ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಾಸನ ಮಾಡಿ ಪುಳಕಗೊಂಡ ಜನತೆ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೀಡಾಂಗಣ, ಮೈದಾನ, ಉದ್ಯಾನ, ಶಾಲಾ–ಕಾಲೇಜು ಹೀಗೆ ವಿವಿಧೆಡೆಗಳಲ್ಲಿ ಯೋಗ ಮಾಡುವ ಮೂಲಕ ನಗರದ ಜನರು ಬುಧವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದರು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ‘ವೃಕ್ಷ ಕ್ರಾಂತಿ–ಯೋಗ ಶಾಂತಿ’ ಎಂಬ ಘೋಷಣೆ ಅಡಿ ಒಂದೇ ಸಮಯಕ್ಕೆ 300ಕ್ಕೂ ಹೆಚ್ಚು ಕಡೆ ಯೋಗ ಕಾರ್ಯಕ್ರಮಗಳು ಹಮ್ಮಿಕೊಂಡಿತ್ತು.

ಆರ್ಟ್‌ ಆಫ್‌ ಲೀವಿಂಗ್‌ ಹಾಗೂ ಸಮರ್ಥ ಭಾರತ ಇದರ ನೇತೃತ್ವ ವಹಿಸಿದ್ದು, ಸುಮಾರು 400 ಸಂಘಟನೆಗಳು ಇದಕ್ಕೆ ಕೈ ಜೋಡಿಸಿವೆ.
‘ಜಿಕೆವಿಕೆಯಲ್ಲಿ ಸುಮಾರು 8,000 ಜನ ಸೇರಿ ಯೋಗಾಭ್ಯಾಸ ಮಾಡಿದರು. ಅಲ್ಲದೆ, ಸರ್ಜಾಪುರದ ಸರ್ಕಾರಿ ಮೈದಾನ, ಎಚ್‌ಎಸ್‌ಆರ್‌ ಬಿಬಿಎಂಪಿ ಕ್ರೀಡಾಂಗಣ, ಜ್ಞಾನಭಾರತಿ ಆವರಣ, ಹಲಸೂರು ಕೆರೆ, ಸ್ಯಾಂಕಿ ಕೆರೆ, ಎಚ್‌ಎಂಟಿ ಮೈದಾನ, ವಿವಿಧ ಶಾಲೆಗಳಲ್ಲಿ ಸುಮಾರು 3 ಲಕ್ಷ ಜನ ಯೋಗ ಮಾಡಿದರು’ ಎಂದು ಸಮಿತಿ ಸಂಚಾಲಕ ಕೃಷ್ಣೇಗೌಡ ತಿಳಿಸಿದರು.

‘ಸುಮಾರು 100 ಕೇಂದ್ರಗಳಲ್ಲಿ ಮಹಿಳೆಯರಿಗೆ ಮಾತ್ರ ಯೋಗಾಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಸಮಯದಲ್ಲಿ ಯೋಗಾಭ್ಯಾಸ ನಡೆಯಿತು. ಅಲ್ಲದೆ, 40 ಬಸ್‌ ಡಿಪೊಗಳ 30 ಸಾವಿರ ಬಿಎಂಟಿಸಿ ಸಿಬ್ಬಂದಿ ಯೋಗ ಮಾಡಿದರು’ ಎಂದರು.
ಪ್ರಕಾಶ್‌ ಅಯ್ಯಂಗಾರ್‌ ಮತ್ತು ಸ್ಯಾಂಕಿ ನಡಿಗೆದಾರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ಅವರು ಪಾಲ್ಗೊಂಡು ಸೂರ್ಯ ನಮಸ್ಕಾರ ಮಾಡಿದರು. ಜೆ.ಪಿ ನಗರದಲ್ಲೂ ಯೋಗ ದಿನ ಆಚರಿಸಲಾಗಿದ್ದು, ಚಳಿಯನ್ನು ಲೆಕ್ಕಿಸದೆ ಜನರು ಮೈದಾನದಲ್ಲಿ ಯೋಗ ಮಾಡಿದರು.
ಶಂಕರ ಅಷ್ಟಾಂಗ ಯೋಗ ಸಂಸ್ಥೆ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಂಡಿತ್ತು. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಚಿತ್ರಕಲಾ ಸ್ಪರ್ಧೆ ಮತ್ತು ಯೋಗ ಕುರಿತು ಚಲನಚಿತ್ರ ಪ್ರದರ್ಶನ ಆಯೋಜಿಸಿದ್ದು, ವಿವಿಧ ಶಾಲಾ ಮಕ್ಕಳು ಈ ಪ್ರದರ್ಶನ ವೀಕ್ಷಿಸಿದರು.

ವಿಶೇಷ ಮಕ್ಕಳಿಂದ ಯೋಗ: ಶಬ್ದ ಮತ್ತು ಸಂಜ್ಞೆ ಎನ್‌ಜಿಒ ಮಾತು ಬಾರದ, ಶ್ರವಣ ದೋಷವುಳ್ಳ ಮಕ್ಕಳಿಗೆ ವಿಶೇಷ ಯೋಗ ತರಬೇತಿ ನಡೆಸಿತು. ಎಚ್ಎಎಲ್‌ ಬಳಿಯ ‘ಶೀಲಾ ಕೋತ್ವಾಲ್ ಇನ್ಸಿಟ್ಯೂಟ್ ಆಫ್ ಡೆಫ್‌’  ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಜ್ಞೆಗಳ ಮೂಲಕ ಮಕ್ಕಳಿಗೆ ಯೋಗ ಹೇಳಿ ಕೊಡಲಾಯಿತು.
ಯೋಗ ದಿನದ ಪ್ರಯುಕ್ತ ಟೀ ಶರ್ಟ್‌:  ನೈಸರ್ಗಿಕ ವರ್ಣದ ವಸ್ತ್ರಗಳು, ಕೈಮಗ್ಗಗಳಲ್ಲಿ ತಯಾರಾದ ಬಟ್ಟೆಗಳನ್ನು ಮಾರಾಟ ಮಾಡುವ ಅಜೀಟೀಜ್ ಸಂಸ್ಥೆ ಯೋಗ ದಿನಾಚರಣೆ ಪ್ರಯುಕ್ತ ವಿಶೇಷ ಟೀ ಶರ್ಟ್‌ಗಳನ್ನು ಸಿದ್ಧಪಡಿಸಿದೆ. ಪ್ರದೇಶವಾರು ಸಂಸ್ಕೃತಿಗೆ ಅನುಗುಣವಾಗಿ ಅಲ್ಲಿನ ಭಾಷೆ, ನುಡಿಗಟ್ಟುಗಳನ್ನು ಬಳಸಿ ಟೀ ಶರ್ಟ್ ವಿನ್ಯಾಸಗೊಳಿಸುತ್ತದೆ.

108 ಸೂರ್ಯ ನಮಸ್ಕಾರ: ಹೇರೋಹಳ್ಳಿ ಬಳಿಯ ಸಿಂಡಿಕೇಟ್ ಬ್ಯಾಂಕ್ ಕಾಲೊನಿಯಲ್ಲಿ ಓಂಸೇವಾ ಕೇಂದ್ರದ ವತಿಯಿಂದ ‘108 ಸೂರ್ಯ ನಮಸ್ಕಾರ’ ಎಂಬ ಕಾರ್ಯಕ್ರಮ ಜರುಗಿತು. ಮುಂಜಾನೆ 6 ಗಂಟೆಗೆ ಕೇಂದ್ರದ ಆವರಣದಲ್ಲಿ ಓಂಸೇವಾ ಕೇಂದ್ರದ ಸಂಸ್ಥಾಪಕ ಶ್ರೀಕೃಷ್ಣ ಗುರೂಜಿ ಅವರ ನೇತೃತ್ವದಲ್ಲಿ ಯೋಗಾಭ್ಯಾಸನ ನಡೆಯಿತು.

ನೂರಾರು ಯೋಗಪಟುಗಳು ಅಂದ್ರಹಳ್ಳಿ ಮುಖ್ಯ ರಸ್ತೆ, ಹೇರೋಹಳ್ಳಿ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಹಾಗೂ ಗಣೇಶ ದೇವಸ್ಥಾನದ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಪೊಲೀಸರಿಂದ ಯೋಗಾಸನ: ಕೇಂದ್ರ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಬೆಳಿಗ್ಗೆ 7ಗಂಟೆ ಯಿಂದ ಕೇಂದ್ರದ ಪೊಲೀಸರು ಮತ್ತು ಅವರ ಕುಟುಂಬದವರು ಯೋಗ ಮಾಡಿದರು.

ಒಂದು ತಿಂಗಳು ಯೋಗ: ರೇವಾ ವಿಶ್ವವಿದ್ಯಾಲಯ ಮೂರನೇ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಮೇ 23ರಿಂದ ಜೂನ್‌ 21 ರವರೆಗೆ ಯೋಗಾಭ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಯೋಗಾಸನ ಮಾಡುತ್ತಿದ್ದರು.
ನಿಮ್ಹಾನ್ಸ್‌ನಲ್ಲಿ ಯೋಗ ದಿನ: ಯೋಗ ದಿನದ ಪ್ರಯುಕ್ತ 18ರಿಂದ 25ರವರೆಗೆ ನಿಮ್ಹಾನ್ಸ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಕೆಂಪೇಗೌಡ ವೈದ್ಯಕೀಯ ಕಾಲೇಜು, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಲ್ಡ್‌ ಕಲ್ಚರ್‌, ಆಕಾಶವಾಣಿಗಳಲ್ಲಿ ಇಲ್ಲಿನ ಸಿಬ್ಬಂದಿ ಯೋಗದ ಕುರಿತು ಉಪನ್ಯಾಸ ನಡೆಸಿಕೊಟ್ಟಿದ್ದಾರೆ.
‘ಬುಧವಾರ ಸುಮಾರು 650 ಸಿಬ್ಬಂದಿಯಿಂದ ಸಾಮೂಹಿಕ ಯೋಗಾಸನ ನಡೆಯಿತು. ರೋಗಿಗಳಿಗಾಗಿ ಗುರುವಾರ ಯೋಗದ ಕುರಿತು ಚಿತ್ರಕಲೆ ಹಾಗೂ ಯೋಗಾಸನ ಸ್ಪರ್ಧೆ ಏರ್ಪಡಿಸಿದ್ದೇವೆ. 25ಕ್ಕೆ ಯೋಗ ಮತ್ತು ಭಾರತೀಯ ಮನೋವಿಜ್ಞಾನ ಕುರಿತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ’ ಎಂದು ನಿಮ್ಹಾನ್ಸ್‌ ನಿರ್ದೇಶಕ ಬಿ.ಎನ್.ಗಂಗಾಧರ್ ತಿಳಿಸಿದರು.
ದಾಬಸ್ ಪೇಟೆಯಲ್ಲಿ ಯೋಗದಿನ : ದಾಬಸ್ ಪೇಟೆ:  ಇಲ್ಲಿನ ಎಸ್‌ಆರ್‌ಎಸ್‌ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ‘ಸಮರ್ಥ ಭಾರತ’ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಸೇರಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಯೋಗ ಮಾಡಿದರು.

‘ಪ್ರಾಥಮಿಕ ಶಿಕ್ಷಣದಲ್ಲಿ ಯೋಗ ಕಡ್ಡಾಯಗೊಳಿಸಿ’

‘ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರಾಥಮಿಕ ಶಿಕ್ಷಣದಿಂದಲೇ ಯೋಗವನ್ನು ಕಡ್ಡಾಯ ಮಾಡುವುದು ಸೂಕ್ತ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸಲಹೆ ನೀಡಿದರು.

ರಾಜ್ಯ ಯೋಗ ಅಕಾಡೆಮಿ, ಎಸ್- ವ್ಯಾಸ ಯೋಗ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಪಿಇಎಸ್ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ಗುಜರಾತ್‌ನ ಪ್ರಮುಖ ಶಾಲೆಗಳಲ್ಲಿ ಈಗಾಗಲೇ ಯೋಗ ಕಡ್ಡಾಯ ಮಾಡಲಾಗಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ ಚೆನ್ನಾಗಿರುತ್ತದೆ. ಇದು ಅವರ ಶಿಕ್ಷಣದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದರು.
ಪಿಇಎಸ್ ವಿಶ್ವವಿದ್ಯಾಲಯ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಮಾತನಾಡಿ, ‘ಎಂಟನೇ ತರಗತಿಯಿಂದ ಪದವಿಯವರೆಗೆ ಯೋಗವನ್ನು ನಾವು ಕಡ್ಡಾಯ ಮಾಡಿದ್ದೇವೆ. ಪ್ರತಿಯೊಬ್ಬರು ಕನಿಷ್ಠ ಸೂರ್ಯ ನಮಸ್ಕಾರ ಮಾಡುವುದನ್ನು ರೂಢಿಸಿಕೊಳ್ಳಬೇಕು’ ಎಂದರು.
ಕೆಲವು ವಿದ್ಯಾರ್ಥಿಗಳು ವೇದಿಕೆ ಮೇಲೆ ಯೋಗದ ಪ್ರಕಾರಗಳನ್ನು ಪ್ರದರ್ಶಿಸಿದರು. ವೇದಿಕೆ ಕಾರ್ಯಕ್ರಮದ ನಂತರ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಿಇಎಸ್ ಮೈದಾನದಲ್ಲಿ ಯೋಗ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT