ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಧನುಷ್‌ ಬೆಳದಿಂಗಳು ಬಿಡಿಸಿದ ಚಿತ್ತಾರ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ದಟ್ಟ ಕಾನನದಲ್ಲಿ ರಾತ್ರಿ ಮೈ ಕೊರೆವ ಚಳಿ. ನೀರವತೆಯನ್ನು ಸೀಳುತ್ತಾ ಬೆಟ್ಟದ ನಡುವಿಂದ ಹರಿವ ಜಲಪಾತ. ಕಡಿದಾಗಿ ಹಬ್ಬಿಕೊಂಡ ಮರಗಳ ನಡುವೆ ಆಗಾಗ ದರ್ಶನ ನೀಡುತ್ತಿದ್ದ ತಿಳಿ ಆಕಾಶ. ಇದೇ ಸರಿಯಾದ ಸಮಯ ಎಂದು ಕ್ಯಾಮೆರಾ ಹೊತ್ತು ಜಲಪಾತದ ಹಾದಿ ಹಿಡಿಯಿತು ಈ ತಂಡ.

ಆವತ್ತು ತುಂಬು ಹುಣ್ಣಿಮೆ. ಹಾಲು ಬೆಳದಿಂಗಳಲ್ಲಿ ಕಾಣುತ್ತಿದ್ದುದು ಮರಗಿಡಗಳ ನೆರಳುಗಳಷ್ಟೇ. ಅದೇ ನೆರಳಲ್ಲೇ ಉಂಚಳ್ಳಿ ಜಲಪಾತದ ಹಾದಿ ಹಿಡಿಯುವುದು ಸುಲಭವಾಗಿರಲಿಲ್ಲ. ಆದರೂ ಹಗಲು ಹೊತ್ತು ಅಂದಾಜು ಮಾಡಿಕೊಂಡಂತೆಯೇ ಎಲ್ಲಾ ಕೆಲಸವನ್ನೂ ಕಣ್ಣಳತೆಯಲ್ಲಿ, ತಂದಿದ್ದ ಕೃತಕ ಪುಟ್ಟ ‘ಚಂದಿರ’ರ ಸಹಾಯದಿಂದ ಮಾಡಿದ್ದಾಯಿತು.

ಎಲ್ಲೆಲ್ಲಿ ಕ್ಯಾಮೆರಾ ಇಡಬೇಕೆಂದು ಯೋಜನೆಯಾಗಿತ್ತೋ ಅಲ್ಲೆಲ್ಲಾ ಕ್ಯಾಮೆರಾಗಳನ್ನು ಇಟ್ಟು ಬಂದಿದ್ದಾಯಿತು. ರಾತ್ರಿ 9ರ ಹೊತ್ತಿಗೆ ಎಲ್ಲಾ ಕ್ಯಾಮೆರಾಗಳೂ ಚಾಲೂ ಆದವು. ಮೋಡದ ನಡುವೆ ಚಂದ್ರ ಅಂಬೆಗಾಲಿಟ್ಟಂತೆಯೇ ಮೇಲೆ ಬಂದ. ಹೌದು, ನೀರ ಮೇಲೂ ಚಂದ್ರನ ಬಿಂಬ!

ಒಂಬತ್ತು ಕಳೆಯಿತು, ಹತ್ತು ಹೋಗಿ ಹನ್ನೊಂದಾಯಿತು, ಹನ್ನೆರಡಾಯಿತು, ಒಂದು ಗಂಟೆಯೂ ಕಳೆಯಿತು... ಬಿಟ್ಟ ಕಣ್ಣು ಬಿಟ್ಟಂತೆ  ಜಲಪಾತದೆಡೆಗೇ ಚಿತ್ತ ನೆಟ್ಟು ಕುಳಿತವರಲ್ಲಿ ಕುತೂಹಲ ಮಾತ್ರ ಕಡಿಮೆಯಾಗಿರಲಿಲ್ಲ. ರಾತ್ರಿಯಿಡೀ ಕಣ್ಣಿಗೆ ಏನೂ ದಕ್ಕಲಿಲ್ಲ. ಬೆಳಿಗ್ಗೆ 6ಕ್ಕೆ ಕ್ಯಾಮೆರಾಗಳು ಬಂದ್ ಆದವು. ಅಂದಹಾಗೆ ಈ ತಂಡ ಹುಡುಕಹೊರಟಿದ್ದು ಬೆಳದಿಂಗಳ ಕಾಮನಬಿಲ್ಲನ್ನು.

ಸುಲಭವಾಗಿ ನೋಟಕ್ಕೆ ದಕ್ಕದ ಭೂದೃಶ್ಯಗಳನ್ನು ಫೋಟೊಗಳ ಮೂಲಕ ಸೆರೆಹಿಡಿಯುವ ‘ಲ್ಯಾಂಡ್‌ಸ್ಕೇಪ್‌ ವಿಝರ್ಡ್ಸ್’ ತಂಡ ‘ಮೂನ್‌ ಬೋ’ ಸೆರೆಹಿಡಿಯಲು ಹೊರಟ ಕ್ಷಣಗಳು ಹೀಗಿದ್ದವು.

‘ಮೂನ್‌ ಬೋ ಎಂದರೆ ಏನು? ಹೀಗೊಂದು ಪರಿಕಲ್ಪನೆ ಇದೆಯಾ?’– ತಂಡದ ಶ್ರೀಹರ್ಷ ಗಂಜಾಂ, ಚಂದ್ರಧನುಷ್ (ಮೂನ್‌ಬೋ) ಬಗ್ಗೆ ಹೇಳಿದಾಗ ಬಂದ ಎಲ್ಲರ ಪ್ರತಿಕ್ರಿಯೆ ಹೀಗೇ ಇತ್ತು. ಈ ಪ್ರತಿಕ್ರಿಯೆಯೇ ಇದರ ಸಾಕ್ಷ್ಯಚಿತ್ರ ದಾಖಲಿಸುವೆಡೆಗೆ ಆಸಕ್ತಿ ಮೂಡಿಸಿದ್ದು. ಅಂದೇ ಚಂದ್ರಧನುಷ್‌ನ ಬೆನ್ನು ಹತ್ತಿದ್ದಾಯಿತು.

‘ಅನ್‌ಸೀನ್ ಲ್ಯಾಂಡ್‌ಸ್ಕೇಪ್‌’– ಯಾರೂ ಗಮನ ನೀಡದ ಸುಂದರ ಹಾಗೂ ಆಸಕ್ತಿದಾಯಕ ಲ್ಯಾಂಡ್‌ಸ್ಕೇಪ್‌ಗಳ ಜಾಡು ಹಿಡಿದು ಹೋಗುವ ಈ ತಂಡ ‘ಮೂನ್‌ ಬೋ’ ಹಿಡಿಯುವ ಸಾಹಸಕ್ಕೆ ಕೈ ಹಾಕಿದ್ದು 2015ರಲ್ಲಿ. ಅಘನಾಶಿನಿ ನದಿಯ ಪ್ರಾಜೆಕ್ಟ್‌ನ ಒಂದು ಭಾಗವಾಗಿ ‘ಮೂನ್‌ ಬೋ’ ಸಾಕ್ಷ್ಯಚಿತ್ರ ರೂಪಿಸಲು ಹೊರಟಿತು.

ಚಂದ್ರನ ಬಿಲ್ಲು ಕಾಣುವುದೆಲ್ಲಿ?
ಕ್ಯಾಲಿಫೋರ್ನಿಯಾದ ಯೋಸೆಮಿಟಿ ಫಾಲ್ಸ್‌, ಕಂಬರ್‌ಲೆಂಡ್‌ ಫಾಲ್ಸ್, ವೇಯ್‌ಮಿಯಾ ಫಾಲ್ಸ್ (ಮೂರೂ ಅಮೆರಿಕ) ಹಾಗೂ ಆಫ್ರಿಕಾದ ವಿಕ್ಟೋರಿಯಾ ಫಾಲ್ಸ್ ಚಂದ್ರನಬಿಲ್ಲು ಕಂಡಿರುವ ದಾಖಲೆಯಿದೆ. ಐಸ್‌ಲೆಂಡ್‌ನ ಸ್ಕೊಗಫಾಸ್‌ ಫಾಲ್ಸ್‌ನಲ್ಲೂ ‘ಮೂನ್‌ ಬೋ’ ಕಂಡವರಿದ್ದಾರೆ. ಇಷ್ಟು ಬಿಟ್ಟರೆ ಪ್ರಪಂಚದ ಬೇರೆಲ್ಲೂ ಚಂದ್ರಧನುಷ್‌ ಕಂಡ ಉದಾಹರಣೆಯಿಲ್ಲ. ಬೇರೆ ಜಲಪಾತಗಳಲ್ಲೂ ಇಂತಹ ಕೌತುಕ ಒಂದುವೇಳೆ ಘಟಿಸಿದ್ದರೂ ದಾಖಲಿಸುವ ಪ್ರಯತ್ನಗಳು ನಡೆದಂತಿಲ್ಲ.

ಚಂದ್ರನಬಿಲ್ಲು ಯೋಸೆಮಿಟಿಯಲ್ಲಿ ಸಂಭವಿಸುವುದನ್ನು ತಿಳಿದಿದ್ದ ಶ್ರೀಹರ್ಷ, ಇದರ ಸಾಧ್ಯತೆಯನ್ನು ಹುಡುಕಿದ್ದು ಉಂಚಳ್ಳಿ ಫಾಲ್ಸ್‌ನಲ್ಲಿ. ‘ಯೋಸೆಮಿಟಿಯಲ್ಲಿ ‘ಮೂನ್‌ ಬೋ’ ಪ್ರಸಿದ್ಧಿ. ಜೂನ್, ಜುಲೈ ಸಮಯದಲ್ಲಿ ಅದನ್ನು ನೋಡಲು ಜನರು ದಂಡುದಂಡಾಗಿ ಹೋಗುತ್ತಾರೆ. ಅದನ್ನು ನೋಡಿದ ನನ್ನಲ್ಲಿ, ಭಾರತದಲ್ಲೂ ಇದು ಎಲ್ಲಾದರೂ ಆಗಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಮೂಡಿತು.

ದೇ ಕುತೂಹಲವಿಟ್ಟುಕೊಂಡು ನಾಲ್ಕೈದು ಜಲಪಾತಗಳನ್ನು ವಿಶ್ಲೇಷಣೆ ಮಾಡಿದೆ. ಅದೇ ಸಮಯಕ್ಕೆ ಉಂಚಳ್ಳಿ ನೆನಪಾಯಿತು. ಉಂಚಳ್ಳಿ ಜಲಪಾತಕ್ಕೂ ಯೋಸೆಮಿಟಿಗೂ ಹಲವು ಹೋಲಿಕೆಗಳು ಇರುವುದನ್ನು ಗಮನಿಸಿದೆ’ ಎಂದು ಚಂದ್ರಬಿಲ್ಲಿನ ಹುಡುಕಾಟದ ಮೂಲವನ್ನು ವಿವರಿಸಿದರು ಶ್ರೀಹರ್ಷ.

ಒಂದು ವರ್ಷ ಈ ‘ಚಂದ್ರಧನುಷ್‌’ನ ಇಡೀ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಮಾಹಿತಿಗಳನ್ನು ಒಂದೆಡೆ ಕಲೆ ಹಾಕುವುದರಲ್ಲಿ ಕಳೆಯಿತು. ಉಂಚಳ್ಳಿಯಲ್ಲಿ ‘ಮೂನ್‌ ಬೋ’ ಸಂಭವಿಸಬಹುದೇ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಸಾಕಷ್ಟು ಸಾಧ್ಯತೆಗಳು ದೊರೆತವು. ಮೊದಲು ಡೆಸ್ಕ್‌ಟಾಪ್ ಅನಾಲಿಸಿಸ್ ಮಾಡಿಕೊಂಡ ಶ್ರೀಹರ್ಷ, ಯೋಸಿಮಿಟಿ ಫಾಲ್ಸ್‌ನ ಕೋನ ಹೇಗಿದೆ, ಉಂಚಳ್ಳಿಯ ಕೋನ ಹೇಗಿದೆ ಎಂಬುದನ್ನೆಲ್ಲಾ ಪರೀಕ್ಷಿಸಿದರು.

ಗೂಗಲ್‌ ಮ್ಯಾಪ್‌ ಸಹಾಯದಿಂದ ಜಲಪಾತದ ಉದ್ದ ಅಗಲ, ಕೋನ, ಚಂದ್ರ ಮೇಲೆ ಬರುವ ಕೋನ, ವಾಲುವ ಕೋನ ಎಲ್ಲವನ್ನೂ ಒಂದಕ್ಕೊಂದು ತಾಳೆ ಹಾಕಿ ನೋಡಿದರು. ಒಟ್ಟಾರೆ ಒಂದು ಅಂದಾಜು ಹಾಗೂ ಸಿದ್ಧಾಂತದ ಪ್ರಕಾರ ಉಂಚಳ್ಳಿಯಲ್ಲಿ ಚಂದ್ರಧನುಷ್ ಕಾಣಿಸಿಕೊಳ್ಳುವ ಸಾಧ್ಯತೆ 80–85% ಗೋಚರಿಸಿದವು.

ಅಪರೂಪದ ಸ್ಥಳಗಳನ್ನು ಹುಡುಕುವ ಈ ತಂಡದಲ್ಲಿ ಐದು ಮಂದಿ ಇದ್ದಾರೆ. ಹತ್ತು ಹನ್ನೆರಡು ವರ್ಷಗಳಿಂದ ಪ್ರವೃತ್ತಿಗೆ ಇವರೆಲ್ಲ ಛಾಯಾಗ್ರಹಣವನ್ನೇ ನೆಚ್ಚಿಕೊಂಡವರು. ನೇಚರ್ ಅಂಡ್‌ ಲ್ಯಾಂಡ್‌ಸ್ಕೇಪ್‌ ಫೋಟೊಗ್ರಫಿ ಇವರೆಲ್ಲರ ನೆಚ್ಚಿನ ವಿಷಯ. ಎಲ್ಲರದ್ದೂ ಬೇರೆ ಬೇರೆ ವೃತ್ತಿ. ಆದರೆ ಪ್ರವೃತ್ತಿ ಇವರೆಲ್ಲರನ್ನೂ ಒಟ್ಟುಗೂಡಿಸಿದೆ.

ಈ ತಂಡದ ಸದಸ್ಯರೇ ಶ್ರೀಹರ್ಷ, ಅಶ್ವಿನಿ ಕುಮಾರ್‌ ಭಟ್, ಸಹನಾ ಬಾಳ್ಕಲ್, ಶಿವಕುಮಾರ್ ಲಕ್ಷ್ಮೀನಾರಾಯಣ, ಸುನಿಲ್ ಹೆಗಡೆ ತಟ್ಟೀಸರ. ಸುನಿಲ್‌ ಹೆಗಡೆ ಅಘನಾಶಿನಿ ಪ್ರಾಜೆಕ್ಟ್‌ ಭಾಗವಾಗಿದ್ದು, ಶಿರಸಿಯಲ್ಲಿದ್ದಾರೆ. ಮಿಕ್ಕ ನಾಲ್ಕು ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಐದಾರು ವರ್ಷಗಳಿಂದ ‘ಅನ್‌ಸೀನ್‌ ಲ್ಯಾಂಡ್‌ಸ್ಕೇಪ್’ ಪರಿಕಲ್ಪನೆಯೊಂದಿಗೆ ಕ್ಯಾಮೆರಾ ಹೊತ್ತು ಕಾಡು, ಮೇಡು ಸುತ್ತುವುದು ಇವರ ಖಯಾಲಿ.

‘ಭಾರತದಲ್ಲಿ ಲ್ಯಾಂಡ್‌ಸ್ಕೇಪ್ ಫೋಟೊಗ್ರಫಿ ಇನ್ನೂ ಬಾಲ್ಯಾವಸ್ಥೆಯಲ್ಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದವರು ಕಡಿಮೆ. ಹೀಗಿದ್ದಾಗ ವಿಭಿನ್ನ ದಾರಿಯಲ್ಲಿ ನಡೆಯಬೇಕೆಂದು ‘ಅನ್‌ಸೀನ್‌ ಲ್ಯಾಂಡ್‌ಸ್ಕೇಪ್’ ಆರಿಸಿಕೊಂಡೆವು. ಮೊದಲು ಉಲ್ಕಾಪಾತಗಳನ್ನು ಸೆರೆಹಿಡಿದ ಮಿಟಿಯೋರ್ ಲ್ಯಾಂಡ್‌ಸ್ಕೇಪ್ (ಮೇಲಾ), ಗುಹೆಗಳ –ಸಬ್‌ಟೆರೀನ್ ಲ್ಯಾಂಡ್‌ಸ್ಕೇಪ್ (ಸುಲಾ), ಚಿರ್ಬತ್ತಿ ಎಂದು ಕರೆಸಿಕೊಳ್ಳುವ ಬೆಂಕಿ ಉಂಡೆಗಳ ಛಾಯಾಚಿತ್ರ–ಫೈರಿ ಲ್ಯಾಂಡ್‌ಸ್ಕೇಪ್ (ಫೀಲಾ), ಲ್ಯುಮಿನಸ್ ಲ್ಯಾಂಡ್‌ಸ್ಕೇಪ್‌ಗಳ (ಲೂಲಾ) ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರಗಳನ್ನು ರೂಪಿಸಿದೆವು. ಇದಕ್ಕೆ ಹೊಸ ಸೇರ್ಪಡೆ ‘ಮೂನ್‌ ಬೋ’ (ಮೂಲಾ)’ ಎಂದು ವಿವರಿಸಿದರು ಅಶ್ವಿನಿ ಕುಮಾರ್‌.

ಸಿಕ್ಕೀತೇ ಚಂದ್ರಧನುಷ್
‘ಮೂನ್‌ ಬೋ’ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುವ ಕೆಲಸ ಮುಗಿದಿತ್ತು. ಚಂದ್ರನಬಿಲ್ಲನ್ನು ಹುಡುಕಿ ಈ ದಂಡು ಅಘನಾಶಿನಿ ನದಿ ಕಡೆಗೆ ಹೊರಟಿತು. 2015ರ ಡಿಸೆಂಬರ್‌ನಲ್ಲಿ ಮೊದಲ ಬಾರಿ ಉಂಚಳ್ಳಿ ಜಲಪಾತಕ್ಕೆ ಭೇಟಿ ಕೊಟ್ಟಿದ್ದು. ಜಲಪಾತದ ಕೆಳಭಾಗದಲ್ಲಿ ಕ್ಯಾಮೆರಾಗಳನ್ನು ಇಟ್ಟು ಶೂಟ್‌ ಮಾಡಿದ್ದಾಯಿತು. ಕಣ್ಣಿಗೆ ಏನೂ ಕಾಣಲಿಲ್ಲ. ವಾಪಸ್‌ ಬಂದು ವಿಶ್ಲೇಷಿಸಿದಾಗ ಗೊತ್ತಾಗಿದ್ದು ಸಂಪೂರ್ಣ ತಪ್ಪು ಜಾಗದಲ್ಲಿ ಕ್ಯಾಮೆರಾ ಇಟ್ಟದ್ದು. ಈಗ ಹಿಂದಿಗಿಂತ ಲೆಕ್ಕಾಚಾರ ಚುರುಕಾಯಿತು. ಪ್ರತಿ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಮುಂದಿನ ಬಾರಿ ಹೋಗಲು ಈ ತಂಡ ನಿರ್ಧರಿಸಿತು.

‘ಉಂಚಳ್ಳಿ ಜಲಪಾತದಲ್ಲಿ ವರ್ಷಪೂರ್ತಿ ನೀರಿರುತ್ತದೆ. ಕೊನೆ ಕೊನೆಗೆ ಕಡಿಮೆಯಾಗುತ್ತಾ ಹೋಗುತ್ತದೆ. ಡಿಸೆಂಬರ್‌ನಲ್ಲಿ ತುಂಬಾ ಕಡಿಮೆ ಆಗುತ್ತದೆ. ಆದ್ದರಿಂದ ಅಕ್ಟೋಬರ್ ನವೆಂಬರ್ ಸಮಯ ಸೂಕ್ತ ಎಂದು ನಿರ್ಧರಿಸಿದೆವು. ಚಂದ್ರಧನುಷ್ ಪ್ರತಿ ರಾತ್ರಿ ಸೃಷ್ಟಿಯಾಗದು. ಅದಕ್ಕೆ ಹುಣ್ಣಿಮೆಯೇ ಆಗಬೇಕು. ಹೀಗಿದ್ದಾಗ ನಮಗೆ ಆಯ್ಕೆ ಇದ್ದದ್ದು ಎರಡೇ ದಿವಸ. ಅಕ್ಟೋಬರ್ ಹುಣ್ಣಿಮೆ, ನವೆಂಬರ್ ಹುಣ್ಣಿಮೆ. ಇನ್ನೂ ಒಂದು  ಅಂಶವೆಂದರೆ, ಅಕ್ಟೋಬರ್‌ನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹಿಂಗಾರು ಮಳೆ ಆರಂಭದ ಸಮಯ. ಇದ್ದಕ್ಕಿದ್ದಂತೆ ಮೋಡ ಕವಿದುಬಿಡುತ್ತದೆ. ಆಗ ಬಿಲ್ಲು ಕಾಣಿಸಿಕೊಳ್ಳುವ ಸಾಧ್ಯತೆ  ಇಲ್ಲವಾಗುತ್ತದೆ’ ಎಂದು ಪಯಣದ ಹಿಂದಿನ ಲೆಕ್ಕಾಚಾರ ತಿಳಿಸಿದರು ಅಶ್ವಿನಿಕುಮಾರ್‌.

‘ಚಂದ್ರ ಧನುಷ್ ಸಂಭವಿಸಲು ವಾತಾವರಣ ಶುದ್ಧವಾಗಿರಬೇಕು. ಮೋಡ ಇರಬಾರದು. ಇಂತಿಷ್ಟೇ ಮಂಜಿನ ಪ್ರಮಾಣ ಇರಬೇಕು. ಜಾಸ್ತಿ ಇದ್ದರೆ ಬೆಳಕು ಬರುವುದೇ ಕಡಿಮೆ. ಕಡಿಮೆ ಮಂಜಿದ್ದರೆ ತೇವಾಂಶವೇ ಇರುವುದಿಲ್ಲ. ಅಲ್ಲಿ ಬಿಲ್ಲು ಮೂಡುವುದೇ ಇಲ್ಲ. ಆದ್ದರಿಂದ ಮಂಜು ಸಮ ಪ್ರಮಾಣದಲ್ಲಿರಬೇಕು. ಚಂದ್ರನ ಬೆಳಕು, ಮಂಜು, ಜಲಪಾತದ ರಭಸ, ವಾತಾವರಣ ಇವೆಲ್ಲವೂ ಒಗ್ಗೂಡಿದರೆ ಮಾತ್ರ ಚಂದ್ರಧನುಷ್ ಮೂಡುವುದು. ಕಾಮನಬಿಲ್ಲು ಡೈರೆಕ್ಷನಲ್. ಒಂದು ಕೋನದಿಂದ ಕಂಡರೆ ಮತ್ತೊಂದು ಕೋನದಿಂದ ಕಾಣುವುದೇ ಇಲ್ಲ. ಹೀಗಿರುವಾಗ ಕ್ಯಾಮೆರಾವನ್ನು ಎಲ್ಲಿಡಬೇಕು ಎಂಬುದೇ ಗೊಂದಲವಾಗಿತ್ತು’ ಎಂದು ತಮ್ಮ ಮುಂದಿದ್ದ ಸವಾಲುಗಳನ್ನು ವಿವರಿಸಿದರು ಶ್ರೀಹರ್ಷ.

ಈ ಎಲ್ಲಾ ಸವಾಲುಗಳನ್ನು ಬಗಲಲ್ಲಿಟ್ಟುಕೊಂಡೇ 2016ರ ಅಕ್ಟೋಬರ್‌ನ ಹುಣ್ಣಿಮೆ ದಿನ ಹೋಗಲು ಅಣಿಯಾಯಿತು ತಂಡ. ಆದರೆ  ಇವರ ಉತ್ಸಾಹಕ್ಕೆ ತಣ್ಣೀರೆರೆಚುವಂತೆ ಆ ದಿನವಿಡೀ ಮಳೆ. ಭರವಸೆ ಮತ್ತೆ ಕೈಕೊಟ್ಟಿತು, ಪುನಃ ಬಿಲ್ಲು ಕೈ ಜಾರಿತು ಎಂದುಕೊಂಡು ಸಪ್ಪೆ ಮೋರೆ ಹಾಕಿ ಕಾದಿದ್ದಾಗಲೇ ಅದೃಷ್ಟ ಎಂಬಂತೆ ಸಂಜೆ ಆರು ಗಂಟೆ ನಂತರ ಮೋಡ ತಿಳಿಯಾಗಿಬಿಟ್ಟಿತು. ಕುಂದಿದ್ದ ತಂಡದ ಹುರುಪು ಮತ್ತೆ ಚಿಗುರಿತು.

ಉಂಚಳ್ಳಿ ಜಲಪಾತದಲ್ಲಿರುವುದು  ಒಂದು ವ್ಯೂ ಪಾಯಿಂಟ್. ಒಂದು ಕಡೆ ಜಲಪಾತ ಇದ್ದರೆ, ಮತ್ತೊಂದು ಕಡೆ ಕಣಿವೆ. ಇನ್ನೆಲ್ಲೂ ಈ ಜಲಪಾತದ ವೈಭವ ನೋಡಲು ಸಾಧ್ಯವಿಲ್ಲ. ಆದ್ದರಿಂದ ಅಲ್ಲೇ ಸಾಧ್ಯವಿದ್ದ ನಾಲ್ಕು ಕಡೆ ಕ್ಯಾಮೆರಾ ಇಟ್ಟು, ಪ್ರತಿ ಒಂದೂವರೆ ಗಂಟೆಗೊಮ್ಮೆ ಎಲ್ಲಾ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದರು.


ಉಂಚಳ್ಳಿ ಫಾಲ್ಸ್‌ನಲ್ಲಿ ಕಮಾನು ಕಟ್ಟಿದ ಚಂದ್ರಧನುಷ್‌ನ ಅಪರೂಪದ ಚಿತ್ರ

ಕೊನೆಗೂ ಸಿಕ್ಕ ಬಿಲ್ಲು
ಕ್ಯಾಮೆರಾಗಳನ್ನು ಇಟ್ಟು ವಾಚ್‌ ಟವರ್‌ನಲ್ಲಿ ನಿಂತು ಗಮನಿಸುತ್ತಿದ್ದರು ಚಂದ್ರಧನುಷ್‌ನ ಬೆನ್ನುಬಿದ್ದ ತಂಡದ ಸದಸ್ಯರು. ಖಾಲಿ ಕಣ್ಣಿಗೆ ಏನೂ ಕಾಣಲಿಲ್ಲ. ವಾಪಸ್ ಬಂದ ನಂತರ ಎಲ್ಲಾ ಕ್ಯಾಮೆರಾಗಳನ್ನೂ ಜಾಲಾಡಿದ್ದಾಯಿತು. ಮೂರು ಕ್ಯಾಮೆರಾಗಳಲ್ಲೂ ಯಾವ ಬಣ್ಣವೂ ಕಾಣಲಿಲ್ಲ. ಮನದಲ್ಲಿ ಎಲ್ಲೋ ಒಂದು ಕಡೆ ನಿರಾಸೆ.

ಮತ್ತೊಂದು ಕ್ಯಾಮೆರಾದಲ್ಲಿ ಸುಮಾರು ಸಾವಿರ ಫೋಟೊಗಳು ಮುಗಿದಿದ್ದಿರಬಹುದು... ಹೀಗೆ ಕಣ್ಣಾಡಿಸುತ್ತಿರುವಾಗ ಫೋಟೊದ ಕೆಳಗೆ  ಕಂಡಿತು ಮಸುಕಾದ ಬಣ್ಣ. ಕಣ್ಣಗಲಿಸಿ, ದಿಟ್ಟಿಸಿ ನೋಡಿದಾಗ ಕಂಡಿತು ಚಂದ್ರಧನುಷ್! ‘ಅರೆ ವ್ಹಾ, ನಮ್ಮ ಉಂಚಳ್ಳಿ ಫಾಲ್ಸ್‌ನಲ್ಲೂ ‘ಮೂನ್‌ ಬೋ’ ಕಂಡಿತು ಎಂಬ ಹಿಗ್ಗು ಅವರನ್ನು ಆವರಿಸಿತ್ತು. ಸುಮಾರು ಹತ್ತು ಫ್ರೇಮುಗಳಲ್ಲಿ  ರಾತ್ರಿ 12.30 –1 ಗಂಟೆ ಮಧ್ಯದಲ್ಲಿ ಚಂದ್ರಧನುಷ್ ಮೂಡಿಬಂದಿತ್ತು. ಚಂದ್ರನಬಿಲ್ಲನ್ನು ಏರಿದಷ್ಟೇ ಖುಷಿ ಇವರ ಮುಖದಲ್ಲಿ ತುಂಬಿಕೊಂಡಿತು.

ಇದೇ ಖುಷಿಯೊಂದಿಗೆ ಮತ್ತೆ ‘ಮೂನ್‌ ಬೋ’ ನೋಡಲು ನವೆಂಬರ್‌ನಲ್ಲೂ ಅಲ್ಲಿಗೆ ಭೇಟಿಕೊಟ್ಟರು. ಆದರೆ ಚಂದ್ರನ ಕೋನವೇ ಬದಲಾದ್ದರಿಂದ ಮತ್ತೆ ಬಿಲ್ಲು ಕಾಣಿಸಿಕೊಳ್ಳಲಿಲ್ಲ. ಇದೀಗ ‘ಮೂನ್‌ ಬೋ’ದ ಸಾಕ್ಷ್ಯಚಿತ್ರವನ್ನು ತಯಾರಿಸಿದೆ ತಂಡ. ಇದೇ ಜುಲೈನಲ್ಲಿ ಅದು ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ ಇದೇ ಮೊದಲಾ?
ಭಾರತದಲ್ಲಿ ಚಂದ್ರಧನುಷ್‌ ಕಂಡ ದಾಖಲೆ ಎಲ್ಲೂ ಇಲ್ಲ. ಇದು ಕಣ್ಣಿಗೆ ಕಾಣುವುದು ಕಷ್ಟ. ಸೂರ್ಯನ ಬೆಳಕಿನಲ್ಲಿ ತೀಕ್ಷ್ಣತೆ (ಇಂಟೆನ್ಸಿಟಿ) ಹೆಚ್ಚಿರುವುದರಿಂದ ಕಾಮನಬಿಲ್ಲು ಸುಲಭಕ್ಕೆ ಕಾಣುತ್ತದೆ. ಚಂದ್ರನ  ಬೆಳಕಿನಲ್ಲಿ ಇಂಟೆನ್ಸಿಟಿ ಕಡಿಮೆ. ಆದ್ದರಿಂದ ಚಂದ್ರನಬಿಲ್ಲು ಕಾಣುವುದು ಕಷ್ಟ. ‘ವೈಜ್ಞಾನಿಕವಾಗಿ ಇದೇನೂ ಗೊತ್ತಿರದ ವಿಚಾರವಲ್ಲ. ಆದರೆ ಜನಕ್ಕೆ ಇದರ ಬಗ್ಗೆ ಅರಿವಿಲ್ಲ. ಈ ರೀತಿ ಪರಿಕಲ್ಪನೆ ಇದೆ ಎಂಬುದೂ ಗೊತ್ತಿಲ್ಲ. ಎಲ್ಲಿ ಬೇಕಾದರೂ ಇದು ಸಂಭವಿಸಬಹುದು. ಆದರೆ ಇದನ್ನು ನಮ್ಮಲ್ಲಿ ಯಾರೂ ಪರಿಶೋಧಿಸಲಿಲ್ಲ...’ ಅಶ್ವಿನಿಕುಮಾರ್‌ ಅವರ ವಿವರಣೆ ಹೀಗೇ ಸಾಗಿತ್ತು.

ವಿದೇಶಗಳಲ್ಲಿ ಬಹುತೇಕ ನದಿಗಳು ಬಯಲು ಪ್ರದೇಶದಲ್ಲಿ ಹರಿಯುತ್ತವೆ. ಹೀಗಾಗಿ ನಮ್ಮ ಕಾಡಿನ ನದಿಗಳ ಜಲಪಾತಗಳಂತೆ ಅಲ್ಲಿನ ಜಲಪಾತಗಳಿಗೆ ಯಾವುದೇ ಅಡೆತಡೆ ಇರುವುದಿಲ್ಲ. ಚಂದ್ರ ಬರುತ್ತಿದ್ದಂತೆಯೇ ಅಲ್ಲಿ ಬೆಳಕು ಬೀಳುತ್ತದೆ. ‘ಮೂನ್‌ ಬೋ’ ಗೋಚರಿಸುತ್ತದೆ. ಹೀಗಾಗಿ ಅಘನಾಶಿನಿ ನದಿಯಲ್ಲಿ ಕಂಡ ಚಂದ್ರಧನುಷ್‌ಗೆ ವಿಶೇಷ ಮಹತ್ವವಿದೆ.

ಅಂದಹಾಗೆ, ಈ ತಂಡ ‘ಮೂನ್‌ ಬೋ’ ದಾಖಲಿಸುವ ಸಾಹಸಕ್ಕೆ ಕೈಹಾಕುವ ಮುನ್ನ ಅರಣ್ಯ ಅಧಿಕಾರಿಗಳಿಂದ ಮಾತ್ರವಲ್ಲದೆ ಸ್ಥಳೀಯರಿಂದ ಅನುಮತಿ ಪಡೆದಿತ್ತು. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ರಾತ್ರಿಹೊತ್ತು ಜಲಪಾತದ ಕಡೆಗೆ ಹೋಗಲು ಸಾಧ್ಯವಿಲ್ಲ. ಅಲ್ಲದೆ, ತುಂಬು ಬೆಳದಿಂಗಳ ಸಂದರ್ಭದಲ್ಲೂ ಬರಿಗಣ್ಣಿಗೆ ಚಂದ್ರಧನುಷ್‌ ಕಾಣುವುದು ಸುಲಭವಲ್ಲ. ‘ಮೂನ್‌ ಬೋ’ ನೋಡಬೇಕೆನ್ನುವ ಕುತೂಹಲವನ್ನು ಸದ್ಯದಲ್ಲೇ ಬಿಡುಗಡೆ ಆಗಲಿರುವ ಅಘನಾಶಿನಿ ಸಾಕ್ಷ್ಯಚಿತ್ರ ತಣಿಸಲಿದೆ.
ಈ ಸಾಕ್ಷ್ಯಚಿತ್ರದ ಟ್ರೇಲರ್‌ ನೋಡಲು ಈ ಲಿಂಕ್ ಬಳಸಿ: bit.ly/2sHbApA

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT