ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೂರ್ಣ ಸಾಲಮನ್ನಾ ಮಾಡುವವರೆಗೆ ಹೋರಾಟ ನಿಲ್ಲದು’

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿರುವ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮೂಗು ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ. ಮನ್ನಾ ಮಾಡದೇ ಇದ್ದರೆ ಜುಲೈ 10 ರಂದು ನಾಲ್ಕು ಲಕ್ಷ ರೈತರನ್ನು ಬೆಂಗಳೂರಿಗೆ ಕರೆತಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇನೆ ಎಂದು ಎಚ್ಚರಿಸಿದ್ದೆ. ಅದಕ್ಕೆ ಮಣಿದ ಸರ್ಕಾರ ₹50,000 ವರೆಗಿನ ಸಾಲಮನ್ನಾ ಮಾಡಿದೆ’ ಎಂದರು.

ಬೇರೆ ರಾಜ್ಯಗಳಲ್ಲಿ ₹1 ಲಕ್ಷದಿಂದ ₹2 ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ₹10,736 ಕೋಟಿಗಳಷ್ಟಿರುವ ಸಾಲವನ್ನು ಮನ್ನಾ ಮಾಡಲೇಬೇಕು ಎಂದು ಅವರು ಒತ್ತಾಯಿಸಿದರು.

‘ಸಾಲ ಮನ್ನಾ ಮಾಡಬೇಕು ಎಂಬ ನಮ್ಮ ಬೇಡಿಕೆ ಈಡೇರಿಲ್ಲ. ಅದಕ್ಕಾಗಿಯೇ ವಿಧಾನ ಪರಿಷತ್ತಿನಲ್ಲಿ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಪ್ರತಿಭಟಿಸಿದ್ದಾರೆ’ ಎಂದು ನೆನಪಿಸಿಕೊಂಡರು.

ಡಿಸೆಂಬರ್‌ನಲ್ಲಿ ಚುನಾವಣೆ: ‘ವಿಧಾನಸಭೆ ಚುನಾವಣೆ ಡಿಸೆಂಬರ್‌ ತಿಂಗಳಿನಲ್ಲಿಯೇ ನಡೆಯಲಿದ್ದು, ಕಾಂಗ್ರೆಸ್‌ ಮುಖಂಡರು ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವಧಿ ಪೂರ್ವ ಚುನಾವಣೆ ಎದುರಾದರೆ ನಾಲ್ಕು ತಿಂಗಳು ಮಾತ್ರ ಸಮಯ ಉಳಿಯುತ್ತದೆ. ಇದಕ್ಕೆ ನಾವೂ ಸಿದ್ಧರಾಗಬೇಕಿದೆ’ ಎಂದರು.

‘ಪ್ರತಿ ಜಿಲ್ಲೆ ಮತ್ತು ವಿಧಾನಸಭೆ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದವರನ್ನು ಸೇರಿಸಿಕೊಳ್ಳಲು ಆದ್ಯತೆ ನೀಡಬೇಕು. ಚುನಾವಣೆ ಟಿಕೆಟ್‌ಗಾಗಿ ಬರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ಅಥವಾ ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ಅವಕಾಶ  ನೀಡಬೇಡಿ’ ಎಂದರು.

**

‘ಮಿಷನ್‌ 110’ ಎಂದ ಯಡಿಯೂರಪ್ಪ

‘ಮುಂದಿನ ಚುನಾವಣೆಯಲ್ಲಿ ನಮ್ಮ ಗುರಿ 110 ಸೀಟು ಗೆಲ್ಲುವುದಾಗಿದೆ’ ಎಂದು ಯಡಿಯೂರಪ್ಪ ಹೇಳಿದರು.

ವೇದಿಕೆಯಲ್ಲಿದ್ದ ಶೋಭಾ ಕರಂದ್ಲಾಜೆ, ಲಿಂಬಾವಳಿ ಮತ್ತಿತರರು ‘ಮಿಷನ್ 150’ ಎಂದು ನೆನಪಿಸಿದರು.

ತಕ್ಷಣ ತಿದ್ದಿಕೊಂಡ ಯಡಿಯೂರಪ್ಪ, ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ಮಾಡಬೇಕೆಂಬ ನರೇಂದ್ರ ಮೋದಿಯವರ ಕನಸು ನನಸಾಗಬೇಕಾದರೆ 150 ಸೀಟು ಗೆಲ್ಲಲೇಬೇಕು ಎಂದು ಹೇಳಿದರು.

ಬಿಜೆಪಿ ಕಡೆ ನಂಜುಂಡಿ ನಡೆ: ವಿಶ್ವಕರ್ಮ ಸಮುದಾಯದ ಮುಖಂಡ, ಉದ್ಯಮಿ ಕೆ.ಪಿ. ನಂಜುಂಡಿ ಬಿಜೆಪಿ ಸೇರಲಿದ್ದಾರೆ.

ನಂಜುಂಡಿ ಅವರ ಮನೆಗೆ ಭೇಟಿ ನೀಡಿದ ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷಕ್ಕೆ ಸೇರುವಂತೆ ಅಧಿಕೃತ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಮುದಾಯದ 15ಕ್ಕೂ ಹೆಚ್ಚು ಸ್ವಾಮೀಜಿಗಳು ಇದ್ದರು.

ವಿಧಾನ ಪರಿಷತ್ತಿನ ನಾಮನಿರ್ದೇಶನ ಸದಸ್ಯರಾಗಲು ಮೂರು ವರ್ಷದಿಂದ ಕಾಯುತ್ತಿದ್ದ  ನಂಜುಂಡಿ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದರು. ಮೂರು ಬಾರಿ ನಾಮನಿರ್ದೇಶನ ನಡೆದಾಗಲೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

‘ಯಡಿಯೂರಪ್ಪ ಸತ್ಯಹರಿಶ್ಚಂದ್ರ ಇದ್ದಂತೆ. ಕೊಟ್ಟ ಮಾತು ತಪ್ಪುವುದಿಲ್ಲ ಎನ್ನುವ ವಿಶ್ವಾಸ ಇದೆ. ಬಿಜೆಪಿ ಸೇರುತ್ತೇನೆ. ಅಲ್ಲಿ ಅಟೆಂಡರ್ ಕೆಲಸ ಕೊಟ್ಟರೂ ದಕ್ಷತೆಯಿಂದ ನಿರ್ವಹಿಸುತ್ತೇನೆ’ ಎಂದು ನಂಜುಂಡಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT