ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳು ನ್ಯಾಯಾಲಯದಂತೆ ವರ್ತಿಸುವುದು ಸಲ್ಲ– ನ್ಯಾ.ದತ್ತು

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಚರ್ಚೆಗಳ ಹೆಸರಿನಲ್ಲಿ ಸುದ್ದಿ ವಾಹಿನಿಗಳು ‘ಮಾಧ್ಯಮ ವಿಚಾರಣೆ’ ನಡೆಸುತ್ತಿವೆ. ನ್ಯಾಯಾಧೀಶ, ನಿರ್ಣಾಯಕ ಮತ್ತು ಪ್ರಾಸಿಕ್ಯೂಟರ್‌ ಎಲ್ಲರ ಪಾತ್ರವನ್ನೂ ಆ್ಯಂಕರ್‌ ಒಬ್ಬರೇ ನಿಭಾಯಿಸುತ್ತಿದ್ದಾರೆ’ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಟೀಕಿಸಿದರು.

ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದಲ್ಲಿ ಆಯೋಗವು ಹಮ್ಮಿಕೊಂಡಿದ್ದ ‘ಮಾನವ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರದಲ್ಲಿ ಮಾಧ್ಯಮದ ಪಾತ್ರ’ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾಯಾಲಯದ ಗಮನಕ್ಕೆ ಬರುವ ಅಥವಾ ವಿಚಾರಣೆ ನಡೆಸಿ ತೀರ್ಪು ನೀಡುವ ಮುನ್ನವೇ ಮಾಧ್ಯಮಗಳು ಆ ಪ್ರಕರಣ ಕುರಿತು ತಮ್ಮದೇ ತನಿಖೆ ನಡೆಸಿ, ಆರೋಪಿಯ ಪರ ಅಥವಾ ವಿರುದ್ಧ ಅಭಿಪ್ರಾಯ  ಹುಟ್ಟುಹಾಕುತ್ತಿವೆ. ವಿಶ್ವಖ್ಯಾತಿಯ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಕರಣವನ್ನು ಮಾಧ್ಯಮಗಳು ತೋರಿಸಿದ ಬಗೆಯಿಂದ ಅದು ಅಪಖ್ಯಾತಿಗೆ ಒಳಗಾಯಿತು’ ಎಂದರು.

‘ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಂವಿಧಾನದ ವಿಧಿ 19(1)(ಎ)ನಲ್ಲಿ ಬರುವ ವಾಕ್‌ ಸ್ವಾತಂತ್ರ್ಯ ಹಾಗೂ ಸಂವಿಧಾನದ ವಿಧಿ 19(2)ನಲ್ಲಿ ಬರುವ ನಿರ್ಬಂಧಗಳ ಕುರಿತು ತಿಳಿಸಬೇಕು. ಅಲ್ಲದೆ, ಪಠ್ಯದಲ್ಲೇ ಮಾನವ ಹಕ್ಕು, ಮಾನಹಾನಿ ಮತ್ತು ನ್ಯಾಯಾಂಗ ನಿಂದನೆಯಂತಹ ಕಾನೂನಿನ ವಿಷಯಸೇರಿಸಬೇಕು’ ಎಂದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ.ಸಕ್ಸೇನಾ, ‘ಪತ್ರಿಕೆ ಮತ್ತು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ವರದಿಗಳನ್ನು ಆಧಾರಿಸಿಯೇ ನಾವು ಸುಮಾರು 9,000 ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ’ ಎಂದರು.

‘ರೋಚಕವಾದ ಸುದ್ದಿಗಳನ್ನು ಹೆಕ್ಕಿ ತರಬೇಕು ಎನ್ನುವ ಪರಿಕಲ್ಪನೆ ಪತ್ರಿಕೋದ್ಯಮದಲ್ಲಿ ಹೆಚ್ಚಾಗಿದೆ. ಸುದ್ದಿಯನ್ನು ನೇರವಾಗಿ ಕಟ್ಟಿಕೊಡದೆ ಅದಕ್ಕೊಂದು ವಿಶೇಷ ಅರ್ಥ ಕಲ್ಪಿಸಿ ಬರೆಯುವ ಪ್ರವೃತ್ತಿ ಪ್ರಾರಂಭವಾಗಿದೆ’ ಎಂದು ತಿಳಿಸಿದರು. ರಾಷ್ಟ್ರೀಯ ಕಾನೂನು ಶಾಲೆ ಕುಲಪತಿ ಪ್ರೊ.ಆರ್. ವೆಂಕಟ ರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT