ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧನ ಕೊಂದು, ಬಾಲಕನ ತಲೆ ಹೊಡೆದ

Last Updated 21 ಜೂನ್ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಉಪನಗರ 4ನೇ ಹಂತದ ಮನೆಯೊಂದರಲ್ಲಿ ಕಳ್ಳತನ ಮಾಡುತ್ತಿದ್ದಾಗ ಎಚ್ಚರಗೊಂಡ ಮಹಮದ್ ಅನೀಸ್ (12) ಎಂಬ ಬಾಲಕನ ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದ ಯುವಕನೊಬ್ಬ, ಸ್ವಲ್ಪ ಸಮಯದ ನಂತರ ಇನ್ನೊಂದು ಮನೆಗೆ ನುಗ್ಗಿ ಅನಂತರಾಮ್ (70) ಎಂಬುವರನ್ನು ಕೊಲೆಗೈದಿದ್ದಾನೆ.
ಆರೋಪಿಯು ಬೆಳಗಿನ ಜಾವ 3.30ರಿಂದ 4.30ರ ಅಂತರದಲ್ಲಿ ಅಕ್ಕ–ಪಕ್ಕದ ರಸ್ತೆಗಳಲ್ಲೇ ಮೂರು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಯಲಹಂಕ ಉಪನಗರ ಪೊಲೀಸರು ಹಲ್ಲೆಗೊಳಗಾದ ಬಾಲಕನ ಹೇಳಿಕೆ ಆಧರಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಚಿಲಕ ಹಾಕಿದ: ಆರೋಪಿಯು ಬೆಳಗಿನ ಜಾವ 3.30ರ ಸುಮಾರಿಗೆ ಮಹಮದ್ ಅಶ್ರಫ್ ಎಂಬುವರ ಮನೆಗೆ ನುಗ್ಗಿದ್ದ. ಅಶ್ರಫ್ ದಂಪತಿ ಮಲಗಿದ್ದ ಕೋಣೆಗೆ ಹೊರಗಿನಿಂದ ಚಿಲಕ ಹಾಕಿದ್ದ ಆತ, ಅವರ ಮಕ್ಕಳು ನಿದ್ರಿಸುತ್ತಿದ್ದ ಕೋಣೆಯೊಳಗೆ ಹೋಗಿ ಅಲ್ಮೆರಾ ಬೀಗ ತೆಗೆಯುತ್ತಿದ್ದ. ಈ ವೇಳೆ ಅನೀಸ್ ಎಚ್ಚರಗೊಂಡು ಚೀರಿಕೊಂಡಿದ್ದ. ಇದರಿಂದ ಗಾಬರಿಗೆ ಬಿದ್ದ ಕಳ್ಳ, ಕಲ್ಲಿನಿಂದ ಆತನ ತಲೆಗೆ ಹೊಡೆದಿದ್ದ.
ಅಣ್ಣನ ಚೀರಾಟ ಕೇಳಿ ಎಚ್ಚರಗೊಂಡ ಅನೀಸ್ ತಮ್ಮ, ಕೂಡಲೇ ಓಡಿ ಹೋಗಿ ಅಪ್ಪ–ಅಮ್ಮ ಮಲಗಿದ್ದ ಕೋಣೆಯ ಚಿಲಕ ತೆಗೆದಿದ್ದ. ಅಷ್ಟೊತ್ತಿಗಾಗಲೇ ಕಳ್ಳ ಮನೆಯಿಂದ ಓಡಿ ಹೋಗಿದ್ದ. ಕೂಡಲೇ ಅವರು ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.
ಬೆಳಿಗ್ಗೆ 4.10: ಸ್ವಲ್ಪ ಸಮಯದ ನಂತರ ಅದೇ ರಸ್ತೆಯ ಇನ್ನೊಂದು ಮನೆಗೆ ನುಗ್ಗಲು ಯತ್ನಿಸಿದ್ದ. ಆದರೆ, ಅಲ್ಲಾಳಸಂದ್ರ ಕೆರೆ ಸಮೀಪ ಆಯೋಜಿಸಲಾಗಿದ್ದ ಯೋಗ ದಿನಾಚರಣೆಗೆ ಹೋಗಲು ಅಲ್ಲಿನ ನಿವಾಸಿಗಳು ಬೇಗನೆ ಎದ್ದಿದ್ದರು.
ಮನೆಯ ಕಿಟಕಿ ಮುರಿಯುತ್ತಿದ್ದ ಆತನನ್ನು ನೋಡುತ್ತಿದ್ದಂತೆಯೇ ಅವರು   ಕೂಗಿಕೊಂಡಿದ್ದರು. ಆಗ ಅಲ್ಲಿಂದ ಓಡಿದ ಆರೋಪಿ 500 ಮೀಟರ್ ದೂರದಲ್ಲಿರುವ ಅನಂತರಾಮ್ ಅವರ ಮನೆಯ ಕಾಂಪೌಂಡ್‌ನೊಳಗೆ ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬೆಳಿಗ್ಗೆ 4.30: ಅನಂತರಾಮ್ ಅವರು ನೆಲಮಹಡಿಯ ಮನೆಯಲ್ಲಿ ಮಲಗಿದ್ದರು. ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿರುವ ಅವರ ಮಗ ಮಾಧವನ್, ಮೊದಲ ಮಹಡಿಯಲ್ಲಿ ಕಂಪೆನಿಯ ಕೆಲಸದಲ್ಲಿ ನಿರತರಾಗಿದ್ದರು.
ಕೆಲಸ ಮುಗಿದ ಬಳಿಕ ಮಗ ಮನೆಗೆ ಬಂದು ಮಲಗಲೆಂದು ಅನಂತರಾಮ್ ಚಿಲಕ ಹಾಕದೆ ಮಲಗಿದ್ದರು. ಬೆಳಗಿನ ಜಾವ 4.30ರ ಸುಮಾರಿಗೆ ಬಾಗಿಲು ತೆಗೆದು ಮನೆಗೆ ನುಗ್ಗಿದ ಕಳ್ಳ, ಮೇಜಿನ ಮೇಲಿದ್ದ ಸೂಟ್‌ಕೇಸ್‌ ತೆಗೆದುಕೊಂಡಿದ್ದ. ಈ ಹಂತದಲ್ಲಿ ಅನಂತರಾಮ್ ಎಚ್ಚರಗೊಂಡಿದ್ದರು. ಆಗ ಅವರ ತಲೆಗೆ ಸಲಾಕೆಯಿಂದ ಹೊಡೆದ ಆರೋಪಿ, ಸೂಟ್‌ಕೇಸ್‌ನೊಂದಿಗೆ ಪರಾರಿಯಾಗಿದ್ದ.
ಸೂಟ್‌ಕೇಸ್ ಪತ್ತೆ: ಆ ಸೂಟ್‌ಕೇಸ್‌ನಲ್ಲಿ ಕೇವಲ ದಾಖಲೆ ಪತ್ರಗಳು ಇದ್ದುದರಿಂದ  ಅದನ್ನು ಮನೆಯಿಂದ ಸ್ವಲ್ಪ ದೂರದಲ್ಲೇ ಬಿಸಾಡಿ ಹೋಗಿದ್ದ. ರಸ್ತೆ ಮಧ್ಯೆ ಬಿದ್ದಿದ್ದ ಸೂಟ್‌ಕೇಸ್ ಕಂಡ ಗಸ್ತು ಪೊಲೀಸರು, ಅದರ ಮೇಲಿದ್ದ ವಿಳಾಸವನ್ನು ನೋಡಿ ಅದನ್ನು ತೆಗೆದುಕೊಂಡು ಅನಂತ್‌ರಾಮ್ ಅವರ ಮನೆ ಬಳಿ ಬಂದಿದ್ದರು.
ಪೊಲೀಸರು ಬಾಗಿಲು ಬಡಿದರೂ ಒಳಗಿನಿಂದ ಪ್ರತಿಕ್ರಿಯೆ ಇರಲಿಲ್ಲ. ಶಬ್ದ ಕೇಳಿ ಕೆಳಗಿಳಿದು ಬಂದ ಮಾಧವನ್‌ ಅವರಿಗೆ ಪೊಲೀಸರು ಸೂಟ್‌ಕೇಸ್ ತೋರಿಸಿದ್ದರು.
‘ಅದು ನಮ್ಮ ತಂದೆಯದ್ದು’ ಎಂದು ಹೇಳಿದ ಅವರು,  ಒಳಗೆ ಹೋಗಿ ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಕೂಡಲೇ  ಅವರನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದೊಯ್ದರಾದರೂ,  6.20ಕ್ಕೆ ಕೊನೆಯುಸಿರೆಳೆದರು.

‘ಕಳ್ಳರ ಫೋಟೊ ತೋರಿಸುತ್ತಿದ್ದೇವೆ’
‘ಆ ವ್ಯಕ್ತಿಯ ವಯಸ್ಸು ಸುಮಾರು 30 ರಿಂದ 35 ವರ್ಷವಿರಬಹುದು. ಸ್ವಲ್ಪ ಗಡ್ಡ ಬಿಟ್ಟಿದ್ದ. ಕನ್ನಡ ಮಾತನಾಡುತ್ತಿದ್ದ’ ಎಂದು ಬಾಲಕ ಹೇಳಿಕೆ ಕೊಟ್ಟಿದ್ದಾನೆ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿರುವ ಕಳ್ಳರ ಭಾವಚಿತ್ರಗಳನ್ನು ಆತನಿಗೆ ತೋರಿಸಲಾಗುತ್ತಿದೆ. ಸುತ್ತಮುತ್ತಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT