ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡಗಾಡು ಜಿಲ್ಲೆಗೂ ‘ಕೃಷಿಭಾಗ್ಯ’ ವಿಸ್ತರಣೆ

Last Updated 22 ಜೂನ್ 2017, 8:57 IST
ಅಕ್ಷರ ಗಾತ್ರ

ಮಡಿಕೇರಿ: ಕೃಷಿಕರಿಗೆ ವರದಾನವಾಗಿರುವ ‘ಕೃಷಿಭಾಗ್ಯ’ ಯೋಜನೆಯನ್ನು ಮಲೆನಾಡು, ಗುಡ್ಡಗಾಡು ಹಾಗೂ ಕರಾವಳಿ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗಿದ್ದು ಕೊಡಗು ಜಿಲ್ಲೆಯೂ ಪ್ರಸಕ್ತ ಸಾಲಿನಿಂದ ಈ ಯೋಜನೆ ವ್ಯಾಪ್ತಿಗೆ ಒಳಪಡಲಿದೆ.

ಕೃಷಿ ಇಲಾಖೆಯು, ಮೇನಲ್ಲಿ ಹೊಸ ಆದೇಶ ಹೊರಡಿಸಿದ್ದು ಗುಡ್ಡಗಾಡು ಪ್ರದೇಶವಾದ ಕೊಡಗಿನ ಕೃಷಿಕರೂ ಇದೇ ವರ್ಷದಿಂದ ಸೌಲಭ್ಯ ಪಡೆದುಕೊಳ್ಳಬಹುದು. 2014–15ನೇ ಸಾಲಿನಿಂದ ರಾಜ್ಯದಲ್ಲಿ ಕೃಷಿಭಾಗ್ಯ ಯೋಜನೆಯು ಜಾರಿಗೆ ಬಂದಿತ್ತು. 23 ಜಿಲ್ಲೆಗಳ 107 ತಾಲ್ಲೂಕುಗಳಿಗೆ ಸೀಮಿತಗೊಳಿಸಿ ಯೋಜನೆ ಜಾರಿ ಮಾಡಲಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲೂ ವಾಡಿಕೆಯಷ್ಟು ಮಳೆ ಸುರಿಯದೇ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗುತ್ತಿದೆ. ಕುಶಾಲನಗರ, ಸೋಮವಾರಪೇಟೆ, ಶಾಂತಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಮಳೆಯಾಶ್ರಿತ ರೈತ ಸಮುದಾಯದ ಜೀವನೋಪಾಯ ಉತ್ತಮ ಪಡಿಸಲು ಕೃಷಿಭಾಗ್ಯ ಜಾರಿಗೆ ತರಲಾಗಿದೆ ಎಂದು ಹೇಳಿದ್ದರೂ ಕೊಡಗು ಜಿಲ್ಲೆಯನ್ನು ಹೊರಗಿಡಲಾಗಿತ್ತು. ಜಿಲ್ಲೆಯಲ್ಲಿ ಹಾರಂಗಿ ಜಲಾಶಯವಿದ್ದರೂ ಕೇವಲ 2,000 ಹೆಕ್ಟೇರ್‌ ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿತ್ತು.

ಚಿಕ್ಲಿಹೊಳೆ ವ್ಯಾಪ್ತಿಯಲ್ಲಿ 400 ಹೆಕ್ಟೇರ್‌ನಷ್ಟು ನೀರಾವರಿ ಪ್ರದೇಶವಿದೆ. ಉಳಿದೆಡೆ ಗುಡ್ಡಗಾಡು ಪ್ರದೇಶವಾದ ಕಾರಣ ತೇವಾಂಶ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮಳೆ ನೀರು ಸಂಗ್ರಹ, ಸಂರಕ್ಷಣೆ, ಉಪಯುಕ್ತ ಬೆಳೆ ಪದ್ಧತಿ ಅಳವಡಿಕೆ, ಉತ್ತಮ ಆದಾಯ ಬರುವ ತೋಟಗಾರಿಕೆ ಬೆಳೆ, ಪಶುಸಂಗೋಪನೆ ಚಟುವಟಿಕೆಗೆ ಪ್ರೋತ್ಸಾಹ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಏನೇನು ಸೌಲಭ್ಯಗಳು?:  ಯೋಜನೆಗೆ ಆಯ್ಕೆಯಾದ ಫಲಾನುಭವಿಗೆ ಹಲವು ಸೌಲಭ್ಯಗಳು ಸಿಗಲಿವೆ. ತೇವಾಂಶ ರಕ್ಷಣೆಗೆ ಕೃಷಿಹೊಂಡ ಭಾಗ್ಯ, ಡೀಸೆಲ್‌ ಅಥವಾ ಸೋಲಾರ್‌ ಪಂಪ್‌ಸೆಟ್‌, ಲಘು ನೀರಾವರಿ ಘಟಕ (ಒಂದು ಹೆಕ್ಟೇರ್‌ ಪ್ರದೇಶ) ನೀಡಲಾಗುವುದು. ಪಶುಸಂಗೋಪನೆಗೆ ಅಗತ್ಯವಾದ ಪರಿಕರಗಳೂ ದೊರೆಯಲಿವೆ.

ಪ್ಯಾಕೇಜ್ ಘಟಕಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ 80, ಪರಿಶಿಷ್ಟ ಜಾತಿ/ ಪಂಗಡದ ರೈತರಿಗೆ ಶೇ 90ರಷ್ಟು ಸಹಾಯಧನ ಲಭಿಸಲಿದೆ. ಪಾಲಿಹೌಸ್‌ ಒಳಗೊಂಡ ತೋಟಗಾರಿಕೆ ಬೆಳೆ ಪದ್ಧತಿಗೆ ಶೇ 50 ಸಹಾಯಧನ ಸಿಗಲಿದೆ.

ಅರ್ಜಿ ವಿತರಣೆ: ‘ಜಂಟಿ ಕೃಷಿ ನಿರ್ದೇಶಕರ ಕಚೇರಿ, ಸಹಾಯಕ ಕೃಷಿ ಅಧಿಕಾರಿ ಹಾಗೂ ರೈತ ಸಂಪರ್ಕ ಕೇಂದ್ರಗಳಿಂದ ಅರ್ಜಿ ಪಡೆದು ಸಲ್ಲಿಸಬಹುದು. ಜಿಲ್ಲೆಗೆ 300 ಕೃಷಿ ಹೊಂಡಗಳ ಗುರಿ ನಿಗದಿಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದರೆ, ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುವುದು.

ಆಯ್ಕೆಯಾದ ರೈತರು ಸ್ವಂತವಾಗಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸಾಧ್ಯವಾಗದಿದ್ದರೆ ಇಲಾಖೆ ವತಿಯಿಂದಲೇ ಕಾಮಗಾರಿ ಮಾಡಿಸಿಕೊಡಲಾಗುವುದು; ಲಿಖಿತವಾಗಿ ಬರೆದುಕೊಟ್ಟರೆ ಸಾಕು’ ಎನ್ನುತ್ತಾರೆ ರಾಮಪ್ಪ.

ಅಂಕಿ–ಅಂಶ
2,000 ಹಾರಂಗಿ ವ್ಯಾಪ್ತಿಯ ನೀರಾವರಿ ಪ್ರದೇಶ

400 ಹೆಕ್ಟೇರ್ ಚಿಕ್ಲಿಹೊಳೆ ವ್ಯಾಪ್ತಿಯ ನೀರಾವರಿ ಪ್ರದೇಶ

ಶೇ 90 ಸಾಮಾನ್ಯ ವರ್ಗಕ್ಕೆ ಸಹಾಯಧನ

ಶೇ 80 ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಸಹಾಯಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT