಥೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT