ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನದಲ್ಲಿ ಒಮ್ಮೆ ಮಾತ್ರ ನಾಟಕ ಆಡಿದ್ದೆ’

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ನಾನು ಜೀವನದಲ್ಲಿ ಒಮ್ಮೆ ಮಾತ್ರ ನಾಟಕ ಮಾಡಿದ್ದು, ಅದರ ಹೆಸರು ಯಮ ಧರ್ಮರಾಯನ ಸನ್ನಿದ್ಧಿಯಲ್ಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ‘ನೀವು ಒಳ್ಳೆ ನಾಟಕಕಾರರು. ನಾಟಕ ಗಳಲ್ಲಿ ಪಾರ್ಟ್‌ ಮಾಡುತ್ತಿದ್ದಿರೇ’ ಎಂದು  ಹಾಸ್ಯದ ಲಹರಿಯಲ್ಲಿ ಕೇಳಿದಾಗ ಸಿದ್ದರಾಮಯ್ಯ ಮೇಲಿನಂತೆ ಉತ್ತರಿಸಿದರು.

‘ನಾನು  ಡಾಕ್ಟರ್‌ ಪಾತ್ರ ಮಾಡಿದ್ದೆ. ಗೋವಿಂದರಾಜು ಎಂಬಾತ  ಯಮಧರ್ಮನ ಪಾತ್ರ ಮಾಡಿದ್ದ’ ಎಂದರು.

ಆಗ ಬಿಜೆಪಿಯ ರಘುನಾಥ ಮಲ್ಕಾಪುರೆ, ‘ನಿಮ್ಮ ಜೊತೆ ಅಡಗೂರು ವಿಶ್ವನಾಥ್‌ ಅವರೂ ಪಾತ್ರ ಮಾಡಿದ್ದರಲ್ಲ’ ಎಂದು ನೆನಪಿಸಿದರು.

‘ಹೌದು ವಿಶ್ವನಾಥ ಕೂಡ ಮಾಡಿದ್ದ. ಅವನು ಮೊದಲ ವರ್ಷದ ಲಾ  ಓದುತ್ತಿದ್ದ. ನಾನು ಅಂತಿಮ ವರ್ಷದ ಲಾ ಓದುತ್ತಿದೆ’ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

ರಿಲ್ಯಾಕ್ಸ್‌ ಮಾಡಲು ಇಲ್ಲಿಗೆ ಬರುತ್ತೀರೇ?: ಒಂದು ಹಂತದಲ್ಲಿ ಜೆಡಿಎಸ್‌ನ ಶರವಣ ಅವರು ಏನೋ ಸಮಾಜಾಯಿಷಿ ನೀಡಲು ಹೊರಟಾಗ, ‘ಏ ಸುಮ್ನೆ ಕೂತ್ಕೊ ನಿಂಗೆ ಏನೂ ಗೊತ್ತಾಗಲ್ಲ’ ಎಂದು ಮುಖ್ಯಮಂತ್ರಿ  ಗದರಿದರು.‌

‘ನಿಮಗೆ ಶರವಣ ಮೇಲೆ ಕೋಪ ಏಕೆ’ ಎಂದು ಈಶ್ವರಪ್ಪ ಪ್ರಶ್ನಿಸಿದರು. ‘ನನಗೆ ಯಾರ ಮೇಲೂ ಕೋಪ ಇಲ್ಲ. ಐ ಲವ್‌ ಎವೆರಿಬಡಿ, ನಾನು ಅಂಬೇಡ್ಕರ್‌, ಬಸವಣ್ಣ, ಗಾಂಧಿ  ಅನುಯಾಯಿ. ಶರವಣ, ಸೋಮಣ್ಣ , ಈಶ್ವರಪ್ಪ ಸೇರಿದಂತೆ ಎಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಮುಖ್ಯಮಂತ್ರಿ ರಿಲ್ಯಾಕ್ಸ್‌ ಆಗಬೇಕು ಎಂದರೆ ಇಲ್ಲಿಗೆ ಬರುತ್ತಾರೇನೊ’ ಎಂದು ಈಶ್ವರಪ್ಪ ಕುಟುಕಿದರು.

‘ನನಗೆ ಈಶ್ವರಪ್ಪ ಅವರೇ ಸ್ಫೂರ್ತಿ. ಅವರಿಂದ ಸ್ಫೂರ್ತಿ ಪಡೆಯಲು ಇಲ್ಲಿಗೆ ಬರುತ್ತೇನೆ’ ಎಂದು ನಗುತ್ತಲೇ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಉಗ್ರಪ್ಪನ ಮಾತು ಎಲ್ಲಾ ಕೇಳ್ತಾರೆ: ಮುಖ್ಯಮಂತ್ರಿ ಮಾತನಾಡುವಾಗ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಏನೋ ಹೇಳಲು  ಎದ್ದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಈಶ್ವರಪ್ಪ, ‘ನೀವು ಸರಿಯಾದ ದಾರಿಯಲ್ಲೇ ಹೋಗುತ್ತಿದ್ದೀರಿ. ಅಡ್ಡ ದಾರಿ ಹಿಡಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಿ’ ಎಂದರು.

‘ನನ್ನನ್ನು ಅಡ್ಡ ದಾರಿ ಹಿಡಿಸಲು ಆಗುವುದಿಲ್ಲ. ಸರಿಯಾದ ಮಾಹಿತಿ ನೀಡಬೇಕು ಅಷ್ಟೇ.  ಉಗ್ರಪ್ಪನ ಮಾತು ಕೇಳಿ ಎಲ್ಲಿಯೂ ದಾರಿ ತಪ್ಪಿಲ್ಲ. ಅವರ ಮಾತನ್ನು ಎಲ್ಲರೂ ಕೇಳುತ್ತಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ಸಿನಿಮಾ ರಂಗಕ್ಕೆ ಬರಬೇಕಿತ್ತು: ಸಿದ್ದರಾಮಯ್ಯ ತಮ್ಮ ಭಾಗದ ಹಳ್ಳಿಯ ಗಾದೆ ಮಾತೊಂದನ್ನು ನಾಟಕೀಯವಾಗಿ ಹೇಳಿದಾಗ, ಬಿಜೆಪಿಯ ತಾರಾ ಅನೂರಾಧ, ‘ನೀವು ಸಿನಿಮಾರಂಗಕ್ಕೆ ಬರಬೇಕಿತ್ತು ಸಾರ್‌’ ಎಂದರು.

‘ನೀನು ಪ್ರೊಡ್ಯೂಸ್‌ ಮಾಡಿದ್ರೆ ಆಕ್ಟ್‌ ಮಾಡ್ತೇನೆ’ ಎಂದು ನಗುತ್ತಲೇ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT