ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಕ್ಬರ್‌ ರಸ್ತೆ ಬಂಗಲೆಗೆ ಕೋವಿಂದ್‌!

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಅಕ್ಬರ್‌ ರಸ್ತೆಯಲ್ಲಿರುವ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮಹೇಶ್‌ ಶರ್ಮಾ ಅವರು ವಾಸವಿದ್ದ ಸರ್ಕಾರಿ ನಿವಾಸದಲ್ಲಿ ಇನ್ನುಮುಂದೆ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್‌ ಕೋವಿಂದ್ ನೆಲೆ ನಿಲ್ಲಲಿದ್ದಾರೆ.

ರಾಷ್ಟ್ರಪತಿ ಚುನಾವಣೆ (ಜುಲೈ 17) ಮುಗಿಯುವವರೆಗೂ ಕೋವಿಂದ್‌ ಅವರು 10 ಅಕ್ಬರ್‌ ರಸ್ತೆಯ ಈ ವಿಶಾಲವಾದ ಬಂಗಲೆಯಲ್ಲಿ ವಾಸ್ತವ್ಯ ಹೂಡಲಿದ್ದು, ಇದು ಅವರ ದೆಹಲಿಯ ತಾತ್ಕಾಲಿಕ ವಿಳಾಸವಾಗಲಿದೆ.

ಬಿಹಾರ ರಾಜ್ಯಪಾಲರಾಗಿದ್ದ 71 ವರ್ಷದ ಕೋವಿಂದ್‌ ಅವರಿಗೆ ಈ ಹಿಂದೆ ನಾರ್ಥ್‌ ಅವೆನ್ಯೂದ 144 ಸಂಖ್ಯೆಯ ಸರ್ಕಾರಿ ನಿವಾಸ ನೀಡಲಾಗಿತ್ತು.

ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಲೇ ರಾಜ್ಯಪಾಲ ಹುದ್ದೆಗೆ ಕೋವಿಂದ್‌ ರಾಜೀನಾಮೆ ನೀಡಿದರು. ಬಳಿಕ  ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅವರ ವಾಸ್ತವ್ಯಕ್ಕೆ ಅಕ್ಬರ್‌ ರಸ್ತೆಯ ಈ ಬಂಗಲೆ ಸೂಕ್ತ ಎಂದು ಹಿರಿಯ ಅಧಿಕಾರಿಗಳು ಗುರುತಿಸಿದ್ದಾರೆ. ಇದರಿಂದಾಗಿ ಸದ್ಯ ಈ ನಿವಾಸದಲ್ಲಿ ವಾಸವಾಗಿರುವ ಸಚಿವ ಶರ್ಮಾ ಅದನ್ನು ಭವಿಷ್ಯದ ರಾಷ್ಟ್ರಪತಿ ಕೋವಿಂದ್‌ ಅವರಿಗೆ ತಾತ್ಕಾಲಿಕವಾಗಿ ಬಿಟ್ಟು ಕೊಡಬೇಕಾದ ಅನಿವಾರ್ಯ ಎದುರಾಗಿದೆ.

ಸಚಿವ ಶರ್ಮಾ ಅವರು ಮಾಜಿ ರಾಷ್ಟ್ರಪತಿ, ಭಾವಿ ರಾಷ್ಟ್ರಪತಿಗಳಿಗಾಗಿ ಈ ರೀತಿ ಸರ್ಕಾರಿ ಬಂಗಲೆ ಬಿಟ್ಟು ಕೊಡುತ್ತಿರುವುದು  ಇದೇ ಮೊದಲೇನಲ್ಲ.
ಈ ಮೊದಲು ಶರ್ಮಾ ಅವರಿಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ವಾಸವಾಗಿದ್ದ ರಾಜಾಜಿ ಮಾರ್ಗದ 10ನೇ ಸಂಖ್ಯೆಯ ಬಂಗಲೆ  ನೀಡಲಾಗಿತ್ತು.

ಆದರೆ, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಧಿಕಾರ ಅವಧಿ ನಂತರ ವಾಸ್ತವ್ಯಕ್ಕೆ ರಾಜಾಜಿ ಮಾರ್ಗದ 10ನೇ ಸಂಖ್ಯೆಯ ಬಂಗಲೆ  ಗುರುತಿಸಲಾಗಿದೆ. ಹೀಗಾಗಿ ಶರ್ಮಾ ಈ  ಮನೆಯನ್ನು ಪ್ರಣವ್‌ ಮುಖರ್ಜಿ ಅವರಿಗೆ ಬಿಟ್ಟುಕೊಟ್ಟಿದ್ದರು.

ಅಲ್ಲಿಂದ ನೇರವಾಗಿ ಅಕ್ಬರ್‌ ರಸ್ತೆಯ ಬಂಗಲೆಗೆ ಬಂದಿದ್ದರು. ಈಗ ಅದನ್ನೂ ಕೋವಿಂದ್‌ ಅವರಿಗಾಗಿ ಬಿಟ್ಟು ಕೊಡಬೇಕಾದ ಅನಿವಾರ್ಯ ಎದುರಾಗಿದೆ.

ಜೆಡಿಯು ನಿಲುವು ಅಚಲ: ರಾಮನಾಥ ಕೋವಿಂದ್‌ ಅವರಿಗೆ ಘೋಷಿಸಿರುವ ಬೆಂಬಲವನ್ನು ಮರು ಪರಿಶೀಲಿಸುವ ಪ್ರಶ್ನೆಯಿಲ್ಲ ಎಂದು ಜೆಡಿಯು ಹೇಳಿದೆ.

ಜೆಡಿಯು ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು,  ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮೀರಾ ಕುಮಾರ್‌ ಅವರು ಆಯ್ಕೆಯಾದ ಬಳಿಕ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಕರೆ ನೀಡಿದ್ದರು.

ರಾಷ್ಟ್ರಪತಿ ಹುದ್ದೆಗೆ ಕೋವಿಂದ್‌ ಅವರು ಅತ್ಯಂತ ಅರ್ಹ ವ್ಯಕ್ತಿ ಎಂದು ಜೆಡಿಯು ಭಾವಿಸಿದೆ, ಹಾಗಾಗಿ ಈ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಹೇಳಿದ್ದಾರೆ.

**

ಇಂದು ನಾಮಪತ್ರ ಸಲ್ಲಿಕೆ

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ರಾಮನಾಥ ಕೋವಿಂದ್‌ ಅವರು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಸಚಿವರು, ಎನ್‌ಡಿಎ ಅಂಗ ಪಕ್ಷಗಳ ಮುಖಂಡರು ಮತ್ತು ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ನಾಮಪತ್ರ ಸಲ್ಲಿಸುವಾಗ ಕೋವಿಂದ್‌ ಅವರ ಜತೆಗಿರಲಿದ್ದಾರೆ.

ನಾಲ್ಕು ಸೆಟ್‌ಗಳಲ್ಲಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಒಂದೊಂದಕ್ಕೂ 50 ಸೂಚಕರು ಮತ್ತು ಅಷ್ಟೇ ಸಂಖ್ಯೆಯ ಅನುಮೋದಕರು ಇರಲಿದ್ದಾರೆ.

ಮೊದಲನೇ ಸೆಟ್‌ ನಾಮಪತ್ರಕ್ಕೆ ಪ್ರಧಾನಿ ಮೋದಿ ಸೂಚಕರಾದರೆ, ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಅನುಮೋದಕರು. ಎರಡನೇ ಸೆಟ್‌ ನಾಮಪತ್ರಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಸೂಚಕರು ಮತ್ತು ಅನುಮೋದಕರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT