ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಂಸ ನಿಷೇಧ ವಿವಾದ ದೇಶದ ಮಾಂಸ ಮಾರುಕಟ್ಟೆ ಮೇಲೆ ಬೀರಿರುವ ಪರಿಣಾಮ ಏನು?

Last Updated 22 ಜೂನ್ 2017, 10:02 IST
ಅಕ್ಷರ ಗಾತ್ರ

ನವದೆಹಲಿ: ಗೋಮಾಂಸ ನಿಷೇಧ ವಿವಾದ ಹಾಗೂ ಕೊಲ್ಲುವ ಉದ್ದೇಶಕ್ಕಾಗಿ ಜಾನುವಾರುಗಳನ್ನು ಮಾರಾಟ ಮಾಡುವುದರ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ನಿಯಮಗಳು ದೇಶದ ಮಾಂಸ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿವೆ. ಈ ವಿವಾದದಿಂದಾಗಿ ದೇಶದಲ್ಲಿ ಗೋಮಾಂಸಕ್ಕೆ ಬೇಡಿಕೆ ಕುಸಿದಿದೆ.

ಗೋಮಾಂಸ ನಿಷೇಧ ವಿವಾದದಿಂದ ದೇಶದಲ್ಲಿ ಗೋಮಾಂಸ ಮಾರಾಟವೇನೋ ಕಡಿಮೆಯಾಗಿದೆ. ಆದರೆ, ಗೋಮಾಂಸ ಬಿಟ್ಟು ಇತರೆ ಮಾಂಸ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಇತರೆ ಮಾಂಸದ ಬೆಲೆ ಏರಿಕೆಯಾಗಿದೆ.

ಗೋಮಾಂಸ ವಿವಾದದಿಂದ ಕುಕ್ಕುಟ ಉದ್ಯಮಕ್ಕೆ ಸದ್ಯ ಹೆಚ್ಚು ಲಾಭವಾಗಿದೆ. ಕೋಳಿ ಮಾಂಸದ ಸೇವನೆ ಶೇಕಡ 35ರಿಂದ 40ರಷ್ಟು ಹೆಚ್ಚಾಗಿದೆ. ಕೋಳಿ ಮಾಂಸದ ಬೆಲೆ ಶೇಕಡ 25ರಿಂದ 30ರಷ್ಟು ಏರಿಕೆಯಾಗಿದೆ ಎಂದು ಅಸೋಚಾಂ ವರದಿ ತಿಳಿಸಿದೆ.

2014ರ ಮೇ ತಿಂಗಳಿಂದ 2017ರ ಮೇ ವರೆಗೆ ಕುಕ್ಕುಟ ಉದ್ಯಮದ ವಹಿವಾಟಿನಲ್ಲಿ ಶೇಕಡ 22ರಷ್ಟು ಏರಿಕೆಯಾಗಿದೆ. ಆದರೆ, ಗೋವು, ಎಮ್ಮೆ ಮಾಂಸದ ಬಳಕೆ ಶೇಕಡ 3ರಷ್ಟು ಕುಸಿದಿದೆ ಎಂದು ವರದಿ ಹೇಳಿದೆ.

ದೇಶದಲ್ಲಿ ಗೋಮಾಂಸ ನಿಷೇಧ ವಿವಾದ ಹೆಚ್ಚಾದ ಬಳಿಕ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಕುಕ್ಕುಟ ಉದ್ಯಮದ ಸ್ಥಿತಿ ಸುಧಾರಿಸಿದೆ ಎಂದು ವರದಿ ತಿಳಿಸಿದೆ.

ಜೂನ್‌ 2013ರಿಂದ ಮೇ 2014ರ ನಡುವಿನ ಅವಧಿಯಲ್ಲಿ ಗೋಮಾಂಸದ ಬೆಲೆ ಶೇಕಡ 10ರಷ್ಟು ಹೆಚ್ಚಾಗಿತ್ತು. ಆ ಅವಧಿಯಲ್ಲಿ ಕೋಳಿ ಮಾಂಸದ ಬೆಲೆ ಶೇಕಡ 9ರಷ್ಟು ಕುಸಿತ ಕಂಡಿತ್ತು. 2015ರಲ್ಲಿ ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಗೋಮಾಂಸ ನಿಷೇಧ ವಿವಾದ ಹುಟ್ಟಿಕೊಂಡ ನಂತರದಲ್ಲಿ ಗೋಮಾಂಸ ಮಾರಾಟ ಹಾಗೂ ಬೆಲೆ ಹಂತ ಹಂತವಾಗಿ ಇಳಿಕೆ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೇವಲ ಕುಕ್ಕುಟ ಉದ್ಯಮಕ್ಕೆ ಮಾತ್ರವಲ್ಲ ಮಾಂಸ ಮಾರಾಟದ ನವೋದ್ಯಮಗಳಿಗೂ ಕೂಡಾ ಗೋಮಾಂಸ ನಿಷೇಧ ವಿವಾದದಿಂದ ಲಾಭವಾಗಿದೆ. ಕುರಿ, ಮೇಕೆ, ಮೀನು ಮಾಂಸ ಮಾರಾಟದ ನವೋದ್ಯಮಗಳ ಬೆಳವಣಿಗೆಗೆ ಸದ್ಯದ ವಾತಾವರಣ ಪೂರಕವಾಗಿದೆ.

‘ಗೋಮಾಂಸ ಮಾರಾಟ ನಿಷೇಧ ವಿವಾದದಿಂದ ಮಾಂಸಾಹಾರಿಗಳು ಗೋಮಾಂಸದ ಬದಲಿಗೆ ಇತರೆ ಮಾಂಸದ ಕಡೆಗೆ ಆಕರ್ಷಿತರಾಗಿದ್ದಾರೆ. ಕುರಿ, ಮೀನು, ಕೋಳಿ, ಮೇಕೆ ಮಾಂಸಕ್ಕೆ ಈಗ ಬೇಡಿಕೆ ಹೆಚ್ಚಾಗಿದೆ’ ಎನ್ನುತ್ತಾರೆ ತಮಿಳುನಾಡಿನ ಮಾಂಸ ಮಾರಾಟ ಕಂಪೆನಿ ‘ಟೆಂಡರ್‌ಕಟ್ಸ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶಾಂತ್‌ ಚಂದ್ರನ್‌.

ಮಾಂಸದ ಸಂಸ್ಕರಣೆ, ಪ್ಯಾಕೇಜ್‌ ಮತ್ತು ಮನೆ ಮನೆಗೆ ಮಾಂಸ ಪೂರೈಸುವ ಉದ್ಯಮಗಳ ಮೇಲೆ ಹೂಡಿಕೆ ಇತ್ತೀಚೆಗೆ ಹೆಚ್ಚಾಗುತ್ತದೆ. ಗೋಮಾಂಸ ನಿಷೇಧ ವಿವಾದಿಂದ ಹೂಡಿಕೆದಾರರು ಈಗ ಇತರೆ ಮಾಂಸ ಉತ್ಪಾದನೆಯ ಮಾರುಕಟ್ಟೆಯ ಮೇಲೆ ವಿಶೇಷ ಗಮನ ಹರಿಸುವಂತಾಗಿದೆ.

‘ಇತರೆ ಮಾಂಸದ ಮಾರಾಟ ಸದ್ಯಕ್ಕೆ ಹೆಚ್ಚಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಗೋಮಾಂಸದ ಪ್ರಮಾಣದಷ್ಟು ಇತರೆ ಮಾಂಸವನ್ನು ಪೂರೈಕೆ ಮಾಡಬಹುದೇ ಎಂಬುದರ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎನ್ನುತ್ತಾರೆ ‘ಲಿಶಿಯಸ್‌’ ಮಾಂಸ ಮಾರಾಟ ಕಂಪೆನಿಯ ಸಹ ಸಂಸ್ಥಾಪಕ ಅಭಯ್‌ ಹಂಜೂರ.

ಇದನ್ನೂ ಓದಿ...
ಹತ್ಯೆಗಾಗಿ ಜಾನುವಾರು ಮಾರಾಟಕ್ಕೆ ನಿರ್ಬಂಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT