ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಣಿನ ಐದು ಕೋನಗಳು

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಅತ್ಯುತ್ತಮ ಛಾಯಾಗ್ರಾಹಕನಾಗಿ ಹೆಸರು ಗಳಿಸಬೇಕು ಎಂಬ ಮಹದಾಶಯದೊಂದಿಗೆ ಚಿತ್ರರಂಗಕ್ಕೆ ಕಾಲಿಡುವವರ ಸಂಖ್ಯೆ ದೊಡ್ಡದಿದೆ. ಆದರೆ ಅದಕ್ಕೆ ಬೇಕಾದ ಸಿದ್ಧತೆ ಅವರಲ್ಲಿ ಇರುವುದಿಲ್ಲ. ಛಾಯಾಗ್ರಹಣದ ಪ್ರಾಥಮಿಕ ಜ್ಞಾನ ಸಿನಿಮಾ ಮಾಧ್ಯಮಕ್ಕೆ ಏನೇನೂ ಸಾಲದು. ಅದು ಪರಿಣತಿಯನ್ನು ಬೇಡುತ್ತದೆ.

ಹೀಗೆ ಪ್ರಾಥಮಿಕ ಅರಿವು ಇರುವ, ಪರಿಣತರಾಗಲು ಬಯಸುವ ಹೊಸಬರಿಗೆ ತರಬೇತಿ ನೀಡುವ ಉದ್ದೇಶದಿಂದಲೇ ಪ್ರಾರಂಭಗೊಂಡಿದೆ ‘C5 ಫಿಲ್ಮ್‌ ಅಕಾಡೆಮಿ’. ಈ ಅಕಾಡೆಮಿ ಕನ್ನಡದ ಐದು ಬಹುಮುಖ್ಯ ಸಿನಿಮಾ ಛಾಯಾಗ್ರಾಹಕರ ಆಶಯದ ಫಲ.

ಈ ಐವರನ್ನು ಪ್ರತಿನಿಧಿಸುವ ಸಲುವಾಗಿಯೇ ಅದಕ್ಕೆ ‘C5’ ಎಂದು ಹೆಸರಿಡಲಾಗಿದೆ. ಸತ್ಯ ಹೆಗಡೆ, ಶೇಖರ ಚಂದ್ರ, ಸುಜ್ಞಾನ್‌, ರಾಕೇಶ್‌ ಮತ್ತು ನಂದಕಿಶೋರ್‌ ಈ ಪ್ರಯತ್ನದ ಹಿಂದಿರುವ ವ್ಯಕ್ತಿಗಳು. ಸದ್ಯಕ್ಕೆ ಈ ಅಕಾಡೆಮಿ ಆಸಕ್ತರಿಗೆ ಮೂರು ದಿನಗಳ ‘ಅಡ್ವಾನ್ಸ್ಡ್‌ ಸಿನಿಮಾ ಛಾಯಾಗ್ರಹಣ ಕಾರ್ಯಾಗಾರ’ಗಳನ್ನು ಆಯೋಜಿಸುತ್ತಿದೆ.

‘ತುಂಬ ಜನ ಹೊಸಬರು ನಿಮ್ಮ ಜತೆ ಸಹಾಯಕನಾಗಿ ಸೇರಿಕೊಳ್ಳುತ್ತೇನೆ ಎಂದು ಫೋನ್‌ ಮಾಡಿ ಕೇಳಿಕೊಳ್ಳುತ್ತಾರೆ. ಛಾಯಾಗ್ರಹಣದಲ್ಲಿ ಏನು ಮಾಡಿದ್ದೀಯಾ ಎಂದು ಕೇಳಿದರೆ ಏನನ್ನೂ ಮಾಡಿರುವುದಿಲ್ಲ. ಮೊದಮೊದಲು ನಾವೆಲ್ಲ ಅವರಿಗೆ ಛಾಯಾಗ್ರಹಣದ ತರಬೇತಿ ಪಡೆದುಕೊಂಡು ಬನ್ನಿ ಎನ್ನುತ್ತಿದ್ದೆವು. ಆದರೆ ಬೆಂಗಳೂರಿನಲ್ಲಿ ಒಳ್ಳೆಯ ಛಾಯಾಗ್ರಹಣ ಶಾಲೆ ಇಲ್ಲ.

ಮುಂಬೈ, ದೆಹಲಿಗೆ ಹೋದರೆ ವಿಪರೀತ ಹಣ ತೆರಬೇಕು. ಅದ್ಯಾವುದೂ ಸಾಧ್ಯವಾಗದೆ ಅವರು ಮತ್ತೆ ನಮ್ಮನ್ನೇ ಸಂಪರ್ಕಿಸಿ ‘ನಿಮ್ಮ ಜತೆ ಕೆಲಸ ಮಾಡುತ್ತಲೇ ಕಲಿತುಕೊಂಡು ಬಿಡ್ತೀನಿ ಸರ್‌’ ಎನ್ನುತ್ತಾರೆ. ಆದರೆ ಛಾಯಾಗ್ರಹಣದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ.

ಒಂದು ಮಟ್ಟಿನ ಪರಿಣತಿ ಇರಲೇಬೇಕು. ಆದ್ದರಿಂದ ನಾವೇ ಯಾಕೆ ಬಿಡುವಿನ ವೇಳೆಯಲ್ಲಿ ತರಬೇತಿ ನೀಡಬಾರದು ಆಲೋಚನೆ ಬಂತು’ ಎಂದು ‘C5 ಫಿಲ್ಮ್‌ ಅಕಾಡೆಮಿ’ ಶುರುಮಾಡಿದ ಹಿಂದಿನ ಕಾರಣಗಳನ್ನು ವಿವರಿಸುತ್ತಾರೆ ಸತ್ಯ ಹೆಗಡೆ.

ಆದರೆ ತುಂಬ ದೊಡ್ಡ ಪ್ರಮಾಣದಲ್ಲಿ ತರಬೇತಿ ಶಾಲೆಗಳನ್ನು ನಡೆಸುವಷ್ಟು ಬಂಡವಾಳ ಇರಲಿಲ್ಲ. ಮೊದಲಿಗೆ ವಾರಾಂತ್ಯದಲ್ಲಿ ಮೂರು ದಿನಗಳ ಕಾರ್ಯಾಗಾರ ಮಾಡಬಹುದು ಎಂದು ಆಲೋಚಿಸಲಾಯಿತು. ಆದರೆ ಮೂರು ದಿನಗಳಲ್ಲಿ ಛಾಯಾಗ್ರಹಣ ಕೌಶಲವನ್ನು ಪೂರ್ತಿಯಾಗಿ ಹೇಳಿಕೊಡಲು ಸಾಧ್ಯವಿಲ್ಲ ಎನ್ನುವುದು ಅವರಿಗೂ ಗೊತ್ತಿತ್ತು. ಆದ್ದರಿಂದ ಹಲವು ಚಾಪ್ಟರ್‌ಗಳ ರೀತಿಯಲ್ಲಿ ಪಠ್ಯಕ್ರಮವನ್ನು ರೂಪಿಸಿದರು.

ಈಗಾಗಲೇ C5 ಫಿಲ್ಮ್‌ ಅಕಾಡೆಮಿಯ ಮೊದಲನೇ ಕಾರ್ಯಾಗಾರ ಮುಗಿದಿದೆ. ಅದಕ್ಕೆ ಸಿಕ್ಕ ಸ್ಪಂದನವು ಈ ನಿಟ್ಟಿನಲ್ಲಿ ಇನ್ನಷ್ಟು ಮುನ್ನಡೆಯುವ ಉತ್ಸಾಹವನ್ನು ನೀಡಿದೆ.

‘ಮೊದಲ ಕಾರ್ಯಾಗಾರ ಹೇಗೆ ನಡೆಯಬಹುದು ಎಂಬ ಆತಂಕ ನಮಗೂ ಇದ್ದಿದ್ದರಿಂದ ಹೆಚ್ಚಿಗೆ ಪ್ರಚಾರ ಮಾಡುವ ಗೋಜಿಗೆ ಹೋಗಿರಲಿಲ್ಲ. ತೀರಾ ಆಸಕ್ತಿಯಿಂದ ನಮಗೆ ಸಂಪರ್ಕಿಸಿದ್ದ ಹನ್ನೆರಡು ಜನರನ್ನು ಇಟ್ಟುಕೊಂಡೇ ಮಾಡಿದ್ದೆವು. ಈಗ ಅದನ್ನು ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸಲು ಉದ್ದೇಶಿಸುತ್ತಿದ್ದೇವೆ’ ಎನ್ನುತ್ತಾರೆ ಸತ್ಯ ಹೆಗಡೆ.

ಪಠ್ಯಕ್ರಮ ಹೇಗಿದೆ?
ಈ ಕಾರ್ಯಾಗಾರದಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೇ ಹೆಚ್ಚು ಒತ್ತು ನೀಡಲಾಗುತ್ತದೆ. ಅಲ್ಲದೇ ಸದ್ಯ ಚಿತ್ರರಂಗದಲ್ಲಿ ಲಭ್ಯವಿರುವ ಅತ್ಯಾಧುನಿಕ ಪರಿಕರಗಳನ್ನೇ ಬಳಸಿಕೊಳ್ಳಲಾಗುತ್ತದೆ. ಅಲ್ಲದೇ ಸಾಧ್ಯವಾದಷ್ಟೂ ಸಿನಿಮಾ ಚಿತ್ರೀಕರಣದ ರಿಯಲ್‌ ಲೊಕೇಶನ್‌ಗಳಲ್ಲಿಯೇ ಕಾರ್ಯಾಗಾರ ಮಾಡಲಾಗುವುದು. ಒಳಾಂಗಣ ಮತ್ತು ಹೊರಾಂಗಣ ಎರಡೂ ವಿಧದ ಛಾಯಾಗ್ರಹಣಕ್ಕೂ ಒತ್ತು ನೀಡಲಾಗುತ್ತದೆ.

ಪಠ್ಯಕ್ರಮವನ್ನೂ ಹಲವು ಚಾಪ್ಟರ್‌ಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ. ಮೊದಲ ಚಾಪ್ಟರ್‌ನ ಪಠ್ಯಕ್ರಮದನ್ವಯ ಇನ್ನೊಂದಿಷ್ಟು ಕಾರ್ಯಾಗಾರಗಳನ್ನು ಆಯೋಜಿಸಿ ನಂತರ ಎರಡನೇ ಚಾಪ್ಟರ್‌ ಕಾರ್ಯಾಗಾರಗಳನ್ನು ಆಯೋಜಿಸುವ ಯೋಜನೆ ಅಕಾಡೆಮಿಗಿದೆ. ಇದು ಮೊದಲನೇ ಚಾಪ್ಟರ್‌ನಲ್ಲಿ ಕಲಿತ ಕೌಶಲಗಳ ಮುಂದುವರಿದ ಭಾಗವಾಗಿರುತ್ತದೆ.

ನಿಯಮಿತ ಪ್ರವೇಶ
ಪ್ರತಿ ಕಾರ್ಯಾಗಾರಕ್ಕೂ ಹನ್ನೆರಡರಿಂದ ಹದಿನೈದು ಜನರನ್ನಷ್ಟೇ ತೆಗೆದುಕೊಳ್ಳಲಾಗುತ್ತದೆ. ಅವರಲ್ಲಿಯೂ ಐದು ಜನರ ಮೂರು ಅಥವಾ ಆರು ಜನರ ಎರಡು ಗುಂಪುಗಳನ್ನು ಮಾಡಿಕೊಂಡು ಏಕಕಾಲದಲ್ಲಿ ತರಬೇತಿ ನೀಡಲಾಗುತ್ತದೆ. ಕಾರ್ಯಾಗಾರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತ್ಯೇಕವಾಗಿಯೇ ತರಬೇತಿ ನೀಡಲು ಸಾಧ್ಯವಾಗಬೇಕು ಎಂಬುದೇ ಈ ವಿಂಗಡನೆಯ ಉದ್ದೇಶ.

ವಿಸ್ತರಣೆಯ ಹಂಬಲ
ಸದ್ಯಕ್ಕೆ ಬೆಂಗಳೂರಿಗಷ್ಟೇ ಸೀಮಿತಗೊಂಡಿರುವ ‘C5 ಫಿಲ್ಮ್‌ ಅಕಾಡೆಮಿ’ಯನ್ನು ಕರ್ನಾಟಕದ ಬೇರೆ ಕಡೆಗಳಿಗೂ ವಿಸ್ತಿರಿಸುವ ಉದ್ದೇಶ ಇದೆ. ‘ಕರ್ನಾಟಕದ ಬೇರೆ ಕಡೆಗಳಲ್ಲಿ ಅಡ್ವಾಸ್ಡ್‌ ವರ್ಕ್‌ಶಾಪ್‌ ಅಲ್ಲದಿದ್ದರೂ ಸಿನಿಮಾ ಛಾಯಾಗ್ರಹಣದ ಪ್ರಾಥಮಿಕ ಕಾರ್ಯಾಗಾರಗಳನ್ನಾದರೂ ಮಾಡುವ ಉದ್ದೇಶ ನಮಗಿದೆ’ ಎಂದು ಸತ್ಯ ಹೇಳುತ್ತಾರೆ.

ಬೆಂಗಳೂರಿನಲ್ಲಿ ಛಾಯಾಗ್ರಹಣವನ್ನು ಕಲಿಸುವ ಸಮರ್ಥ ಶಾಲೆಗಳಿಲ್ಲ ಎಂಬ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ‘C5 ಫಿಲ್ಮ್‌ ಅಕಾಡೆಮಿ’ ಒಳ್ಳೆಯ ಹೆಜ್ಜೆ ಅನ್ನಬಹುದು. ಸದ್ಯಕ್ಕೆ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅನುಭವಿ ಛಾಯಾಗ್ರಾಹಕರೇ ಸಾರಥ್ಯದಲ್ಲಿರುವುದೂ ಈ ಅಕಾಡೆಮಿಯ ಬಗ್ಗೆ ಭರವಸೆ ಹುಟ್ಟಲು ಕಾರಣ. ಇದು ಮುಂದೆ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಇನ್ನಷ್ಟು ವೃತ್ತಿಪರಗೊಂಡರೆ ಚಿತ್ರರಂಗಕ್ಕೆ ಒಂದಿಷ್ಟು ಒಳ್ಳೆಯ ಛಾಯಾಗ್ರಾಹಕರನ್ನು ಕೊಡುಗೆಯಾಗಿ ಕೊಡಬಹುದು.

ಆಸಕ್ತರು ಹೀಗೆ ಸಂಪರ್ಕಿಸಬಹುದು
‘C5 ಫಿಲ್ಮ್‌ ಅಕಾಡೆಮಿ’ ಮತ್ತು ಅದು ಏರ್ಪಡಿಸುವ ಕಾರ್ಯಾಗಾರಗಳ ಎಲ್ಲ ಮಾಹಿತಿ c5filmacademy.com ಜಾಲತಾಣದಲ್ಲಿ ಸಿಗುತ್ತದೆ. ಪಠ್ಯಕ್ರಮದ ಬಗ್ಗೆಯೂ ಅಲ್ಲಿಯೇ ಮಾಹಿತಿ ನೀಡಲಾಗಿದೆ.

ಮೂರು ದಿನಗಳ ಕಾರ್ಯಾಗಾರಕ್ಕೆ ₹ 15,000 ಶುಲ್ಕ ಇರುತ್ತದೆ. ‘ನಾವು ಬಳಸುವ ಪರಿಕರಗಳ ಬಾಡಿಗೆ, ಸಂಪನ್ಮೂಲ ವ್ಯಕ್ತಿಗಳನ್ನೆಲ್ಲ ಗಣನೆಗೆ ತೆಗೆದುಕೊಂಡರೆ ಈ ಶುಲ್ಕ ತೀರಾ ಕಡಿಮೆಯೇ’ ಎನ್ನುತ್ತಾರೆ ಸತ್ಯ ಹೆಗಡೆ.

ಆಸಕ್ತರು ಜಾಲತಾಣದ ಮೂಲಕವೇ ಅರ್ಜಿ ಸಲ್ಲಿಸಬಹುದು. ಮೊದಲನೇ ಬ್ಯಾಚ್‌ನ ಕಾರ್ಯಗಾರದ ಕುರಿತಂತೇ ಅಕಾಡೆಮಿ ಒಂದು ವಿಡಿಯೊವನ್ನೂ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದೆ.
ಅದರ ಕೊಂಡಿ ಇಲ್ಲಿದೆ. goo.gl/02rtQw
ಹೆಚ್ಚಿನ ವಿವರಗಳಿಗೆ:  7829225588 / 7829227788
ಮಿಂಚಚೆ: c5filmacademy@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT