ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಮ್ಡ್ ಅರಣ್ಯದಿಂದ 5 ಲಕ್ಷ ಹೆಕ್ಟೇರ್ ಹೊರಕ್ಕೆ

Last Updated 22 ಜೂನ್ 2017, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಡೀಮ್ಡ್‌ ಅರಣ್ಯ’ ವ್ಯಾಪ್ತಿಯಲ್ಲಿದ್ದ 4,98,991 ಹೆಕ್ಟೇರ್‌ ಭೂಮಿಯನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡುವಂತೆ ಮನವಿ ಮಾಡಿ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಡೀಮ್ಡ್‌ ಅರಣ್ಯ ಪ್ರದೇಶದಿಂದ ಜನವಸತಿ ಹಾಗೂ ಅರಣ್ಯ ರಹಿತ ಭೂಮಿಯನ್ನು ಹೊರಗಿಡುವ ಬಗ್ಗೆ  ವರದಿ ಸಲ್ಲಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿದ್ದರು. ಇದನ್ನು ಆಧರಿಸಿ ಪ್ರಮಾಣ ಪತ್ರ ಸಲ್ಲಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.

ಮಲೆನಾಡು, ಅರೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ 10–20 ಮರಗಳಿದ್ದ ಪ್ರದೇಶವನ್ನು ದಶಕಗಳ ಹಿಂದೆಯೇ ಡೀಮ್ಡ್‌ ಅರಣ್ಯ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಕಂದಾಯ ಇಲಾಖೆ ದಾಖಲೆಗಳಲ್ಲಿ ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದಾಗಿ ನಮೂದಾಗಿತ್ತು. ಇದರಿಂದಾಗಿ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ  ಚಟುವಟಿಕೆಗಳನ್ನು ಕೈಗೊಳ್ಳುವಂತಿರಲಿಲ್ಲ.  ರೈತರಿಗೆ, ಜನರಿಗೆ ಅನುಕೂಲ ಮಾಡಿಕೊಡಲು ಪ್ರಮಾಣ ಪತ್ರ ಸಲ್ಲಿಸುವ  ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

11 ಸಾವಿರ ಜಲ ಮೂಲಗಳ ರಕ್ಷಣೆ: ರಾಜ್ಯದ 11 ಸಾವಿರ ಜೌಗು ಅಥವಾ ಜಲ ಮೂಲಗಳನ್ನು  ಜೈವಿಕ ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆ ಹೊರಡಿಸುವ ಬಗ್ಗೆ  ಒಂದು ತಿಂಗಳೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಜಲಮೂಲ ನಿರ್ವಹಣೆ ಮತ್ತು ಸಂರಕ್ಷಣೆ ನಿಯಮದ ಅಡಿ ಈ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು.

ಒಮ್ಮೆ ಜೈವಿಕ ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆ ಹೊರಡಿಸಿದರೆ ಮತ್ತೆ ಎಂದೂ ಆ ಜಾಗವನ್ನು ಬಳಸಿಕೊಳ್ಳುವಂತಿಲ್ಲ. ಅದಕ್ಕಾಗಿ ಸಮಗ್ರವಾಗಿ ಪರಿಶೀಲಿಸಿ, ವರದಿ ಸಲ್ಲಿಸಲು ಸಮಿತಿ ರಚಿಸಲಾಗಿದೆ ಎಂದು ಜಯಚಂದ್ರ ಹೇಳಿದರು.
ಪ್ರಮುಖ ನಿರ್ಣಯಗಳು:
* ಪದ್ಮ ಪ್ರಶಸ್ತಿಗಳಿಗೆ ಅರ್ಹರ ಹೆಸರು ಶಿಫಾರಸು ಮಾಡಲು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ  ಕನ್ನಡ ಮತ್ತು ಸಂಸ್ಕೃತಿ, ಉನ್ನತ ಶಿಕ್ಷಣ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಮತ್ತು ವಾರ್ತಾ ಇಲಾಖೆ ಕಾರ್ಯದರ್ಶಿಗಳಿರುವ
ಸಮಿತಿ ರಚನೆ.
* ಆರೋಗ್ಯ ಇಲಾಖೆಯ 16,500 ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರಿಗೆ ಟ್ಯಾಬ್‌ ವಿತರಣೆ.
* ಫುಟ್‌ ಖರಾಬು ಜಮೀನನ್ನು ವಸತಿಯೇತರ ಉದ್ದೇಶಕ್ಕೆ ಬಳಸಲು ಅನುಮತಿ ನೀಡುವಾಗ ವಿಧಿಸುತ್ತಿದ್ದ ಜುಲ್ಮಾನೆ ಮತ್ತು ಶುಲ್ಕ ರದ್ದು.
* ನಗರಾಭಿವೃದ್ಧಿ ಪ್ರಾಧಿಕಾರಿಗಳು ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಇನ್ನು ಮುಂದೆ 2013ರ ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಕಾಯ್ದೆ ಅನ್ವಯ ಪರಿಹಾರ ನೀಡಲು ಮಸೂದೆ ಮಂಡನೆಗೆ ಸಮ್ಮತಿ.

ಅಂಕಿಅಂಶ
ಸದ್ಯ ಇರುವ ಘೋಷಿತ ಡೀಮ್ಡ್‌ ಅರಣ್ಯ 17.62 ಲಕ್ಷ ಹೆಕ್ಟೇರ್‌
ರಾಜ್ಯದಲ್ಲಿರುವ ಒಟ್ಟು ಅರಣ್ಯ 33.26 ಲಕ್ಷ ಹೆಕ್ಟೇರ್‌

ಆಂಬುಲೆನ್ಸ್‌ಗಳ ಖಾಸಗೀಕರಣ?
ಸರ್ಕಾರಿ ಆಸ್ಪತ್ರೆಗಳಲ್ಲಿದ್ದ 827 ಆಂಬುಲೆನ್ಸ್‌ಗಳ ನಿರ್ವಹಣೆ ಇನ್ನು ಮುಂದೆ ಖಾಸಗಿಯವರ ಹೆಗಲಿಗೆ ಏರಲಿದೆ.

ಆರೋಗ್ಯ ಕವಚ–108 ಆ್ಯಂಬುಲೆನ್ಸ್ ಜತೆಗೆ ಈ ಆಂಬುಲೆನ್ಸ್‌ಗಳನ್ನು ಸೇರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ರಾಜ್ಯದ ಪ್ರತಿ 10 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಆ್ಯಂಬುಲೆನ್ಸ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು.

ಲ್ಯಾಪ್‌ಟಾಪ್‌ ಭಾಗ್ಯ
ಸರ್ಕಾರಿ ಕಾಲೇಜುಗಳಲ್ಲಿ ಪದವಿ ಮತ್ತು ತಾಂತ್ರಿಕ  ಕೋರ್ಸ್‌ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.  ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿರುವ27,500, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಓದುತ್ತಿರುವ 9,726 ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT