ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ ಕಪ್ಪು, ಅವಳು ಬಿಳುಪು...

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಕೆನೆ ಬಣ್ಣದ ನೀಳ ಕಾಲುಗಳು ಢಾಳಾಗಿ ಕಾಣುವಂತೆ ಕೆನೆ ಬಣ್ಣದ ಉಡುಗೆ ತೊಟ್ಟಿದ್ದ ಪೂಜಾ ಹೆಗ್ಡೆ ಪಿಂಕುಪಿಂಕು ಲಿಪ್‌ಸ್ಟಿಕ್‌ನಲ್ಲಿ ಬಾಯಗಲಿಸಿ ನಕ್ಕರೆ ಅಲ್ಲಲ್ಲಿ ಬೆಳದಿಂಗಳ ಮಲ್ಲಿಗೆ ಚೆಲ್ಲಿದಂತಾಗುತ್ತಿತ್ತು. ಅವರ ಉಡುಗೆಗೆ ಹೊಂದುವ ಹೊಳೆಯುವ ಕಪ್ಪು ಸೂಟ್‌ ತೊಟ್ಟಿದ್ದ ಅಲ್ಲು ಅರ್ಜುನ್‌ ನಗುವಿನಲ್ಲಿ ಅದೇ ಸೆಳೆತ.

ನಮ್ಮೂರಿನ ಶಾಂಗ್ರಿಲಾ ಹೋಟೆಲ್‌ಗೆ ಆಂಧ್ರದಿಂದ ಬಂದಿದ್ದ ಸ್ಟೈಲಿಷ್ ಸ್ಟಾರ್‌ ಅಲ್ಲು ಅರ್ಜುನ್‌ ಕನ್ನಡದಲ್ಲಿಯೇ ಮಾತು ಆರಂಭಿಸಿದಾಗ ನೆರೆದಿದ್ದವರ ಮನದಲ್ಲಿ ಅರೆಕ್ಷಣ ಪುಳಕ. ‘ವಾವ್, ಈತನ ಅಭಿಮಾನ ಸುಳ್ಳಲ್ಲ’ ಎಂಬುದು ಒಳಮನಸಿನ ಉದ್ಗಾರ.

ಶುಕ್ರವಾರ (ಜೂನ್ 23) ಬಿಡುಗಡೆಯಾಗಲಿರುವ ‘ದುವ್ವಾಡ ಜಗನ್ನಾಥಂ’ (ಡಿಜೆ) ಚಿತ್ರದ ಪ್ರಚಾರಕ್ಕಾಗಿ ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದಿದ್ದರು. ಇದೇ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿರುವ ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಜತೆಗಿದ್ದರು.

ಇನ್ನು ನಿರ್ದೇಶಕ ಸಹ ನಿರ್ಮಾಪಕ ಹರ್ಷಲ್‌ ‘ಮಾತು ಮೌನದ ಪ್ರತಿಮೆ’ ಎಂಬಂತೆ ಮೌನದ ಆಭರಣಕ್ಕೆ ಮಾತಿನ ಮೆರುಗು ತೊಡಿಸಿ ‘ಪ್ರೆಸ್‌ಮೀಟ್‌ನಲ್ಲಿ ನಾವಿದ್ದೇವೆ’ ಎಂದು ತೋರಿಸಿಕೊಂಡರು.

ಪಾರ್ವತಮ್ಮ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡು ಮಾತು ಆರಂಭಿಸಿದರು ಅಲ್ಲು ಅರ್ಜುನ್. ‘ಪಾರ್ವತಮ್ಮ ರಾಜ್‌ಕುಮಾರ್ ಅವರ ಅಗಲಿಕೆಯನ್ನು ಸಹಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ’ ಎಂಬುದು ಅವರ ಮಾತಿನ ಮೊದಲ ಸಾಲು.

ಈವರೆಗಿನ ಎಲ್ಲ ಸಿನಿಮಾಗಳಲ್ಲೂ ಹುಡುಗಿಯರ ಹಿಂದೆ ಸುತ್ತುವ, ಚಿತ್ರವಿಚಿತ್ರ ಕೇಶ ಹಾಗೂ ವಸ್ತ್ರವಿನ್ಯಾಸದಿಂದ ಗಮನ ಸೆಳೆದಿದ್ದ ಅಲ್ಲುಗೆ ಇದು 25ನೇ ಚಿತ್ರ. ಮಾತ್ರವಲ್ಲ ಅವರು ನಿರ್ವಹಿಸುವ ಪಾತ್ರದ ಕಾರಣದಿಂದಲೂ ಹೊಸ ಅನುಭವ. ಈ ಸಿನಿಮಾದಲ್ಲಿ ಅವರದು ಡ್ಯೂಯೆಲ್‌ ರೋಲ್.

ಅಲ್ಲು ಹೇಳಿದ ಪ್ರಕಾರ, ಅವರು ಸಂಪ್ರದಾಯಸ್ಥ ಬ್ರಾಹ್ಮಣ ಯುವಕ ಮತ್ತು ಮಾಸ್ ಯುವಕನ ಅವತಾರಗಳಲ್ಲಿ ಅಭಿಮಾನಿಗಳಿಗೆ ಸ್ಟೈಲಿಶ್‌ ಸ್ಟಾರ್ ಕಚಗುಳಿ ಇಡಲಿದ್ದಾರೆ. ಬ್ರಾಹ್ಮಣ ಯುವಕನ ಪಾತ್ರಕ್ಕಾಗಿ ಸಾಕಷ್ಟು ಹೋಂವರ್ಕ್‌ ಕೂಡಾ ಮಾಡಿಕೊಂಡಿದ್ದರಂತೆ.

‘ಬ್ರಾಹ್ಮಣರು ತೆಲುಗು ಮಾತನಾಡುವ ರೀತಿ ಕೊಂಚ ಭಿನ್ನ. ಅದನ್ನು ಅರಿತುಕೊಳ್ಳಲು ಮತ್ತು ವರ್ತನೆಗಳನ್ನು ಗಮನಿಸಲು ಬ್ರಾಹ್ಮಣ ಕುಟುಂಬಗಳನ್ನು ಸಂಪರ್ಕಿಸಿ, ಸಂಪ್ರದಾಯಗಳ ಬಗ್ಗೆಯೂ ತಿಳಿದುಕೊಂಡೆ. ನಂತರವಷ್ಟೇ ಚಿತ್ರೀಕರಣದಲ್ಲಿ ತೊಡಗಿಸಿಕೊಂಡೆ’ ಎಂದು ಸಿದ್ಧತೆಯ ಇಣುಕುನೋಟ ನೀಡುವ ಮೂಲಕ ಚಿತ್ರದ ಬಗೆಗಿನ ನಿರೀಕ್ಷೆಯನ್ನೂ ಅಲ್ಲು ಹೆಚ್ಚಿಸಿದರು.

ನಾಯಕಿ ಪೂಜಾ ಹೆಗ್ಡೆ ಬಗ್ಗೆ ಅಲ್ಲು ಮೆಚ್ಚುಗೆ ಮಾತನಾಡಿದರು. ‘ಇವರ ನಗು ಎಷ್ಟು ಚಂದ ಅಲ್ವಾ? ಇವರ ಗಾಂಭೀರ್ಯ ನನಗೆ ತುಂಬಾ ಇಷ್ಟವಾಯಿತು. ಸಿನಿರಂಗದಲ್ಲಿ ಪೂಜಾ ಎತ್ತರಕ್ಕೇರಬೇಕು’ ಎಂದು ಶುಭ ಹಾರೈಸಿದರು.

‘ಯುವತಿಯರ ನೆಚ್ಚಿನ ನಟ’ನ ಮೆಚ್ಚುಗೆಯ ಮಾತು ಕೇಳಿ ನಸುನಾಚಿ ಮೈಕ್‌ ಹಿಡಿದರು ಪೂಜಾ. ಕತ್ತು ಕೊಂಕಿಸುತ್ತಾ, ಮಾತು ಆರಂಭಿಸಿದಾಗ ಕೂದಲನ್ನು ಸುರುಳಿ ಸುತ್ತಿದ್ದ ಅವರ ಕೇಶರಾಶಿ ಲಯಬದ್ಧವಾಗಿ, ಅಷ್ಟೇ ಮೋಹಕವಾಗಿ ಏರಿಳಿಯುತ್ತಿತ್ತು. ಬೆಳ್ಳಿ ಬಣ್ಣದ ಲೇಪನವಿದ್ದ ಹೈಲೀಲ್ಡ್‌ ಕಾಲಿನಲ್ಲಿ ಕಪ್ಪು ಚೈನ್ ಆಗಾಗ ಇಣುಕಿ ತನ್ನ ಅಸ್ತಿತ್ವ ಸಾಬೀತುಪಡಿಸುತ್ತಿತ್ತು.

ಕನ್ನಡ ಪದಗಳನ್ನು ತಡಕಾಡಿ ಸೋತರಾದರೂ, ‘ನಾನು ಕನ್ನಡದ ಹುಡುಗಿ. ಮತ್ತೆ ಕರ್ನಾಟಕಕ್ಕೆ ಬಂದ ಖುಷಿಯಲ್ಲಿದ್ದೇನೆ. ಕನ್ನಡ ಅರ್ಥವಾಗುತ್ತೆ ಆದರೆ ಸರಿಯಾಗಿ ಮಾತನಾಡಲು ಬರುವುದಿಲ್ಲವೆಂದು’ ಮನದ ಮಾತು ಹೇಳಿಕೊಂಡರು.

ಅಲ್ಲು ಅರ್ಜುನ್ ಅವರನ್ನು ಹೊಗಳುವ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ‘ಆ್ಯಕ್ಟಿಂಗ್, ಡಾನ್ಸ್‌ನಲ್ಲಿ ಅಲ್ಲುಗೆ ಅಲ್ಲುನೇ ಸಾಟಿ. ಡಿಜೆ ಚಿತ್ರ ಅವರು ಈವರೆಗೆ ನಟಿಸಿದ ಚಿತ್ರಗಳಿಗಿಂತ ಭಿನ್ನ. ಇದರಲ್ಲಿ ನನ್ನದು ಫ್ಯಾಷನ್ ಡಿಸೈನರ್ ಪಾತ್ರ. ಹೀಗಾಗಿ ಲುಕ್‌ನಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲು ಅವಕಾಶ ದೊರೆಯಿತು. ಅಲ್ಲು ಜೊತೆ ಡಾನ್ಸ್‌ ಮಾಡಲು ಸಖತ್ ಕಷ್ಟ ಆಯ್ತು’ ಎಂದು ಹೆಮ್ಮೆಪಟ್ಟರು. ಸಹ ನಿರ್ಮಾಪಕ ಹರ್ಷಲ್ ಮೌನ ಮುರಿಯಲಿಲ್ಲ.

ಒಳ್ಳೇ ಸಿನಿಮಾಗಳು ಗೆಲ್ಲಲಿ
ಅಲ್ಲು ಅರ್ಜುನ್‌ ಕೇವಲ ಸ್ಟೈಲಿಶ್‌ ಸ್ಟಾರ್ ಮಾತ್ರವೇ ಅಲ್ಲ. ವಿಭಿನ್ನವಾಗಿ ಯೋಚಿಸುವ ಸಾಮರ್ಥ್ಯ ಇರುವವರು ಎಂಬುದಕ್ಕೂ ಸುದ್ದಿಗೋಷ್ಠಿ ಸಾಕ್ಷಿಯಾಯಿತು.

ಡಿಜೆ ಚಿತ್ರದ ಜತೆಜತೆಗೇ ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್‌ಲೈಟ್’ ಸಹ ಬಿಡುಗಡೆಯಾಗುತ್ತಿದೆ. ಇಡೀ ದೇಶದಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ‘ಟ್ಯೂಬ್‌ಲೈಟ್’ ವಿಚಾರ ಪ್ರಸ್ತಾಪಿಸಿದಾಗ ಅಲ್ಲು ಅರ್ಜುನ್ ತುಸುವೂ ವಿಚಲಿತರಾಗಲಿಲ್ಲ.

‘ಎಲ್ಲ ಉತ್ತಮ ಚಿತ್ರಗಳೂ ಗೆಲ್ಲಬೇಕು. ಚೆನ್ನಾಗಿರುವ ಸಿನಿಮಾಗಳನ್ನು ಜನರು ನೋಡಿಯೇ ನೋಡುತ್ತಾರೆ. ಎಲ್ಲ ಒಳ್ಳೆಯ ಚಿತ್ರಗಳು ಗೆಲ್ಲಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT