ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಎಂಬ ಲಾಟರಿ

Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

ಮದುವೆಗೂ ಮುನ್ನ ಕಾಣುವ ಕನಸು, ಸಂತಸ, ನಿರೀಕ್ಷೆಗಳು, ಮದುವೆಯ ನಂತರ ನನಸಾಗುವಂತಿದ್ದರೆ? ಎಷ್ಟು ಜನರ ಬಾಳಲ್ಲಿ ಹಾಗಾಗಲು ಸಾಧ್ಯವಿದೆ? ಅದು ಒಂದು ತರಹ ಲಾಟರಿ ಇದ್ದ ಹಾಗೆ. ಖರೀದಿಸಿದ ಟಿಕೇಟುಗಳಿಗೆಲ್ಲ ಬಹುಮಾನ ಬರಲಾರದು. ಹಾಗೆಯೇ ಆದ ಮದುವೆಗಳೆಲ್ಲ ಸುಖಪ್ರದವೂ ಆಗಲಾರವು. ಅದು ಅವರವರ ಪಾಲಿಗೆ ಬರುವ ಅದೃಷ್ಟ–ದುರದೃಷ್ಟಗಳನ್ನು ಅವಲಂಬಿಸಿದೆ.

ವಿವಾಹವೆಂಬ ಘಟ್ಟಕ್ಕೆ ಬಂದು ನಿಂತಾಗ ನನ್ನ ಹೃದಯದಲ್ಲೂ ಅವೇ ಮಧುರವಾದ ಭಾವನೆಯ ಬುಗ್ಗೆಗಳು ಪುಟಿದೇಳತೊಡಗಿದ್ದವು. ವೆಚ್ಚಕ್ಕೆ ಕೈ ತುಂಬ ಸಂಬಳ ಬರುತ್ತಿತ್ತು. ಅರಿತು ನಡೆವ ಪತಿ ಸಿಕ್ಕರೆ ಸಾಕು ಎಂಬ ಆಸೆಯ ಬಲೂನಿಗೆ ಗಾಳಿ ತುಂಬಲು ಬಂದನೊಬ್ಬನು ರಾಜಕುಮಾರ. ‘ಮದುವೆ ಅಂತ ಆದರೆ ನಿನ್ನನ್ನೇ’ ಎಂದು ಹಟ ತೊಟ್ಟು ಗೆದ್ದುಬಿಟ್ಟನು ಕೂಡ.

ಒಂದೇ ಜಾತಿ ಎಂಬ ಕಾರಣಕ್ಕೆ ಇಬ್ಬರ ಮನೆಯಲ್ಲೂ ಸಮ್ಮತಿ ಸಿಕ್ಕಿತ್ತು. ಮದುವೆ ತಿಂಗಳಿರುವಾಗ ಅವನಿಗೆ ಅಪಸ್ಮಾರ ಕಾಯಿಲೆ ಇರುವುದು ತಿಳಿಯಿತು. ‘ಯೋಚಿಸಿ ನೋಡು’ ಎಂಬ ಮನೆಯವರ ಸಲಹೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಮದುವೆಯ ನಂತರ ತಿಳಿದಿದ್ದರೆ? ಎಂದು ಎಲ್ಲರ ಬಾಯಿಗೆ ಬೀಗ ಹಾಕಿದ್ದೆ. ಮದುವೆಯಾಗಿ ವರ್ಷದವರೆಗೂ ಜೀವನ ಸುಂದರವಾಗಿಯೇ ಇತ್ತು.

ಹೆಂಡತಿ ಸ್ನಾತಕೋತ್ತರ ಪದವೀಧರೆ, ತಾನೊಬ್ಬ ಬಿ.ಎ. ಪಾಸ್ ಎಂಬ ಇರಿಸು ಮುರಿಸು ಕೈ ಹಿಡಿದವನನ್ನು ಕಾಡತೊಡಗಿತ್ತು. ಕೈಯಲ್ಲಿದ್ದ ಚಿಕ್ಕ ಕೆಲಸವನ್ನು ಬಿಟ್ಟು ಮನೆಗೆ ಮೂಲವಾಗಿದ್ದ.  ಅವನಲ್ಲಿದ್ದ ಕೀಳರಿಮೆಯನ್ನು ಕಳೆಯಲು ಮುಂದೆ ಓದಲು ಸಹಕರಿಸಿದ್ದೆ. ಒಳ್ಳೆಯ ಕೆಲಸವೊಂದನ್ನು ಸೇರಿದ ಮೇಲೆ ಊಸರವಳ್ಳಿಯಂತೆ ಬಣ್ಣ ಬದಲಾಯಿಸಿದ್ದ. ಅಷ್ಟರಲ್ಲಿ ಹೆಣ್ಣುಮಗುವೊಂದರ ತಾಯಿಯಾದ ನನಗೆ ಜವಾಬ್ದಾರಿಯೂ ಹೆಚ್ಚಿತ್ತು.

ಶಿಫ್ಟ್‌ನಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯವಿದ್ದ ನಾನು ಕೆಲವೊಮ್ಮೆ ರಾತ್ರಿ ಮನೆಗೆ ಮರಳುತ್ತಿದ್ದೆ. ಬೆಳಿಗ್ಗೆ ಅವನಿನ್ನೂ ಮಲಗಿರುವಾಗಲೇ ಎಲ್ಲ ಕೆಲಸವನ್ನು ಮುಗಿಸಿ ಕೆಲಸಕ್ಕೆ ಹೋಗಬೇಕಿತ್ತು.

ನನ್ನ ವೃತ್ತಿಯ ಬಗ್ಗೆ ಸಂಪೂರ್ಣ ಅರಿವಿದ್ದರೂ ಅವನ ಅನುಮಾನದ ಹುತ್ತದಿಂದ ಬಗೆಬಗೆಯ ಮಾನಸಿಕ, ದೈಹಿಕ ಹಿಂಸೆಗಳು ತಲೆ ಎತ್ತಲಾರಂಭಿಸಿದ್ದವು. ಇದರಿಂದ ಬೇಸತ್ತ ನಾನು ಕೆಲಸಕ್ಕೆ ತಿಲಾಂಜಲಿಯನ್ನಿತ್ತೆ. ಪ್ರತಿ ದಿನವೂ ನನ್ನ ಫೋನ್ ತೆಗೆದು ಕರೆಗಳನ್ನು ನೋಡುತ್ತಿದ್ದ. ಆರು ವರ್ಷ ಕಳೆಯುವಷ್ಟರಲ್ಲಿ ಅವನೊಬ್ಬ ಮನೋರೋಗಿ, ಅತೃಪ್ತ ಎಂಬುದು ಅರಿವಾಗಿತ್ತು.

ಆತನ ಮನೆಯವರೂ ಆತನ ಜೊತೆ ಸಂಪರ್ಕವನ್ನು ಇಟ್ಟುಕೊಂಡಿರಲಿಲ್ಲ. ಹಾಗೆಂದು ನನ್ನ ಬೆಂಬಲಕ್ಕೆಂದು ಅವರೆಂದೂ ನಿಲ್ಲಲಿಲ್ಲ. ನನ್ನ ತವರುಮನೆಗೆ ನಾನು ಫೋನ್ ಮಾಡಿದಲ್ಲಿ ಅವನ ಹಿಂಸೆ ಹೆಚ್ಚುತ್ತಿತ್ತು. ಹಿಂಸೆ ಎಂದರೆ ಏನೆಂದು ಅರಿಯದ ನನಗೆ ಮದುವೆಯ ನಂತರ ಅನುಭವಕ್ಕೆ ಬಂದಿತ್ತು.

ಸಂಬಂಧಿಗಳು, ಅಕ್ಕಪಕ್ಕದವರ, ಮನೆಯ ಮಾಲೀಕ, ಸ್ನೇಹಿತರು ಎಲ್ಲರೊಂದಿಗೆ ಸಂಬಂಧವನ್ನು ಕಟ್ಟಿ ಕೊಳಕು ಮಾತುಗಳಿಂದ ಹಿಂಸಿಸುವುದು ಅವನ ದಿನಚರಿಯಾಗಿತ್ತು. ಈ ನಡುವೆ ಕುಡಿತ, ತಡ ರಾತ್ರಿಗಳಲ್ಲಿ ಮನೆಗೆ ಬರುವುದು ಸಾಮಾನ್ಯವಾಗಿತ್ತು. ಗಂಡುಮಗುವನ್ನು ಹೆರಲು ಆಗದವಳು ನೀನೆಂತಹ ಹೆಂಡತಿ ಎಂಬ ಹೊಸ ಕಿರಿಕಿರಿ ಪ್ರಾರಂಭವಾದಾಗ ಮತ್ತೊಂದು ಮಗುವನ್ನು ಮಾಡಿಕೊಂಡಿದ್ದೆ. ಆತನ ಇಚ್ಛೆಯನ್ನು ಈಡೇರಿಸಿದರೂ ಹಿಂಸೆ ಕೊನೆಯಾಗಲಿಲ್ಲ.

ದಿನ ಕಳೆದಂತೆ ಆತನ ಹಿಂಸೆಗಳು ಚಿತ್ರ–ವಿಚಿತ್ರರೂಪವನ್ನು ಪಡೆಯ ಹತ್ತಿದವು. ಬಚ್ಚಲು ಮನೆಯಲ್ಲಿ ಗಂಟೆಗಟ್ಟಲೆ ಕೂಡಿ ಹಾಕುವುದು, ಕಬ್ಬಿಣದ ಸಲಾಕೆಯಿಂದ ಹೊಡೆಯುವುದು, ಫೋನ್ ಕಸಿದುಕೊಂಡು ನೀರಲ್ಲಿ ಹಾಕುವುದು, ಡಬ್ಬದಲ್ಲಿದ್ದ ಸಕ್ಕರೆಯನ್ನು ಪಾಕ ಮಾಡಿ ಮೈಮೇಲೆ ಸುರಿಯುವುದು, ಕತ್ತನ್ನು ಹಿಸುಕುವುದು, ಸೀಮೆ ಎಣ್ಣೆಯನ್ನು ತಂದಿಟ್ಟು ಸುಡುತ್ತೇನೆ ಎಂದು ಹೆದರಿಸುವುದು ಇವೆಲ್ಲ ನಿತ್ಯ ನಡೆಯತೊಡಗಿದವು. ಇವನ್ನೆಲ್ಲ ನೋಡಿದ ಮಕ್ಕಳು ಭಯದಿಂದ ಕಂಪಿಸುತ್ತಿದ್ದವು.

ಕಳೆದ ಚಳಿಗಾಲದ ಒಂದು ದಿನ ಕಂಠ ಪೂರ್ತಿ ಕುಡಿದು ಬಂದಿದ್ದ ಆತ ನನ್ನ ಮೇಲೆ ಮನಸೋ ಇಚ್ಛೆ ಹಿಂಸೆ ನಡೆಸಿ, ನಡುರಾತ್ರಿಯಲ್ಲಿ ಮಕ್ಕಳೊಂದಿಗೆ ನನ್ನನ್ನು ಹೊರ ಹಾಕಿದ್ದ. ಮತ್ತೆ ಈ ಮನೆಗೆ ಕಾಲಿಟ್ಟರೆ ಜೀವಸಹಿತ ಉಳಿಸುವುದಿಲ್ಲವೆಂದಾಗ  ನಾನು ದಾರಿ ಕಾಣದಾಗಿದ್ದೆ. ಆತ್ಮೀಯ ಸ್ನೇಹಿತೆಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದೆ.

ಉಟ್ಟ ಬಟ್ಟೆಯಲ್ಲಿ ಅಲ್ಲಿಂದ ಹೊರ ನಡೆದು ಸ್ನೇಹಿತೆಯ ಮನೆ ಸೇರಿದ್ದೆ. ಮರುದಿನ ಮಹಿಳಾ ಠಾಣೆಗೆ ತೆರಳಿ ದೂರನ್ನು ನೀಡಿದ್ದೆ. ಕೈಯಲ್ಲಿ ಕೆಲಸವಿಲ್ಲದ ನಾನು ಆರು ತಿಂಗಳು ಮಹಿಳಾ ಆಶ್ರಯಧಾಮದಲ್ಲಿ ಮಕ್ಕಳೊಂದಿಗೆ ಕಳೆದಿದ್ದೆ.

ನಾನೀಗ ಅವನಿಂದ ಬಿಡುಗಡೆ ಹೊಂದಿ ಸ್ವತಂತ್ರ ಜೀವನವನ್ನು ನಡೆಸುತ್ತಿದ್ದೇನೆ. ಜೀವನನಿರ್ವಹಣೆಗೆ ಕೆಲಸಕ್ಕೆ ಸೇರಿದ್ದೇನೆ. ಸ್ನೇಹಿತರ ಹಾಗೂ ತವರುಮನೆಯವರ ಸಹಕಾರವಿದೆ. ಅವನ ರಾಕ್ಷಸಿಪ್ರವೃತ್ತಿಯ ನೆರಳು ಮಕ್ಕಳನ್ನು ಸೋಂಕದಂತೆ ಬೆಳೆಸುತ್ತಿದ್ದೇನೆ.

ಕಷ್ಟವಾದರೂ ಬದುಕಲ್ಲಿ ನೆಮ್ಮದಿ ಇದೆ. ಕೆಲವೊಮ್ಮೆ ಯೋಚಿಸುತ್ತೇನೆ: ‘ಅವನಂತವರಿಗೆ ಮದುವೆ, ಹೆಂಡತಿ, ಮಕ್ಕಳು ಯಾವ ಪುರುಷಾರ್ಥಕ್ಕೆ ಬೇಕು’ ಎಂದು. ಒಂದು ಹೆಣ್ಣಿನ ಹಾಗೂ ಎರಡು ಮುಗ್ಧಮಕ್ಕಳ ಬದುಕನ್ನು ಹಾಳು ಮಾಡಲೆಂದೆ?
-ಗೌರಿ ಚಂದ್ರಕೇಸರಿ
(ಇದು ನನ್ನ ಸಹೋದರಿಯೊಬ್ಬಳ ಬದುಕಿನ ಕಥೆ-ವ್ಯಥೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT