ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಜಿಎಸ್: ಪರಿಹಾರದ ಹಾದಿ...

Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

ವಂಶವಾಹಿ ಸಮಸ್ಯೆಗಳು ಮಗುವಿಗೆ ಬರದಂತೆ ತಡೆಯುವ ಮಾರ್ಗವಾದ ಪ್ರಿ ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನಿಸಿಸ್ ಕುರಿತು ಹಿಂದಿನ ಸಂಚಿಕೆಯಲ್ಲಿ ತಿಳಿಸಲಾಗಿತ್ತು. ಇದೀಗ ಪ್ರಿ ಇಂಪ್ಲಾಂಟೇಷನ್ ಜೆನೆಟಿಕ್ ಸ್ಕ್ರೀನಿಂಗ್ ಬಗ್ಗೆ ತಿಳಿದುಕೊಳ್ಳೋಣ.

ಕೃತಕ ಗರ್ಭಧಾರಣೆಗೆ ಆರಿಸಿಕೊಂಡ ಅಂಡಾಣು/ವೀರ್ಯಾಣು, ಗರ್ಭಧಾರಣೆಗೆ ಸಮರ್ಥವಾಗಿದೆಯೇ ಎಂಬುದನ್ನು ಪರೀಕ್ಷಿಸುವ ಒಂದು ತಂತ್ರಜ್ಞಾನ ಇದು.

ಗರ್ಭಧಾರಣೆ ನಂತರದ ಕೆಲವೇ ದಿನಗಳಲ್ಲಿ ಅಸಹಜ ಕ್ರೋಮೊಸೋಮ್‌ಗಳಿಂದಾಗಿ ಗರ್ಭಪಾತವಾಗುವ ಸಾಧ್ಯತೆಯನ್ನು ತಡೆಯುವಲ್ಲಿ ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಸ್ಕ್ರೀನಿಂಗ್ ಸಹಾಯವಾಗಬಲ್ಲದು. ಏಕೆಂದರೆ ಆರೋಗ್ಯಕರ ವೀರ್ಯಾಣುವನ್ನು ಮಾತ್ರ ಗರ್ಭಕೋಶಕ್ಕೆ ವರ್ಗಾವಣೆ ಮಾಡುವುದರಿಂದ ಮೊದಲ ಹಾಗೂ ಎರಡನೇ ತ್ರೈಮಾಸಿಕದಲ್ಲಿ ಗರ್ಭಪಾತವಾಗುವ ಸಾಧ್ಯತೆ ಇದರಿಂದ ತಗ್ಗುವುದು.

ಇದು ಯಾರಿಗೆ ಅವಶ್ಯಕ?
*35 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರಿಗೆ.
*ಗರ್ಭಪಾತ ಮರುಕಳಿಸುತ್ತಿರುವವರಿಗೆ.
*ಕೃತಕ ಗರ್ಭಧಾರಣೆ ಪದೇ ಪದೇ ವಿಫಲವಾಗುತ್ತಿರುವವರಿಗೆ.
*ಪುರುಷಸಂಬಂಧಿ ಫಲವಂತಿಕೆಯ ಗಂಭೀರ ಸಮಸ್ಯೆ ಎದುರಿಸುತ್ತಿರುವವರಿಗೆ.
ಅಡ್ವಾನ್ಸಡ್ ಮೆಟರ್ನಲ್ ಏಜ್ (ಅವಧಿ ದಾಟಿದ ಗರ್ಭಧಾರಣೆ): ಕ್ರೋಮೊಸೋಮ್‌ನಲ್ಲಿನ ಅಸಹಜತೆಯ ಪ್ರಮಾಣವು ಮಹಿಳೆಯ ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ.

ಅಂಡದಲ್ಲಿನ ಕ್ರೋಮೊಸೋಮ್ ಸಮರ್ಪಕವಾಗಿ ವಿಭಜನೆಯಾಗಲು ಸಾಧ್ಯವಾಗದೇ ಭ್ರೂಣದಲ್ಲಿ ಅಧಿಕ ಅಥವಾ ಕಡಿಮೆ ಕ್ರೋಮೊಸೋಮ್‌ಗೆ ಎಡೆ ಮಾಡಿಕೊಡುತ್ತದೆ.

ಈ ಅಸಹಜ ಕ್ರೋಮೊಸೋಮಿನ ಪ್ರಮಾಣವು 35–39 ವಯಸ್ಸಿನವರಲ್ಲಿ ಶೇ.20ಕ್ಕಿಂತಲೂ ಅಧಿಕವಿದ್ದರೆ, 40 ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಲ್ಲಿ ಶೇ. 40ರಷ್ಟು ಇರುತ್ತದೆ. ಹೀಗಾಗುವುದು ಗರ್ಭಧಾರಣೆಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಗರ್ಭಧಾರಣೆಯಾದರೂ ಗರ್ಭಪಾತದ ಸಾಧ್ಯತೆಯೂ ಇರುತ್ತದೆ. 

ಆದ್ದರಿಂದ ಪಿಜಿಎಸ್ ತಂತ್ರಜ್ಞಾನವು ಆರೋಗ್ಯಯುತ ಕ್ರೋಮೊಸೋಮ್‌ಗಳಿಂದ ಆರೋಗ್ಯಯುತ ಗರ್ಭಧಾರಣೆಯನ್ನು ಸಾಧ್ಯವಾಗಿಸುವುದಲ್ಲದೇ ಮಗುವಿನ ಮೇಲೂ ಯಾವುದೇ ಅಡ್ಡ ಪರಿಣಾಮ ಬೀರದಂತೆಯೂ ತಡೆಯಬಲ್ಲದು.

ಮರುಕಳಿಸುವ ಗರ್ಭಪಾತ: ಗರ್ಭ ಧರಿಸಿದ 20 ವಾರಗಳ ಒಳಗೆ ಗರ್ಭಪಾತವಾಗುವ ಸಂಭವವು ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಭವಿಸಿದರೆ ಅದನ್ನು ರಿಕರೆಂಟ್ ಪ್ರೆಗ್ನೆನ್ಸಿ ಲಾಸ್ (ಆರ್‌ಪಿಎಲ್) ಎನ್ನುತ್ತಾರೆ.

ಆರ್‌ಪಿಎಲ್ ಸಮಸ್ಯೆ ಇರುವ ದಂಪತಿಯಲ್ಲಿ ಕ್ರೋಮೊಸೋಮ್‌ಗಳ ಅಸಹಜತೆಯು ಶೇ. 50–80ರಷ್ಟಿರುತ್ತದೆ. ಹೀಗಿದ್ದಾಗ, ಪಿಜಿಎಸ್ ಆರೋಗ್ಯಕರ ಗರ್ಭಧಾರಣೆಯ ಸಾಧ್ಯತೆಯನ್ನು  ಒದಗಿಸುತ್ತದೆ.

ವಿಫಲ ಕೃತಕ ಗರ್ಭಧಾರಣೆ: ಅತ್ಯುತ್ತಮ ಮಟ್ಟದ ಭ್ರೂಣವಿದ್ದರೂ ಮೂರು ಅಥವಾ ಅದಕ್ಕೂ ಹೆಚ್ಚು ಬಾರಿ ಕೃತಕ ಗರ್ಭಧಾರಣೆಯು ಫಲ ಕೊಡದೇ ಇದ್ದಾಗ ಅದನ್ನು ಆರ್‌ಐಎಫ್ -ರಿಕರೆಂಟ್ ಐವಿಎಫ್ ಫೇಲ್ಯೂರ್ ಎಂದು ಪರಿಗಣಿಸಲಾಗುತ್ತದೆ. ಕ್ರೋಮೊಸೋಮ್‌ನ ಅಸಹಜತೆ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಈ ರೀತಿ ಆಗುತ್ತದೆ. ಆದರೆ ಹೀಗಾದ ಪಕ್ಷದಲ್ಲಿ ಪಿಜಿಎಸ್‌ನಿಂದ ಗರ್ಭಧಾರಣೆ ಸಾಧ್ಯವಾದದ್ದನ್ನೂ ಯಾವುದೇ ಅಧ್ಯಯನವೂ ಸಾಬೀತುಪಡಿಸಿಲ್ಲ.

ಕ್ರೋಮೊಸೋಮ್‌ನ ಅಸಹಜತೆ ಈ ಸಮಸ್ಯೆಗೆ ಒಂದು ಕಾರಣವಾಗಿದ್ದರೂ ಹಲವು ರೋಗನಿರೋಧಕ ಅಂಶಗಳು ಹಾಗೂ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಕೃತಕ ಗರ್ಭಧಾರಣೆಗೆ ತಡೆಯಾಗಬಲ್ಲವು ಎಂಬುದನ್ನು ತಳ್ಳಿಹಾಕುವಂತಿಲ್ಲ.

ಪುರುಷಸಂಬಂಧಿ ಫಲವಂತಿಕೆ ಸಮಸ್ಯೆ
ವಾತಾವರಣವೂ ಒಳಗೊಂಡಂತೆ ಹಲವು ಅಂಶಗಳು ಪುರುಷರಲ್ಲಿ ಕ್ರೋಮೊಸೋಮ್‌ಗಳ ಅಸಹಜತೆಗೆ ಕಾರಣವಾಗಬಹುದು. ಈ ಅಪಾಯವು  ಪುರುಷರಲ್ಲಿ ಫಲವಂತಿಕೆಯ ಗಂಭೀರ ಸಮಸ್ಯೆಗೆ ಶೇ. 30–70ರಷ್ಟು ಕಾರಣವಾಗಬಲ್ಲದು.

ಹೀಗಿದ್ದ ಪುರುಷರು ನೈಸರ್ಗಿಕ ಅಥವಾ ಇಂಟ್ರಾಯುಟೆರಿನ್‌ ಇನ್‌ಸೆಮಿನೇಷನ್‌ನಂಥ (ಕೃತಕ ಗರ್ಭಧಾರಣೆ) ವಿಧಾನದ ಮೂಲಕ ಮಗುವನ್ನು ಪಡೆಯಲು ಪ್ರಯತ್ನಿಸಿದರೂ ಅಸಹಜ ಮಗು ಜನಿಸುವ ಸಾಧ್ಯತೆ ಹೆಚ್ಚು.

ಪುರುಷರಲ್ಲಿನ ಕೆಲವು ವಂಶವಾಹಿ ದೋಷಗಳು
* ಎಕ್ಸ್‌–ಕ್ರೋಮೊಸೋಮ್‌ ಅಧಿಕವಾಗಿ ಉಂಟಾಗುವ ಸಮಸ್ಯೆ–ಲೈನ್‌ಫೆಲ್ಟರ್ ಸಿಂಡ್ರೋಮ್
* ಕ್ರೋಮೊಸೋಮ್‌ನ ಸಮಸ್ಯೆಯಾದ ರಾಬರ್ಟ್‌ಸೋನಿಯನ್ ಟ್ರಾನ್ಸ್‌ಲೊಕೇಷನ್
* ವೈ–ಕ್ರೋಮೊಸೋಮ್ ಮೈಕ್ರೊಡಿಲೀಷನ್
* ಆ್ಯಂಡ್ರೋಜೆನ್ ರಿಸೆಪ್ಟರ್ ಮ್ಯುಟೇಷನ್ 
ಪಿಜಿಎಸ್ /ಪಿಜಿಡಿ ತಂತ್ರಜ್ಞಾನದಿಂದ ಕ್ರೋಮೊಸೋಮಿನ ಅಸಹಜತೆ ತಪ್ಪಿಸುವ ಮೂಲಕ ಪುರುಷಸಂಬಂಧಿ ಫಲವಂತಿಕೆಯ ಸಮಸ್ಯೆಯನ್ನು ತಡೆಯಬಹುದು.

ಈ ತಂತ್ರಜ್ಞಾನಗಳು ಅವಶ್ಯಕವೇಕೆ?
ಹಲವು ಆನುವಂಶಿಕ ಸಮಸ್ಯೆಗಳಿಗೆ ಸಂಪೂರ್ಣ ನಿವಾರಣೆ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಮುಂದೆ ನಿವಾರಣೆಯ ಸಾಧ್ಯತೆಗಳನ್ನು ಕಾಯುತ್ತಾ ಕೂರುವ ಬದಲು ಲಭ್ಯವಿರುವ ತಂತ್ರಜ್ಞಾನದಿಂದ ಸಮಸ್ಯೆಗಳನ್ನು ತೊಡೆದುಹಾಕುವುದು ಒಳ್ಳೆಯದು.

ಭವಿಷ್ಯದಲ್ಲಿ, ಈಗ ಸಾಮಾನ್ಯ ಸಮಸ್ಯೆಗಳು ಎನ್ನಿಸಿಕೊಂಡಿರುವ ಮಧುಮೇಹ, ಹೈಪರ್ ಟೆನ್ಷನ್, ಹೃದಯ ಸಂಬಂಧಿ ಸಮಸ್ಯೆಗಳು, ಎಂಡೊಮೆಟ್ರಿಯೋಸಿಸ್, ಕ್ಯಾನ್ಸರ್‌ಗಳಿಗೂ ಆನುವಂಶಿಕಕ್ಕೆ ತಳಕು ಹಾಕಿಕೊಂಡಿದ್ದು, ಈ ಸಮಸ್ಯೆಗಳು  ಮಗುವಿನಲ್ಲೂ ವರ್ಗಾವಣೆಯಾಗದಂತೆ ನಿಯಂತ್ರಿಸುವಲ್ಲಿ ಪಿಜಿಡಿ ಭವಿಷ್ಯದ ಪೀಳಿಗೆಗೆ ದೊಡ್ಡ ಮಟ್ಟದಲ್ಲಿ ಅನುಕೂಲಕ್ಕೆ ಬರಬಹುದು.  ಚಿಕಿತ್ಸೆಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ, ಅದರ ಜೊತೆಯಲ್ಲಿ ಕೆಲವು ವಿವಾದಗಳೂ ಹುಟ್ಟಿಕೊಳ್ಳಬಹುದು.

ಪೋಷಕರ ಆಯ್ಕೆಯಲ್ಲವೇ?
ಆನುವಂಶಿಕ ಸಮಸ್ಯೆಗೆ ಪ್ರಸ್ತುತ ಆಮ್ನಿಸೆಂಟೆಸಿಸ್ ಅಥವಾ ಕೋರಿಯೋನಿಕ್ ವಿಲ್ಲಸ್ ಟೆಸ್ಟಿಂಗ್ (ಸಿವಿಎಸ್) ಅನ್ನು ಪ್ರಸವಪೂರ್ವ ಪರೀಕ್ಷೆಯಾಗಿ ಭ್ರೂಣವು 10–16 ವಾರದಲ್ಲಿದ್ದಾಗ ಕೈಗೊಳ್ಳಲಾಗುತ್ತಿದೆ.

ಈ ಪರೀಕ್ಷೆಯಲ್ಲಿ ಭ್ರೂಣದಲ್ಲಿ ಯಾವುದೇ ಆನುವಂಶಿಕ ತೊಂದರೆ ಕಂಡುಬಂದಲ್ಲಿ, ಇರುವ ಆಯ್ಕೆಯೆಂದರೆ, ಸಮಸ್ಯೆಯಿರುವ ಮಗುವನ್ನು ಪಡೆಯುವುದು ಇಲ್ಲವೇ ಗರ್ಭಪಾತ. ಇದು ಅತಿ ಕಷ್ಟಕರ ಹಾಗೂ ಕಠಿಣ ನಿರ್ಧಾರ.  ಆದರೆ ಪಿಜಿಡಿಯನ್ನು ಗರ್ಭಧಾರಣೆ ಮುನ್ನವೇ ನಡೆಸುವುದರಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳುವ ಪ್ರಮೇಯ ಬರುವುದೂ ಕಡಿಮೆಯೇ.

ಈ ಮುನ್ನ, ಆನುವಂಶಿಕ ಆರೋಗ್ಯ ಸಮಸ್ಯೆ ಇರುವವರು ಅಥವಾ ಆ ಸಾಧ್ಯತೆ ಇರುವವರಿಗೆ ಮಕ್ಕಳನ್ನು ಪಡೆಯದ ಆಯ್ಕೆಯನ್ನೇ ಆರಿಸಿಕೊಳ್ಳಲು ಸಲಹೆ ನೀಡಲಾಗುತ್ತಿತ್ತು. ಮುಂದಿನ ಪೀಳಿಗೆಗೆ ಸಮಸ್ಯೆ ಮುಂದುವರೆಯದಿರಲಿ ಎಂಬ ಕಾರಣಕ್ಕೆ ಈ ಸಲಹೆ ನೀಡಲಾಗುತ್ತಿತ್ತು. ಆದರೆ ಪಿಜಿಡಿಯಂಥ ಕೆಲವು ತಂತ್ರಜ್ಞಾನಗಳು ಇಂಥ ಯಾವುದೇ ಸಮಸ್ಯೆಗಳಿಲ್ಲದೇ ಮಗುವನ್ನು ಪಡೆಯಲು ನೆರವು ಮಾಡಿಕೊಡುತ್ತಿವೆ. ಇದರೊಂದಿಗೆ, ವಿಶ್ವದಲ್ಲಿ ಪಿಜಿಡಿ ಹಾಗೂ ಪಿಜಿಎಸ್ ತಂತ್ರಜ್ಞಾನದ ಮೂಲಕ ಸಾವಿರಾರು ಆರೋಗ್ಯವಂತ ಮಕ್ಕಳೂ ಜನಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT