ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ಇನ್ನೊಂದ್ ಸಲ ಅಮ್ಮನ ಹಿಂದೆ ಸುತ್ತಲಿ...

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಪ್ರೀತಿಯ ದೇವರೇ,
ನಾನು ಕಾಗುಣಿತ ತಪ್ಪು ಬರೀತೀನಿ ಅಂತ ಟೀಚರ್ ಹೇಳ್ತಾರೆ. ನೀನಂತೂ ಟೀಚರ್ ಥರ ಹೊಡೆಯಲ್ಲ ಅಲ್ವಾ? ದಯವಿಟ್ಟು ಈ ಪತ್ರವನ್ನು ಪೂರ್ತಿ ಓದು. ಅಪ್ಪ–ಅಮ್ಮನಿಗೆ ಒಂದಿಷ್ಟು ಒಳ್ಳೇ ಬುದ್ಧಿ ಕೊಟ್ಬಿಡು.

ಅವತ್ತು ಕ್ಲಾಸ್‌ನಲ್ಲಿ ಸೋಷಿಯಲ್ ಟೀಚರ್‌ ಬಡತನದ ಬಗ್ಗೆ ಎಷ್ಟೊಂದು ಮಾತಾಡಿದ್ರು. ನಂಗೆ ಖಂಡಿತಾ ಬಡತನ ಇಲ್ಲ. ಅಡುಗೆ ಮಾಡಿ ಹಾಕೋಕೆ ಕೆಲಸದವರು ಇದ್ದಾರೆ, ಕೇಳೋಕೆ ಮೊದಲೇ ಅಪ್ಪ ಬಟ್ಟೆ ತಂದುಕೊಡ್ತಾರೆ, ಅಮ್ಮ ಮೆಟ್ರೊದಲ್ಲಿ ಊರೆಲ್ಲಾ ಸುತ್ತಿಸ್ತಾರೆ. ನನ್ನ ಪಾಲಿಗೆ ಅಪ್ಪ–ಅಮ್ಮ ಇಬ್ಬರೂ ಬೆಸ್ಟ್‌ ಫ್ರೆಂಡ್ಸ್‌. ಆದ್ರೆ, ಅಪ್ಪ–ಅಮ್ಮ ಮಾತ್ರ ಹೀಗಿಲ್ಲ. ಅವರು ಬೆಸ್ಟ್‌ ಎನಿಮೀಸ್ ಆಗಿಬಿಟ್ಟಿದ್ದಾರೆ. ನಾನಿನ್ನೂ ಚಿಕ್ಕೋನು, ನನಗೇನೂ ಅರ್ಥ ಆಗಲ್ಲ ಅಂದ್ಕೊಂಡಿದ್ದಾರೆ.

ಒಬ್ಬರಿಗೊಬ್ಬರು ಮಾತೇ ಆಡಲ್ಲ. ಅಮ್ಮ ಆಗಾಗ ಮುಸಿಮುಸಿ ಅಳುತ್ತಾ, ‘ಇದೊಂದು ಇರದಿದ್ರೆ ನಾನು ಡೈವೋರ್ಸ್‌ ತಗೊಳ್ತಿದ್ದೆ’ ಅಂತ ನನ್ನ ತೋರಿಸ್ತಾರೆ. ಡೈವೋರ್ಸ್‌ ಅಂದ್ರೆ ಏನು ಅಂತ ನಂಗೆ ಗೊತ್ತು. ಮೊದಲ ಸಲ ಅಮ್ಮ ಹಾಗೆ ಹೇಳಿದಾಗ್ಲೇ ಗೂಗಲ್‌ನಲ್ಲಿ ಹುಡುಕಿ ತಿಳಿದುಕೊಂಡೆ. ನಂಗೆ ಭಯ ಆಗ್ತಿದೆ ದೇವ್ರೇ, ನಂಗೆ ಇಬ್ಬರೂ ಬೇಕು. ಏನು ಮಾಡೋದು?

ಈ ಅಪ್ಪನ ಸಮಸ್ಯೆ ಆದ್ರೂ ಏನು ಅಂತಾನೇ ಅರ್ಥ ಆಗಲ್ಲ. ಫ್ರೆಂಡ್ಸ್‌ ಜೊತೆಗೆಲ್ಲಾ ನಗ್‌ನಗ್ತಾ ಮಾತಾಡ್ತಾರೆ. ಅಮ್ಮನ್ನ ನೋಡಿದರೆ ಮುಖ ಊದಿಸಿಕೊಳ್ತಾರೆ. ‘ನಿನ್ನ ಹಿಂದೆ ಬಿದ್ದು ಮದ್ವೆ ಆಗಿದ್ದು ನನ್ನ ಕರ್ಮ’ ಅಂತ ಅಮ್ಮನ್ನ ಅಳಿಸ್ತಾರೆ.

ನಂಗೆ ಅಮ್ಮನೂ ಒಳ್ಳೇಳು ಅನಿಸಲ್ಲ. ನಮ್ಮನೆಗೆ ಬಂದಿದ್ದ ಅಜ್ಜಿ ಅಳುತ್ತಾ ದೊಡ್ಡಪ್ಪನ ಮನೆಗೆ ಹೋಗಿದ್ದು ಇದೇ ಅಮ್ಮನಿಂದ. ಇಡ್ಲಿಗೆ ಅಜ್ಜಿ ಅವತ್ತು ಅಕ್ಕಿ ನೆನೆ ಹಾಕಿದ್ರು. ಹದ ಸರಿಯಿಲ್ಲ ಅಂತ ಅಮ್ಮ ರಾಣಾರಂಪ ಮಾಡಿಬಿಟ್ಟಿದ್ರು. ಪಾಪ ಅಜ್ಜಿ ಕೆಲಸ ಮಾಡೋ ಹಂಗೂ ಇಲ್ಲ, ಸುಮ್ಮನೆ ಇರೋ ಹಂಗೂ ಇಲ್ಲ.

ಕುಂತ್ರೂ ತಪ್ಪು, ನಿಂತ್ರೂ ತಪ್ಪು, ಅತ್ರೂ ತಪ್ಪು... ಸದಾ ಅಳ್ತಾನೇ ಇದ್ದ ಕೊನೆಗೂ ದೊಡ್ಡಪ್ಪನ ಮನೆಗೆ ಹೊರಟು ಹೋಯ್ತು.
ಹೋಗೋ ಮೊದಲು ‘ನನ್ನ ಮಗನ್ನ ನನ್ನ ಕೈಯಿಂದ ಕಿತ್ಕೊಂಡೆ. ನಿನ್ನ ಸಂಸಾರ ನೇರ್ಪಾಗಿರಲ್ಲ’ ಅಂತ ಶಾಪ ಹಾಕಿದ್ರು. ಅಲ್ಲ ಈ ಅಜ್ಜಿ ಎಷ್ಟು ದಡ್ಡಿ. ನಮ್ಮಮ್ಮನ ಸಂಸಾರ ಹಾಳಾದ್ರೆ ಅವಳ ಮಗ, ಮೊಮ್ಮಗ ನೆಮ್ಮದಿಯಿಂದ ಇರ್ತಾರಾ?

ನಾನಿನ್ನೂ ಚಿಕ್ಕೋನು ಅಲ್ವಾ? ನಾನ್ಯಾಕೆ ದೊಡ್ಡೋರ ಥರ ಯೋಚ್ನೆ ಮಾಡ್ತಾ ಇದ್ದೀನಿ? ಅಯ್ಯೋ ದೇವ್ರೇ, ನನ್ನ ಕೈಲಿ ಆಗಲ್ಲಪ್ಪಾ. ತಲೆ ಒಂದೇ ಸಮ ಸಿಡೀತಿದೆ. ನಾನು ಸತ್ತೇ ಹೋಗ್ತೀನಿ ಅನಿಸ್ತಿದೆ. ನಾನು ಅಮ್ಮನ ಹೊಟ್ಟೆಗೆ ಬರೋಕೆ ಮೊದಲು ನಿನ್ನ ಹತ್ರಾನೇ ಇದ್ನಂತೆ ಹೌದಾ? ಪ್ಲೀಸ್‌ ಮತ್ತೆ ನಿನ್ಹತ್ರಾನೇ ಕರ್‍ಕೊಂಡು ಬಿಡು. ಯಾವಾಗ್ಲೂ ಕಿತ್ತಾಡೋ ಅಪ್ಪ-ಅಮ್ಮ ನಂಗೆ ಬೇಡ. ಬೇರೆ ಅಪ್ಪ–ಅಮ್ಮನ ಹತ್ರಕ್ಕೆ ಕಳಿಸಿಕೊಡು.

ನಿನ್ನ ಹತ್ರಕ್ಕೆ ಕರ್‍ಕೊಳ್ಳೋಕೆ ಇಷ್ಟ ಇಲ್ಲ ಅಂದ್ರೆ, ಇನ್ನೂ ಒಂದು ಆಪ್ಷನ್ ಕೊಡ್ತೀನಿ ನೋಡು. ಇವರಿಗೆ ಹಳೇದೆಲ್ಲಾ ಪೂರ್ತಿ ಮರೆತುಹೋಗೋ ಥರ ಮಾಡಿಬಿಡು.

ಅಪ್ಪ–ಅಮ್ಮ ಮತ್ತೆ ಕಾಲೇಜ್‌ ಡೇಸ್‌ಗೆ ಹೋಗಬೇಕು. ಮತ್ತೆ ಅಮ್ಮನ ಹಿಂದೆ ಬಿದ್ದು ಅಪ್ಪ ಲೈನ್‌ ಹೊಡೀಬೇಕು.  ಅಮ್ಮ ‘ಎಸ್’ ಅನ್ನಬೇಕು. ಅಪ್ಪ–ಅಮ್ಮನ ಮದುವೆ ಆಗಬೇಕು. ಆ ಮದ್ವೆಗೆ ನಾನೂ ಹೋದ್ರೆ ಹೇಗಿರುತ್ತೆ? ಛೇ, ನಾನು ಹೋಗೋಕೆ ಆಗಲ್ಲ ಅಲ್ವಾ? ಬಿಡು ಪರವಾಗಿಲ್ಲ.

ಹಾಂ, ಇನ್ನೊಂದು ವಿಷಯ. ನನ್ನ ಅಜ್ಜಿಗೂ ತಲೆ ಕ್ಲೀನ್ ಮಾಡಿಬಿಡು ಮಹಾಸ್ವಾಮಿ. ಅವಳು ಅಮ್ಮನನ್ನ ‘ಜೀನ್ಸ್‌ ಹಾಕೋರೂ ಸಂಸಾರ ಮಾಡ್ತಾರಾ...? ಅಂತ ಬೈಯಬಾರದು. ಅಮ್ಮನ ತಲೇಲಿ, ‘ಈ ಹಳೇಕಾಲದ ಮುದುಕಿ ಇಲ್ಲ ಅಂದ್ರೆ ನಾನು ನೆಮ್ಮದಿಯಾಗಿ ಇರ್ತಿದ್ದೆ’ ಅನ್ನೋ ವಿಚಾರ ಬರಬಾರದು.

ಇನ್ನು ಈ ತಾತಾ, ರಿಲೇಷನ್ಸ್‌, ಅಪ್ಪ–ಅಮ್ಮನ ಫ್ರೆಂಡ್ಸ್‌ ಎಲ್ಲರ ತಲೇನೂ ಸ್ವಚ್ಛ ತೊಳೆದುಬಿಡು. ನಾಳೆ ಜೂನ್ 22 ಅಲ್ವಾ? ನಾಳೇನೇ ಎಲ್ಲರೂ ಹಳೆದೆಲ್ಲಾ ಮೊರೆತು ಹೊಸದಾಗಿ ಬದುಕು ನೋಡಬೇಕು. ನಾನು ಖುಷಿಯಾಗಿರಬೇಕು.

***
9ನೇ ತರಗತಿಯ ಅನೀಶನ ಸೋಷಿಯಲ್‌ ಸೈನ್ಸ್‌ ಹೋಂವರ್ಕ್‌ ಚೆಕ್ ಮಾಡುವ ಟೀಚರ್‌ ಕೈಗೆ ಅಚಾನಕ್ ಸಿಕ್ಕ ಅಪೂರ್ಣ ಪತ್ರ ಇದು. ಯಾವುದೋ ಜ್ಞಾನದಲ್ಲಿ ಪತ್ರ ಬರೆದಿದ್ದ ಅನೀಶ್‌ ಅದನ್ನು ಹೋಂವರ್ಕ್‌ನಲ್ಲೇ ಇಟ್ಟು ಮರೆತಿದ್ದ. ಪತ್ರ ಓದಿಕೊಂಡ ಟೀಚರ್‌ ಹೆಡ್‌ ಮೇಷ್ಟ್ರ ಗಮನಕ್ಕೆ ತಂದರು. ಅಲ್ಲಿಂದ ಹೆತ್ತವರಿಗೆ ಬುಲಾವ್ ಹೋಯಿತು.

‌ಹೆಡ್‌ ಮೇಷ್ಟ್ರು, ಕ್ಲಾಸ್‌ ಟೀಚರ್ ಸಮಕ್ಷಮ ಪತ್ರವನ್ನು ಮತ್ತೊಮ್ಮೆ ಓದಲಾಯಿತು. ‘ಮಗನಿಗಾಗಿ ಹಳೆಯದೆಲ್ಲಾ ಮರೆಯಬೇಕು’ ಎಂದು ಅನೀಶನ ಅಪ್ಪ–ಅಮ್ಮನಿಗೆ ಮೊದಲ ಸಲ ಅನ್ನಿಸಿತ್ತು. ದೇವರು ಕಣ್ಣುಬಿಟ್ಟಿದ್ದ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT