ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಕೇಳಿ ಕಾಗೆ ಓಡಿಸಿದ್ದೆ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಅಜ್ಜಿ ತೊಡೆ ಮೇಲೆ ಕೂತು ಕಥೆ ಕೇಳಿದರೆ ಮಾತ್ರ ಮಲಗುವ ಸಮಯವೊಂದಿತ್ತು. ಕಥೆ ಹೇಳುವಾಗಿನ ಅಜ್ಜಿಯ ಹಾವಭಾವ ನಮ್ಮನ್ನು ಯಾವುದೋ ಸುಂದರ ಲೋಕಕ್ಕೆ ಕರೆದೊಯ್ಯುತ್ತಿತ್ತು. ಆಕೆಯ ಕಥೆಯನ್ನು ಕಣ್ಣರಳಿಸಿ ಬಾಯಿಬಿಟ್ಟುಕೊಂಡು ಕೇಳುತ್ತಲಿದ್ದ ನಮಗೆ ಆ ಅನುಭವ ರಸದೌತಣ.

ಬೀರಬಲ್‌ನ ಜಾಣತನಕ್ಕೆ ಹೆಮ್ಮೆಪಟ್ಟ ದಿನಗಳೆಷ್ಟೋ, ತೆನಾಲಿರಾಮನ ಹಾಸ್ಯಕ್ಕೆ ನಕ್ಕುನಕ್ಕು ಮಲಗಿದ ಕ್ಷಣಗಳೆಷ್ಟೋ, ಅಲ್ಲಾವುದ್ದೀನ್ ಮಾಯಾದೀಪಕ್ಕೆ ಭೇಟಿ ಕೊಟ್ಟದ್ದು, ಪಂಚತಂತ್ರ ಕಥೆಗಳಲ್ಲಿ ಕೆಲವು ಅರ್ಥವಾಗದೇ ಅಜ್ಜಿಯನ್ನು ಕಾಡಿ ಬೇಡಿ ಅರ್ಥೈಸಿಕೊಂಡದ್ದು, ಇಸೋಪನ ನೀತಿ ಕಥೆಗಳು, ವಿಕ್ರಂ ಮತ್ತು ಬೇತಾಳ ಕಥೆ ಕೇಳಿ ಬೇತಾಳ ನಮ್ಮ ಹೆಗಲನ್ನೇ ಏರಿತೇನೋ ಎನ್ನುವಂತೆ ಭಯದಿಂದ ಅಜ್ಜಿಯ ಸೆರಗಿನಲ್ಲಿ ಮುಖ ಮುಚ್ಚಿ ನಿದ್ರಿಸುವ ಪ್ರಯತ್ನ ಮಾಡಿದ್ದು... ಎಲ್ಲವೂ ಅವಿಸ್ಮರಣೀಯ ಕ್ಷಣಗಳ ಬುತ್ತಿ.

ಅಜ್ಜಿ ಹೇಳುತ್ತಿದ್ದ ಕಾಗಕ್ಕ ಗುಬ್ಬಕ್ಕನ ಕತೆಯಲ್ಲಿ ಕಾಗಕ್ಕ ಗುಬ್ಬಕ್ಕನ ಮನೆಗೆ ಬಂದು ಗುಬ್ಬಕ್ಕನ ಮರಿಗಳನ್ನು ತಿಂದಾಗ ಕಾಗೆ ಮೇಲೆ ವಿಪರೀತ ಸಿಟ್ಟು. ಗುಬ್ಬಕ್ಕನ ಮೇಲೆ ಅಷ್ಟೇ ಪ್ರೀತಿ, ಕರುಣೆ. ಅಮ್ಮ ಅಕ್ಕಿ ಆರಿಸಲು ಕುಳಿತರೆ ತಿನ್ನಲು ಬರುತ್ತಿದ್ದ ಗುಬ್ಬಚ್ಚಿಗಳಿಗೆ ಪ್ರೀತಿಯಿಂದ ಕಾಳು ತಿನ್ನಲು ಅವಕಾಶ ಕೊಡುವುದು. ಅದೇ ಸಮಯಕ್ಕೆ ಕಾಗೆ ಏನಾದರೂ ಬಂದರೆ, ಅದು ಕಣ್ಣಿಂದ ಮರೆಯಾಗುವವರೆಗೂ ಅವನ್ನು  ಓಡಿಸಿದಾಗ ಏನೋ ಸಂತೃಪ್ತಿ. ಇದು ಅಜ್ಜಿಯ ಕಥೆಯ ಪ್ರಭಾವ.
-ಶೋಭಾ ಶಂಕರಾನಂದ ಬಳ್ಳಾರಿ

*
ಕಥೆ ಕಾಡತಾವ!
ನಮ್ಮವ್ವಂಗ ಮೊದಲೆರಡು ಹೆಣ್ಣು ಮಕ್ಳು ಹುಟ್ಟಿದ್ಕ ಮೂರನೇದರ ಗಂಡುಕೂಸು ಹುಟ್ಟಿ ನಮ್ಮ ಮನಿಬೆಳಗತೈತಂತ ಅವ್ವ ಅಕಲ ಹಾಕಿದ್ಲು. ಆದ್ರ ಏನ್ಮಾಡೋದು? ಅಕಿ ಹೊಟ್ಟ್ಯಾಗ ನಾನಿದ್ಯಾ. ‘ಸಾಕವ್ವಾ... ಸಾವಿತ್ರಿ ಅಂತ ಐದೇಸಿ ದಿನ ಬಂದ ಮುತ್ತೈದೇರು ಬ್ಯಾಸರದಿಂದಾನ ಹೆಸರಿಟ್ರು. ನಮ್ಮವ್ವ ಹಡದ ಹೊಟ್ಟ್ಯಗ ಸಂಕಟಾ ಪಡಕೊಂತ ಕಣ್ಣೀರ್ಹಾಕಿದ್ಲಂತ.

ಇಪ್ಪತ್ಮೂರು ಮಂದಿರೋ ನಮ್ಮ ಕೂಡಿದ ಮನ್ಯಾಗ ನನ್ನ ಸಲುವಾಗಿ ನಿಟ್ಟುಸಿರು ಬಿಡೋರ ಹೆಚ್ಚಂತ. ಎಲ್ಲಾರೂ ನನ್ನ ಅಲಕ್ಷವಾಗೇಕಾಣ್ತಿದ್ರು; ನಮ್ಮಜ್ಜ, ಅಜ್ಜಿ ಮಾತ್ರ ಯಾವಾಗ್ಲೂ ನನಮ್ಯಾಲ ಭಾಳ ಮಾಯಾ ಮಾಡೋರು. ನೀ ಮಂದಿ ಮಾತಿಗೆ ತಲಿ ಕೆಡಿಸ್ಗೋಬ್ಯಾಡ ಅಂತ ಧೈರ್ಯ ಹೇಳೋರು.

ನಾ ಹುಟ್ಟಿ ಮೂರ್ನಾಲ್ಕು ವರ್ಷಕ್ಕ ನನ್ನ ತಮ್ಮ, ಅಲಿಯಾಸ ನಮ್ಮನಿ ಕುಲೋದ್ಧಾರಕ ಹುಟ್ಟಿದ. ಅವ್ವ ತವರ ಮನೀಗೆ ಹೆರಿಗಿಗೆ ಹೋದಾಕಿ ನಾಕು ತಿಂಗಳಾದ್ರು ಬಂದಿದ್ದಿಲ್ಲ. ನಾನು ಅಜ್ಜ ಅಜ್ಜಿ ಕೂಡ ಅದ ಮನ್ಯಾಗ ಇರಬೇಕಾಗಿತ್ತು. ಅವಾಗ ನಮ್ಮನ್ಯಾಗಿರೊ ಮಕ್ಕಳ ಸೈನ್ಯದಾಗ ನಂ.1 ಉಡಾಳ ಫಕೀರಿ ಅಂದ್ರ ನಾನ ಅಂತ. ಎದಕ್ಕರ ಜಗಳಾ ತಗದ್ರ ಕೊಡ ಮಟಾ ಮೂಗು ಹಿಗ್ಗಿಸಿ, ಸೊಂಡಿ ಈಷ್ಟುದ್ದಾ ಮಾಡಿ ಕುಂತ್ನೆಂದ್ರ ವಾಲಗದ ರಾಜಪ್ಪನಂಗ ಗುಂಯ್ ಅಂತ ಒಂದ ನಾದ.

ಇದ್ನೆಲ್ಲಾ ನೋಡಿ ನೋಡಿ ಬ್ಯಾಸತ್ತ ಅಜ್ಜ-ಅಜ್ಜಿ ಒಂದು ಮಸಲತ್ತ ಮಾಡಿದ್ರು. ‘ಸಾವಿತ್ರಿ, ಐತೆಲ್ಲ ಒಂದೂರಾಗ ಒಬ್ಬ ರಾಜ ಇದ್ನಂತ’ ಅಂದು ಸುಮ್ಮನಾದ್ರು. ನಾನು ಸುಮ್ಮನೆ ಅವ್ರಕಡೆ ನೋಡಿದೆ. ಮೆಲ್ಲಕ ಅಜ್ಜಿ ನನ್ನ ಕಿವಿತಾವ ಬಂದು ‘ನಿಂಗೊಬ್ಬಾಕಿಗೆ ಹೇಳದು; ಮತ್ತ್ಯಾರಿಗಿಲ್ಲ’ ಅಂತ ನನ್ನ ಉಬ್ಬಿಸಿ ಅಟ್ಟದ ಮ್ಯಾಲ ಕುಂದ್ರಿಸಿ ‘ಹೂಂ ಅನ್ನು ಮತ್ತ...’ ಅಂದು ‘‘ಆ ರಾಜಗ ಒಬ್ಬಾಕಿ ಮಗಳಿದ್ಲಂತ. ಅಕಿ ಭಾಳ ಚೆಲಿವಿದ್ಲಂತ. ಒಂದಿನಾ ಅಕಿಗೆ ಜೋರು ಜ್ವರಾ ಬಂದು ಹಾಸಿಗಿ ಬಿಟ್ಟು ಮ್ಯಾಲೇಳಲಿಲ್ಲಂತ.

ಆವಾಗ ರಾಜಾಗ ಭಾಳ ಚಿಂತಿ ಆತಂತ. ಪಂಡಿತರನ್ನ ಕರ್ಸಿ ಪರಿಹಾರ ಕೇಳ್ಸಿ, ಊರಿಗೆಲ್ಲಾ ಡಂಗುರಾ ಸಾರ್ಸಿದ್ನಂತ. ‘ಊರು ಹೊರಗಿರೋ ಏಳು ಕೆರಿ ದಾಟಿ ಗುಡ್ಡದಾಗಿರೋ ಗಿಡುಗ ರಾಜನ ಪುಕ್ಕ ತಂದು ತನ್ನ ಮಗಳ ತಲಿಗೆ ಮುಟ್ಟಿಸಿದ್ರ ಮಗಳ ಜ್ವರ ಹೋಗ್ತಾವಂತ ಪಂಡಿತ್ರು ಹೇಳ್ಯಾರ, ಈ ಕೆಲಸಾ ಮಾಡಿದೋರ್ಗೆ ನೂರು ಬಂಗಾರದ ನಾಣ್ಯ ಮತ್ತ ಸ್ವತಃ ನನ್ನ ಮಗಳ್ನ ಮದ್ವಿ ಮಾಡಿ ಕೊಡ್ತೇನ’ ಅಂದ.

ಊರಾಗ ಒಬ್ಬ ನಚಿಕೇತ ಅನ್ನೋ ಧೀರ ಹುಡ್ಗ ಮುಂದ ಬಂದು ಏಳು ಕೆರಿ ದಾಟಿ ಗುಡ್ಡದಾಗಿರೋ ಗಿಡುಗ ರಾಜನ ಜೊತಿಗೆ ಭಾಳ ಹೊತ್ತು ಗುದ್ಯಾಡಿ ಕಡೀಗೂ ಪುಕ್ಕ ತಂದು ರಾಜನ ಮಗಳ ತಲಿ ಮುಟ್ಟಿಸಿದ್ನಂತ’’ ಹೀಗಂದಾಗಂತೂ ನಾನು ಬಿಟ್ಟಗಣ್ಣುಬಿಟ್ಟಂಗ ಕುಂತೋಳು ಅವಾಗ ಉಗುಳು ನುಂಗಿ ಹೂಂ ಅಂದಿದ್ದು.

‘ಅಜ್ಜಿ ಮುಂದಕೇನಾತು ಬೇ ದೌಡ ಹೇಳು’ ಅಂದಾಗ, ಅಜ್ಜಿ ‘ಮುಂದಕೇನಕ್ಕತಿ, ರಾಜಾನ ಮಗ್ಳು ಎದ್ದು ಕುಂದ್ರತಾಳ. ರಾಜ ತಾ ಅಂದ ಮಾತಿನಂಗ ನಚಿಕೇತಗ ಬೆನ್ನು ತಟ್ಟಿ ನೂರು ಬಂಗಾರದ ನಾಣ್ಯ, ಮತ್ತ ಮಗಳ್ನ ಕೊಟ್ಟು ಮದ್ವಿ ಮಾಡಿ ಆನಿ ಅಂಬಾರಿ ಮ್ಯಾಲ ಮೆರವಣಿಗಿ ಮಾಡಸ್ತಾನ’ ಅಂದಾಗ ನಾ ಹಾಂಗ ನಿದ್ದಿಗೆ ಜಾರ್ತಿದ್ಯಾ. ಇದು ದಿನಾರೂಢಿ ಆತು. ಕತಿ ಕೇಳ್ದ... ಊಟ, ನಿದ್ದಿ ಆಸುಪಾಸು ಹಾಯ್ತಿರ್ಲಿಲ್ಲ.

ಒಂದು ಸಲಾ ನಂಗ ಕೆಂಡದಂಗ ಜ್ವರಾ ಬಂದಿದ್ವು. ಅಜ್ಜಿ ಹೇಳಿದ ಕತಿಗುಳೆಲ್ಲಾ ಮನಸಿನ್ಯಾಗ ಅಚ್ಚಾಗಿರ್ತಿದ್ವು. ಅಲ್ಲದ ಅವೆಲ್ಲಾ ನೂರಕ್ಕ ನೂರು ಖರೇ ಅನ್ನೋದ ನಮ್ಮ ತತ್ವ ಆಗಿತ್ತು. ಹಿಂಗಿರ್ಬೇಕಾದ್ರ ಜ್ವರದ ತಾಪ ತಾಳಲಾರ್ದ ಯಪ್ಪಾ ನಂಗೂ ಗಿಡುಗ ರಾಜನ ಪುಕ್ಕಾ ತಂದು ತಲಿಗೆ ಮುಟ್ಸಾಕ ಹೇಳಂದೆ.

ಅಪ್ಪ ‘ಹಳೇ ಹುಚ್ಚಿ ನಿಂಗ್ಯಾರು ಹೇಳ್ಯಾರ?’ ಅಂದಾಗ ‘ಬೇಕಾರ ಅಜ್ಜೀನ ಕೇಳಪಾ ಖರೇನ’ ಅಂದಾಗ ಅಪ್ಪ ವಿಚಾರ್ಸಿ ‘ಐ ನಾ ಮರ್ತಿದ್ಯಾ ತಂಗಿ, ನೀ ಮಲಕಾ ಅವಾಗ ಮುಟ್ಟಿಸ್ತೇವಿ’ ಅಂದ. ನಂಬಿ ಅದ.. ಯೋಚ್ನೆಯೊಳಗ ಮಲ್ಗಿ ಮೇಲೆ ಏಳೂದ್ರಾಗ ಜ್ವರಾ ಹಾರಿಹೋಗಿದ್ವು. ಅಜ್ಜಿ ಹೇಳಿದ ಕತಿ ಅವತ್ತ ವೈದ್ಯನ ಕೆಲ್ಸಾ ಮಾಡಿತ್ತು. ನಾ ಅಷ್ಟಕ್ಕ ಸುಮ್ಮಕಾದ್ನೆರೀಪಾ ಆ ಕತ್ಯಾನಂಗ ನಾನೇನು ನಮ್ಮಪ್ಪನ್ನ ಮದ್ವಿನೂ ಈಗ ಮಾಡ್ತಿಯೇನ್ಪಾ ಅಂತ ಕೇಳಿರಲಿಲ್ಲರೀ ಮತ್ತ.....!
–ಸಾವಿತ್ರಿ ಹಿರೇಮಠ ಹಂಪಿ

*
ಮನಸ್ಸು ಕಲ್ಪನೆಯಲ್ಲೇ ತುಂಬಿಹೋಗಿತ್ತು
ಅಂದು ನಾವು ಓದಿದ್ದಕ್ಕಿಂತ ಹೆಚ್ಚಾಗಿ ನಮ್ಮಜ್ಜಿ ಹೇಳಿದ ಕಥೆಗಳೇ ಇಂದೂ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದು ಹೋಗಿವೆ. ‘ರಾಜನಿಗೆ ಒಬ್ಬ ಮಗಳಿದ್ದಳಂತೆ’ ಎಂದರೆ ಸಾಕು ಮೈ ತುಂಬಾ ಒಡವೆ ಧರಿಸಿದ ಸುಂದರ ರಾಜಕುಮಾರಿ ಮನದಲ್ಲಿ ನಿಂತುಬಿಡುತ್ತಿದ್ದಳು.

ರಾಜಕುಮಾರಿಯನ್ನು ರಾತ್ರಿ  ಮಂತ್ರವಾದಿ ಬಂದು ಮಂಚದ ಸಮೇತ ಆಕಾಶದಲ್ಲಿ ಎತ್ತಿಕೊಂಡು ಹೋಗುತ್ತಿದ್ದನಂತೆ ಎಂದರೆ ಮಂಚದ ಮೇಲಿದ್ದ ರಾಜಕುಮಾರಿಗೆ ಎಚ್ಚರವಾಗಿ ಭಯವಾಗಲ್ಲವೆ ಎಂಬ ಪ್ರಶ್ನೆ ಉದ್ಭವಿಸುತ್ತಿತ್ತು. ಮಂತ್ರವಾದಿಯು ತನ್ನ ಮಾಯಾಶಕ್ತಿಯಿಂದ ಮಂತ್ರಹಾಕಿ ಅವಳಿಗೆ ಎಚ್ಚರವಾಗದಂತೆ ಮಾಡುತ್ತಿದ್ದ ಎಂಬ ಅಜ್ಜಿ ಉತ್ತರದಿಂದ ಮನಸ್ಸು ತಹಬಂದಿಗೆ ಬಂದರೂ ನಮ್ಮ ಕಲ್ಪನಾಲೋಕದಲ್ಲೇ ಮುಳುಗಿ, ಮುಂದೇನು ಎನ್ನುವ ಕಾತರ ಹೆಚ್ಚಿ ‘ಅಜ್ಜೀ ಮುಂದೇನಾಯಿತು’ ಎಂದು ತಲೆತಿನ್ನುತ್ತಿದ್ದೆವು.

ಆ ಮಾಂತ್ರಿಕ  ದೇವಿಗೆ ಅವಳಿಂದ ಪೂಜೆ ಮಾಡಿಸಿ ಬಲಿ ಕೊಡಬೇಕೆಂದಿದ್ದ ಎಂದು ಅಜ್ಜಿ ಹೇಳಿದಾಗ ಭಯದಿಂದ ನಮ್ಮ ಕಣ್ಣುಗಳು ಅಗಲವಾಗುತ್ತಿದ್ದವು. ತಕ್ಷಣವೇ ಅಜ್ಜಿ ಕಥೆ ಬದಲಿಸುತ್ತಿದ್ದಳು. ‘ಈಗ ಮಂತ್ರಿ ಮಗ ರಾಜಕುಮಾರಿಯ ರಕ್ಷಣೆಗೆ ಬಂದಾಗ ರಾಕ್ಷಸ ಹದ್ದಿನ ರೂಪ ತಾಳುತ್ತಾನೆ. ಅಲ್ಲೇ ಇದ್ದ ಮಂತ್ರಿ ಮಗ ಮಾಧವ, ಕತ್ತಿ ರೂಪ ತಾಳಿ ಮಾಯಾ ಹಗ್ಗವನ್ನು ತುಂಡರಿಸಿ ರಾಜಕುಮಾರಿಯನ್ನು ರಕ್ಷಿಸಿದ’ ಎಂದಾಗ ಎಷ್ಟೋ ನಿರಾಳತೆ.

ಮಾಧವ ರೆಕ್ಕೆಯುಳ್ಳ ಕುದುರೆಯ ರೂಪಧರಿಸಿ ರಾಜಕುಮಾರಿಯನ್ನು ಹೊತ್ತು ಹಾರುತ್ತಾ ಬರುತ್ತಿದ್ದಂತೆ ನಾವೂ ಕಲ್ಪನೆಯ ಕುದುರೆಯೇರಿ ಅಚ್ಚರಿಪಡುತ್ತ, ಮಾಯಮಂತ್ರಗಳಿಗೆ ಹೆದರುತ್ತಾ, ಅರಮನೆಯ ಉದ್ಯಾನ ಸರೋವರಗಳಲ್ಲಿ ವಿಹರಿಸುತ್ತ ಮನಸ್ಸು ಸುಖಿಸುತ್ತಿತ್ತು. ಕಥೆ ಮುಗಿದಾಗೆಲ್ಲಾ ಅಯ್ಯೋ ಇಷ್ಟು ಬೇಗ ಕಥೆ ಮುಗಿದುಹೋಯಿತೆ ಎಂದು ಬೇಸರಗೊಂಡು ಮಾರನೇ ದಿನದ ಮತ್ತೊಂದು ಕಥೆಗೆ ಮನಸ್ಸು ನಲಿಯುತ್ತಿತ್ತು.
–ಎಸ್‌. ವಿಜಯ ಗುರುರಾಜ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT