ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಸದ್ಬಳಕೆಯಿಂದ ಉದ್ಯಮ ವಿಸ್ತರಣೆ

Last Updated 23 ಜೂನ್ 2017, 9:05 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೈಗಾರಿಕಾ ನೀತಿಯಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕಲ್ಪಿಸಿರುವ ಸೌಲಭ್ಯವನ್ನು ಉದ್ದಿಮೆದಾರರು ಸಮರ್ಪಕವಾಗಿ ಸದ್ಬಳಕೆ ಮಾಡಕೊಂಡಲ್ಲಿ ಉದ್ಯಮ ವಿಸ್ತರಣೆ ಸಾಧ್ಯ’ ಎಂದು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ. ಜಯಸಿಂಹ ಹೇಳಿದರು.

ನಗರದ ವರ್ತಕರ ಭವನದಲ್ಲಿ ಗುರುವಾರ ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಗ್ರಾನೈಟ್‌ ಉದ್ಯಮಗಳ ಸಂಘ ಹಾಗೂ ವರ್ತಕರ ಸಂಘದಿಂದ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳಿಗಾಗಿ ಆಯೋಜಿಸಿದ್ದ ರಫ್ತು ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಹೊರದೇಶಗಳಲ್ಲಿ ಜಿಲ್ಲೆಯ ಗ್ರಾನೈಟ್‌ ಕಲ್ಲಿಗೆ ಹೆಚ್ಚಿನ ಬೇಡಿಕೆಯಿದ್ದು, ಅಧಿಕ ಪ್ರಮಾಣದಲ್ಲಿ ರಫ್ತು ಆಗುತ್ತಿದೆ. ಜತೆಗೆ, ಸಂಸ್ಕರಣೆ ಮಾಡಿದ ತೆಂಗಿನಕಾಯಿ ಪುಡಿಗೂ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ, ಮೂರು ನಾಲ್ಕು ವರ್ಷ ಸತತ ಬರಗಾಲದಿಂದ ತೆಂಗು ಬೆಳೆ ನಾಶವಾಗಿ ರಫ್ತಿನ ಪ್ರಮಾಣ ಕಡಿಮೆಯಾಗಿದೆ ಎಂದರು.

ಜಿಲ್ಲಾ ಕೇಂದ್ರದಲ್ಲಿ ಕೈಗಾರಿಕಾ ಕಂಪೆನಿಗಳು ಇಲ್ಲ. ಭಾವಿ ಉದ್ದಿಮೆದಾರರು ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ಜಿಲ್ಲಾ ಕೇಂದ್ರದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ಕೈಗಾರಿಕೆ ಮತ್ತು ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಸೌಲಭ್ಯಗಳನ್ನು ಒದಗಿಸುತ್ತಿವೆ. ಅದನ್ನು ಉದ್ಯಮಿಗಳು ಸಮರ್ಪಕವಾಗಿ ಬಳಸಿಕೊಂಡು ಉತ್ಪಾದಿಸಿದ ವಸ್ತುಗಳಿಗೆ ವಿದೇಶಿ ನೆಲದಲ್ಲಿ ಮಾರುಕಟ್ಟೆ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಗ್ರಾನೈಟ್‌ ಉದ್ಯಮಗಳ ಸಂಘದ ಅಧ್ಯಕ್ಷ ಜಿ.ಎಂ. ಹೆಗ್ಗಡೆ ಮಾತನಾಡಿ, ಜಿಲ್ಲೆಯಲ್ಲಿ ಹಲವು ವರ್ಷದಿಂದ ಕಪ್ಪುಶಿಲೆಯನ್ನು ಹೆಚ್ಚು ರಫ್ತು ಮಾಡಲಾಗುತ್ತಿದೆ. ಜಿಲ್ಲೆಯ ಉತ್ತಮ ಶಿಲೆಗಳು ಪ್ರಪಂಚದಾದ್ಯಂತ ರಫ್ತು ಆಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗ್ರಾನೈಟ್‌್ ದೊರೆಯುವ ಪ್ರದೇಶ ಕಡಿಮೆಯಾಗಿ ರಫ್ತಿನ ಪ್ರಮಾಣ ಕುಂಠಿತವಾಗುತ್ತಿದೆ ಎಂದರು.

ಉದ್ಯಮದಾರರು ನುರಿತ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಿಕೊಂಡು ಗುಣಮಟ್ಟದ ಯಾವುದೇ ಕೈಗಾರಿಕೆ ಹಾಗೂ ಕೃಷಿ ಉತ್ಪನ್ನವನ್ನು ವಿದೇಶಗಳಿಗೆ ರಫ್ತು ಮಾಡಬಹುದು. ಈ ನಿಟ್ಟಿನಲ್ಲಿ ಆಯೋಜಿಸಿರುವ ರಫ್ತು ಜಾಗೃತಿ ಶಿಬಿರ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಜಿಎಸ್‌ಟಿ ತೆರಿಗೆ ಜುಲೈನಿಂದ ಜಾರಿಯಾಗುತ್ತಿದೆ. ಇದರಿಂದ ರಫ್ತು ಮಾಡುವ ವಸ್ತುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ತೆರಿಗೆ ಅನುಕೂಲಕರವಾಗಿದ್ದರೂ, ಕೆಲವು ಉದ್ಯಮಿದಾರರು ತಮ್ಮ ವ್ಯವಹಾರವನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸ ಮಾತನಾಡಿ, ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಹೆಚ್ಚು ಅಭಿವೃದ್ಧಿಯಾಗಿದೆ. ಪ್ರಸ್ತುತ 19 ರೈಸ್‌ಮಿಲ್‌ಗಳು ಕಾರ್ಯನಿರ್ವಹಿಸುತ್ತಿವೆ. 1,500 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ. ಆದರೆ, ಚಾಮರಾಜನಗರದಲ್ಲಿ ಒಂದೂ ರೈಸ್‌ಮಿಲ್‌ ಇಲ್ಲ ಎಂದು ಹೇಳಿದರು.

‘ರಫ್ತು ಮೂಲಗಳು ಮತ್ತು ಮಾರುಕಟ್ಟೆ’ ಹಾಗೂ ‘ವಿದೇಶಿ ವಿನಿಯಮ ಪ್ರಕ್ರಿಯೆಗಳು ಮತ್ತು ರಫ್ತಿನ ಮೇಲೆ ಆರ್‌ಬಿಐನ ನಿಯಂತ್ರಣಗಳು’ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್‌ಬಿಐನ ನಿವೃತ್ತ ಸಹಾಯಕ ವ್ಯವಸ್ಥಾಪಕ ಆರ್‌.ಎಸ್‌. ಬಾಳಿ, ಜಿಲ್ಲಾ ಪಂಚಾಯಿತಿ (ಖಾಗ್ರಾ) ಉಪನಿರ್ದೇಶಕ ಕೆ.ಎ. ಜೇಂದ್ರಪ್ರಸಾದ್, ವಿಟಿಪಿಸಿ ಮೈಸೂರು ಶಾಖೆಯ ವ್ಯವಸ್ಥಾಪಕ ಎಚ್. ವರದರಾಜು, ಸಿಡಾಕ್‌ ಉಪನಿರ್ದೇಶಕ ಎಂ.ಎಸ್. ಮಧು, ಜಿಲ್ಲಾ ಕೈಗಾರಿಕೆ ಕೇಂದ್ರದ ಸಹಾಯಕ ನಿರ್ದೆಶಕಿ ಮೇಘಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT