ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ‘ದ್ರಾವಕ’ ವ್ಯಸನ

Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

ಗಾರ್ಮೆಂಟ್ ಉದ್ಯೋಗಿಗಳಾಗಿದ್ದ ಶ್ರೀನಿವಾಸ್ ದಂಪತಿಗಳ ಮಗ ಅರ್ಜುನ್ ಆರನೇ ತರಗತಿಯಲ್ಲಿ ಓದುತ್ತಿದ್ದ. ಇತರ ಮಕ್ಕಳಂತೆ ವಯಸ್ಸಿಗೆ ತಕ್ಕಂತೆ ಆಟ, ಪಾಠದಲ್ಲಿ ತೊಡಗಿದ್ದ. ಶಾಲೆಯಲ್ಲಿ ಅತಿ ಬುದ್ಧಿವಂತನಾಗಿರದಿದ್ದರೂ, ತನ್ನ ಓದನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದ.

ಒಮ್ಮೆ ಶ್ರೀನಿವಾಸ ದಂಪತಿಗಳು ತಮ್ಮ ಬಾಡಿಗೆಮನೆಯನ್ನು ಬದಲಾಯಿಸಬೇಕಾಯಿತು. ಮನೆ ಬದಲಾದಂತೆ ಮಗನ ವರ್ತನೆಯೂ ಬದಲಾಯಿತು. ಮೊದಲು ಪ್ರತಿದಿನ ಶಿಸ್ತಿನಿಂದ ಶಾಲೆಗೆ ಹೋಗುತ್ತಿದ್ದವನು ಆಮೇಲೆ ಆ ಕಡೆ ಹೋಗುವುದನ್ನು ನಿಲ್ಲಿಸಿದ. ಅವನ ಬ್ಯಾಗ್‌ನಲ್ಲಿ ಯಾವಾಗಲೂ ವೈಟನರ್ ಟ್ಯೂಬ್‌ಗಳಿರುತ್ತಿದ್ದವು. ಅವುಗಳ ಬಗ್ಗೆ ಪ್ರಶ್ನಿಸಿದರೆ ಅದು ಟೀಚರ್‌ಗೆ ಬೇಕು ಎನ್ನುತ್ತಿದ್ದ.

ಈ ನಡುವೆ ಅರ್ಜುನ್ ಸದಾ ನಿದ್ದೆಯ ಮಂಪರಿನಲ್ಲಿರುತ್ತಿದ್ದ. ಪದೇ ಪದೇ ವಾಂತಿ, ಬೇಧಿ ಆಗುತ್ತಿತ್ತು. ಹಸಿವು ಕಡಿಮೆಯಾಗಿ ಊಟ–ತಿಂಡಿಗಳನ್ನು ನಿಲ್ಲಿಸಿದ್ದ. ದಿನೇ ದಿನೇ ದೇಹ ಬಡಕಲಾಗತೊಡಗಿತು. ಮನೆಯವರ ಮೇಲೆ ಕೋಪ ತೋರುವುದು, ಕಿರಿಕಿರಿ ಮಾಡುವುದು, ಅಳುವುದು ಹೆಚ್ಚಾಗತೊಡಗಿತು. ಪದೇ ಪದೇ ಹಣ ಕೇಳುತ್ತಿದ್ದ. ಆದರೆ ಕಾರಣ ಹೇಳುತ್ತಿರಲಿಲ್ಲ.

ದೈವಭಕ್ತಿ ಅಪಾರವಿದ್ದ  ತಂದೆತಾಯಿಗಳು ದ್ವೆವದ ಪ್ರಭಾವವಿರಬಹುದು ಎಂದು ಆಂಜನೇಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದರೂ ಸಹ ಮಗನ ವರ್ತನೆಯಲ್ಲಿ ಬದಲಾವಣೆ ಕಾಣಿಸಲಿಲ್ಲ.  ಕೊನೆಗೆ ಶಿಕ್ಷಕರನ್ನು ಈ ವಿಷಯದ ಬಗ್ಗೆ ವಿಚಾರಿಸಿದಾಗ, ವೈಟ್‌ನರ್ ಟ್ಯೂಬ್‌ಗಳ ವಿಷಯ ಬೆಳಕಿಗೆ ಬಂದಿತ್ತು. ಅದರಿಂದ ಮಕ್ಕಳು ನಶೆಯಲ್ಲಿ ತೇಲುತ್ತಿದ್ದಾರೆ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದರು.

ಅಕ್ಕಪಕ್ಕದ ಮನೆಯಲ್ಲೂ ವಿಚಾರಿಸಿದಾಗ ಆ ಮಕ್ಕಳು ಕೂಡ ಅರ್ಜುನ್‌ನಂತೆ ವರ್ತಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಬೇರೆ ದಾರಿ ಕಾಣದೆ ಮನೋರೋಗತಜ್ಞರ ಬಳಿ ಕರೆದುಕೊಂಡು ಹೋದಾಗ ಶ್ರೀನಿವಾಸ ದಂಪತಿಗೆ ‘ದ್ರಾವಕ ವ್ಯಸನ’ದ (so*vent abuse) ಇರುವಿಕೆ ಹಾಗೂ ಇದರ ಅಪಾಯಗಳ ಬಗ್ಗೆ ಗೊತ್ತಾಗಿತ್ತು. 

* * *
ಮದ್ಯಪಾನ, ತಂಬಾಕು,  ಗಾಂಜಾ ಇತ್ಯಾದಿಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ವ್ಯಸನದ ವಸ್ತುಗಳು. ಇವುಗಳ ಬಗ್ಗೆ ಸರ್ಕಾರ ಅನೇಕ ಕಾನೂನುಗಳನ್ನು ಮಾಡಿದ್ದರೂ ಸಹ ಮಾದಕವಸ್ತುಗಳ ಸೇವನೆ ಅವ್ಯಾಹತವಾಗಿ ನಡೆದಿವೆ.

ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಇನ್ನೊಂದು  ಆಘಾತಕಾರಿ ಹಾಗೂ ಆಶ್ಚರ್ಯಕರ ವಿಷಯವೆಂದರೆ  ದ್ರಾವಕ ವ್ಯಸನ (so*vent abuse). ವೈಟ್‌ನರ್, ಗೋಂದು (g*ue), ಉಗುರಿಗೆ ಹಚ್ಚುವ ಬಣ್ಣವನ್ನು ತೆಗೆಯಲು ಬಳಸುವ ದ್ರವ (nai* po*ish remover), ಪೆಟ್ರೋಲ್ – ಇನ್ನೂ ಮುಂತಾದ ದ್ರಾವಕಗಳನ್ನು ಮಕ್ಕಳು ಹಾಗೂ ಹದಿಹರೆಯದವರು ವ್ಯಸನಕ್ಕಾಗಿ ಬಳಸುತ್ತಿದ್ದಾರೆ.

ಸಮಾಜದಲ್ಲಿ ಈ ದುಶ್ಚಟದ ಬಗ್ಗೆ ಅರಿವು ಕಡಿಮೆ. ಹೀಗಾಗಿ ಈ ಸಮಸ್ಯೆಯನ್ನು ಇನ್ನೂ ಅಷ್ಟು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ.  ಸಮಸ್ಯೆಗೆ ಚಿಕಿತ್ಸೆ ಬಯಸಿ ವೈದ್ಯರಲ್ಲಿಗೆ ಬರುವವರ ಸಂಖ್ಯೆ ತುಂಬ ಕಡಿಮೆ. ಆದರೆ ಈ ವ್ಯಸನಕ್ಕೆ ದಾಸರಾಗಿರುವ ಮಕ್ಕಳುಮತ್ತು ಹದಿಹರೆಯದವರ ಸಂಖ್ಯೆ ಅಧಿಕ. ಈ ವ್ಯಸನವು ವ್ಯಕ್ತಿಯ ದೈಹಿಕ, ಮಾನಸಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಜೀವನವನ್ನು ಜರ್ಜರಿತಗೊಳಿಸಿ, ಪ್ರಾಣಕ್ಕೆ ಸಂಚಕಾರವನ್ನೂ ತರಬಹುದು. ಈ ನಿಟ್ಟಿನಲ್ಲಿ ದ್ರಾವಕ ವ್ಯಸನದ ಬಗ್ಗೆ ಅರಿವು ಹಾಗೂ ಎಚ್ಚರಿಕೆ ತುಂಬ ಮುಖ್ಯ.

ದ್ರಾವಕಗಳ (So*vent) ಬಗೆಗಳು: ಗೋಂದು, ಬಣ್ಣ ತಿಳಿಗೊಳಿಸುವ ದ್ರಾವಕ (paint thinner), ಪೆಟ್ರೋಲ್, ವೈಟ್‌ನರ್, ಕೂದಲಿನ ಸ್ಪ್ರೇಗಳು, ಡಿಯೋಡ್ರೆಂಟ್ಸ್, ಸ್ಪ್ರೇಪೇಂಟ್ಸ್, ಅರಿವಳಿಕೆ ಅನಿಲಗಳಾದ  ಈಥರ್, ಕ್ಲೋರೋಫಾರ್ಮ್‌ ಇವುಗಳಲ್ಲಿ ಕರೆಕ್ಷನ್ ದ್ರವ ಅಥವಾ ವೈಟನರ್ ವ್ಯಸನವು ಅತಿಯಾಗಿ ಕಂಡುಬರುತ್ತಿದೆ.

ದ್ರಾವಕ ವ್ಯಸನ ವಸ್ತುಗಳು ಸಿಗುವ ಬಗೆ: ದ್ರಾವಕಗಳು ದಿನನಿತ್ಯದ ಅವಶ್ಯಕತೆಯ ವಸ್ತುಗಳು. ಇವು ಮನೆ, ಕಚೇರಿ, ಶಾಲಾ–ಕಾಲೇಜುಗಳಲ್ಲಿ ಸುಲಭವಾಗಿ ದೊರೆಯುತ್ತವೆ. ಬೆಲೆಯೂ ಅಗ್ಗ. ಹೀಗಾಗಿ ಮಕ್ಕಳು, ಹದಿಹರೆಯದವರಿಗೆ ದ್ರಾವಕಗಳು ಸರಳವಾಗಿ ಕೈಗೆಟುಕುತ್ತವೆ. ಭಾರತದಲ್ಲಿ ಈ ವ್ಯಸನದ ಬಗ್ಗೆ ಜಾಗೃತಿ ಕಡಿಮೆ ಇರುವುದರಿಂದ ಇದರ ಪ್ರಮಾಣ ಹಾಗೂ ಅಗಾಧತೆಯನ್ನು ನಿಖರವಾಗಿ ಪತ್ತೆ ಹಚ್ಚುವುದು ಕಷ್ಟ. ಒಂದು ಸಂಶೋಧನೆಯ ಪ್ರಕಾರ ಶೇ. 6ರಿಂದ 10 ರಷ್ಟು ಮಕ್ಕಳು ಹಾಗೂ ಹದಿಹರೆಯದವರಲ್ಲಿ ದ್ರಾವಕ ವ್ಯಸನ ಕಂಡುಬಂದಿದೆ.

ವ್ಯಸನಕ್ಕೆ ಏನು ಕಾರಣ?
*ವಯೋಸಹಜ ಕುತೂಹಲ, ಹೊಸ ಅನುಭವಗಳ ತುಡಿತ, ದುಶ್ಚಟ ಮಾಡುವ ಗೆಳೆಯರ ಒಡನಾಟ.
*ಸಮಸ್ಯೆಗಳನ್ನು ಮರೆಯುವ ಸಲುವಾಗಿ. 
*ದ್ರಾವಕಗಳು ಸುಲಭವಾಗಿ ಲಭ್ಯವಿರುವುದು. 
*ಕಾನೂನಿನ ಭಯವಿಲ್ಲದಿರುವುದು.
*ದ್ರಾವಕಗಳ ಸೇವನೆಯನ್ನು ನಿಲ್ಲಿಸಿದಾಗ ಅನುಭವಿಸುವ ವಿತ್‌ಡ್ರಾವಲ್ ಲಕ್ಷಣಗಳಿಂದ (withdrawa* symptoms) ಪಾರಾಗಲು.
ದ್ರಾವಕಗಳನ್ನು ವ್ಯಸನಿಗಳು ಉಪಯೋಗಿಸುವ ವಿಧಾನ: ದ್ರಾವಕವನ್ನು ನೇರವಾಗಿ ಮೂಸುವುದು (sniffing), ಪ್ಲಾಸ್ಟಿಕ್ ಚೀಲದಲ್ಲಿ ದ್ರಾವಕವನ್ನು ಹಾಕಿ ಅದರಿಂದ ಬರುವ  ಹಬೆಯನ್ನು ಸೇವಿಸುವುದು (bagging) ಅಥವಾ ಬಟ್ಟೆಯ ತುಂಡಿನ ಮೇಲೆ ದ್ರಾವಕವನ್ನು ಸಿಂಪಡಿಸಿ ಅದನ್ನು ಬಾಯಿ ಅಥವಾ ಮೂಗಿನ ಮೇಲೆ ಹಿಡಿದುಕೊಳ್ಳವುದು (huffing).

ದ್ರಾವಕವನ್ನು ಮೂಸಿದ/ ಸೇವಿಸಿದ ನಂತರ ಕೆಲವು ನಿಮಿಷಗಳಿಂದ ಗಂಟೆಗಳವರೆಗೆ ವ್ಯಕ್ತಿಯು ಉನ್ಮಾದದ ಉತ್ತುಂಗಕ್ಕೆರುತ್ತಾನೆ. ತಲೆ ಹಗುರವೆನಿಸಿ  ಭ್ರಮಾಲೋಕದಲ್ಲಿ ತೇಲಾಡಿದಂತೆನಿಸಿಸುತ್ತದೆ. ಬಣ್ಣಗಳು, ವಸ್ತುಗಳು ಅತಿ ಸುಂದರವಾಗಿ ಕಾಣಿಸಬಹುದು. ತಾತ್ಕಾಲಿಕವಾಗಿ ವಾಸ್ತವಿಕತೆಯಿಂದ ದೂರ ಸರಿಯುತ್ತಾನೆ. ತನ್ನ ಮೇಲಿನ ಹತೋಟಿ ಕಳೆದುಕೊಂಡು ಅತಿರೇಕದಿಂದ ವರ್ತಿಸಬಹುದು. ನಂತರ ವ್ಯಕ್ತಿಯು ಈ ನಶೆಯ ಅನುಭವಗಳನ್ನು ಸತತವಾಗಿ ಪಡೆಯಲು ಪದೆ ಪದೇ ದ್ರಾವಕಗಳ ಸೇವನೆ ಮಾಡುತ್ತಾನೆ.

ಅತಿಯಾದ ಸೇವನೆಯ ಪರಿಣಾಮ: ಆರಂಭದಲ್ಲಿ ಅತಿಯಾದ ಸೇವನೆಯಿಂದ ವಾಂತಿ, ಬೇಧಿ, ಹೊಟ್ಟೆನೋವು,  ತಲೆನೋವು ಹಾಗೂ ತಲೆಸುತ್ತುವುದು ಉಂಟಾಗುತ್ತದೆ. ಅನಂತರದ ಹಂತದಲ್ಲಿ ದೃಷ್ಟಿ ಮಂಜಾಗುವುದು, ವಿಪರೀತ ತಲೆ ನೋವು, ಮಂಪರು, ಗೊಂದಲ ಹಾಗೂ ದಿಗ್ಭ್ರಮೆ ಉಂಟಾಗುವುದು. ದೀರ್ಘಕಾಲದ ಉಪಯೋಗದಿಂದ ಹೃದಯದ ಬಡಿತದಲ್ಲಿ ಏರುಪೇರಾಗಿ ಹೃದಯ ಸ್ತಂಭನವಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವನೆಮಾಡಿದಾಗ, ವ್ಯಕ್ತಿಯು ಕೋಮಾಕ್ಕೆ ಜಾರಿ, ಉಸಿರಾಟದ ತೊಂದರೆಯಿಂದ ಅಸುನೀಗಬಹುದು.

ದ್ರಾವಕಗಳ ಸೇವನೆ ಮಾಡಿದ ಕೆಲವು ನಿಮಿಷಗಳಿಂದ ಗಂಟೆಗಳವರೆಗೆ ಮಾತ್ರ ಅದರ ಉನ್ಮಾದದ ಅನುಭವಗಳು ಇರುತ್ತವೆ. ನಂತರ  ಕ್ರಮೇಣ ಅದರ ಪ್ರಭಾವ ಕಡಿಮೆಯಾಗುತ್ತದೆ. ದ್ರಾವಕದ ಪ್ರಭಾವ ಸಂಪೂರ್ಣ ಮುಗಿದ ನಂತರ, ವಿತ್‌ಡ್ರಾವಲ್ ಲಕ್ಷಣಗಳು (withdrawa* symptoms) ಶುರುವಾಗುತ್ತವೆ.

ವ್ಯಕ್ತಿಯಲ್ಲಿ ಅತಿಯಾದ ಕೋಪ, ಭಯ, ಆತಂಕ, ಖಿನ್ನತೆ, ಹಿಂಸಾತ್ಮಕ ನಡುವಳಿಕೆ, ನಿದ್ರಾಹೀನತೆ, ನಡುಕ ಉಂಟಾಗಬಹುದು. ಜೊತೆಗೆ ದ್ರಾವಕ ಸೇವನೆಯ ಕಡುಬಯಕೆ (craving) ಉಂಟಾಗುತ್ತದೆ. ಸೇವನೆಯ ನಂತರ ಈ ವಿತ್‌ಡ್ರಾವಲ್ ಲಕ್ಷಣಗಳು ಕಡಿಮೆಯಾಗುತ್ತವೆ.

ದುಷ್ಪರಿಣಾಮಗಳು: ದೀರ್ಘಕಾಲದ ಸೇವನೆಯು ದೇಹದ ಬಹುತೇಕ ಅಂಗಾಂಗಗಳ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಹೃದಯದ ಬಡಿತದ ತೊಂದರೆಗಳು (arrhythmia), ಮಯೋಕಾರ್ಡೈಟಿಸ್, ಲಿವರ್ ಸಮಸ್ಯೆಗಳು, ರಕ್ತಹೀನತೆ, ಲ್ಯುಕೀಮಿಯ, ಕಿಡ್ನಿವೈಫಲ್ಯ, ಮೆದುಳಿನ ಸವೆತ, ಕೈ ಕಾಲು ನಡುಕ ಉಂಟಾಗಬಹುದು.

ಮರೆವಿನ ಕಾಯಿಲೆ (ಡೆಮೆನ್ಶಿಯ) , ಬುದ್ಧಿಮತ್ತೆಯ ಪ್ರಮಾಣ ಕಡಿಮೆಯಾಗುವುದು, ಏಕಾಗ್ರತೆಯ ಕೊರತೆ, ನಿದ್ರಾಹೀನತೆ, ಸ್ಕಿಝೋಫ್ರೇನಿಯದಂತಹ ಭೀಕರ ಕಾಯಿಲೆಗಳು ಉಂಟಾಗಬಹುದು. ಕೆಲವೊಬ್ಬರಲ್ಲಿ ಮೊದಲ ಬಾರಿ ದ್ರಾವಕಗಳ ಸೇವನೆಯೂ ಸಹ ಪ್ರಾಣಕ್ಕೆ ಸಂಚಕಾರ ತರಬಹುದು. ಸಡನ್ ಸ್ನಿಫಿಂಗ್ ಡೆತ್ ಸಿಂಡ್ರೋಮ್ (udden sniffing death syndrome).

ಸಾಮಾಜಿಕ ದುಷ್ಪರಿಣಾಮಗಳು: ಏಕಾಗ್ರತೆ ಕೊರತೆ ಹಾಗೂ ನೆನಪಿನ ಶಕ್ತಿಯ ಸಮಸ್ಯೆಗಳಿಂದ ಮಕ್ಕಳು–ಹದಿಹರೆಯದವರು ಶಾಲಾ–ಕಾಲೇಜುಗಳಿಗೆ ಹೋಗದಿರಬಹುದು. ಕುಟುಂಬದವರು, ನೆರೆಹೊರೆಯವರ ಜೊತೆ ಸಂಬಂಧ ಹಳಸಬಹುದು. ಇತರ ಮಾದಕ ವಸ್ತುಗಳ (ಮದ್ಯಪಾನ, ಗಾಂಜಾ, ಹೆರೋಯಿನ್) ವ್ಯಸನಕ್ಕೆ ಬಲಿಯಾಗಿ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಬಹುದು. ಮನೋರೋಗಗಳಿಗೆ ತುತ್ತಾಗಿ ಆತ್ಮಹತ್ಯೆಗೆ ಪ್ರಯತ್ನಿಸಬಹುದು.

ತಡೆಗಟ್ಟುವುದು ಹೇಗೆ?
*ದ್ರಾವಕಗಳ ವ್ಯಸನದ ಬಗ್ಗೆ ಪಾಲಕರಲ್ಲಿ, ಶಿಕ್ಷಕವೃಂದದಲ್ಲಿ ಹಾಗೂ ಸಮಾಜದಲ್ಲಿ ಅರಿವು ಮೂಡಿಸುವುದು.
*ಕುಟುಂಬದ ಹಿರಿಯರು ಮಾದಕ ವಸ್ತುಗಳ ಸೇವನೆಯನ್ನು ತ್ಯಜಿಸುವುದು.
*ಮಕ್ಕಳ ಹಾಗೂ  ಹದಿಹರೆಯದವರ ದಿನನಿತ್ಯದ ಚಟುವಟಿಕೆ, ಆಟ ಪಾಠಗಳ ಮೇಲೆ ಸೂಕ್ಷ್ಮ ನಿಗಾ ಇಡುವುದು.
*ಅವರ ವರ್ತನೆಯಲ್ಲಿ ಏನಾದರು ಬದಲಾವಣೆ ಕಂಡು ಬಂದಲ್ಲಿ, ಕೂಡಲೇ ಅವರೊಂದಿಗೆ ವಿಶ್ವಾಸದಿಂದ ಮಾತನಾಡುವುದು. ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು.
*ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಯುವಂತೆ ಹಾಗೂ ಮನಸ್ಸಿಗೆ ನಾಟುವಂತೆ ವಿವರಿಸುವುದು.
*ತರಗತಿಯಲ್ಲಿ ಅಥವಾ ಸುತ್ತಮುತ್ತಲಿನ ಬೇರೆ ಮಕ್ಕಳ ದುಶ್ಚಟಗಳ ಬಗ್ಗೆ ಮಾಹಿತಿ ಪಡೆಯುವುದು.
*ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಶಾಲಾ–ಕಾಲೇಜುಗಳಲ್ಲಿ ಗುಂಪುಚರ್ಚೆ, ಪ್ರಬಂಧಸ್ಪರ್ಧೆ, ಚಿತ್ರಕಲಾಸ್ಪರ್ಧೆ ಮುಂತಾದ ಚಟುವಟಿಕೆಗಳನ್ನು ಏರ್ಪಡಿಸುವುದು.
*ದುಶ್ಚಟಗಳ ದುಶ್ಪರಿಣಾಮಗಳ ಮಾಹಿತಿಯನ್ನು  ಪಠ್ಯದಲ್ಲಿ ಅಳವಡಿಸುವುದು. 
*ವ್ಯಸನದ ಬಗ್ಗೆ ಮಾಹಿತಿ ಗೊತ್ತಾದರೆ ತಕ್ಷಣ ಮನೋವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯುವುದು.
*ದ್ರಾವಕಗಳನ್ನು  ಮಾರುವ ವ್ಯಾಪಾರಿಗಳಲ್ಲಿಯೂ ಸಹ ಈ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವುದು. ಮಕ್ಕಳು ಅಥವಾ ಹದಿಹರೆಯದವರಿಗೆ ದ್ರಾವಕಗಳನ್ನು ಮಾರಾಟ ಮಾಡುವ ಬಗ್ಗೆ ಎಚ್ಚರ ವಹಿಸುವುದು.
*ದ್ರಾವಕಗಳ ಮಾರಾಟದ ನಿಯಂತ್ರಣದ ಬಗ್ಗೆ ಕಠಿಣ ಕಾನೂನು ರಚನೆ ಹಾಗೂ ಪಾಲನೆ.
ದುಶ್ಚಟಗಳು ಎಳೆಯ ಮನಸ್ಸಿನ ಮುಗ್ಧತೆಯನ್ನು ಹಾಳು ಮಾಡಿ, ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತವೆ. ಜಾಗೃತರಾಗಿರಿ ಮತ್ತು ವ್ಯಸನಗಳನ್ನು ಮೊಳಕೆಯಲ್ಲಿಯೇ ಚಿವುಟಿ.

ವ್ಯಸನಕ್ಕೆ ತುತ್ತಾಗುವವವರು?
* ಹೊಂದಾಣಿಕೆ ಸಮಸ್ಯೆಯಿರುವ ಪೋಷಕರು ಮಕ್ಕಳ ಮೇಲೂ ಪ್ರೀತಿ ವಿಶ್ವಾಸ ತೋರುವುದನ್ನು ಕಡಿಮೆ ಮಾಡುತ್ತಾರೆ. ಮಕ್ಕಳ ಮೇಲೆ ತಂದೆ–ತಾಯಿ ಆಗಾಗ ಗಮನ ಕೊಡುತ್ತಿರಬೇಕು. ಇಲ್ಲದಿದ್ದರೆ ಮಕ್ಕಳು ವ್ಯಸನಕ್ಕೆ ತುತ್ತಾಗುವುದು ಖಂಡಿತ. 
* ಪಾಲಕರಲ್ಲಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿದ್ದರೆ ಹಾಗೂ ಅವರು ಸಮಾಜವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರ ಮಕ್ಕಳಿಗೆ ದ್ರಾವಕ ವ್ಯಸನವು ಸುಲಭವಾಗಿಯೇ ಅಂಟಿಕೊಳ್ಳುತ್ತದೆ.
* ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಲ್ಲಿ, ಕೊಳಚೆ ಪ್ರದೇಶದಲ್ಲಿ ವಾಸಿಸುವ ಮಕ್ಕಳು, ಬಾಲಾಪರಾಧಿ ಪರಿವರ್ತನಾ ಕೇಂದ್ರಗಳ ನಿವಾಸಿಗಳು, ಬೀದಿಮಕ್ಕಳು, ಬಾಲ ಕಾರ್ಮಿಕರಲ್ಲಿ ಈ ವ್ಯಸನವು ಕಾಣಸಿಗುತ್ತದೆ.

ಚಿಕಿತ್ಸೆ
ದ್ರಾವಕ ವ್ಯಸನ ಕಂಡುಬಂದ ಕೂಡಲೇ ವ್ಯಕ್ತಿಯನ್ನು ಮನೋರೋಗತಜ್ಞರ ಬಳಿ ಕರೆದೊಯ್ಯಿರಿ. ವಿತ್‌ಡ್ರಾವಲ್ ಲಕ್ಷಣಗಳನ್ನು ಔಷಧೋಪಚಾರಗಳಿಂದ ಚಿಕಿತ್ಸಿಸಲಾಗುತ್ತದೆ. ದ್ರಾವಕ ಸೇವನೆಯ ಬಯಕೆಯನ್ನು (craving) ನಿಯಂತ್ರಿಸಲು ಹಾಗೂ ವ್ಯಸನವನ್ನು ಮರುಕಳಿಸದಂತೆ ತಡೆಯಲು, ಅನೇಕ ಔಷಧಗಳ ಹಾಗೂ ಮನೋಸಾಮಾಜಿಕ (psychosocial interventions) ಚಿಕಿತ್ಸೆಯ ಸಹಾಯ ಪಡೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT