ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಮಸ್ಯೆಗಳೇ ಬೇರೆ, ಸಾಲ ಮನ್ನಾ ಪರಿಹಾರವಲ್ಲ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಎಲ್ಲ ಕಡೆಯಿಂದಲೂ ಬಂದ ಒತ್ತಡಗಳಿಗೆ ಮಣಿದು, ಸಾಕಷ್ಟು ಅಳೆದೂ ತೂಗಿ ಸಿದ್ದರಾಮಯ್ಯನವರ ಸರ್ಕಾರ ಕೊನೆಗೂ ರೈತರ ಬೆಳೆ ಸಾಲ ಮನ್ನಾ ಮಾಡಿದೆ. ಅದಕ್ಕೊಂದಿಷ್ಟು ಷರತ್ತುಗಳೂ ಇವೆ. ಬಾಕಿ ಸಾಲದ ಮೊತ್ತ ಎಷ್ಟೇ ಇದ್ದರೂ ಗರಿಷ್ಠ ₹ 50 ಸಾವಿರ ಮಾತ್ರ ಮನ್ನಾ ಆಗುತ್ತದೆ. ಇದೇ ತಿಂಗಳು 20ರ ವರೆಗೆ ಬಾಕಿ ಇರುವ ಸಾಲಕ್ಕೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ.  ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲ ಮಾತ್ರ  ಮನ್ನಾ ಆಗುತ್ತದೆ.  ಇದರಿಂದ 22 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ಬೊಕ್ಕಸದ ಮೇಲೆ  ₹ 8165 ಕೋಟಿ ಹೊರೆ ಬೀಳಲಿದೆ. ರಾಜಕೀಯ ಲಾಭದ ದೃಷ್ಟಿಯಿಂದ  ಸಾಲ ಮನ್ನಾ ಮಾಡುವುದು ಮುಖ್ಯಮಂತ್ರಿಗೆ  ಅನಿವಾರ್ಯವೇ ಆಗಿತ್ತು. ಏಕೆಂದರೆ, ಈಗಾಗಲೇ  ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್‌ ಸರ್ಕಾರಗಳು ರೈತರ  ಸಾಲ ಮನ್ನಾ ಘೋಷಿಸಿವೆ. ರಾಜ್ಯ ಬಿಜೆಪಿ ಕೂಡ ಇದನ್ನೊಂದು ದೊಡ್ಡ ರಾಜಕೀಯ ವಿಷಯ ಮಾಡಿದೆ. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ಸರ್ಕಾರವನ್ನು ಹಣಿಯುವ ಯಾವುದೇ ಅವಕಾಶವನ್ನೂ ಅದು ಬಿಟ್ಟು ಕೊಡುತ್ತಿಲ್ಲ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಬೇಕಾಗಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೂ ಈಚೆಗೆ ರಾಜ್ಯಕ್ಕೆ ಬಂದಾಗ, ‘ರೈತರಿಗೆ ನೆರವಾಗಿ’ ಎಂದು ಸೂಚನೆ ನೀಡಿದ್ದರು. ಸರಿಸುಮಾರು ಮೂರು ವರ್ಷಗಳಿಂದಲೂ ಬರಗಾಲ  ಇದೆ. ರೈತರು ದಿನಕಳೆದಂತೆ ಹತಾಶರಾಗುತ್ತಿದ್ದಾರೆ. ಇವನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡೇ ಮುಖ್ಯಮಂತ್ರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಸಾಲ ಮನ್ನಾಕ್ಕೆ ಆಗುವ ಹೊರೆಯನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು; ಕೇಂದ್ರದಿಂದ ಬಿಡಿಗಾಸೂ ನೆರವು ಕೊಡುವುದಿಲ್ಲ’ ಎಂಬ ನಿಲುವು ತಳೆದ ಕೇಂದ್ರ ಸರ್ಕಾರದ ವಿರುದ್ಧ ಮತ್ತು ಹೋರಾಟದ ಹಾದಿ ತುಳಿದಿದ್ದ ರಾಜ್ಯ ಬಿಜೆಪಿಯ ವಿರುದ್ಧ ರಾಜಕೀಯ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಏಕೆಂದರೆ, ಸಹಕಾರ ಸಂಸ್ಥೆಗಳಿಂದ ಸಾಲ ಪಡೆದ ರೈತರ ಸಂಖ್ಯೆ ಶೇ 20ರಷ್ಟು ಮಾತ್ರ. ಶೇ 80ರಷ್ಟು ರೈತರು ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಅವರಿಂದಲೂ ಒತ್ತಾಯ ಬಂದರೆ ಬಿಜೆಪಿ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಅಷ್ಟಕ್ಕೂ, ಬ್ಯಾಂಕ್‌ ಸಾಲ ಮನ್ನಾ ಬಗ್ಗೆ ತೀರ್ಮಾನಿಸಬೇಕಾಗಿರುವುದು ಕೇಂದ್ರ ಸರ್ಕಾರ.

‘ಕೃಷಿ ಸಾಲ ಮನ್ನಾದಿಂದ ಆರ್ಥಿಕ ಅಶಿಸ್ತು ಬೆಳೆಯುತ್ತದೆ; ಉದ್ದೇಶಪೂರ್ವಕವಾಗಿ ಸಾಲ ತೀರಿಸದೇ ಬಾಕಿ ಉಳಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತದೆ; ನಿಯಮಿತವಾಗಿ ಸಾಲ ಮರುಪಾವತಿ ಮಾಡುವ ರೈತರನ್ನೂ ಸುಸ್ತಿದಾರರಾಗುವಂತೆ ಪ್ರೇರೇಪಿಸುತ್ತದೆ’ ಎಂಬ ಟೀಕೆಗಳಿವೆ. ಆದರೆ ಇದಕ್ಕೆ  ಇನ್ನೊಂದು ಮುಖವೂ ಇದೆ. ಸುಸ್ತಿ ಸಾಲಗಾರ ರೈತರಿಗೆ ಸಹಕಾರ ಸಂಘಗಳು, ಬ್ಯಾಂಕ್‌ಗಳಿಂದ ಹೊಸ ಸಾಲ ಸ್ಥಗಿತಗೊಂಡಿದೆ. ಹೀಗಾಗಿ ಅವರು ವಿಧಿಯಿಲ್ಲದೆ ದುಬಾರಿ ಬಡ್ಡಿಯ ಖಾಸಗಿ  ಸಾಲಕ್ಕೆ ಶರಣಾಗುತ್ತಿದ್ದಾರೆ ಇಲ್ಲವೇ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ. ಇದು  ಕೃಷಿ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದರೆ ಸಾಲ ಮನ್ನಾ ಆಗುವುದರಿಂದ ಹೊಸ ಸಾಲಕ್ಕೆ ಅರ್ಹರಾಗುತ್ತಾರೆ. ಈಗ ರಾಜ್ಯದಲ್ಲಿ ₹ 3 ಲಕ್ಷದವರೆಗಿನ ಬೆಳೆ ಸಾಲಕ್ಕೆ ಬಡ್ಡಿ ಇಲ್ಲ.  ಆ ಸೌಕರ್ಯವನ್ನು ಬಳಸಿಕೊಳ್ಳಲು ಅವರಿಗೆ ಅನುಕೂಲವಾಗುತ್ತದೆ. ಗ್ರಾಮೀಣ ಆರ್ಥಿಕ ಮತ್ತು ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳುತ್ತವೆ. ಸೊರಗಿರುವ ಸಹಕಾರ ಸಂಸ್ಥೆಗಳಿಗೆ ಚೈತನ್ಯ ಬರುತ್ತದೆ.

ಈ ಏನೇ ಸಮರ್ಥನೆಗಳಿದ್ದರೂ ರೈತರ ಮತ್ತು ವ್ಯವಸಾಯ ಕ್ಷೇತ್ರದ ಬಿಕ್ಕಟ್ಟಿಗೆ ‘ಸಾಲ ಮನ್ನಾ’ ಕಾಯಂ ಪರಿಹಾರ ಅಲ್ಲವೇ ಅಲ್ಲ.  ಕಾಯಿಲೆಯ ಮೂಲಕ್ಕೆ ಹೋಗಬೇಕು. ಅಲ್ಲೇ ಚಿಕಿತ್ಸೆ ಕೊಡಬೇಕು. ಇದಕ್ಕೆ ಸಮಗ್ರ ಕೃಷಿ ನೀತಿಯೊಂದೇ ಮದ್ದು. ರೈತರು ಕೇಳುತ್ತಿರುವುದು ಅವರ ಶ್ರಮಕ್ಕೆ ತಕ್ಕ ಮಾನ್ಯತೆ, ಬೆಳೆಗಳಿಗೆ ಒಂದಿಷ್ಟು ಲಾಭದಾಯಕ ಬೆಲೆ, ಸಮರ್ಪಕ ಮಾರುಕಟ್ಟೆ ಮತ್ತು ದಾಸ್ತಾನು ವ್ಯವಸ್ಥೆ, ಮಧ್ಯವರ್ತಿಗಳ ಶೋಷಣೆಯಿಂದ ಮುಕ್ತಿ. ಇದಕ್ಕಾಗಿ ಕೃಷಿ ಮಾರುಕಟ್ಟೆಯನ್ನು ಬಲಪಡಿಸಬೇಕು. ನೀರಾವರಿ ಹೆಚ್ಚಿಸಬೇಕು. ಬೆಳೆ ವಿಮೆಯಲ್ಲಿನ ದೋಷಗಳನ್ನು ಸರಿಪಡಿಸಬೇಕು. ಡಾ. ಸ್ವಾಮಿನಾಥನ್‌ ವರದಿ ಕೂಡ ಇದನ್ನೇ ಹೇಳಿತ್ತು. ಮನ್ನಾ  ಹೆಸರಲ್ಲಿ ಖರ್ಚು ಮಾಡುವ ಹಣವನ್ನೇ ಈ ಉದ್ದೇಶಗಳಿಗೆ ವಿನಿಯೋಗಿಸಬಹುದು. ಇನ್ನಾದರೂ  ಕೃಷಿ ವಿಷಯದಲ್ಲಿ ರಾಷ್ಟ್ರೀಯ ನೀತಿ ರೂಪಿಸಬೇಕು. ತಾತ್ಕಾಲಿಕ, ಓಲೈಕೆಯ ಕ್ರಮಗಳು ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT