ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲಮನ್ನಾ ಘೋಷಣೆ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರೈತರು ಸಹಕಾರಿ ಸಂಸ್ಥೆಗಳಲ್ಲಿ ಪಡೆದ ₹50 ಸಾವಿರವರೆಗಿನ ಅಲ್ಪಾವಧಿ ಕೃಷಿ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ.
ಈ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬುಧವಾರ ಪ್ರಕಟಿಸಿದರು.

ಇಲಾಖಾವಾರು ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಸುಮಾರು ಎರಡೂಕಾಲು ಗಂಟೆ ಉತ್ತರ ನೀಡಿದ ಅವರು, ‘ಹೋದ ಕಡೆಗಳಲೆಲ್ಲಾ ಸಾಲಮನ್ನಾ ಮಾಡುವಂತೆ ರೈತರು ಬೇಡಿಕೆ ಮಂಡಿಸಿದ್ದಾರೆ. ನಮ್ಮ ಸರ್ಕಾರ ಮೊದಲಿನಿಂದಲೂ ರೈತರು, ಬಡವರು, ದಲಿತರು ಮತ್ತು ಮಹಿಳೆಯರ ಪರ ಕಾರ್ಯಕ್ರಮಗಳನ್ನು ರೂಪಿಸಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲು  ಹಾಗೂ ಕೃಷಿ ಕ್ಷೇತ್ರದ ಹಿತದೃಷ್ಟಿಯಿಂದ ಸಾಲಮನ್ನಾ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ’ ಎಂದು ವಿವರಿಸಿದರು.

‘₹ 25 ಸಾವಿರದಿಂದ ₹ 3 ಲಕ್ಷದವರೆಗೆ ರೈತರು ಬಡ್ಡಿರಹಿತ ಅಲ್ಪಾವಧಿ ಸಾಲ ಪಡೆದಿದ್ದಾರೆ. ₹ 3 ಲಕ್ಷದ ಮೇಲೆ ಶೇ 3ರ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. ಸಾಲದ ಮೊತ್ತ ಎಷ್ಟೇ ಇದ್ದರೂ ಅವರು ಪಡೆದ ಸಾಲದಲ್ಲಿ ₹ 50 ಸಾವಿರದವರೆಗೆ ಮಾತ್ರ ಮನ್ನಾ ಮಾಡಲಾಗುವುದು’ ಎಂದು ತಿಳಿಸಿದರು.

‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸಣ್ಣ ಮತ್ತು ಅತಿಸಣ್ಣ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ, ಇನ್ನೂ ಆದೇಶ ಜಾರಿಯಾಗಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು, ಅಧ್ಯಯನ ವರದಿ ಬಂದ ಬಳಿಕ ಮನ್ನಾ ಮಾಡುವ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ. ನಮ್ಮ ಸರ್ಕಾರ ಈ ವಿಷಯದಲ್ಲಿ ವಿಳಂಬ ಮಾಡುವುದಿಲ್ಲ. ಇನ್ನು ಎರಡು ದಿನದಲ್ಲಿ ಈ ಸಂಬಂಧ ಆದೇಶ ಹೊರಡಿಸುತ್ತೇನೆ’  ಎಂದು ಹೇಳಿದರು.

‘ಐದಾರು ವರ್ಷ ರಾಜ್ಯ ಕಂಡ ಭೀಕರ ಬರಗಾಲದಿಂದ ನೋವು, ನಷ್ಟ  ಅನುಭವಿಸಿದ ರೈತ ಸಮುದಾಯಕ್ಕೆ ಸಾಲಮನ್ನಾ ಮೂಲಕ ಮುಲಾಮು ಹಚ್ಚ
ಬೇಕು ಎಂಬ ಕೂಗು ಐದಾರು ತಿಂಗಳಿನಿಂದ ಬಲವಾಗಿ ಎದ್ದಿತ್ತು.  ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಸಾಲಮನ್ನಾ ಮಾಡುವಂತೆ ಸಿದ್ದರಾಮಯ್ಯಗೆ ಸೂಚಿಸಿದ್ದರು.

‘ಮುಖ್ಯಮಂತ್ರಿಯ ಮೂಗು ಹಿಡಿದು, ಕಿವಿ ಹಿಂಡಿ ಸಾಲ ಮನ್ನಾ ಮಾಡಿಸುವೆ. ಜೂನ್ ಅಂತ್ಯದೊಳಗೆ ಮನ್ನಾ ಮಾಡದೇ ಇದ್ದರೆ ನಾಲ್ಕು ಲಕ್ಷ ರೈತರನ್ನು ಬೆಂಗಳೂರಿಗೆ ಕರೆತಂದು ವಿಧಾನಸೌಧ ಮುತ್ತಿಗೆ ಹಾಕುವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಸಿದ್ದರು.

13 ದಿನಗಳಿಂದ ನಡೆದ ವಿಧಾನಮಂಡಲ ಅಧಿವೇಶನದಲ್ಲೂ ಸಾಲಮನ್ನಾ ಮಾಡಬೇಕು ಎಂಬ ಬೇಡಿಕೆ ಬಂದಿತ್ತು. ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಶಾಸಕರು ಮಾತ್ರವಲ್ಲದೇ, ಕಾಂಗ್ರೆಸ್‌ ಶಾಸಕರೂ ಸಾಲಮನ್ನಾಕ್ಕೆ ಆಗ್ರಹಿಸಿದ್ದರು.

ಮೂರನೇ ಸಾಲ
ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಎರಡು ಬಾರಿ ರೈತರ ಸಾಲಮನ್ನಾ ಮಾಡಲಾಗಿದೆ. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾಕ್ಕಾಗಿ ₹ 1,600 ಕೋಟಿ ಹಾಗೂ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾಕ್ಕಾಗಿ ₹ 3,600 ಕೋಟಿಗಳನ್ನು ಸರ್ಕಾರ ಭರಿಸಿತ್ತು. ಈ ಎರಡೂ  ಅವಧಿಯಲ್ಲಿ ₹ 25,000 ಮೊತ್ತದವರೆಗಿನ ಸಾಲ ಮನ್ನಾ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ₹ 50,000 ಮೊತ್ತದವರೆಗಿನ ಸಾಲಮನ್ನಾ ಮಾಡಲಾಗಿದೆ.

ಬಿಜೆಪಿಗೆ ಸವಾಲು
‘ರೈತರ ಹಿತ ಕಾಯಲು ನಾನು ಸಾಲ ಮನ್ನಾ ಮಾಡಿದ್ದೇನೆ. ನಿಮಗೆ ತಾಕತ್ತಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳಲ್ಲಿನ ಕೃಷಿ ಸಾಲ ಮನ್ನಾ ಮಾಡಿಸಿ’ ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT