ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಎಂಬ ರಕ್ಕಸ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಎಲ್ಲ ಕಾಲದಲ್ಲೂ ಮನುಷ್ಯನ ದೊಡ್ಡ ಶತ್ರು ಎಂದರೆ ಅವನೇ; ಎಂದರೆ ‘ನಾನು’ ಎಂಬ ಅಹಂ, ‘ನಾನು’, ‘ನನ್ನವರು’ – ಈ ಎರಡರ ಕಾರಣದಿಂದಲೇ ಮನುಷ್ಯನ ಭಾವವೂ ಬುದ್ಧಿಯೂ ಅಡ್ಡ ದಾರಿಯನ್ನು ಹಿಡಿಯಲು ಮೂಲ ಕಾರಣ.

ನಮ್ಮ ಈಗಿನ ಲೋಕವ್ಯವಹಾರವನ್ನು ನೋಡಿದರಂತೂ ಈ ‘ನಾನು’ ಸಮಸ್ಯೆ ಇನ್ನೂ ಹೆಚ್ಚಾಗಿರುವುದು ಸ್ಪಷ್ಟ. ನಾನು ಚೆನ್ನಾಗಿರಬೇಕು; ಅಥವಾ ನಾನಷ್ಟೇ ಚೆನ್ನಾಗಿರಬೇಕು. ಆದುದರಿಂದ ನನಗೆ ಬೇಕಾದವರು, ಎಂದವರೆ ನನ್ನವರು ಚೆನ್ನಾಗಿರಬೇಕು. ಹೀಗಾಗಿ ನನಗಾಗಿಯೂ ನನ್ನವರಿಗಾಗಿಯೂ ನಾನು ಏನು ಮಾಡಿದರೂ ಸರಿಯೇ ಎಂಬ ಧೋರಣೆಯೂ ಬಲಿಯುತ್ತಿದೆ.

‘ನಾನು’ ಚೆನ್ನಾಗಿರಬೇಕು– ಎಂದು ಬಯಸುವುದೇನೂ ತಪ್ಪಲ್ಲ; ಆದರೆ ನಾನಷ್ಟೇ ಚೆನ್ನಾಗಿರಬೇಕು; ನನ್ನವರಷ್ಟೇ ಬದುಕಬೇಕು; ನಾನು ಹೇಳಿದ್ದಷ್ಟೇ ಉಳಿಯಬೇಕು– ಹೀಗೆ ‘ನಾನು’ ಎನ್ನುವುದನ್ನು ಸ್ವಾರ್ಥದ ಪೀಠದ ಮೇಲೆ ಪ್ರತಿಷ್ಠಾಪಿಸುತ್ತಹೋಗುವುದು ಸರಿಯಾಗದು.

ಮಹಾಭಾರತದಲ್ಲಿ ಯುದ್ಧ ಇನ್ನೇನು ಆರಂಭವಾಗಬೇಕು. ಎರಡು ಕಡೆಯ ಸೈನ್ಯ ನಿಂತಿದೆ.  ಒಂದು ವಿಧದಲ್ಲಿ ಯುದ್ಧಕ್ಕೆ ಕಾರಣನಾಗಿರುವವನೇ ಧೃತರಾಷ್ಟ್ರ. ಅವನಿಗೆ ಬೇರೊಬ್ಬರ ಒಳಿತನ್ನೂ ಕಾಣದ ಕಣ್ಣಿಲ್ಲದಿದ್ದುದರಿಂದಲೇ ಯುದ್ಧದ ಹುಟ್ಟಿಗೆ ಕಾರಣವಾದದ್ದು. ಅವನಿಗೆ ಕಾಣುತ್ತಿದ್ದುದೆಲ್ಲ ‘ನಾನು’ ಎಂಬ ಅವನು ಮಾತ್ರವೇ.

ಈ ‘ನಾನು’ವಿನ ವಿಸ್ತರಣವಾಗಿಯೇ ಅವನ ಮಕ್ಕಳನ್ನು ಕಂಡವನು. ಹೀಗಾಗಿ ಅವರ ತಪ್ಪುಗಳನ್ನು ಗುರುತಿಸುವಂಥ, ತಿದ್ದುವಂಥ ಕೆಲಸವನ್ನೇ ಮಾಡಲಿಲ್ಲ. ಯುದ್ಧದ ವಿವರವನ್ನು ಕೇಳುವಾಗ ಅವನು ಆಡಿದ ಮೊದಲ ಮಾತೇ ಭಗವದ್ಗೀತೆಯ ಮೊದಲ ಶ್ಲೋಕ ಎಂದಾಗಿದೆ. ಅದು ಹಾಗೆ ಆದದ್ದು ಧ್ವನಿಪೂರ್ಣವಾಗಿಯೂ ಇದೆ.

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ।।

‘ಯುದ್ಧವನ್ನು ಬಯಸಿ, ಈ ಕುರುಕ್ಷೇತ್ರದಲ್ಲಿ ಸೇರಿರುವ ನನ್ನವರು ಮತ್ತು ಪಾಂಡವರು ಏನು ಮಾಡಿದರು ಹೇಳು ಸಂಜಯ’. ಇದು ಧೃತರಾಷ್ಟ್ರನ ಮೊದಲ ಮಾತು.

ಪಾಂಡವರು ಧೃತರಾಷ್ಟ್ರನಿಗೆ ಹೊರಗಿನವರೇನೂ ಅಲ್ಲ; ಸಹೋದರನ ಮಕ್ಕಳೇ; ಸಂಬಂಧದ ನೆಲೆಯಿಂದ ನೋಡಿದರೆ ಅವರನ್ನು ಕೂಡ ಅವನು ‘ನನ್ನವರು’ ಎಂದು ಕರೆಯಬಹುದಾಗಿತ್ತು; ಆದರೆ ಹಾಗೆ ಅವನು ಕರೆಯಲಿಲ್ಲ. ಅವನ ಮಕ್ಕಳು ಮಾತ್ರವೇ ಅವನಿಗೆ ‘ನನ್ನವರು’ ಎನಿಸಿದರು.

ಯಾವಾಗ ‘ಅವರು ನನ್ನವರು’, ‘ಇವರು ನನ್ನವರಲ್ಲ’–  ಎಂಬ ಭೇದಬುದ್ಧಿ ನಮ್ಮಲ್ಲಿ ಎಚ್ಚರವಾಗುತ್ತದೆಯೋ ಆಗ ಯುದ್ಧೋನ್ಮಾದ ನಮ್ಮನ್ನು ಆವರಿಸಿಕೊಳ್ಳುತ್ತದೆ. ಧೃತರಾಷ್ಟ್ರನಲ್ಲಿ ‘ನಾನು’, ‘ನನ್ನವರು’ – ಎಂಬುದು ಸದಾ ಕೆಲಸ ಮಾಡುತ್ತಲೇ ಇದ್ದುದು ಯುದ್ಧಕ್ಕೆ ಮುನ್ನಡಿಯಾಯಿತು.
ಇಂದು ನಾವೆಲ್ಲರೂ ಒಂದಲ್ಲ ಒಂದು ವಿಧದಲ್ಲಿ ಯುದ್ಧೋನ್ಮಾದದಲ್ಲಿ ಮುಳುಗಿದ್ದೇವೆ. ಇದಕ್ಕೆ ಕಾರಣವೇ ನಮ್ಮ ‘ನಾನು’ತನ. ಇದೇ ಸ್ವಾರ್ಥ. ಸಂಸ್ಕೃತ ಸುಭಾಷಿತವೊಂದು ಸೊಗಸಾಗಿದೆ:

ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಂ ।
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್‌ ।।

‘ಇವರು ನನ್ನವನು ಅಥವಾ ಬೇರೆಯವನು ಎಂಬ ಎಣಿಕೆ ಸಣ್ಣ ಮನಸ್ಸಿನವರದ್ದು; ಉದಾರವಾದ ಮನಸ್ಸಿನವನಿಗೆ ಈ ಭೂಮಂಡಲವೇ ಅವನ ಮನೆ ಎಂಬ ಭಾವ ಮೂಡುವುದು.’ ವಿಶ್ವಮಾನವನ ಕಲ್ಪನೆ ಈ ಶ್ಲೋಕದಲ್ಲಿ ತುಂಬ ಸೊಗಸಾಗಿ ಹರಳುಗಟ್ಟಿದೆ.

ಆಧುನಿಕ ಕಾಲವನ್ನು ‘ಗ್ಲೋಬಲ್‌ ವಿಲೇಜ್‌’ಯುಗ ಎನ್ನುವರು. ಇಡಿಯ ಜಗತ್ತೇ ಒಂದು ಗ್ರಾಮದಂತೆ ಎನ್ನುವುದು ಈ ಮಾತಿನ ಭಾವ. ಭೌತಿಕವಾದ ದೂರ ನಮ್ಮ ಪ್ರೀತಿ–ವಿಶ್ವಾಸಗಳಿಗೆ ಅಡ್ಡಿಯಾಗದು, ಆಗಬಾರದು ಎನ್ನುವುದು ಈ ಮಾತಿನ ನಿಲುವು. ಆದರೆ ನಾವು ನಿಜವಾಗಿಯೂ ಹೀಗೆ ಬದುಕುತ್ತಿದ್ದೇವೆಯೆ? ನಮ್ಮಲ್ಲಿ ಪರಸ್ಪರ ಪ್ರೀತಿ–ವಿಶ್ವಾಸಗಳು ಹೀಗೆ ನೆಲೆಗೊಂಡಿವೆಯೆ?

ಇದಕ್ಕೆ ಉತ್ತರ ನಮಗೆಲ್ಲ ಗೊತ್ತೇ ಇದೆ. ನಮ್ಮ ದೃಷ್ಟಿಯನ್ನು ಸ್ವಲ್ಪ ಹೊರಗೆ ಹಾಯಿಸಿದರೂ ಸಾಕು, ಉತ್ತರ ಕಾಣಿಸುತ್ತದೆ. ಜಗಳ, ಹಗರಣ, ಕೊಲೆ, ಕದನ – ಹೀಗೆ ಒಂದಲ್ಲ ಒಂದು ರೀತಿಯ ಯುದ್ಧ ಪ್ರತಿ ಕ್ಷಣವೂ ನಡೆಯುತ್ತಲೇ ಇದೆ. ಇದಕ್ಕೆ ಕಾರಣವೂ ಸ್ಪಷ್ಟವಾಗಿಯೇ ಇದೆ: ಎಲ್ಲರಲ್ಲೂ ಎದ್ದು ಕುಣಿಯುತ್ತಿರುವ ‘ನಾನು’, ‘ನನ್ನದು’ ಎಂಬ ರಾಕ್ಷಸಭಾವ. ಅದರಿಂದ ನಮಗೆ ಬಿಡುಗಡೆ ಎಂದೋ?! ­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT