ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆಗೆ ವಿರಾಟ್ ಜತೆಗಿನ ಭಿನ್ನಮತವೇ ಕಾರಣ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿಯೇ ತಾವು ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅನಿಲ್ ಕುಂಬ್ಳೆ ಬಹಿರಂಗಪಡಿಸಿದ್ದಾರೆ.

ಮಂಗಳವಾರ ರಾತ್ರಿ ಅವರು  ಈ ಕುರಿತು ಬಿಸಿಸಿಐ ಮತ್ತು ಸಿಒಎಗೆ  ಬರೆದಿರುವ ಪತ್ರವನ್ನು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್‌ ಖಾತೆಗಳಲ್ಲಿ  ಹಾಕಿದ್ದಾರೆ.  ಅದರ ಪೂರ್ಣಪಾಠ ಇಲ್ಲಿದೆ;

‘ಸಿಎಸಿ (ಕ್ರಿಕೆಟ್ ಸಲಹಾ ಸಮಿತಿ )ಯು ನನ್ನ ಮೇಲೆ ಇಟ್ಟ ವಿಶ್ವಾಸವು ದೊಡ್ಡ ಗೌರವ ಎಂದು ಭಾವಿಸಿದ್ದೇನೆ. ಭಾರತ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲು ಸಿಎಸಿ ಸೂಚಿಸಿದ್ದಕ್ಕಾಗಿ ಆಭಾರಿಯಾಗಿದ್ದೇನೆ. ಕಳೆದ ಒಂದು ವರ್ಷದಲ್ಲಿ ತಂಡವು ಮಾಡಿರುವ ಸಾಧನೆಗಳ ಶ್ರೇಯವು ನಾಯಕ, ಆಟಗಾರರು, ತರಬೇತಿ ಮತ್ತು ನೆರವು ಸಿಬ್ಬಂದಿಗೆ ಸಲ್ಲುತ್ತದೆ.

ನನ್ನ ಕಾರ್ಯಶೈಲಿಯ ಬಗ್ಗೆ ತಂಡದ ನಾಯಕನಿಗೆ ಅಸಮಾಧಾನವಿದೆ ಹಾಗೂ ಕೋಚ್ ಆಗಿ ಮುಂದುವರಿಯುವುದರ ಕುರಿತು ಆಕ್ಷೇಪ ಇದೆ ಎಂದು ಬಿಸಿಸಿಐ ನಿನ್ನೆ (ಸೋಮವಾರ) ನನಗೆ ತಿಳಿಸಿತು. ಆ ವಿಷಯ ಕೇಳಿ ಅಚ್ಚರಿಯಾಯಿತು. ಏಕೆಂದರೆ ಒಬ್ಬ ನಾಯಕ ಮತ್ತು ಕೋಚ್ ನಡುವೆ ಇರಬೇಕಾದ ಇತಿಮಿತಿಗಳನ್ನು ನಾನು ಸದಾ ಗೌರವಿಸಿದ್ದೇನೆ. ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಬಿಸಿಸಿಐ ಪ್ರಯತ್ನಿಸಿತು. ಆದರೆ ನಾಯಕ ಮತ್ತು ನನ್ನ ನಡುವಿನ ಜೊತೆಯಾಟ ಮುಂದುವರಿಯುವುದು ಸಾಧ್ಯವಾಗಲಿಲ್ಲ. ಆದ್ದರಿಂದ ಕೋಚ್ ಸ್ಥಾನದಿಂದ ಹೊರನಡೆಯುವುದು ಸೂಕ್ತ ಎಂದು ನಿರ್ಧಾರ ತೆಗೆದುಕೊಂಡೆ.

ವೃತ್ತಿಪರತೆ, ಶಿಸ್ತು, ಬದ್ಧತೆ, ಪ್ರಾಮಾಣಿಕತೆ, ಉತ್ತಮ ಕೌಶಲ್ಯಗಳು, ವಿಭಿನ್ನ ದೃಷ್ಟಿಕೋನಗಳನ್ನು ತಂಡದಲ್ಲಿ ನೆಲೆಗೊಳಿಸಲು ಪ್ರಯತ್ನಿಸಿದೆ. ನಾಯಕ ಮತ್ತು ಕೋಚ್ ನಡುವಿನ ಬಾಂಧವ್ಯ ಮುಂದುವರಿಯಲು ಈ ಎಲ್ಲ ಅಂಶಗಳೂ ಅವಶ್ಯಕವಾಗಿದ್ದವು.  ಆಟಗಾರರ  ಸಾಮರ್ಥ್ಯ ವೃದ್ಧಿಗೆ ಕನ್ನಡಿ ಹಿಡಿಯುವ   ಕಾರ್ಯ ನನ್ನದಾಗಿತ್ತು. ಅದೆಲ್ಲವೂ ತಂಡದ ಹಿತಕ್ಕಾಗಿಯೇ ಆಗಿತ್ತು.

ಆದರೆ, ಭಿನ್ನಾಭಿಪ್ರಾಯಗಳು ಉದ್ಭವಿಸಿದಾಗ ನನ್ನ ಹೊಣೆಗಾರಿಕೆಯನ್ನು ಬಿಟ್ಟುಕೊಡುವುದು ಸೂಕ್ತವೆನಿಸಿತು. ಸಿಎಸಿ ಮತ್ತು ಬಿಸಿಸಿಐ ಸೇರಿ ಅರ್ಹ ವ್ಯಕ್ತಿಗೆ   ಮುಖ್ಯ ಕೋಚ್‌ ಸ್ಥಾನ ನೀಡುವುದು ಉತ್ತಮ.

ಇದೆಲ್ಲದರ ಆಚೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು ನನಗೆ ಸಂದ ದೊಡ್ಡ ಗೌರವ. ಅದಕ್ಕಾಗಿ ಸಿಎಸಿ, ಬಿಸಿಸಿಐ, ಸಿಒಎ ಮತ್ತು ಸಂಬಂಧಪಟ್ಟ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. 

ಭಾರತ ಕ್ರಿಕೆಟ್ ತಂಡದ ಅಸಂಖ್ಯಾತ ಅಭಿಮಾನಿಗಳ ಬೆಂಬಲ ಇದೇ ರೀತಿ ಮುಂದುವರಿಯಲಿ. ಈ ದೇಶದ  ಕ್ರಿಕೆಟ್ ಪರಂಪರೆಯ ಹಿತೈಷಿಯಾಗಿ ಮುಂದುವರಿಯುತ್ತೇನೆ’  ಎಂದು ಅನಿಲ್ ಕುಂಬ್ಳೆ ಬರೆದಿದ್ದಾರೆ.

ಭಾರತ ಕ್ರಿಕೆಟ್‌ಗೆ ಇದು ದುಃಖಕರ ದಿನ: ಗಾವಸ್ಕರ್
ನವದೆಹಲಿ: ‘ಕೊಹ್ಲಿ ಮತ್ತು ಕುಂಬ್ಳೆ ಅವರ ನಡುವಿನ ಭಿನ್ನಾಭಿಪ್ರಾಯದ ಕುರಿತು ಅಲ್ಪ ಸ್ವಲ್ಪ ಮಾಹಿತಿ ಇತ್ತು. ಆದರೆ ಈ ಮಟ್ಟಕ್ಕೆ  ಅದು ತಲುಪಿರುವುದು ಭಾರತದ ಕ್ರಿಕೆಟ್‌ ಕಂಡ ಅತ್ಯಂತ ದುಃಖಕರ ದಿನವಾಗಿದೆ’ ಎಂದು ವೀಕ್ಷಕ ವಿವರಣೆಕಾರ ಸುನಿಲ್ ಗಾವಸ್ಕರ್ ಹೇಳಿದ್ದಾರೆ.

ಎನ್‌ಡಿಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕುಂಬ್ಳೆ ಕೋಚ್ ಆಗಿ ನೇಮಕವಾದ ನಂತರ ಭಾರತ ತಂಡವು ಜಯದ ಹಾದಿ ಹಿಡಿದಿತ್ತು. ಅನಿಲ್ ಯಾವುದೇ ತಪ್ಪು ಹೆಜ್ಜೆ ಇಟ್ಟಿದನ್ನು ನಾನು ಕಂಡಿಲ್ಲ. ಭಿನ್ನಾಭಿಪ್ರಾಯಗಳು ತಲೆದೋರುವುದು ಸಹಜ. ಫಲಿತಾಂಶಗಳನ್ನು ನೋಡಿ’ ಎಂದಿದ್ದಾರೆ. ‘ಕುಂಬ್ಳೆ ಅವರು ಆಟಗಾರನಾಗಿದ್ದಾಗ ಛಲದ ಹೋರಾಟಗಾರರಾಗಿದ್ದು. ಎಂತಹುದೇ ಪರಿಸ್ಥಿತಿಯಲ್ಲಿ ಹಿಮ್ಮೆಟ್ಟಿದವರಲ್ಲ. ಇದೇ ಮೊದಲ ಬಾರಿ ಅವರು ಈ ರೀತಿ ಹಿಂದೆ ಸರಿದಿರುವುದನ್ನು ನೋಡಿದ್ದೇನೆ. ಸಿಎಸಿ ಅವರ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿತ್ತು.  ಅವರು ಇನ್ನಷ್ಟು ಸಮಯ ತಮ್ಮ ಸ್ಥಾನದಲ್ಲಿ ಮುಂದುವರಿಯಬೇಕಿತ್ತು. ರಾಜೀನಾಮೆ ಸಲ್ಲಿಸಲು ಅನಿಲ್‌ಗೆ ಅವರದ್ದೇ ಆದ ಕಾರಣಗಳು ಇರಬಹುದು’ ಎಂದರು.

ಕೋಚ್ ಹುದ್ದೆಗೆ ಅರ್ಜಿ ಆಹ್ವಾನ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಹುದ್ದೆಗೆ ನೇಮಕ ಮಾಡುವ ಉದ್ದೇಶದಿಂದ ಮತ್ತೆ ಅರ್ಜಿ ಆಹ್ವಾನಿಸಿರುವುದಾಗಿ ಬಿಸಿಸಿಐ  ತಿಳಿಸಿದೆ.

ಮಂಗಳವಾರ ಕುಂಬ್ಳೆ ಅವರ ರಾಜೀನಾಮೆಯಿಂದಾಗಿ ತಂಡದ ಮುಖ್ಯ ಕೋಚ್ ಹುದ್ದೆ ತೆರವಾಗಿದೆ.  ‘ಅನಿಲ್ ಕುಂಬ್ಳೆ ಅವರು ಮುಖ್ಯ ಕೋಚ್ ಸ್ಥಾನವನ್ನು ತೊರೆದಿದ್ದಾರೆ. ಜೂನ್ 18ರಂದು ಅವರ ಒಪ್ಪಂದದ ಅವಧಿ ಮುಕ್ತಾಯವಾಗಿತ್ತು. ಸಿಎಸಿ ಸಲಹೆಯ ಮೇರೆಗೆ ಕುಂಬ್ಳೆ ಅವರ ಕರ್ತವ್ಯದ ಅವಧಿಯನ್ನು ಮತ್ತೆ ಎರಡು ವಾರಗಳ ಕಾಲ (ವಿಂಡೀಸ್ ಎದುರಿನ ಸರಣಿ ಮುಕ್ತಾಯದವರೆಗೆ)  ವಿಸ್ತರಿಸಲಾಗಿತ್ತು’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೇ ತಿಂಗಳಲ್ಲಿ ಮಂಡಳಿಯು ನೂತನ ಕೋಚ್ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಿತ್ತು. ಹಿರಿಯ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಲಾಲ್‌ಚಂದ್ ರಜಪೂತ್, ರಿಚರ್ಡ್ ಪೈಬಸ್, ದೊಡ್ಡಗಣೇಶ್ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಅರ್ಜಿ ಸಲ್ಲಿಸಲು 7 ರಿಂದ 10 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.  ‘ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕೋಚ್‌ ಹುದ್ದೆ ಬಯಸುವ ಆಸಕ್ತರ ಸಂಖ್ಯೆ ಹೆಚ್ಚಿದೆ’ ಎಂದು ಬಿಸಿಸಿಐ ಹೇಳಿದೆ.

ಆರು ತಿಂಗಳಿಂದ ಮಾತನಾಡದ ಕುಂಬ್ಳೆ–ಕೊಹ್ಲಿ?
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ನಡುವೆ ಕಳೆದ ಆರು ತಿಂಗಳಿಂದ  ಪರಸ್ಪರ  ಮಾತಾಡುತ್ತಿರಲಿಲ್ಲವಂತೆ.

ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

‘ಹೋದ ಡಿಸೆಂಬರ್‌ನಲ್ಲಿ ಇಂಗ್ಲೆಂಡ್  ಎದುರಿನ ಟೆಸ್ಟ್ ಸರಣಿಯ  ನಂತರ ಇಬ್ಬರ ನಡುವೆ ಮಾತುಕತೆ ನಿಂತಿತ್ತು.  ಯಾವ ರೀತಿಯ ಸಮಸ್ಯೆಗಳಿದ್ದವು ಎಂಬುದು ಗೊತ್ತಿಲ್ಲ. ಆದರೆ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಜೂನ್ 18ರಂದು ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ನಂತರ ಅವರಿಬ್ಬರೊಂದಿಗೆ ಬಿಸಿಸಿಐ ಪ್ರತಿನಿಧಿಗಳು ಚರ್ಚಿಸಿದರು. ನಂತರ  ಅವರು ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಒಪ್ಪಿಕೊಂಡಿದ್ದರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT