ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷಾಟನೆ ‘ದೇಶ ವಿದೇಶ’

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಕೆಲವು ದೇಶಗಳು ಅವುಗಳು ಪ್ರಗತಿ ಹೊಂದಿರುವುದಕ್ಕಿಂತ ಹೆಚ್ಚಾಗಿ ದೊಡ್ಡಮಟ್ಟದಲ್ಲಿ ಬಿಂಬಿತವಾಗುತ್ತವೆ. ಕಾರಣ, ಅಲ್ಲಿನ ಕೈಗಾರಿಕಾ ಮತ್ತು ತಾಂತ್ರಿಕ ಅಭಿವೃದ್ಧಿ. ಈ ಅಭಿವೃದ್ಧಿ ಹೊಂದಿರುವ ಅಥವಾ ಹೊಂದುತ್ತಿರುವ ದೇಶಗಳನ್ನು ನೋಡಿ ಬಡತನ ರೇಖೆಯಲ್ಲಿರುವ ದೇಶಗಳು ತಮ್ಮನ್ನು ಆ ದೇಶಗಳಿಗೆ ಹೋಲಿಸಿಕೊಳ್ಳುವುದು, ಕೀಳರಿಮೆ ಬೆಳೆಸಿಕೊಳ್ಳುವುದು ಹಾಗೂ ಪೈಪೋಟಿಗೆ ನಿಲ್ಲಲು ಪ್ರಯತ್ನಿಸುವುದು ಸಾಮಾನ್ಯ. ಆದರೆ ದೇಶಗಳು ಎಷ್ಟೇ ಮುಂದುವರೆದರೂ ಬಡತನ ಮತ್ತು ಅದಕ್ಕೆ ಅಂಟಿದ ಭಿಕ್ಷಾಟನೆ ಎಲ್ಲಾ ಕಡೆ ಕಂಡುಬರುವುದು ವಿಪರ್ಯಾಸ.

ಈಗ ನಮ್ಮ ಘನ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ ಇತ್ಯಾದಿಗಳ ನಂತರ ಭಿಕ್ಷಾಟನಾ ಕಾಯಿದೆಯತ್ತ ಕಣ್ಣು ಹಾಯಿಸಿ ಭಿಕ್ಷುಕ ಮುಕ್ತ ಕರ್ನಾಟಕದತ್ತ ಗಮನ ಹರಿಸುತ್ತಿರುವುದು ಸ್ವಾಗತಾರ್ಹ. ಇದಕ್ಕಾಗಿ ಆಮಿಷಗಳು ಒಂದೇ? ಎರಡೇ? ಊಟ, ವಸತಿ ಬಟ್ಟೆಬರೆ ಇತ್ಯಾದಿಗಳನ್ನು ಕೇಳಿಯೇ ಭಿಕ್ಷಾಟನೆ ನಿಲ್ಲಿಸುವಷ್ಟು...

ನಮ್ಮ ದೇಶದ ಯಾವುದೇ ಭಾಗದಲ್ಲೂ ಭಿಕ್ಷಾಟನೆಗೆ ವಯಸ್ಸಿನ ಅಂತರವಿಲ್ಲ. ವಯಸ್ಸಿನಲ್ಲಿ ಚಿಕ್ಕವರಾದರೂ ಅಂಗವಿಕಲತೆ, ಬಡತನ, ಭಿಕ್ಷೆ ಬೇಡುವಂತೆ ಪ್ರೇರೇಪಿಸುತ್ತದೆ. ವಿದ್ಯೆಯಿಲ್ಲದೆ, ಉದ್ಯೋಗವಿಲ್ಲದೆ, ಅಪ್ಪ, ಅಮ್ಮಂದಿರಿಂದ ತಿರಸ್ಕೃತರಾದ ಮಕ್ಕಳು ಅಥವಾ ಕುಡುಕ ಅಪ್ಪನಿಗಾಗಿ ಭಿಕ್ಷೆ ಬೇಡಿಯಾದರೂ ಅಮ್ಮನಿಗೆ ಸಹಾಯ ಮಾಡುವ ಮಕ್ಕಳು, ವೃದ್ಧಾಪ್ಯದಲ್ಲಿ ಬರಿಗೈ ಮಾಡಿಕೊಂಡು ಹೊಟ್ಟೆಪಾಡಿಗೆ ಭಿಕ್ಷೆ ಬೇಡುವ ಹಿರಿಯನಾಗರಿಕರು. ಇದಲ್ಲದೆ ಮಕ್ಕಳನ್ನು ಕದ್ದು ಅವರನ್ನು ಅಂಗವಿಕಲರನ್ನಾಗಿ ಮಾಡಿ ಅವರಿಂದ ಭಿಕ್ಷೆ ಬೇಡಿಸಿ ತಮ್ಮ ಜೇಬು ತುಂಬಿಸಿಕೊಳ್ಳುವ ದಂಧೆಗಳಿರುವುದಂತೂ ಎಲ್ಲರಿಗೂ ತಿಳಿದ ವಿಷಯ. ಒಂದೇ ನಾಣ್ಯದ ಎರಡು ಮುಖಗಳೇ ಬಡತನ ಮತ್ತು ಭಿಕ್ಷಾಟನೆ.

ವಿದೇಶಗಳಲ್ಲಿ ಭಿಕ್ಷಾಟನೆ ಇದೆಯೇ? ಅಲ್ಲಿ ಹೇಗೆ ನಡೆಯುತ್ತದೆ ಎಂಬುದರ ಕಡೆಗೆ ಪಕ್ಷಿನೋಟ ಹರಿಸಬಹುದು. ಅಮೆರಿಕದ ಷಿಕಾಗೋದ  ಡೌನ್‌ಟೌನ್‌ ಎಂಬುದು ಅತ್ಯಂತ ಹಳೆಯ ಬಡಾವಣೆ. ಇಲ್ಲಿ ಎಲ್ಲಾ ಕಟ್ಟಡಗಳೂ ಆಕರ್ಷಕ. ಮತ್ತೊಮ್ಮೆ ನಿಂತು ನೋಡಬೇಕೆನಿಸುವ ಹಳೆಯ ಕಟ್ಟಡ ಅಂದಿನ ವೃತ್ತಪತ್ರಿಕೆಯ ಕಾರ್ಯಾಲಯ. ನಂತರದ ಆಕರ್ಷಣೆ ಸುಮಾರು 95–98 ಅಂತಸ್ತು ಇರುವ ಜಾನ್‌ ಹ್ಯಾನ್‌ ಕಾಕ್‌ ಕಟ್ಟಡ. ಇದರಲ್ಲಿ ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು, ವಸತಿ ಗೃಹಗಳು... ಜೊತೆಗೆ  ಮನರಂಜನೆಗೆ ಏನುಂಟು ಏನಿಲ್ಲ? ಇವುಗಳೆಲ್ಲವನ್ನೂ ನಿಧಾನವಾಗಿ ನೋಡಿ ನಂತರ ರಸ್ತೆಯ ಎರಡೂ ಬದಿ ಗಮನ ಹರಿಸುತ್ತಾ ಹೋದರೆ ನಾವು ನೋಡಿದ್ದು ವಿವಿಧ ರೀತಿಯ ಭಿಕ್ಷುಕರನ್ನು.  ‘I am homeless help me’ (ಮನೆಯಿಲ್ಲ ಸಹಾಯಮಾಡಿ) ಎಂದೋ  ‘I am poor, help me’ ಎಂದೋ ನಾನಾ ರೀತಿಯ ಫಲಕಗಳನ್ನು ಕೆಲವರು ಕತ್ತಿಗೆ ನೇತು ಹಾಕಿಕೊಂಡು ಕುಳಿತವರು ಕಾಣಸಿಗುತ್ತಾರೆ. ಕೆಲವರು ಆಯಾಸಗೊಂಡು ಮಲಗಿರುತ್ತಿದ್ದರು. ಈ ರೀತಿಯ ಫಲಕಗಳು ಇವರ ತಲೆ ಬದಿಯಲ್ಲಿರುತ್ತವೆ. ಎಡಬಲಗಳ ಎರಡೂ ಮುಖ್ಯ ರಸ್ತೆಗಳ ಮಧ್ಯೆ ಇರುವ ಜಾಗವೇ ಇವರು ಬೇಡುವ ಸ್ಥಳ. ಇವರುಗಳ್ಯಾರೂ ನಿಮ್ಮನ್ನು ಏನೂ ಕೇಳುವುದಿಲ್ಲ, ಗೋಗರೆಯುವುದಿಲ್ಲ. ಅವರುಗಳ ಮುಂದೆ ಒಂದು ಲೋಟ ಅಥವಾ ತಟ್ಟೆ. ನಿಮಗೆ ಕೊಡಬೇಕೆನಿಸಿದರೆ ಅಲ್ಲಿ ಹಣ ಹಾಕಿ. ಹಾಗೇ ಮುಂದೆ ನಡೆದರೆ ಮೈಗೆಲ್ಲಾ ಬಣ್ಣ ಬಳಿದುಕೊಂಡು ಮಿಸುಕಾಡದೆ ನಿಂತಿರುತ್ತಾರೆ ಇನ್ನೊಂದು ರೀತಿಯ ಭಿಕ್ಷುಕರು. ಇವರು ಕೂಡಾ ಏನನ್ನೂ ಕೇಳುವುದಿಲ್ಲ. ಇವರ ಮುಂದೆಯೂ ಒಂದು ತಟ್ಟೆ ಅಥವಾ ಹಾಸಿದ ಟವೆಲ್‌. ಇನ್ನು ಕೆಲವು ಕಡೆ ಯಾವುದೋ ಅತ್ಯಂತ ಹಳೇ ಆಂಗ್ಲ ಸಿನಿಮಾದ ರೆಕಾರ್ಡ್‌, ಆ ಹಾಡಿಗೆ ಅವರ ಮುಂದೆ ನೃತ್ಯ ಮಾಡಿ ತಟ್ಟೆಗೆ ಹಣ ಹಾಕುತ್ತಾರೆ ಜನ. ಹತ್ತಿರದಲ್ಲೇ ಅಥವಾ ಅಲ್ಲಲ್ಲೇ ಓಡಾಡುವ ಪೋಲಿಸರು ಇವರ ಮೇಲೆ ರೇಗುವುದಿಲ್ಲ, ಆ ಸ್ಥಳಗಳಿಂದ ಎಬ್ಬಿಸುವುದಿಲ್ಲ.

ಅಲ್ಲಿನ ಸರ್ಕಾರ ಈ ನಿರಾಶ್ರಿತರಿಗಾಗಿಯೇ ಆಶ್ರಯ ಮನೆಗಳನ್ನು ತೆರೆದಿದೆ. ಈ ಆಶ್ರಯ ಸ್ಥಳಗಳಲ್ಲಿ ಸುಮಾರು 250 ರಿಂದ 300 ಹಾಸಿಗೆ ಹೊದಿಕೆ ಮಂಚಗಳ ವ್ಯವಸ್ಥೆ ಇರುತ್ತದೆ. ಈ ನಿರಾಶ್ರಿತರು ಅಲ್ಲಿ ತಲಪಲು ಸಮಯದ ನಿರ್ಬಂಧವಿದೆ. ಸಾಯಂಕಾಲ ಗೊತ್ತುಪಡಿಸಿದ ಸಮಯದೊಳಗೆ ಆ ಸ್ಥಳದಲ್ಲಿ ಇರದಿದ್ದರೆ ಮಲಗಲು ಸ್ಥಳವಿಲ್ಲ. ಒಂದು ರೀತಿಯಲ್ಲಿ ಮೊದಲು ಬಂದವರಿಗೆ ಆದ್ಯತೆ.

ನ್ಯೂಯಾರ್ಕ್‌ನಲ್ಲಿನ ವಿಶ್ವ ವ್ಯಾಪಾರ ಕೇಂದ್ರದ (World Trade Centre) ಅವಳಿ ಗೋಪುರಗಳನ್ನು ವೀಕ್ಷಿಸಲು ಹೊರಟಾಗ ರಸ್ತೆ ಬದಿಯಲ್ಲಿ ನಾನಾ ರೀತಿಯ ಭಿಕ್ಷುಕರನ್ನು ಕಂಡೆವು. ಒಬ್ಬ ವ್ಯಕ್ತಿ ಕೈಯಲ್ಲಿ ಗಿಟಾರ್‌ ಹಿಡಿದು ವೀಕ್ಷಕರನ್ನು ಗಮನಿಸುತ್ತಿದ್ದನು. ನಮ್ಮನ್ನು ನೋಡಿದ ಕೂಡಲೇ ಅವನ ಗಿಟಾರ್‌ನಿಂದ ಹೊರಟಿದ್ದು ನಮ್ಮ ರಾಷ್ಟ್ರಗೀತೆ ‘ಜನಗಣ ಮನ’ ದೇಶ ಬಿಟ್ಟು ಮೂರು ತಿಂಗಳ ನಂತರ ಆಲಿಸಿದ ರಾಷ್ಟ್ರಗೀತೆಗೆ ಅಲ್ಲೇ ನಿಂತು ಗೌರವಸಲ್ಲಿಸಿ ಅವನ ಮುಂದಿದ್ದ ಡಬ್ಬಿಗೆ ಒಂದು ಡಾಲರ್‌ ಹಾಕಿ ಮುಂದುವರಿದೆವು. ಜನರ ಮುಖ ನೋಡಿ ಆ ದೇಶದ ರಾಷ್ಟ್ರಗೀತೆಯನ್ನು ನುಡಿಸಿ ಹಣ ಸಂಪಾದಿಸುವುದೂ ಒಂದು ಕಲೆ ಎನಿಸದಿರಲಿಲ್ಲ.

ವಿದೇಶಗಳಲ್ಲಿ ಮಾಲ್‌ಗಳ ಮುಂದೆ, ಜನ ಜಂಗುಳಿ ಪ್ರದೇಶಗಳು, ಸಿನಿಮಾ ಥೀಯೆಟರ್‌ಗಳು ಮುಂತಾದೆಡೆ ಎಲ್ಲೂ ಭಿಕ್ಷಕರನ್ನು ನಾವು ಕಾಣುವುದಿಲ್ಲ. ಜಪಾನ್‌ ಮುಂತಾದ ಕಡೆಗಳಲ್ಲಿ ಖಿನ್ನತೆ, ಒಂಟಿತನ ಮುಂತಾದುವುಗಳಿಂದಾಗಿ ಸ್ನೇಹ ಹಸ್ತಕ್ಕಾಗಿ ಜನರು ತಮ್ಮತ್ತ ನೋಡಲಿ ಎಂದೇ ಭಿಕ್ಷೆ ಬೇಡುವುದು ಕಳ್ಳತನ ಮಾಡುವುದೂ ಉಂಟು ಎನ್ನಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಿಕ್ಷಾಟನೆ ನಡೆಯುವುದು ಕೇವಲ ಹಿರಿಯರಿಂದ ಮಾತ್ರ. ಅಮೆರಿಕದಲ್ಲಿ ಮಕ್ಕಳು ದೇಶದ ಆಸ್ತಿ. ಭಿಕ್ಷೆ ಬೇಡುವ ಮಕ್ಕಳನ್ನು ನೀವು ಕಾಣಲಾರಿರಿ.

ಸಮಾಜದಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಕೇವಲ ಭಿಕ್ಷುಕರಿಗೆ ಊಟ, ವಸತಿ ಕಲ್ಪಿಸುವುದರಿಂದ ಅವರುಗಳನ್ನು ಸೋಮಾರಿಗಳನ್ನಾಗಿಸಲು  ಉತ್ತೇಜನ ನೀಡಿದಂತಾಗುತ್ತದೆ. ಅಶಕ್ತರಿಗೆ, ಕೈಲಾಗದ ಹಿರಿಯನಾಗರಿಕರಿಗೆ ಮಾತ್ರ ಸೌಲಭ್ಯಗಳನ್ನು ಒದಗಿಸುವಂತಾಗಬೇಕು. ಸಮಾಜ ಬದಲಾವಣೆಗೆ ಆಸಕ್ತರಿಂದ ಸಲಹೆಗಳನ್ನು ಸ್ವೀಕರಿಸಿದರೆ ಬಡತನ, ಭಿಕ್ಷಾಟನೆ ಈ ಎರಡೂ ಸಮಸ್ಯೆಗಳ ನಿರ್ಮೂಲನೆ ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT