ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶನದತ್ತ ಟೆನಿಸ್‌ ಕೃಷ್ಣ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

‘ನಾನು ಚಿತ್ರರಂಗಕ್ಕೆ ಬಂದು ಮೂರು ದಶಕ ಉರುಳಿವೆ’ ಎಂದು ಮಾತು ಆರಂಭಿಸಿದ ನಟ ಟೆನಿಸ್‌ ಕೃಷ್ಣ ಅವರ ಮೊಗದಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿರುವ ಉತ್ಸಾಹ ಎದ್ದುಕಾಣುತ್ತಿತ್ತು.

ಎಂಟು ಮಂದಿ ಹೊಸಬರ ತಂಡ ಕಟ್ಟಿಕೊಂಡು ಅವರು ‘ಮತ್ತೆ ಮತ್ತೆ’ ಸಿನಿಮಾ ಮೂಲಕ ಜನರಿಗೆ ಸಸ್ಪೆನ್ಸ್‌ ಮತ್ತು ಹಾಸ್ಯಭರಿತ ಕಥೆ ಹೇಳಲು ಹೊರಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಥೆಯ ಎಳೆಬಿಚ್ಚಿಡಲು ಮೊದಲಿಗೆ ಅವರು ಹಿಂದೇಟು ಹಾಕಿದರು. ಕೊನೆಗೆ, ‘ಪದವಿ ಪೂರೈಸಿದ ಯುವಕರಿಗೆ ಕೆಲಸ ಸಿಗುವುದಿಲ್ಲ. ಅವರು ಏನು ಮಾಡುತ್ತಾರೆ ಎನ್ನುವುದೇ ಸಸ್ಪೆನ್ಸ್‌’ ಎಂದು ನಕ್ಕರು.

ಪ್ರಸ್ತುತ ಚಿತ್ರರಂಗದಲ್ಲಿ ಪೈಪೋಟಿ ಹೆಚ್ಚಿದೆ. ಇದರಿಂದ ಹಿರಿಯ ಕಲಾವಿದರಿಗೆ ಅವಕಾಶಗಳು ಕಡಿಮೆ. ಅವರು ಸಾಕಷ್ಟು ತೊಂದರೆಯಲ್ಲಿದ್ದಾರೆ. ‘ವೀರ ಮದಕರಿ’, ‘ಬುಲ್‌ಬುಲ್‌’ ಸಿನಿಮಾದಲ್ಲಿ ನಟಿಸಿದೆ. ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಿರ್ದೇಶನದ ಹೊಣೆ ಹೊತ್ತಿದ್ದೇನೆ ಎಂದರು ಟೆನಿಸ್‌ ಕೃಷ್ಣ. ಚಿತ್ರದಿಂದ ಬರುವ ಲಾಭದಲ್ಲಿ ಶೇ 25ರಷ್ಟು ಪಾಲು ಸಂಕಷ್ಟದಲ್ಲಿರುವ ಕಲಾವಿದರಿಗೆ ಮೀಸಲು.

ಈ ಮೊದಲು ಚಿತ್ರದ ನಿರ್ದೇಶನ ಮಾತ್ರ ನನ್ನದು  ಎಂದು ತೀರ್ಮಾನಿಸಿದ್ದೆ. ಕೊನೆಗೆ, ನಿರ್ಮಾಪಕರ ಒತ್ತಾಯದ ಮೇರೆಗೆ ನಾನೂ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. 5 ಹಾಡುಗಳು ಈ ಚಿತ್ರದಲ್ಲಿವೆ’ ಎಂದರು.

ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ ಕೃಷ್ಣ ಅವರ ತಂಡ. ಡಾ.ಅರುಣ್‌ ಹೊಸಕೊಪ್ಪ ಕಥೆ, ಚಿತ್ರಕಥೆ, ಸಾಹಿತ್ಯ ಬರೆದಿದ್ದಾರೆ. ಚಿತ್ರದ ನಿರ್ಮಾಪಕರಲ್ಲಿ ಅವರೂ ಒಬ್ಬರು.

‘ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರ ಸಂಕಷ್ಟದ ಬಗ್ಗೆ ಟೆನ್ನಿಸ್‌ ಕೃಷ್ಣ ನೋವು ತೋಡಿಕೊಂಡರು. ಹಿರಿಯರಿಗೆ ಪ್ರೋತ್ಸಾಹ ಸಿಗುತ್ತಿಲ್ಲವೆಂದು ಹೇಳಿದ್ದರು. ಅವರ ಮಾತುಗಳೇ ಈ ಚಿತ್ರ ನಿರ್ಮಾಣಕ್ಕೆ ಪ್ರೇರಣೆ’ ಎಂದರು ಅರುಣ್‌ ಹೊಸಕೊಪ್ಪ.

ಇಮ್ತಿಯಾಜ್‌ ಸುಲ್ತಾನ್‌ ಸಂಗೀತ ನೀಡಲಿದ್ದಾರೆ. ಕೋಬ್ರಾ ನಾಗರಾಜ್‌ ಅವರ ಛಾಯಾಗ್ರಹಣವಿದೆ. ಅಚ್ಯುತ ಗೌಡ ಬಂಡವಾಳ ಹೂಡಿದ್ದಾರೆ. ನೈರುತ್ಯ ಆರ್ಟ್‌ ಮೀಡಿಯದ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT