ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾಕ್ಕೆ ಅನುದಾನ ಕಡಿತ

Last Updated 22 ಜೂನ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ರೈತರ ಸಾಲ ಮನ್ನಾದಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಹೊಂದಿಸಿಕೊಳ್ಳಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೆಲವು ಇಲಾಖೆಗಳಿಗೆ ಮೀಸಲಿಟ್ಟ ಅನುದಾನವನ್ನು ರಾಜ್ಯ ಸರ್ಕಾರ ಕಡಿತಗೊಳಿಸುವ ಸಾಧ್ಯತೆ ಇದೆ.

ರೈತರು ಸಹಕಾರ ಸಂಘ, ಬ್ಯಾಂಕುಗಳಿಂದ ಪಡೆದ ಅಲ್ಪಾವಧಿ ಬೆಳೆ ಸಾಲದಲ್ಲಿ ₹ 50 ಸಾವಿರ ಅಸಲು ಮತ್ತು ಬಡ್ಡಿ ಮೊತ್ತ ಸಂಪೂರ್ಣ ಮನ್ನಾ ಮಾಡಲು ನಿರ್ಧರಿಸಿರುವುದರಿಂದ ರಾಜ್ಯ ಸರ್ಕಾರಕ್ಕೆ ₹ 8,165 ಕೋಟಿ ಹೊರೆ ಬೀಳಲಿದೆ. ಈ ಮೊತ್ತವನ್ನು ಸಹಕಾರ ಸಂಘಗಳಿಗೆ ಸರ್ಕಾರ ಭರಿಸಬೇಕಿದೆ. ಸಾಲ ಮನ್ನಾದಿಂದ ಸುಮಾರು 22.27 ಲಕ್ಷ ಸಣ್ಣ ರೈತರಿಗೆ ಅನುಕೂಲವಾಗಲಿದೆ.

‘ಕೆಲವು ಇಲಾಖೆಗಳ ಹಂಚಿಕೆ ಮಾಡಿರುವ ಅನುದಾನದಲ್ಲಿ ಅಲ್ಪಸ್ವಲ್ಪ  ಕಡಿತ ಮಾಡಿ ಸಾಲ ಮನ್ನಾ ಹೊರೆ ಭರಿಸುತ್ತೇವೆ. ರಾಜ್ಯದ ಆರ್ಥಿಕ ಸ್ಥಿತಿಗತಿ ಪರಿಶೀಲಿಸಿ ಈ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಯೋಜನೆಗಳಿಗೆ ಬಳಕೆಯಾಗದೆ ಉಳಿದಿರುವ ಅನುದಾನವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಹಣಕಾಸು ಇಲಾಖೆ ಶಿಫಾರಸು ಮಾಡಿದೆ. ಲೋಕೋಪಯೋಗಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ ಮತ್ತು ಪಶು ಸಂಗೋಪನೆ ಇಲಾಖೆಯನ್ನು ಈ ಉದ್ದೇಶಕ್ಕೆ ಗುರುತಿಸಲಾಗಿದೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಒಟ್ಟು ₹ 8,165 ಕೋಟಿ ಸಾಲ ಮನ್ನಾ ಮೊತ್ತದಲ್ಲಿ ₹ 5,000 ಕೋಟಿಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮತ್ತು ಉಳಿದ ಮೊತ್ತವನ್ನು 2018–19ನೇ ಸಾಲಿನ ಬಜೆಟ್‌ನಲ್ಲಿ ತುಂಬಿಕೊಳ್ಳಲು ನಿರ್ಧರಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

ಅಲ್ಲದೆ, ಮುಂದಿನ ದಿನಗಳಲ್ಲಿ ಅನಗತ್ಯ ಮತ್ತು ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ. ಸಹಕಾರಿ ಸಂಘಗಳಿಗೆ ಮನ್ನಾ ಮೊತ್ತವನ್ನು ಸರ್ಕಾರ ಮರುಪಾವತಿಸಬೇಕಾಗಿದೆ. ಇಲ್ಲದಿದ್ದರೆ ರಾಜ್ಯದಲ್ಲಿರುವ 5,001 ಸಹಕಾರಿ ಸಂಘಗಳು ಮತ್ತು 21 ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕುಗಳಿಗೆ ಸಾಲ ವಿತರಿಸಲು ಸಮಸ್ಯೆಯಾಗಲಿದೆ. 2016–17ನೇ ಸಾಲಿನಲ್ಲಿ ಈ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳು ₹ 10,736 ಕೋಟಿ ಬೆಳೆ ಸಾಲ ವಿತರಿಸಿವೆ. ಬಜೆಟ್‌ ಅನುದಾನ ಕಡಿತ ಮತ್ತು ಅನಗತ್ಯ ವೆಚ್ಚ ನಿಯಂತ್ರಿಸುವ ಜೊತೆಗೆ ಬಜೆಟ್‌ನಲ್ಲಿ ಅಂದಾಜು ಮಾಡಿರುವುದಕ್ಕಿಂತ ಹೆಚ್ಚು ಆದಾಯವನ್ನು ಅಬಕಾರಿ ವಲಯದಿಂದ ನಿರೀಕ್ಷಿಸಿದೆ.

ಬಿಜೆಪಿ ಆಡಳಿತದ ಅವಧಿಯಲ್ಲಿ, ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಹೆಚ್ಚುವರಿ ತೆರಿಗೆ ಸಂಗ್ರಹದ ಮೂಲಕ ಸಾಲ ಮನ್ನಾದ ಮೊತ್ತವನ್ನು ಹೊಂದಿಸಲಾಗಿತ್ತು. ಆದರೆ, ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟು ಕಾಂಗ್ರೆಸ್‌ ಸರ್ಕಾರ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸುವ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇಲ್ಲ ಎಂದೂ ಹೇಳಲಾಗುತ್ತಿದೆ.

**

ಸಹಕಾರಿ ಸಂಸ್ಥೆಗಳಲ್ಲಿ ಪಡೆದ ಅಲ್ಪಾವಧಿ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಬೇಕು.
–ಕೋಡಿಹಳ್ಳಿ ಚಂದ್ರಶೇಖರ್‌
ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT