ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಯೇ ಬಾಳಿನೊಗ್ಗರಣೆ…

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

‘ಉನ್ನತ ವ್ಯಾಸಂಗ ಉಳ್ಳವರಿಗೆ ಮಾತ್ರ ಎಂಬ ಪ್ರತೀತಿ ಈಗಲೂ ನಮ್ಮ ದೇಶದಲ್ಲಿದೆ! ಇದು ನನ್ನ ಪ್ರಕಾರ ಸುಳ್ಳು. ಯಾಕೆಂದರೆ ಬಡವರು ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್, ಅಧ್ಯಯನ ಸಾಮಗ್ರಿ ನೀಡುವಂತಹ ಸಂಸ್ಥೆಗಳು, ಟ್ರಸ್ಟ್‌ಗಳು, ಸಮುದಾಯದ ಸಂಘಗಳು, ಮಠ ಮಾನ್ಯಗಳು, ಸರ್ಕಾರದ ಕಲ್ಯಾಣ ಇಲಾಖೆಗಳು ಮತ್ತು ಧಾರ್ಮಿಕ ಕೇಂದ್ರಗಳು ಇವೆ.

ಇವುಗಳ ಸದುಪಯೋಗ ಪಡೆದುಕೊಂಡು ಮುಂದೆ ಬರಲು ಅವಕಾಶವಿದೆ. ಇದೆಲ್ಲಕ್ಕಿಂತ ವಿದ್ಯಾರ್ಥಿಗಳು ಬೇರೆ ಕಡೆ ಗಮನ ಹರಿಸದೇ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಓದಿದರೆ ಯಶಸ್ಸು ಸಾಧಿಸಬಹುದು’ ಹೀಗೆಂದು ಹೇಳಿರುವುದು ಈ ವರ್ಷ ಐಐಟಿ-ಜೆಇಇ ಪರೀಕ್ಷೆಯಲ್ಲಿ ಮೊದಲ ರ್‍್ಯಾಂಕ್ ಪಡೆದ ಸರ್ವೇಶ್ ಮೆಹ್ತಾನಿ.

ಸರ್ವೇಶ್ ಚಂಡೀಗಡದವರು. ಅವರು ಸಹ ಮಧ್ಯಮ ವರ್ಗದ ಕುಟುಂಬದವರು. ಬಾಂಬೆ ಐಐಟಿಯಲ್ಲಿ ಪದವಿ ಪಡೆದಿರುವ ಸರ್ವೇಶ್ ಶೇ 95 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ರ್‍್ಯಾಂಕ್ ಪಡೆದಿದ್ದಾರೆ. ತಮ್ಮ ಸಾಧನೆಯ ಕುರಿತು ಅವರು ಹೀಗೆ ಹೇಳುತ್ತಾರೆ:
‘ನಮ್ಮದು ಮಧ್ಯಮ ವರ್ಗದ ಕುಟುಂಬವಾದ್ದರಿಂದ ಹಸಿವು ಮತ್ತು ಬಡತನದ ಅರಿವು ನನಗಿತ್ತು.

ಮನೆಯಲ್ಲಿ ಅಪ್ಪ ಕೊಡುತ್ತಿದ್ದ ಹಣವನ್ನು ಅಧ್ಯಯನ ಸಾಮಗ್ರಿಗೆ ಬಳಸುತ್ತಿದ್ದೆ. ನಾನು  ಫೋನ್‌ ಬಳಕೆ ಮಾಡುತ್ತಿಲ್ಲ. ಜತೆಗೆ ಯಾವುದೇ ಸಾಮಾಜಿಕ ಜಾಲತಾಣಗಳ ಖಾತೆದಾರನೂ ಅಲ್ಲ. ನನ್ನ ಗುರಿ ಇದ್ದದು ಜೆಇಇ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು ಎಂಬುದಷ್ಟೇ. ಹಾಗೆಂದು ದಿನದ ಹದಿನಾರು ಗಂಟೆ ಪುಸ್ತಕದ ಹುಳುವಾಗಿರಲಿಲ್ಲ.

ಬಿಡುವು ಮಾಡಿಕೊಂಡು ಸಂಗೀತ ಕೇಳುತ್ತಿದ್ದೆ ಹಾಗೂ ಬ್ಯಾಡ್ಮಿಂಟನ್ ಆಡುತ್ತಿದ್ದೆ. ಈ ಎರಡು ಚಟುವಟಿಕೆಗಳು ನನ್ನ ಓದಿನ ಏಕಾಗ್ರತೆಗೆ ನೆರವು ನೀಡಿದವು.  ಶ್ರಮವಹಿಸಿ ಅಧ್ಯಯನ ಮಾಡಿದ್ದಕ್ಕೆ ಇಂದು ಮೊದಲ ರ್‍್ಯಾಂಕ್ ಪಡೆದಿದ್ದೇನೆ’ ಅದೃಷ್ಟ ನಂಬದೇ ಶ್ರಮವಹಿಸಿ ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿ ಮಾತು ಹೇಳುತ್ತಾರೆ.

*


ಅನಿಕಾ ಪಾಂಡೆ
ಸಿಲಿಕಾನ್ ವ್ಯಾಲಿ ಬೆಂಗಳೂರು ಜೀವನಕ್ಕೆ ಗುಡ್‌ ಬೈ ಹೇಳಿ ಒಡಿಶಾದ ನಕ್ಸಲ್ ಪೀಡಿತ ಜಿಲ್ಲೆ ಎಂದೇ ಖ್ಯಾತಿಯಾಗಿರುವ ಗಜಪತಿ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಜೇನುತುಪ್ಪದ ಕಿರು ಉದ್ಯಮ ನಡೆಸುತ್ತಿರುವ ಅನಿಕಾ ಪಾಂಡೆ ಕಥೆ ಇದು.

24ರ ಹರೆಯದ ಅನಿಕಾ, ‘ಜಗತ್ ಕಲ್ಯಾಣ್ ಜೇನು ಉತ್ಪಾದಕ ಸಂಸ್ಥೆ’ ಸ್ಥಾಪಿಸುವ ಮೂಲಕ ಸುಮಾರು 500 ಜನ ರೈತರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ಪ್ರತಿ ನಿತ್ಯ 500 ಜನ ರೈತರು ಮತ್ತು 300 ರೈತ ಮಹಿಳೆಯರು ಇಲ್ಲಿನ ಕಾಡು ಹಾಗೂ ಬೆಟ್ಟದ ತಪ್ಪಲು ಪ್ರದೇಶದಲ್ಲಿ ನೈಸರ್ಗಿಕ ಜೇನನ್ನು ಸಂಗ್ರಹಿಸಿ ಬರುತ್ತಾರೆ. ಅದನ್ನು ಜಗತ್ ಕಲ್ಯಾಣ್ ಎಂಬ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತದೆ.

ಇಲ್ಲಿ ಯಾವುದೇ ರೀತಿಯ ಜೇನು ಕೃಷಿ ಮಾಡುವುದಿಲ್ಲ, ಬದಲು ನೈಸರ್ಗಿಕವಾಗಿ ದೊರೆಯುವ ಜೇನುತುಪ್ಪವನ್ನು ಸಂಗ್ರಹಿಸಲಾಗುತ್ತದೆ. ಬಂದ ಲಾಭವನ್ನು ಎಲ್ಲರಿಗೂ ಸಮನಾಗಿ ಹಂಚಿಕೆ ಮಾಡಲಾಗುವುದು. ಇದರಿಂದ  ಸಾವಿರ ಕುಟುಂಬಗಳು ಸುಖ ಜೀವನ ನಡೆಸುತ್ತಿವೆ ಎನ್ನುತ್ತಾರೆ ಅನಿಕಾ.

ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಇವರು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಆರ್ಥಿಕ ಸಲಹೆಗಾರ್ತಿಯಾಗಿ ಕೆಲಸ ಮಾಡಿದ್ದರು. ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ‘ಗ್ರಾಮೀಣಾಭಿವೃದ್ಧಿ ಫೆಲೋಶಿಪ್’ ಪಡೆದು ಹಳ್ಳಿಗಳತ್ತ ಮುಖ ಮಾಡಿದರು.

ಗ್ರಾಮ ವಿಕಾಸ ಎಂಬ ಸಂಸ್ಥೆಯಲ್ಲಿ ಒಂದು ವರ್ಷ ಸ್ವಯಂಸೇವಕಿಯಾಗಿ ದುಡಿದರು. ಅಲ್ಲಿಂದ ಒಡಿಶಾಗೆ ಹೋಗಿ ಜೇನು ಉದ್ಯಮ ಆರಂಭಿಸಿದರು. ನಗರ ಪ್ರದೇಶದ ಒತ್ತಡ ಜೀವನಕ್ಕಿಂತ ಹಳ್ಳಿಯ ಬದುಕು ಲೇಸು. ಅದರಲ್ಲೂ ಗ್ರಾಮೀಣ ಜನರ ಏಳಿಗೆಗೆ ದುಡಿಯುವುದರಲ್ಲಿ  ಸಾರ್ಥಕತೆ ಇದೆ ಎನ್ನುತ್ತಾರೆ ಅವರು.

*


ಆಕಾಶ್ ಸದಾಶಿವಂ
‘ಏರೋನಾಟಿಕಲ್ ಎಂಜಿನಿಯರಿಂಗ್ ಪದವಿಯ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೆ. ರಜಾ ದಿನಗಳಾಗಿದ್ದರಿಂದ ಮನೆಯಲ್ಲಿ ಟೈಂ ಪಾಸ್ ಮಾಡುವುದೇ ಕಷ್ಟವಾಗಿತ್ತು! ಒಂದುದಿನ ಟಿ.ವಿ. ನೋಡುತ್ತಿರುವಾಗ ಸುದ್ದಿವಾಹಿನಿಯೊಂದರಲ್ಲಿ ವರದಿಯೊಂದು ಪ್ರಸಾರವಾಯಿತು. ಅದು ಭಾರತದಲ್ಲಿ ಶೇ 40ರಷ್ಟು ಜನರು ಅಪೌಷ್ಟಿಕತೆಗೆ ಒಳಗಾಗಿದ್ದಾರೆ. ಅದರಲ್ಲೂ ಶೇ18ರಷ್ಟು ಮಕ್ಕಳು ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಮಕ್ಕಳ ಚಿತ್ರಗಳು ಮತ್ತು ವಿಡಿಯೊವನ್ನು ಬಿತ್ತರಿಸಿತ್ತು.

ಇದನ್ನು ನೋಡಿದಾಗ ಕರುಳು ಕಿತ್ತು ಬಂದಿತ್ತು. ಅದಾದ ಕೆಲ ಗಂಟೆಗಳಲ್ಲಿ ಅದೇ ಸುದ್ದಿವಾಹಿನಿಯಲ್ಲಿ ನಾಸಾ ಸುದ್ದಿಯೊಂದು ಪ್ರಸಾರವಾಯಿತು. ಐದು ಜನ ಗಗನಯಾತ್ರಿಗಳು 265 ದಿನಗಳನ್ನು ಅಂತರಿಕ್ಷದಲ್ಲಿ ಕಳೆದ ಸುದ್ದಿ ಅದು! ಈ ಎರಡು ಸುದ್ದಿಗಳು ಆ ಹೊತ್ತು ನನ್ನ ತೀವ್ರವಾಗಿ ಕಾಡಿದವು!

ನಾನು ಎಂಜಿನಿಯರ್ ಆಗಿದ್ದರಿಂದ ಅಂತರಿಕ್ಷದಲ್ಲಿ ಗಗನ ಯಾತ್ರಿಗಳು ರಾಕೆಟ್ ಅಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಲು ಸಾಧ್ಯವಿಲ್ಲ, ಬದಲಿಗೆ ಅವರು ಚಾಕೊಲೇಟ್, ಪೌಡರ್ ತರಹದ ಸ್ಪಿರುಲಿನ ಮಿಶ್ರಣ ಮಾಡಿದ ಆಹಾರ ಸೇವಿಸುತ್ತಾರೆ. 1000 ಕೆ.ಜಿ ತರಕಾರಿಯಲ್ಲಿ ಸಿಗುವ ಪೌಷ್ಟಿಕತೆ ಕೇವಲ 1 ಕೆ.ಜಿ ಸ್ಪಿರುಲಿನದಲ್ಲಿ ಸಿಗುತ್ತದೆ ಎಂಬ ಅಂಶ ನನಗೆ ತಿಳಿದಿತ್ತು.

ಈ ಸಂದರ್ಭದಲ್ಲಿ ಪೌಷ್ಟಿಕತೆ ಕೊರತೆ ಇರುವವರಿಗೆ ಸರ್ಕಾರ ಯಾಕೆ ಸ್ಪಿರುಲಿನವನ್ನು ಉಚಿತವಾಗಿ ನೀಡಬಾರದು ಎಂಬ ಆಲೋಚನೆ ಹೊಳೆಯಿತು. ನಂತರ ಸ್ಥಳೀಯ ರಾಜಕೀಯ ವ್ಯಕ್ತಿಗಳನ್ನು ಸಂಪರ್ಕಿಸಿ ಈ ಆಲೋಚನೆಯನ್ನು ಅವರ ಬಳಿ ಹೇಳಿದೆ. ಯಾವುದೇ ಪ್ರಯೋಜವಾಗಲಿಲ್ಲ... ಹೀಗೆ ತಮ್ಮ ಕಥೆ ಹೇಳಿದರು ಆಕಾಶ್ ಸದಾಶಿವಂ.

ಅಷ್ಟಕ್ಕೆ ಹತಾಶನಾಗದ ಆ ಯುವಕ ಮುಂದೆ ‘ಪ್ರೊಲಾಗ್ ಸ್ಪಿರುಲಿನ’ ಎಂಬ ಕಂಪೆನಿ ಸ್ಥಾಪಿಸುತ್ತಾರೆ. ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಹುಟ್ಟಿದ ಆಕಾಶ್ ಇಂದು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಳ್ಳುವ ಮೂಲಕ ಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸ್ಪಿರುಲಿನ ನೀಡುತ್ತಿದ್ದಾರೆ.  ಸ್ಪಿರುಲಿನ ಉತ್ಪಾದನೆ ಹಾಗೂ ಸರಬರಾಜು ಮಾಡುವ ಮೂಲಕ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT