ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಯವಿಟ್ಟು ಗಮನಿಸಿ’ ಇದು ಪದಕಿ ನಿರ್ದೇಶನದ ಚಿತ್ರ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ರೋಹಿತ್ ಪದಕಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ದಯವಿಟ್ಟು ಗಮನಿಸಿ’ ತೆರೆಗೆ ಬರಲು ಸಜ್ಜಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಈ ಸಿನಿಮಾದ ಹಾಡುಗಳ ಬಿಡುಗಡೆ ಬೆಂಗಳೂರಿನಲ್ಲಿ ಈ ವಾರ ನಡೆದಿದೆ. ಹಾಡುಗಳ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಹೇಳುವುದಕ್ಕೂ ಮೊದಲು, ಈ ಸಿನಿಮಾದ ನಿರ್ಮಾಪಕರ ಕುರಿತು ಕೆಲವು ಮಾತುಗಳನ್ನು ಹೇಳಬೇಕು.

‘ದಯವಿಟ್ಟು ಗಮನಿಸಿ’ ಚಿತ್ರದ ನಿರ್ಮಾಪಕರ ಹೆಸರು ಕೃಷ್ಣ ಸಾರ್ಥಕ್. ಇವರು ಕನ್ನಡ ಚಿತ್ರರಂಗದ ಅತಿ ಕಿರಿಯ ನಿರ್ಮಾಪಕರಲ್ಲಿ ಒಬ್ಬರು. ಕೃಷ್ಣ ಅವರಿಗೆ ಈಗ ಕೇವಲ 26 ವರ್ಷ ವಯಸ್ಸು! ಇವರು 2010ರಿಂದ ಸಿನಿಮಾ ಉದ್ಯಮದಲ್ಲಿ ಇದ್ದಾರೆ.

‘ದಯವಿಟ್ಟು ಗಮನಿಸಿ’ ಸಿನಿಮಾಕ್ಕೆ ಸಂಗೀತ ನೀಡಿದವರು ಅನೂಪ್ ಸೀಳಿನ್. ಸಿನಿಮಾದ ಹಾಡುಗಳ ‘ಲೈವ್ ಷೋ’ ನೀಡುವ ಮೂಲಕ ಪದಕಿ–ಸೀಳಿನ್ ಜೋಡಿ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ತುಸು ವಿಭಿನ್ನವಾಗಿ ನಡೆಸಿಕೊಟ್ಟಿತು.


ರೋಹಿತ್ ಪದಕಿ
‘ಸಿನಿಮಾದ ಕಥಾ ಹಂದರಕ್ಕೆ ಹೆಚ್ಚು ಆದ್ಯತೆ ಕೊಡುವ ನಿರ್ದೇಶಕರು ನನಗೆ ಸಿಕ್ಕಿರುವುದೇ ಒಂದು ಅದೃಷ್ಟ’ ಎನ್ನುತ್ತಲೇ ಸೀಳಿನ್ ಅವರು ಹಾಡುಗಳ ಲೈವ್ ಪ್ರದರ್ಶನ ನೀಡಿದರು. ಪಂಡಿತ್ ಪರಮೇಶ್ವರ ಹೆಗಡೆ ಅವರು ಪುರಂದರ ದಾಸರ ಹಾಡೊಂದನ್ನು ಈ ಚಿತ್ರದಲ್ಲಿ ಹಾಡಿದ್ದಾರೆ.

ಮೇಘನಾ ರಾಜ್, ಭಾವನಾ ರಾವ್, ರಘು ಮುಖರ್ಜಿ, ವಸಿಷ್ಠ ಸಿಂಹ, ಸಂಗೀತಾ ಭಟ್, ಸುಕೃತಾ ವಾಗ್ಳೆ ಮತ್ತು ಇತರರು ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ. ಭಾವನಾ ಮತ್ತು ರಘು ಅವರು ಇದರಲ್ಲಿ ಹತಾಶ ಪತಿ–ಪತ್ನಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ‘ಐ.ಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಬಹುತೇಕರು ಈ ಸಿನಿಮಾ ವೀಕ್ಷಿಸುತ್ತಾರೆ. ಅವರಲ್ಲಿ ಶೇಕಡ 95ರಷ್ಟು ಜನ, ನಮ್ಮ ಪಾತ್ರದ ಜೊತೆ ತಮ್ಮನ್ನೂ ಗುರುತಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ರಘು!

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡುವ ಸರದಿ ರೋಹಿತ್ ಪದಕಿ ಅವರದ್ದಾಗಿತ್ತು. ಮಾತನಾಡುತ್ತ ಅವರು ತುಸು ಭಾವುಕರಾದರು. ಕಣ್ಣೊರೆಸಿಕೊಳ್ಳುತ್ತಲೇ, ‘ನನ್ನ ತಂದೆ ತೀರಿಕೊಂಡಾಗ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರಲು ನನ್ನಲ್ಲಿ ಹಣವಿರಲಿಲ್ಲ.

ಆಗ ಒಬ್ಬ ಮುಸ್ಲಿಂ ವ್ಯಕ್ತಿ ನನಗೆ ಸಹಾಯ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದರು. ಅವರ ಹೆಸರು ನನಗೆ ಈಗ ನೆನಪಿಲ್ಲ. ಇಂಥ ವ್ಯಕ್ತಿಗಳ ಕುರಿತ ಕಥೆಯನ್ನು ಈ ಸಿನಿಮಾ ಹೊಂದಿದೆ’ ಎಂದರು. ಈ ಚಿತ್ರ ಜುಲೈನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.   


ಕೃಷ್ಣ ಸಾರ್ಥಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT