ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಹಿಂದಿನ ಶಕ್ತಿಯೇ ಯೋಗ: ಹಜಾರೆ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರದ ವಿರುದ್ಧ ನಾನು ನಡೆಸುತ್ತಿರುವ ಹೋರಾಟದ ಹಿಂದಿನ ಶಕ್ತಿಯೇ ಯೋಗ’ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದರು.

ಯೋಗ ದಿನಾಚರಣೆ  ಅಂಗವಾಗಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಿತ್ಯ ಬೆಳಿಗ್ಗೆ 4 ಗಂಟೆಗೇ ಎದ್ದು ಒಂದೆರಡು ಕಿ.ಮೀ ನಡೆಯುತ್ತೇನೆ. ಯೋಗ, ಪ್ರಾಣಾಯಾಮ ಮಾಡುತ್ತೇನೆ. 80 ವರ್ಷ ದಾಟಿದರೂ ನನ್ನ ಆರೋಗ್ಯ ಚೆನ್ನಾಗಿದೆ’ ಎಂದರು.

‘ಯೋಗಾಭ್ಯಾಸದಿಂದ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮನಸ್ಸು ಶುದ್ಧವಾಗಿದ್ದರೆ ಭ್ರಷ್ಟಾಚಾರ ತಾನಾಗಿಯೇ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಯೋಗ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಕಳಂಕ ಇದ್ದರೆ ಹವಾನಿಯಂತ್ರಿತ ಕೊಠಡಿಯಲ್ಲೂ ನಿದ್ರೆ ಬರುವುದಿಲ್ಲ. ನನಗೆ ಆ ಭಯ ಇಲ್ಲ. ಹೀಗಾಗಿಯೇ ಧೈರ್ಯದಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ. ಮಂದಿರದಲ್ಲಿ ಮಲಗುತ್ತೇನೆ. ಒಂದು ಚಾಪೆ, ಊಟದ ತಟ್ಟೆ ಬಿಟ್ಟರೆ ಬೇರೇನೂ ಇಲ್ಲ. ನನ್ನ ಬ್ಯಾಂಕ್‌ ಪಾಸ್‌ ಪುಸ್ತಕ ಎಲ್ಲಿದೆಯೋ ನನಗೇ ಗೊತ್ತಿಲ್ಲ’ ಎಂದು ಹೇಳಿದರು.

ಆರೋಗ್ಯ ಸಚಿವ ರಮೇಶ್‌ಕುಮಾರ್‌ ಮಾತನಾಡಿ, ‘ಯಾವುದೇ ಭಾಷೆ, ಧರ್ಮ, ಜಾತಿ ಅಥವಾ ಪಕ್ಷಕ್ಕೆ ಯೋಗ ಸೀಮಿತ ಅಲ್ಲ. ಅದನ್ನು ತಮ್ಮ ಜಹಗೀರ್ ಮಾಡಿಕೊಳ್ಳಲು ಯಾರೂ ಪ್ರಯತ್ನ ಮಾಡಬಾರದು’ ಎಂದರು.

ಮುಖ್ಯಮಂತ್ರಿ ಗೈರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಗಾಭ್ಯಾಸಕ್ಕೆ ಬಂದಿರಲಿಲ್ಲ. ಅವರ ಆರೋಗ್ಯ ಸರಿಯಿಲ್ಲದ ಕಾರಣ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಸಚಿವ ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿದರು.

ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್‌,  ಬಿಬಿಎಂಪಿ ಮೇಯರ್ ಜಿ. ಪದ್ಮಾವತಿ ಹೊರತಾಗಿ ಬೇರಾವ ರಾಜಕಾರಣಿಗಳು ಹಾಜರಾಗಲಿಲ್ಲ. ಶ್ವಾಸಗುರು ವಚನಾನಂದ ಸ್ವಾಮೀಜಿ ಮಾರ್ಗದರ್ಶನ ನೀಡಿ ಹುರಿದುಂಬಿಸಿದರು. ಸಾವಿರಾರು ಜನ  ಯೋಗಾಭ್ಯಾಸ ಮಾಡಿದರು.
ಅಮೆರಿಕದ ಅತಿಥಿ: ನ್ಯೂಯಾರ್ಕ್‌ನ 98 ವರ್ಷ ವಯಸ್ಸಿನ ಯೋಗ ಪಟು ತಾವೋಫೋರ್ಚಾನ್‌ ಲಿಂಚ್‌ ಮತ್ತು ತಮಿಳುನಾಡಿನ 97 ವರ್ಷದ ಯೋಗ ಪಟು ಅಮ್ಮಾ ನಾನಮ್ಮಾಳ್ ಪ್ರಮುಖ ಆಕರ್ಷಣೆಯಾಗಿದ್ದರು. 

ಹಸ್ತಪಾದಾಸನ, ಸರ್ವಾಂಗಾಸನ, ಭುಜಂಗಾಸನಗಳನ್ನು ಮಾಡಿ ಅವರು ಗಮನ ಸೆಳೆದರು.  ಜಪಾನ್‌ನ ಐಕಾವ ಯೋಗ ಸಂಸ್ಥೆಯ ಕಿಕೋ ಐಕಾವ ಸೇರಿ ಅಮೆರಿಕಾ, ಜರ್ಮನಿಯ ಯೋಗಪಟುಗಳೂ ವೇದಿಕೆ ಮೇಲೆ ಯೋಗ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT