ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊರೆ, ಬೆಳ್ನೊರೆ... ಮುಂದೇನು?

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಕಾವ್ಯಸಾಲು ಬೇಂದ್ರೆಯವರ ಬೆಡಗಿನ ರೂಪಕವೂ ಹೌದು. ಇದು ಕಾಲದ ಹಕ್ಕಿಯೊಡನೆ ತೇಲುವ ಭ್ರಮೆಯ ಪ್ರತಿಮಾ ಸಂಕಟವೂ ಹೌದು. ಅಂತೆಯೇ ‘ನೊರೆ ಹಾರುತಿದೆ ನೋಡಿದಿರಾ’ (ಪ್ರ.ವಾ., ಮೇ 27) ಎಂಬ ಶೀರ್ಷಿಕೆಯ ಸುದ್ದಿ ಕೂಡ ನಗರೀಕರಣವೆಂಬ ಅಸ್ಥಿರ ಅಭಿವೃದ್ಧಿಯ ಆತಂಕದ್ದು.

ಅಂದು ಕಾಡು ಬೆಂದು ಬೆಂಗಳೂರಾದ ಈ ನಗರವನ್ನು ಪುನಃ ಜಲಾಗ್ನಿಮಹಾರಾಜ ನೆಕ್ಕಿ ನೊಣೆಯಲಾರಂಭಿಸಿದ್ದಾನಲ್ಲವೇ! ಅಂದು ಕೃಷಿಕರ ಪರವಾಗಿ ಊರು ಬೆಂದು, ನಿಸರ್ಗ ಬೆಂದು ಆ ಋಣ ತೀರಿಸಲು ಮಾಂಡಲೀಕರು, ರಾಜರು ಸುಮಾರು 1,500 ಕೆರೆಕಟ್ಟೆಗಳನ್ನು ಕಟ್ಟಿಸಿ ಬೆಂದ ಭೂಮಿಗೆ ನೀರುಣಿಸುತ್ತಿದ್ದರು. ಈಗಿನ ಪ್ರಜಾರಾಜರು ನೀರಿಳಿಯದ ಸಿಮೆಂಟ್ ಚಾಪೆ ಹಾಸಲು ಸಾವಿರಾರು ಕೆರೆಗಳನ್ನು ವಾಮನ ಪಾದಕ್ಕೊಪ್ಪಿಸಿದ್ದಾರೆ.

ಹೇಗಿದ್ದ ಬೆಂಗಳೂರು ಹೇಗಾಯ್ತು! ಸಿಂಗಪುರ ಆಯ್ತೇ? ಅಲ್ಲಿ ಉಪಯೋಗಿಸಿದ  ಮಲಿನ ನೀರಿನ ಶೇಕಡ 30 ರಷ್ಟನ್ನು ಪುನಃ ಬಳಕೆ ಮಾಡುತ್ತಾರಂತೆ. ಆದರೆ ಇಲ್ಲಿ ಮುಂಜಾಗ್ರತೆಯಿಲ್ಲದ ಆಡಳಿತ ಏದುಸಿರು ಬಿಡುವ ಸ್ಥಿತಿ. ಇಲ್ಲಿ ಬೆಳ್ಳಂದೂರು ಕೆರೆಗೆ ಮೂರ್ನಾಲ್ಕು ಕೋಟಿ ಖರ್ಚು ಮಾಡುತ್ತಾ ಹದಿನೈದು ಸಾವಿರ ಟನ್ ಪಿಶಾಚಿ ಲಡ್ಡು ಕಳೆ ರಾಶಿ ತೆಗೆಯಲು ಹರಸಾಹಸ ಮಾಡುತ್ತಿದ್ದಾರೆ. ನಿಸರ್ಗದ ಮೇಲೆ  ಅತ್ಯಾಚಾರ ಮಾಡಿ ಸುಧಾರಿಸಿಕೊಳ್ಳುವುದು ಸುಲಭದ ಮಾತಲ್ಲ. ವರ್ತೂರು, ಬೆಳ್ಳಂದೂರು, ಸುಬ್ರಹ್ಮಣ್ಯಪುರ ಕೆರೆಗಳಲ್ಲಿ ಬೆಂಕಿ ಹರಡುವ ಗಂಗೆ,  ರಣಚಂಡಿ ಇದ್ದಂತೆ. ಅವಳು ತನ್ನ ಜುಟ್ಟು ಸುಟ್ಟವರ ವಂಶ ಸುಡಬಲ್ಲವಳು. ಇಂತಹುದನ್ನು ಒಂದು ಪಾಠವೆಂದು ಇನ್ನೂ ಪರಿಗಣಿಸದ ಆಡಳಿತವು ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಲಕ್ಷಣಗಳನ್ನು ಬೆಂಗಳೂರೆಂಬ ಮಹಾನಗರದ ಹೊರವಲಯದಲ್ಲಿ ವೀಕ್ಷಿಸಬಹುದು.

ವಿಶ್ವೇಶ್ವರಯ್ಯ, ಕೆಂಪೇಗೌಡ ಹಾಗೂ ಬನಶಂಕರಮ್ಮನ ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹಲವು ಕೆರೆಗಳನ್ನು ಒಳಸೇರಿಸಿಕೊಂಡಿದೆ. ಮುಂದೊಮ್ಮೆ ಇವೂ ಚರಂಡಿಗಳಾಗುತ್ತವೆ.  ಉದಾಹರಣೆಗೆ 1965ರಲ್ಲಿ ಕಟ್ಟಿದ ಕೆಂಗೇರಿ ಹೋಬಳಿ ಭೀಮನಕುಪ್ಪೆ ಹೊಸ ಕೆರೆಗೆ ಸಾವನದುರ್ಗ ಬೆಟ್ಟದ ಸಾಲು ಪರಿಶುದ್ಧ ನೀರು ತಂದು ನೀಡುತ್ತಿದೆ. ಅದೊಂದು ತಿಳಿ ಸರೋವರದಂತಿದ್ದು ಪಕ್ಷಿಪ್ರಿಯರ ಫೋಟೊಗ್ರಫಿ ತಾಣವೂ ಹೌದು. ಆದರೆ ಈಗಾಗಲೇ ಸುತ್ತಲೂ ಬರುತ್ತಿರುವ ಬಡಾವಣೆಗಳು  ಹಾಗೂ ಬರಬಹುದಾದ ಕೆಂಪೇಗೌಡ ಲೇಔಟ್‌ನ ಮಲಿನ ನೀರು ಆತಂಕ ಮೂಡಿಸಿದೆ.  ಇಂತಹ ಕೆರೆಗಳನ್ನು ಕಾಪಾಡಿಕೊಳ್ಳದಿದ್ದಲ್ಲಿ ಹಾಗೂ ಆಕಾಶದ ನೀರೊಂದು ಕಡೆ, ಮನುಷ್ಯ ಅಗಿದುಗಿದ ಮಲಿನ ಎಂಜಲು ನೀರು ಇನ್ನೊಂದು ಕಡೆ ಎಂದು ವಿಂಗಡಿಸದಿದ್ದಲ್ಲಿ ಮುಂದೆ  ಕೆರೆ ಉಳಿಸಲು ಏದುಸಿರು ಬಿಡುವ ಸ್ಥಿತಿ ಒದಗುತ್ತದೆ.

ಬಿಬಿಸಿ, ಸಿಎನ್‌ಎನ್‌ ಟಿ.ವಿ.ಗಳಂಥವು ಸಿಲಿಕಾನ್ ಸಿಟಿಯ ನೀರಿನ ಮೇಲಿನ ಜ್ವಾಲೆ ಕುರಿತು ಈ ದೇಶದ ಅವಮಾನದ ಕಥನ ಬಿತ್ತರಿಸುತ್ತಿವೆ. 1969ರಲ್ಲಿನ ನಿಕ್ಸನ್ ಆಡಳಿತವು ಅಮೆರಿಕೆಯ ಎರಿ ಸರೋವರಕ್ಕೆ ಇಂತಹ ಸ್ಥಿತಿ ಒದಗಿದಾಗ ತಕ್ಷಣ ಎಚ್ಚೆತ್ತು ಪರಿಶುದ್ಧತೆ ಕಾಪಾಡಿಕೊಂಡ ವಿಚಾರವನ್ನು ಹೇಳುತ್ತಾ ಮುಂದೆ ಬೆಂಗಳೂರು ಹೇಗೆ ಬುದ್ಧಿ ಕಲಿಯಬೇಕೆಂಬುದನ್ನು ವಿ.ಬಾಲಸುಬ್ರಮಣಿಯನ್‌ ಎಂಬ ನಿವೃತ್ತ ಐಎಎಸ್‌ ಅಧಿಕಾರಿ  ಅನುಭವದಿಂದ ಹೇಳುತ್ತಿದ್ದಾರೆ. ಆದರೆ ಆಡಳಿತಶಾಹಿಯ  ತೂತಾಗಿರುವ ಕಿವಿಗಳು ಗಿಡಿದುಕೊಂಡಿರುವ ಗಿದ್ಲ ತೆಗೆದುಕೊಳ್ಳಬೇಕಷ್ಟೆ.

ಅಂದು ನಾವು ಚಿಕ್ಕವರಿದ್ದಾಗ ನಮ್ಮ ಮನೆ ಗಾಡಿಗಳು, ಪೇಟೆಗಳಿಂದ ಗುಡ್ಡೆ ಹಾಕಿ ಒಣಗಿಸಿದ ಮಲಮೂತ್ರದ ರಾಶಿಯನ್ನು ಕೃಷಿ ಫಲವತ್ತತೆಗೆಂದು ತರುತ್ತಿದ್ದವು. 1908ರಲ್ಲಿಯೇ ಚೀನಾದ ಷಾಂಗೈ ನಗರದ ಅಂತರರಾಷ್ಟ್ರೀಯ ಗುತ್ತಿಗೆದಾರರೊಬ್ಬರು 78 ಸಾವಿರ ಟನ್ ಮಲ ಸಂಗ್ರಹಿಸಿ, ಅದಕ್ಕೆ ಪ್ರತಿಯಾಗಿ 31 ಸಾವಿರ ಚಿನ್ನದ ಡಾಲರ್ ನೀಡುತ್ತಿದ್ದನಂತೆ. ಹಾಗಾದರೆ ಅದೆಷ್ಟು ಮಲಸಂಪತ್ತು ಈ ನಮ್ಮ ದೇಶದಲ್ಲಿ ಪೋಲಾಗುತ್ತಿದೆ? ಅತಿಥಿ ವಿಸರ್ಜಿಸಿದ ಮಲಮಡಕೆಯನ್ನು ಒಯ್ದು ಕಾಂಪೋಸ್ಟ್ ಮಾಡಲು ಹಿಂಜರಿದ ಸತಿ ಕಸ್ತೂರ್ ಬಾ ಅವರನ್ನು ದಕ್ಷಿಣ ಆಫ್ರಿಕಾದಲ್ಲಿ ಬಾಗಿಲಾಚೆ ನಿಲ್ಲಿಸಿದ ಗಾಂಧಿ ತನ್ನ ಸಿಡುಕಿಗೆ ತಾನೇ ನಾಚಿ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಚಾರವು ಮಲಮೂತ್ರವನ್ನು ಸಹ ಪ್ರಯೋಗಕ್ಕೆ ಒಡ್ಡಿ ಮಣ್ಣಿನ ಫಲವತ್ತತೆಗೆ ಸೇರಿಸುವ ಆಗಿನ ಚಿಂತನೆಗೆ ನಿದರ್ಶನ. ಅದು ಈಗಿನ ಕಾಲಮಾನದಲ್ಲಿ ಬದಲಾಗಿದೆ ನಿಜ.  ವೈಜ್ಞಾನಿಕವಾಗಿ ತಳಮೂಲದಲ್ಲೇ ವಿಂಗಡಣೆಗೊಂಡು ಮಲವೂ ಚಿನ್ನವಾಗುವ ಕಾರ್ಯಕ್ರಮಗಳು ಬೇಕಾಗಿವೆ. ಅದೇ ನಿಜವಾದ ಅಭಿವೃದ್ಧಿ.

ಬೆಂಗಳೂರು ಹಾಗೂ ಸುತ್ತಲಿನ ಜನಸಂಖ್ಯೆ 1.30 ಕೋಟಿ  ದಾಟುತ್ತಿದೆ.  ವ್ಯಕ್ತಿಯ ನಿತ್ಯದ ಮಲಮೂತ್ರದ ಸರಾಸರಿ ತೂಕ  128 ಗ್ರಾಂ ಎಂದು ಲೆಕ್ಕ ಹೇಳುತ್ತದೆ. ಇದು  ದಿನಕ್ಕೆ ಸುಮಾರು 1,700 ಟನ್ ಆಗುವುದುಂಟು. ವೈಜ್ಞಾನಿಕವಾಗಿ ವಿಂಗಡಣೆಯಾಗಿ ನೀರು, ಭೂಮಿ ಹಸನಾಗಿ ಫಲವತ್ತಾದರೆ ಅದೇ ಪ್ರಗತಿ. ರಾಜ್ಯದ ಆಡಳಿತ ನಾಲ್ಕು ವರ್ಷ ಕಳೆದ ಜಾಗಟೆ ಬಾರಿಸುತ್ತಿದೆ. ಕೇಂದ್ರ ಮೂರು ವರ್ಷ ಮುಗಿಸಿದ ಶಂಖ ಊದುತ್ತಿದೆ. ಇಲ್ಲಿ ಕೆರೆಗಳ ಗಂಗಮ್ಮಂದಿರು ತಲೆ ಒದರಿಕೊಂಡು ಹೇನು ಹುಳುಕಿಯರಾಗಿದ್ದಾರೆ. ಅಲ್ಲಿ ವಾರಾಣಸಿಗೂ ಇದೇ ಗತಿ. ಅಭಿವೃದ್ಧಿ ಎಂದರೆ ಅದೊಂದು ಮೋಜಿನ ಭಾಷಣವೇ? ಇಲ್ಲವೇ ಪಂಚಭೂತಗಳ ಸೇವೆ ಮಾಡುವ ಪರಿಯೇ? ಈ ಅಂತರ ಅರಿಯದ ಆಡಳಿತಾರೂಢರು ಧನಕನಕ ವಸ್ತುವಜ್ರವೈಢೂರ್ಯಗಳನ್ನು ಹೊತ್ತುಕೊಂಡು ಎಲ್ಲಿಗೆ ಓಡಿಹೋಗಲಾದೀತು!

ಇರುವುದೊಂದೇ ಭೂಮಿ. ಆ ಭೂಮಿ ಮೇಲಿನ ಗಂಗೆಯೂ ಒಬ್ಬಳೇ! ಇವರಿಬ್ಬರಿಗೂ ವಾಯುದೇವ  ಗೆಳೆಯ.  ಭಾರತದ ವಾಯುದೇವನಿಗೆ ಚೀನಾದ ವಾಯುವಿಗಿಂತ ಮೂರುಪಟ್ಟು ಹೆಚ್ಚು ಉಬ್ಬಸವಿದೆಯಂತೆ. ಈ ದೇಶವು ಮತಪೆಟ್ಟಿಗೆಯ ಒತ್ತಡಕ್ಕೆ ಸಿಲುಕಿ  ಕೈಕಾಲಿಗೆ ಕೆಲಸ ನೀಡದ ಭಿಕ್ಷೆಯನ್ನು ದೇಶದ ಜನರಿಗೆ ಉಣಿಸುತ್ತಿದೆ. ಅದು ಬಿಟ್ಟು ಅಭಿವೃದ್ಧಿಯ ಚಟುವಟಿಕೆಗಳಿಗೆ  ಕೈಕಾಲುಗಳನ್ನು ಸಜ್ಜುಗೊಳಿಸಬೇಕು. ಗಂಗಾವ್ರತಕ್ಕೆ ಸನ್ನದ್ಧಗೊಳಿಸಬೇಕು.

ಕಾವೇರಿ ಮತ್ತು ಆಕೆಯ ಅಕ್ಕತಂಗಿಯರೂ ಸೇರಿದಂತೆ ಎಲ್ಲರನ್ನೂ ಮರಳು ಹಾಸಿಗೆಯಿಂದ ಆಚೆಗೆ ನೂಕಿ ಒಣಗಲು ಹಾಕಲಾಗಿದೆ. ಬೆಂಗಳೂರು ತುಂಬಾ ಅಂತರಗಂಗೆಯ ಕೊಳವೆ ಬಾವಿಗಳು ಸಹ ಬರಿದಾಗಿ ನಿಲ್ಲುವ ಹಂತದಲ್ಲಿವೆ. ಹಾಗಾದರೆ ಮುಂದೇನು? ಅಳಿದುಳಿದ ಕೆರೆಕಟ್ಟೆಗಳನ್ನೆಲ್ಲ ಆಕಾಶಗಂಗೆಗೆ ಮಡಿಲೊಡ್ಡುವಂತೆ ಮಾಡುವುದು. ಆ ನೀರನ್ನು ಶೇಖರಿಸುವುದು. ಪೂಜ್ಯ ಭಾವನೆಯಿಂದ ಕಾವೇರಿ ದಂಡೆಗೆ ಸೇರಿಸುವುದು. ಅದೊಂದೇ ನೊರೆನೊರೆ ಬೆಳ್ನೊರೆ ದೂರ ಸರಿಸಿ ಬೆಂಕಿ ಆರಿಸಿ ತಣ್ಣೀರ ಹಳ್ಳಗಳನ್ನಾಗಿಸುವ ಪರಿ. ಇದು ಎಲ್ಲಾ ಪಟ್ಟಣಗಳಿಗೂ ಅನ್ವಯಿಸುತ್ತದೆ. ಇದೇ ಮೂಲ ಶಿಕ್ಷಣದ ಧಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT