ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

880 ಎಕರೆಯ ಮರು ಸರ್ವೆಗೆ ಆದೇಶ

Last Updated 22 ಜೂನ್ 2017, 20:22 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ 880 ಎಕರೆ 37 ಗುಂಟೆ ಒತ್ತುವರಿಗೆ ಸಂಬಂಧಿಸಿ  ಮರು ಸರ್ವೆ ಮಾಡಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಬೆಂಗಳೂರು ದಕ್ಷಿಣ ತಹಶೀಲ್ದಾರ್‌ಗೆ ಆದೇಶಿಸಿದೆ.

ದಕ್ಷಿಣ ತಾಲ್ಲೂಕಿನ ಐದು ಗ್ರಾಮಗಳಲ್ಲಿ ಈ ಜಮೀನು ಹರಡಿಕೊಂಡಿದ್ದು, ₹ 2 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಭೂಮಿ ಇದಾಗಿದೆ  ಎಂದು ಅಂದಾಜಿಸಲಾಗಿದೆ.

ಇದರ ಬಗ್ಗೆ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತ್ತು. ಇದರಲ್ಲಿ 279 ಎಕರೆಯನ್ನು ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಾಕೃಷ್ಣ ಸೇರಿ 52 ಮಂದಿ ಕಬಳಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹೇಮಂತ ರಾಜು ಅವರು  ನ್ಯಾಯಾಲಯದಲ್ಲಿ 2016ರ ನವೆಂಬರ್‌ 2 ರಂದು ದೂರು ದಾಖಲಿಸಿದ್ದರು.

ಈ ಆರೋಪವನ್ನು  ವಿಚಾರಣೆ  ಪರಿಗಣಿಸಿದ್ದ ನ್ಯಾಯಾಲಯ, ‘ಇದೊಂದು ಗಂಭೀರ ಆರೋಪ. ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ಅವರು ಪೆದ್ದನಪಾಳ್ಯ ಸರ್ವೆ ನಂಬರ್‌ 7ರಿಂದ 11ರವರೆಗಿನ ಜಾಗಕ್ಕೆ ಸಂಬಂಧಿಸಿದ ವರದಿಯನ್ನು ದಾಖಲೆ ಸಹಿತ ನವೆಂಬರ್‌ 30ರೊಳಗೆ ನೀಡಬೇಕು’ ಎಂದು ನ್ಯಾಯಾಲಯ ಆದೇಶಿಸಿತ್ತು.

‘ಈ ಪ್ರಕರಣದಲ್ಲಿ ಅಕ್ರಮ ನಡೆದಿಲ್ಲ. ಶಾಸಕರಿಗೆ ಕಾನೂನುಬದ್ಧವಾಗಿ ಭೂಪರಿವರ್ತನೆ ಆಗಿದೆ’ ಎಂದು ದಕ್ಷಿಣ ತಹಶೀಲ್ದಾರ್‌ ವರದಿ ಸಲ್ಲಿಸಿದ್ದರು. 

‘ಪ್ರಕರಣದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕಿದ್ದು, ಕಂದಾಯ ಇಲಾಖೆಯಲ್ಲಿರುವ ಎಲ್ಲ ದಾಖಲೆಗಳನ್ನು ನೀಡಬೇಕು’ ಎಂದು  ನ್ಯಾಯಾಲಯ ತಾಕೀತು ಮಾಡಿತ್ತು. ಆದರೆ, ದಾಖಲೆಗಳನ್ನು ಸಲ್ಲಿಸಲು ಅಧಿಕಾರಿಗಳು ವಿಳಂಬ ಮಾಡಿದ್ದರು.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಚ್‌.ಎನ್‌. ನಾರಾಯಣ, ಬಾಲಕೃಷ್ಣ ಹಾಗೂ ಕೆ.ಆರ್‌. ನಿರಂಜನ್‌ ಅವರನ್ನು ಒಳಗೊಂಡ ಪೀಠ, ‘ಅಧಿಕಾರಿಗಳು ಜಾಗದ ಮೂಲ ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು. ಖುದ್ದು ತಹಶೀಲ್ದಾರ್ ನೇತೃತ್ವದಲ್ಲಿ ಜಾಗದ ಮರು ಸರ್ವೆ ನಡೆಸಬೇಕು’ ಎಂದು ನಿರ್ದೇಶನ ನೀಡಿದೆ. 

‘56 ಎಕರೆಯನ್ನು ಜಿಲ್ಲಾಡಳಿತದ ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆ ಜಾಗ  ಇಲ್ಲಿಯವರೆಗೂ ದೇವಸ್ಥಾನಕ್ಕೆ ಹಸ್ತಾಂತರವಾಗಿಲ್ಲ. ಈ ಜಾಗವನ್ನು ಒತ್ತುವರಿದಾರರು ಮತ್ತೆ ಕಬಳಿಸಿರುವ ಶಂಕೆ ಇದೆ. ಈ ಬಗ್ಗೆಯೂ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದೆ.

ಏನಿದು ಪ್ರಕರಣ: ಮಲ್ಲೇಶ್ವರದ ನಿವಾಸಿ ದ್ವಾರಕಾಬಾಯಿ ವೇದಾಂತಂ ಎಂಬುವರು ದೇವಸ್ಥಾನದ ಧರ್ಮಾರ್ಥ ಕಾರ್ಯಗಳಿಗಾಗಿ 1939ರಲ್ಲಿ ಐದು ಗ್ರಾಮಗಳಲ್ಲಿನ ಭೂಮಿಯನ್ನು ಟ್ರಸ್ಟ್‌ ಡೀಡ್‌ ಮೂಲಕ ದಾನವಾಗಿ ನೀಡಿದ್ದರು. ಮಾಗಡಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ (ನೋಂದಣಿ ಸಂಖ್ಯೆ 1957/38–39) 1939 ಏಪ್ರಿಲ್‌ 15ರಂದು ದಾನಪತ್ರದ ಮೂಲಕ  ನೋಂದಣಿ ಮಾಡಿಸಲಾಗಿತ್ತು. ಈ ಜಮೀನಿನಿಂದ ಬರುವ ಆದಾಯವನ್ನು ಉತ್ಸವ ಹಾಗೂ ಇನ್ನಿತರೆ ಉದ್ದೇಶಕ್ಕೆ ಬಳಸಬೇಕು ಎಂದು  ತಿಳಿಸಿದ್ದರು.

ದೇವಾಲಯಕ್ಕೆ ದೊಡ್ಡ ಪ್ರಮಾಣದಲ್ಲಿ ಭೂಮಿ ದಾನ ಮಾಡಿರುವ ಬಗ್ಗೆ ಮುಜರಾಯಿ ಇಲಾಖೆಯವರಿಗೂ ಮಾಹಿತಿ ಇರಲಿಲ್ಲ. 2015ರಲ್ಲಿ ಬೆಂಗಳೂರಿನ ಮಹೇಂದ್ರ ಜವರಯ್ಯ ಎಂಬುವರು ದೇವಸ್ಥಾನದ ಭೂಮಿಯ ಬಗ್ಗೆ ಮಾಹಿತಿ ನೀಡಿದಾಗಲೇ ಅವರಿಗೂ ಗೊತ್ತಾಗಿತ್ತು.

ಆನಂತರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅವರು, ಬೆಂಗಳೂರಿನ ಭೂಮಾಪನ ಇಲಾಖೆ ನಿರ್ದೇಶಕರು ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರರಿಗೆ ಪತ್ರ ಬರೆದು ಭೂಮಿಯ ಬಗ್ಗೆ ಹೆಚ್ಚಿನ ವಿವರ ನೀಡುವಂತೆ  ಕೇಳಿದ್ದರು. ದ್ವಾರಕಾಬಾಯಿ ಅವರು ದಾನವಾಗಿ ನೀಡಿರುವುದು ಬೆಳಕಿಗೆ ಬಂದಿತ್ತು.

‘ಈ ಜಮೀನುಗಳನ್ನು ಇನಾಂ ರದ್ದತಿ ಕಾಯ್ದೆ ಅಥವಾ ಭೂ ಸುಧಾರಣೆ ಕಾಯ್ದೆ ಅನ್ವಯ ಅನುಭೋಗದ ಹಕ್ಕು ನೀಡಲು ಅವಕಾಶವಿಲ್ಲ. ಆದರೂ, ನಿಯಮ ಉಲ್ಲಂಘಿಸಿ ಪರಭಾರೆ ಮಾಡಲಾಗಿತ್ತು’ ಎಂದು ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಅಜಯ್‌ ನಾಗಭೂಷಣ್‌ ಅವರು ಬೆಂಗಳೂರು ನಗರ  ಜಿಲ್ಲಾಧಿಕಾರಿ ವಿ.ಶಂಕರ್‌ ಅವರಿಗೆ 2016ರ ಜೂನ್‌ 4ರಂದು ಪತ್ರ ಬರೆದಿದ್ದರು.

ಭೂಕಬಳಿಕೆ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ದಕ್ಷಿಣ ಉಪವಿಭಾಗಾಧಿಕಾರಿ ಅವರಿಗೆ ಜೂನ್‌ 9ರಂದು ಹಾಗೂ ಸೆಪ್ಟೆಂಬರ್‌ 19ರಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು. ಸೆಪ್ಟೆಂಬರ್‌ 24ರಂದು ಚೋಳನಾಯಕನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 59ರ 56 ಎಕರೆ 13 ಗುಂಟೆಯನ್ನು ಜಿಲ್ಲಾಡಳಿತ ಸೆಪ್ಟೆಂಬರ್‌ 24ರಂದು ಸ್ವಾಧೀನಕ್ಕೆ ಪಡೆದಿತ್ತು.

‘ಮೂಲ ಕಂದಾಯ ದಾಖಲೆಗಳಾದ ಐ.ಎಲ್‌ (ಇಂಡೆಕ್ಸ್ ಆಫ್‌ ಲ್ಯಾಂಡ್‌ ರೆಕಾರ್ಡ್) /ಆರ್‌.ಆರ್‌ ದಾಖಲೆಗಳಲ್ಲಿ ರಂಗನಾಥಸ್ವಾಮಿ ದೇವಸ್ಥಾನದ ಹೆಸರು ಹಾಗೂ ರೈತರ ಹೆಸರುಗಳು ಇವೆ. ಕುರುಬರಹಳ್ಳಿ ಗ್ರಾಮದಲ್ಲಿ ದಳವಾಯಿ ನಂಜರಾಜೆ ಅರಸು ಇನಾಮನ್ನು ಎಚ್‌. ರಂಗನಾಥ ಅಯ್ಯರ್‌ ಅವರು ಹರಾಜಿನಲ್ಲಿ ಪಡೆದಿದ್ದಾರೆ. ಕೆಲವು ಗ್ರಾಮಗಳಲ್ಲಿ ಇಂತಹ ಹರಾಜುಗಳು ನಡೆದಿವೆ. 1960–70ರ ಬಳಿಕ ಕೈಬರಹದ ಪಹಣಿಪತ್ರಗಳು ಲಭ್ಯ ಇವೆ. ಅದಕ್ಕಿಂತ ಹಿಂದಿನ ಐ.ಎಲ್‌/ ಆರ್‌.ಆರ್‌ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಬೇಕಿದೆ. ಹೀಗಾಗಿ ಹೆಚ್ಚಿನ ಕಾಲಾವಕಾಶ ಬೇಕಿದೆ’ ಎಂಬುದು ಅಧಿಕಾರಿಗಳ ಹೇಳಿಕೆ.

**

ದೇವಸ್ಥಾನದ ಜಾಗ ಎಲ್ಲಿ ಎಷ್ಟು

* ಬ್ಯಾಲಾಳು ಗ್ರಾಮದ ಸರ್ವೆ ಸಂಖ್ಯೆ 47, 51, 53,    54ರಲ್ಲಿ 95 ಎಕರೆ
* ದೊಡ್ಡಮಾರನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 28, 29, 30, 32ರಲ್ಲಿ 89 ಎಕರೆ 36 ಗುಂಟೆ
* ಪೆದ್ದನಪಾಳ್ಯ ಗ್ರಾಮದ ಸರ್ವೆ ಸಂಖ್ಯೆ 7, 8, 9, 10, 11ರಲ್ಲಿ 265 ಎಕರೆ 6 ಗುಂಟೆ
* ಚೋಳನಾಯಕನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 56, 57, 58, 59, 60, 61, 62, 63ರಲ್ಲಿ 285 ಎಕರೆ 29 ಗುಂಟೆ
* ಕುರುಬರಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 117ರಿಂದ 164ರ ವರೆಗೆ 145 ಎಕರೆ 16 ಗುಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT