ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗಾಗಿ ಪ್ರತ್ಯೇಕ ಮಸೀದಿ

ಮಹಿಳೆಯರ ಸಾಮೂಹಿಕ ನಮಾಜ್
Last Updated 23 ಜೂನ್ 2017, 6:15 IST
ಅಕ್ಷರ ಗಾತ್ರ

ವಿಜಯಪುರ: ಮುಸ್ಲಿಂ ಮಹಿಳೆಯರು ಸಾಮೂಹಿಕವಾಗಿ ನಮಾಜ್ (ಪ್ರಾರ್ಥನೆ) ಸಲ್ಲಿಸಲು ನಗರದಲ್ಲಿ ಪ್ರತ್ಯೇಕ ಮಸೀದಿ ಇದೆ. ರಮ್ಜಾನ್‌ ತಿಂಗಳಲ್ಲಿ ಇಲ್ಲಿ ನಿತ್ಯ ಪ್ರಾರ್ಥನೆ ನಡೆದರೆ, ಉಳಿದಂತೆ ಶುಕ್ರವಾರ ಮಾತ್ರ ನಮಾಜ್ ನಡೆಯುತ್ತದೆ.

ಆದಿಲ್‌ಶಾಹಿ ಅರಸರ ಆಳ್ವಿಕೆಯಲ್ಲೇ ಈ ಮಸೀದಿ ನಿರ್ಮಾಣಗೊಂಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆಗಿನಿಂದಲೂ ಮಹಿಳೆಯರು ಇಲ್ಲಿ ನಮಾಜ್‌ ಮಾಡುತ್ತಿದ್ದಾರೆ.

‘ಬಹುತೇಕರು ಮಧ್ಯಾಹ್ನ 1.30ಕ್ಕೆ ನಡೆಯುವ ಜೋಹರ್‌ ನಮಾಜ್‌ನಲ್ಲಿ ಪಾಲ್ಗೊಂಡು, ಸಂಜೆ 5.30ಕ್ಕೆ ಅಸರ್‌ ನಮಾಜ್‌ ಮುಗಿಸಿಕೊಂಡೇ ಮನೆಗೆ ಮರಳುತ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ನಸುಕಿನ 5.30ರ ಫಜರ್, ಸಂಜೆ 7ರ ಮಗರಿಬ್, ರಾತ್ರಿ 8.30ರ ಇಶಾ ನಮಾಜ್‌ನಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಮಸೀದಿಯ ಉಸ್ತುವಾರಿ ನೋಡಿಕೊಳ್ಳುವ ರೋಷನ್‌ಬೀ ಹೇಳುತ್ತಾರೆ.

‘ನಮಾಜ್‌ ಮಾಡಲು ಇಲ್ಲಿ ಮಹಿಳೆಯರಿಗೆ ಯಾರೂ ಮಾರ್ಗದರ್ಶನ ಮಾಡುವುದಿಲ್ಲ. ನಿಗದಿತ ಸಮಯದಲ್ಲಿ ಅವರಷ್ಟಕ್ಕವರೇ ಅಲ್ಲಾನ ನಾಮಸ್ಮರಣೆ ನಡೆಸುತ್ತಾರೆ. ಬಳಿಕ ಹಮೀದಾ ಮುಲ್ಲಾ, ಗೋರಿಬೀ ಖಾಜಿ ಕುರಾನ್‌, ಹದೀಸ್‌ ಪಠಿಸುತ್ತಾರೆ’ ಎಂದು ಅವರು ಹೇಳಿದರು.

ಮಸೀದಿ ಹಿನ್ನೆಲೆ: ‘ವಿಜಯಪುರದ ಕೋಟೆಯ ಮಧ್ಯ ಭಾಗದಲ್ಲಿ ಅತಿ ಚಿಕ್ಕ, ಸುಂದರವಾದ ಮಕ್ಕಾ ಮಸೀದಿಯಿದೆ. 40 ಅಡಿ ಎತ್ತರದ ಬೃಹತ್‌ ಗೋಡೆ ಮೂರು ಭಾಗದಲ್ಲಿ ಈ ಮಸೀದಿಯನ್ನು ಸುತ್ತುವರಿದಿದೆ. ಮಕ್ಕಾ ಮಸೀದಿಯ ಪ್ರತಿರೂಪದಂತೆ ನಿರ್ಮಿಸಿರುವುದರಿಂದ ಅದೇ ಹೆಸರಿನಿಂದ ಕರೆಯಲಾಗುತ್ತಿದೆ’ ಎಂದು ವಿಜಯಪುರ ಜಿಲ್ಲಾ ಗೆಜೆಟಿಯರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಈ ಮಸೀದಿ ಕಟ್ಟಡದ ಸಾಮಾನ್ಯ ಶೈಲಿ, ವಾಸ್ತುಶಿಲ್ಪದ ವಿವರಗಳು ಎರಡನೇ ಇಬ್ರಾಹಿಂ ಆದಿಲ್‌ಶಾಹ್‌ ಕಾಲದ್ದು ಎಂದು ಕಂಡುಬರುತ್ತವೆ. ಖ್ಯಾತ ವಾಸ್ತುಶಿಲ್ಪಿ ಮಲ್ಲಿಕ್‌ ಸಂದಲ್‌ನ ಮೇಲ್ವಿಚಾರಣೆ ಯಲ್ಲೇ ಇದು ನಿರ್ಮಾಣಗೊಂಡಿರ ಬಹುದು’ ಎಂಬ ಉಲ್ಲೇಖ ಗೆಜೆಟಿಯರ್‌ ನಲ್ಲಿದೆ.

‘ಹೆಣ್ಣುಮಕ್ಕಳು ನಮಾಜ್‌ ಸಲ್ಲಿಸಲಿಕ್ಕಾಗಿಯೇ ಬಾರಾ ಕಮಾನ್‌ ನಿರ್ಮಾಣ ಕೈಗೊಂಡಿದ್ದ ಎರಡನೇ ಅಲಿ ಆದಿಲ್‌ಶಾಹ್‌, ಮಕ್ಕಾದಲ್ಲಿರುವ ಮಸೀದಿ ಪ್ರತಿರೂಪದಲ್ಲಿ ವಿಜಯಪುರದಲ್ಲೂ ಸುಂದರ, ಚಿಕ್ಕ ಮಸೀದಿ ಕಟ್ಟಿಸಿದ’ ಎಂಬುದು ಇತಿಹಾಸದಲ್ಲಿನ ಉಲ್ಲೇಖ.

‘ಮಸೀದಿ ನಿರ್ಮಾಣ ಕುರಿತು ಎಲ್ಲಿಯೂ ಖಚಿತ ದಾಖಲೆಗಳಿಲ್ಲ. ಈ ಮಸೀದಿಯಲ್ಲಿ ಹೆಣ್ಮಕ್ಕಳು ಮಾತ್ರ ನಮಾಜ್ ಸಲ್ಲಿಸುವುದನ್ನು ಇಂದಿಗೂ ನಾವು ನೋಡಬಹುದಾಗಿದೆ’ ಎನ್ನುತ್ತಾರೆ ಇತಿಹಾಸಕಾರ ಪ್ರೊ. ಎಚ್‌.ಜಿ.ದಡ್ಡಿ.

‘ಮಸೀದಿ ಆವರಣದ ಮುಂಭಾಗ ದಲ್ಲಿ ಎರಡು ಭದ್ರತಾ ಗೋಪುರಗಳಿವೆ. ನಮಾಜ್‌ಗೆ ಬರುವ ಮಹಿಳೆಯರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಇವನ್ನು ಆದಿಲ್‌ಶಾಹಿ ಅರಸರು ನಿರ್ಮಿಸಿರ ಬಹುದು’ ಎಂದು ರೆಹಮುನ್ನೀಸಾ ಇನಾಮದಾರ ಹೇಳುತ್ತಾರೆ.

ಮನೆಯೇ ಉತ್ತಮ
‘ಮಹಿಳೆಯರು ಮಸೀದಿಗಿಂತ ಮನೆಯಲ್ಲೇ ನಮಾಜ್‌ ಮಾಡುವುದು ಒಳ್ಳೆಯದು’ ಎಂದು ಹದೀಸ್‌ (ಮಹಮ್ಮದ್‌ ಪೈಗಂಬರ್‌ ಅವರ ನಡೆ, ನುಡಿ, ಆಚಾರ–ವಿಚಾರ ಇತ್ಯಾದಿ ಕುರಿತ ಗ್ರಂಥ) ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೌಲಾನಾ ಅಬೂಬಕರ್‌ ತಯ್ಯಬ್ಬಿ ‘ಪ್ರಜಾವಾಣಿ’ಗೆ ತಿಳಿಸಿದರು.

**

ಹೈದರಾಬಾದ್‌, ವಿಜಯಪುರ ನಗರಗಳಲ್ಲಿ ಮಾತ್ರ ನಮಾಜ್‌ ಸಲ್ಲಿಸಲು ಮಹಿಳೆಯರಿಗಾಗಿಯೇ ಪ್ರತ್ಯೇಕ ಮಸೀದಿಗಳಿವೆ. ಇಲ್ಲಿ ಪುರುಷರಿಗೆ ಪ್ರವೇಶವಿಲ್ಲ.
-ನಜೀರ್ ಅಹಮದ್‌ ಇನಾಮದಾರ

ರಮ್ಜಾನ್‌ ಮಾಸದಲ್ಲಿ ನಿತ್ಯವೂ ಮಕ್ಕಾ ಮಸೀದಿಗೆ ಬಂದು ಪ್ರಾರ್ಥನೆ ಮಾಡುತ್ತೇವೆ. ನಸುಕಿನಲ್ಲಿ ಮನೆಯಲ್ಲೇ ಪ್ರಾರ್ಥಿಸಿದರೆ, ಉಳಿದ ಪ್ರಾರ್ಥನೆಗಳನ್ನು ಇಲ್ಲಿ ನಡೆಸುತ್ತೇವೆ
-ಜುಬೇದಾ ಮೋಮಿನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT