ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಗುಳು ನಗೆ’ಯ ಮೂರು ಮುಖಗಳು

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

‘ತಲೆಕೆಟ್ಟ ಭಟ್ಟ ಯಬಡಾ’ ಎಂದು ತಮ್ಮ ಕಾಲನ್ನು ತಾವೇ ಎಳೆದುಕೊಳ್ಳುವ ಯೋಗರಾಜ ಭಟ್ಟರು ಕನ್ನಡದ ಮುಖ್ಯ ನಿರ್ದೇಶಕರು. ಅಷ್ಟೇ ಅಲ್ಲ, ಇಂದಿನ ಆಧುನಿಕ ಪೀಳಿಗೆಯ ‘ಅಡ್ಡ- ನಾಡಿ’ ಮಿಡಿತಗಳನ್ನು ಸಮರ್ಥವಾಗಿ ಪದ್ಯವಾಗಿಸಿದ ಗೀತರಚನೆಕಾರರೂ ಹೌದು.

‘ಒಬ್ಳನ್ನೆ ಲವ್ ಮಾಡಿ ಆರಾಮಿರಿ; ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ’ ಎಂದು ಉಪದೇಶಿಸಿದ್ದ ಅವರೀಗ ನಾಲ್ಕು ಹುಡುಗಿಯರನ್ನಿಟ್ಟುಕೊಂಡು ‘ಮುಗುಳು ನಗೆ’ ಬೀರಲು ಸಿದ್ಧರಾಗಿದ್ದಾರೆ.

ತಾವು ನಗುತ್ತಲೇ ಪ್ರೇಕ್ಷಕರನ್ನು ಅಳಿಸಬಲ್ಲ ಗಣೇಶ್ ಕೂಡ ಈ ಪ್ರಯತ್ನದಲ್ಲಿ ಜತೆಯಾಗಿದ್ದಾರೆ. ‘ಗಾಳಿಪಟ’ದ ನಂತರ ಭಟ್ಟರು ಮತ್ತು ಗಣೇಶ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾ ‘ಮುಗುಳು ನಗೆ’. ಸಿನಿಮಾ ಮುಗಿಸಿದ ಖುಷಿಯಲ್ಲಿರುವ, ಯೋಗರಾಜ್‌ ಭಟ್‌, ಗಣೇಶ್‌ ಜತೆಗೆ ಈಗಾಗಲೇ ಸಿನಿಮಾ ನೋಡಿರುವ ಇವರಿಬ್ಬರ ಆಪ್ತಸ್ನೇಹಿತ ಸೂರಿ ಕೂಡ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅದನ್ನು ಅವರ ಮಾತುಗಳಲ್ಲಿಯೇ ಓದಿಕೊಳ್ಳಿ.

ಗಣೇಶನ ಪ್ರವರ
ಅವತ್ತು ಬೆಳಗಿನ ಜಾವ ಡಬ್ಬಿಂಗ್‌ ಮುಗಿಸಿ, ನಾನು ಭಟ್ಟರು ಇಬ್ಬರೂ ಸ್ಟುಡಿಯೊದಿಂದ ಆಚೆ ಬಂದ್ವಿ. ಇಬ್ಬರೂ ಏನೂ ಮಾತಾಡ್ಲಿಲ್ಲ. ಅಲ್ಲೇ ಪಕ್ಕದಲ್ಲಿದ್ದ ಕ್ಯಾಂಟೀನ್‌ಗೆ ಹೋಗಿ ಬೈ ಟು ಟೀ ತಗೊಂಡು ಪರಸ್ಪರ ಮುಖ ನೋಡ್ತಾನೇ ಹತ್ತು ನಿಮಿಷ ಕೂತಿದ್ವಿ. ನಾನು ಬಾಯ್ಬಿಟ್ಟೆ. ‘ಏನ್‌ ಭಟ್ರೆ.. ಏನ್‌ ಮಾಡ್ಬಿಟ್ಟಿದೀವಿ ನಾವು?’ ಭಟ್ರು ಎಂದಿನ ಟಿಪಿಕಲ್‌ ಸ್ಟೈಲಿನಲ್ಲಿ ‘ಏನೋ ಮಾಡಿದಿವಿ, ಹೋಗ್ಲಿ ಬಿಡಪ್ಪಾ’ ಅಂದ್ರು.

ನಾನು ಕೈಮುಗಿದು ಹೇಳಿದೆ, ‘ದಯವಿಟ್ಟು ಭಟ್ರೆ ಮುಂದಿನ ಸಲ ಇನ್ನೊಂಚೂರು ಸುಲಭ ಸ್ಕ್ರಿಪ್ಟ್‌ ಮಾಡಿ. ನಂಗೆ ಕಷ್ಟ ಆಗತ್ತೆ. ಬಡ್ಡಿಮಗಂದು ಆ್ಯಕ್ಟಿಂಗ್‌ ಮಾಡಬೇಕಾದ್ರೂ ಕಷ್ಟ ಆಗಿತ್ತು. ಈಗ ಡಬ್ಬಿಂಗ್‌ ಮಾಡುವಾಗ್ಲೂ ಕಷ್ಟ ಆಗ್ತಿದೆ’. ಅವರು ಖಳನಾಯಕನ ಹಾಗೆ ಗಹಗಹಿಸಿ ನಕ್ಕರು. ‘ಮುಗುಳು ನಗೆ’ ಸಿನಿಮಾ ಮುಗಿಸಿದಾಗ ನಮ್ಮ ಪರಿಸ್ಥಿತಿ ಹೀಗಿತ್ತು.

***
ಅದು ಬೆಳಗಿನ ಜಾವ ಆರು ಗಂಟೆ. ಶ್ರೀರಂಗಪಟ್ಟಣ ಸೇತುವೆ ಮೇಲೆ ನಿಲ್ಸಿ ಭಟ್ರು ಹೇಳಿದ್ರು, ‘ಗಣಪಾ, ನೀ ಅಲ್ಲಿಂದ ಒಬ್ನೆ ನಡ್ಕೊಂಡು ಬರ್ತಿಯಾ ಕಣೋ. ತುಂಬ ಬೇಜಾರಲ್ಲಿರಬೇಕು. ಆದರೆ ಕಣ್ಣಲ್ಲಿ ನೀರು ಬರಬಾರದು’. ನಾನು ಕಕ್ಕಾಬಿಕ್ಕಿಯಾದೆ. ಆದರೂ ತುಂಬ ಕಷ್ಟಪಟ್ಟು ನಟಿಸಿದೆ. ಈ ಥರದ ಅನೇಕ ಸನ್ನಿವೇಶಗಳು ‘ಮುಗುಳು ನಗೆ’ ಸಿನಿಮಾದಲ್ಲಿವೆ. ನಾನು ಮತ್ತು ಯೋಗರಾಜ ಭಟ್ಟರು ಇಬ್ಬರೂ ನಮ್ಮ ಇಮೇಜ್‌ನಿಂದ ಆಚೆ ಬಂದು ಹೊಸ ರೀತಿಯ– ತಾಜಾ ಸಿನಿಮಾ ಮಾಡಿದ್ದೇವೆ.

ನಮ್ಮಿಬ್ರಿಗೆ ಎಂಥ ಹೊಂದಾಣಿಕೆ ಇದೆ ಅಂದ್ರೆ ‘ಇದೆಂಥ ಕನೆಕ್ಷನ್ ಭಟ್ರೆ. ನಾವಿಬ್ರು ಗಂಡ ಹೆಂಡ್ತಿ ಆಗಿದ್ರೆ ಇಷ್ಟೊತ್ತಿಗೆ ನೂರು ಮಕ್ಕಳಾಗಿರೋರು’ ಅಂತ ನಾನು ತಮಾಷೆ ಮಾಡ್ತಿದ್ದೆ.

ಇದನ್ನು ಒಂದು ಫೀಲ್‌ ಗುಡ್‌ ಸಿನಿಮಾ ಅಂತ ಹೇಳೋದಾ, ಎಮೋಷನಲ್‌ ಸಿನಿಮಾ ಅಂತ ಹೇಳ್ಬೋದಾ? ನನ್ನ ಸಿನಿಮಾ ಕರಿಯರ್‌ನ ತುಂಬ ಒಳ್ಳೆಯ ಸಿನಿಮಾಗಳಲ್ಲಿ ‘ಮುಗುಳು ನಗೆ’ಯೂ ಒಂದು ಎಂದು ಹೆಮ್ಮೆಯಿಂದ ಹೇಳಿಕೊಳ್ತೀನಿ.

ಭಟ್ಟರ ಪ್ರವಚನ
ನನ್ನ ಗಣೇಶ್‌ ಕಾಂಬಿನೇಷನ್‌ನಲ್ಲಿ ಒಂಬತ್ತು ವರ್ಷಗಳ ನಂತರ ಬರುತ್ತಿರುವ ಸಿನಿಮಾ ಇದು. ನಾವಿಬ್ಬರೂ ಸ್ನೇಹಿತರು. ಒಟ್ಟಿಗೇ ಉದ್ಧಾರ ಆದವರು, ಒಟ್ಟಿಗೆ ಹಾಳಾದವರು ಹೀಗೆ ನಮ್ಮ ಚರಿತ್ರೆ ಇದೆ.

ಆದರೆ ಕ್ಯಾಮೆರಾ ಎದುರು ನಿಂತಾಗ ಅವನು ನಟ. ಆ್ಯಕ್ಷನ್‌ ಅಂದಕೂಡಲೇ ನಿಧಾನಕ್ಕೆ ಕ್ಯಾಮೆರಾದ ಪ್ಲಸ್‌ ಮಾರ್ಕ್‌ ಆವರಿಸಿಕೊಳ್ಳುತ್ತಾ ಹೋಗುತ್ತಾನೆ. ಅದನ್ನು ನೋಡುವುದೇ ಒಂದು ಸಂತೋಷ. ಹತ್ತು ವರ್ಷಗಳ ಹಿಂದೆ ಇದ್ದ ನಟನೆಯ ಹಸಿವು– ಹತ್ತು ಪಟ್ಟು ಹೆಚ್ಚಿದೆ. ನಟ ಅವನು. ಅಷ್ಟೆ. ಬೇರೆ ಮಾತೇ ಇಲ್ಲ.

ಮೊದಲಿನಿಂದಲೂ ಪಾತ್ರವರ್ಗದಲ್ಲಿದ್ದವರು ನಿಖಿತಾ. ನಂತರ ಆಶಿಕಾ ಕೂಡ ಸೇರಿಕೊಂಡರು. ತುಂಬ ಅದ್ಭುತವಾಗಿ ನಟಿಸಿದ್ದಾರೆ. ನಮ್ಮ ತಂಡದಲ್ಲಿದ್ದ ಇನ್ನೊಬ್ಬ ದೊಡ್ ಮನುಷ್ಯ ಅಂದ್ರೆ ನನ್ನ ಸಾರ್ವಕಾಲಿಕ ಆಪ್ತ ವಿ. ಹರಿಕೃಷ್ಣ. ನನ್ನ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಜಾಸ್ತಿ ಕಷ್ಟಪಟ್ಟಿದ್ದಾರೆ. ಎಂಟು ಮೆಲೋಡಿ ಹಾಡುಗಳ ಜತೆಗೆ ಇನ್ನೊಂದೆರಡು ನನ್ನ ಮತ್ತು ಹರಿಕೃಷ್ಣ ಅವರ ಮಸಾಲೆ ದಾಟಿಯಲ್ಲಿರುವಂಥ ಹಾಡುಗಳೂ ಇವೆ. 

ಮೂವತ್ತೆಂಟು ನಲ್ವತ್ತರ ಆಸುಪಾಸಿನಲ್ಲಿ ಗಂಡ್ಮಕ್ಳಿಗೆ ಸ್ವಲ್ಪ ಮೆಚ್ಯೂರಿಟಿ ಬರತ್ತಂತೆ. ಅಲ್ಲಿವರೆಗೆ ನಾವು ಪ್ರಬುದ್ಧರು ಅಂತ ನಾವು ಅಂದ್ಕೊಂಡಿರ್ತೀವಿ. ಆದ್ರೆ ಆಗಿರೋದಿಲ್ಲ. ನನಗೀಗ ನಲ್ವತ್ಮೂರರ ಅಕ್ಕಪಕ್ಕ. ಪ್ರಬುದ್ಧತೆ ಬರ್ತಿದೆ.

ಎಂದೆಂದೂ ಅಳುವೇ ಬರದ ಒಂದು ಮಗುವಿನಿಂದ ‘ಮುಗುಳು ನಗೆ’ ಸಿನಿಮಾ ಶುರುವಾಗುತ್ತದೆ. ಆ ಮಗುವೇ ಪುಲ್ಕೇಶ್‌ ಅಲಿಯಾಸ್‌ ಪುಲ್ಕು. ಚಿತ್ರದ ನಾಯಕ. ಅವನು ಯಾವಾಗ ಲವ್‌ ಫೇಲ್ಯೂರ್‌ ಆಗ್ತಾನೋ, ಹೆಣ್ಣು ನೋಡಲು ಹೋಗಿ ವಾಪಸ್‌ ಬರ್ತಾನೋ ಅಪ್ಪ ‘ನೀನು ಬರೀ ಪುಲಕೇಶಿ ಅಲ್ಲ ಕಣೋ, ಇಮ್ಮಡಿ ಪುಲಕೇಶಿ’ ಅಂತಿರ್‍ತಾರೆ.

ಹಲವು ಸ್ವತಂತ್ರ ಕಥೆಗಳ ಜತೆ ಸೇರಿ ಬೆಳೆಯುತ್ತಾ ಹೋಗುವ ತುಂಬ ಸಂಕೀರ್ಣವಾದ ಪಾತ್ರ ನಾಯಕನದು. ಆ ಆರೇಳು ಕಥೆಗಳು ಸೇರಿ ಅಂತಿಮವಾಗಿ ಅವನ ಒಂದು ಹನಿ ಕಣ್ಣೀರಾಗುತ್ತದೆ. ಅವನಿಗೆ ಜೀವಮಾನದಲ್ಲಿಯೇ ಅಳು ಬರುವುದಿಲ್ಲ. ಅದೊಂದು ಕಾಯಿಲೆ. ಕೊನೆಯಲ್ಲಿ ಒಂದು ಸಂತೋಷದ ಹನಿ ಬರುತ್ತದೆ. ಅದು ಸಿನಿಮಾ.

ಸೂರಿ ಹಿತವಚನ
ಇತ್ತೀಚೆಗೆ ಯೋಗರಾಜ ಭಟ್ಟರ ಟ್ರ್ಯಾಕ್‌ ಬದಲಾಗುತ್ತಿದೆ. ಅವರ ಸಿನಿಮಾಗಳಲ್ಲಿ ಮಾತು ಜಾಸ್ತಿಯಾಗ್ತಿದೆ. ಇದರಿಂದ ಅವರು ಏನು ಹೇಳಕ್ಕೆ ಹೊರಟಿದ್ದಾರೋ ಆ ಮೂಲ ಆಶಯವೇ ಮಸುಕಾಗ್ತಿವೆ ಅಂತ ನಮಗೂ ಅನಿಸಿತ್ತು. ‘ಮುಗುಳು ನಗೆ’ ಆ ಮಿತಿಗಳನ್ನು ಪೂರ್ತಿಯಾಗಿ ಮೀರಿದ ಸಿನಿಮಾ.

ಅಲ್ಲದೇ ಗಣೇಶ್‌ ಮತ್ತು ಭಟ್ಟರು ಮತ್ತೆ ಒಟ್ಟಾಗಿ ಸಿನಿಮಾ ಮಾಡ್ತಿದ್ದಾರೆ ಎಂದಾಗ ನನಗೇ ಭಯವಾಗಿತ್ತು. ಆದರೆ ಈ ಸಿನಿಮಾ ನೋಡಿದ ಮೇಲೆ ಅನಿಸಿದ್ದು ‘ಮುಂಗಾರು ಮಳೆ’ಯಲ್ಲಿ ಬರೀ ಮೊದಲ ಅಕ್ಷರ ‘ಮು’ ಅಷ್ಟನ್ನೇ ತೆಗೆದುಕೊಂಡಿರುವುದು. ಆ ಒಂದು ಅಕ್ಷರದ ಹೊರತಾಗಿ ಯಾವ ಹೋಲಿಕೆಯೂ ಇಲ್ಲ.  ನಗು, ಬದುಕಿನ ಮೂರು ಹಂತಗಳನ್ನು ಹೇಳಿರುವ ರೀತಿ, ಭಟ್ಟರ ಬರವಣಿಗೆ ಎಲ್ಲವೂ ತುಂಬ ಸಹಜವಾಗಿದೆ.

ಅದರಲ್ಲಿಯೂ ಗಣೇಶ್‌ ಅಭಿನಯ ನೋಡಿ ನಾನು ಶಾಕ್‌ ಆಗಿಬಿಟ್ಟೆ. ಅಷ್ಟು ಚೆನ್ನಾಗಿ ನಟಿಸಿದ್ದಾನೆ. ರೀರೆಕಾರ್ಡಿಂಗ್, ಯಾವುದೇ ಎಫೆಕ್ಟ್‌ಗಳಿಲ್ಲದೇ ಎರಡೂ ಕಾಲು ಗಂಟೆ ಸಿನಿಮಾ ನೋಡಿದ್ದೀನಿ. ಸಿನಿಮಾ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ ಅವರಿಬ್ಬರಿಂದ ತುಂಬ ಒಳ್ಳೆಯ ಕೆಲಸ ಆಗಿದೆ ಅಂತ ಮಾತ್ರ ಹೇಳಬಲ್ಲೆ. ಖಂಡಿತವಾಗಿ ಜನರಿಗೆ ಅದು ಇಷ್ಟವಾಗುತ್ತದೆ.

ಪ್ರೇಮಕಥೆಯನ್ನು ಹೇಳಿರುವ ರೀತಿ ತುಂಬ ಭಿನ್ನವಾಗಿದೆ. ಭಟ್ಟರು ಬೇರೆ ಎಲ್ಲೆಲ್ಲೋ ಹೋಗುವುದಕ್ಕಿಂತ ಇದೇ ರೀತಿಯ ಸಿನಿಮಾಗಳನ್ನು ಮಾಡಲಿ ಎನ್ನುವುದು ನನ್ನ ಆಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT