ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬರೀ ಟ್ಯಾಟೂ ವಿಷಯವಲ್ಲ!

Last Updated 25 ಜೂನ್ 2017, 4:43 IST
ಅಕ್ಷರ ಗಾತ್ರ

ಕನ್ನಡಿ ಮುಂದೆ ನಿಂತ ಪುಟ್ಟ ಅವನಿ ಕನ್ನಡಿ ನೋಡಿಕೊಳ್ಳುತ್ತಿದ್ದಾಳೆ. ಕಣ್ಣಿಗೆ ಅಡ್ಡ ಬರುತ್ತಿದ್ದ ಕೂದಲನ್ನು ಹಿಂದೆ ತಳ್ಳಿ ಕ್ಲಿಪ್‌ ಹಾಕಿಕೊಂಡು ಅಲಂಕರಿಸಿಕೊಳ್ಳುತ್ತಿದ್ದಾಳೆ, ಅವನಿಯ ತಾಯಿ. ಅವನಿ ತಾಯಿಯ ಮುಖ ನೋಡಿ ತನಗೂ ತುಟಿ ಕೆಂಪು ಬೇಕು ಎನ್ನುವಂತೆ ಅಮ್ಮನ ಲಿಪ್‌ಸ್ಟಿಕ್ ಕೈಗೆತ್ತಿಕೊಂಡು ನಿಧಾನಕ್ಕೆ ತುಟಿ ಕೊಂಕಿಸಿಕೊಂಡು ಅಲಂಕರಿಸಿಕೊಳ್ಳುವ ಪರಿಗೆ ಅಮ್ಮನಿಗೆ ನಗು.

ಮನುಷ್ಯನಿಗೆ ಹೊಟ್ಟೆಬಟ್ಟೆ ಚಿಂತೆ ಮುಗಿದ ಮೇಲೆ ಮೆಲ್ಲನೆ ಮನದಲ್ಲಿ ತಲೆ ಎತ್ತುವ ಬಯಕೆಯೆಂದರೆ ಅಲಂಕಾರದ್ದೇ ಇರಬೇಕು. ಎಲ್ಲ ಬಿಟ್ಟಿರುವೆನೆಂದು ಹೊರಟ ಸನ್ಯಾಸಿಗೂ ಈ ಅಲಂಕಾರ ಬಿಡದು. ಕೊನೆಪಕ್ಷ ಅಲೌಕಿಕದ ಘಮ ಅಂಟಿಕೊಂಡಿರುವ ರುದ್ರಾಕ್ಷಿಯೋ, ಸ್ಫಟಿಕದ ಮಾಲೆಯೋ ಕುತ್ತಿಗೆಯನ್ನು ಅಲಂಕರಿಸಿರುತ್ತದೆ. ಹಾಗೇ ದೇಹವೆ ದೇಗುಲವೆಂದು ನಂಬಿ ನಾವು ಮಾಡಿಕೊಳ್ಳುವ ಅಲಂಕಾರದೆಡೆಗೆ ಕಣ್ಣು ಹಾಯಿಸಿದಾಗ ಕಣ್ಣಿಗೆ ಬೀಳುವ ಟ್ಯಾಟೂಗಳ ಲೋಕಕಥೆ ಭಿನ್ನ ಮನಃಸ್ಥಿತಿಗಳನ್ನು ನೂರಾರು ಕಥಾಪ್ರಸಂಗಗಳನ್ನೂ ಅನಾವರಣ ಮಾಡುತ್ತದೆ.

ಈ ‘ಟ್ಯಾಟೂ’ ಹಾಕಿಸಿಕೊಳ್ಳುವ ಟ್ರೆಂಡ್ ಆರಂಭವಾಗಿ ಬಹಳ ಕಾಲವಾಗಿದ್ದರೂ ಈಗೀಗ ವಯಸ್ಸಿನ ತಲೆಬಿಸಿಯಿಲ್ಲದೇ ಎಲ್ಲರೂ ಅದನ್ನು ಹಾಕಿಸಿಕೊಂಡು ಆನಂದ ಪಡುವಾಗ ಒಂದಂತೂ ಅರ್ಥ ಮಾಡಿಕೊಳ್ಳಬಹುದು, ಇದೂ ಸದ್ಯದ ಕೂಲ್ ಕೋಶೆಂಟ್ ಎಂದು. ಅಂದ ಹಾಗೆ ಈ ಟ್ಯಾಟೂ ನಮ್ಮದೇ ‘ಹಚ್ಚೆ’ಯ ಸುಧಾರಿತ ರೂಪ.

ಒಂದು ಕಾಲದಲ್ಲಿ ಸಾಂಪ್ರದಾಯಿಕ, ಆದಿವಾಸಿ, ಗ್ರಾಮೀಣ ಜನರ ಸಾಂಸ್ಕೃತಿಕ ಗುರುತಾದ ಹಚ್ಚೆ ಈಗ ಟ್ಯಾಟೂ ಆಗಿ ಅಪ್ಪಟ ನಗರಜೀವನದ ಸ್ಟೈಲ್ ಸ್ಟೇಟ್‌ಮೆಂಟ್ ಆಗಿರುವುದನ್ನು ನೋಡುವಾಗ ಫ್ಯಾಶನ್ ಅನ್ನುವುದು ಹಳೆಯದನ್ನು ಹೊಸದಾದ ರೂಪದಲ್ಲಿ ಕೊಡುವುದಷ್ಟೇ ಆಗಿದೆ ಎಂಬುದು ಅರಿವಾಗುತ್ತದೆ.

ಹಚ್ಚೆ ಎಂಬ ಈ ಕಲೆ ಎಷ್ಟು ಪುರಾತನವೆಂದರೆ ಅದರ ಆರಂಭದ ಕಾಲವನ್ನು ಊಹಿಸುವುದೂ ಕಷ್ಟ. ಕುಂಕುಮ, ಬಿಂದಿ ಹಚ್ಚುವೆಡೆಯಲ್ಲಿ ಸಣ್ಣ ಚುಕ್ಕಿಯಿಂದ ಆರಂಭವಾಗಿ ದೇಹದ ಎಲ್ಲೆಲ್ಲೂ ಅರಳುವ ಈ ಟ್ಯಾಟೂಗೆ ನೂರಾರು ಅರ್ಥಗಳು, ಸಾವಿರಾರು ವಿನ್ಯಾಸಗಳು. ಹಣೆ ಮತ್ತು ಗದ್ದದ ಮೇಲೆ ಮೂಡಿಸಿಕೊಳ್ಳುವ ಚುಕ್ಕಿಗಳು ಕೆಟ್ಟ ದೃಷ್ಟಿಯಿಂದ ನಮ್ಮನ್ನು ಪಾರು ಮಾಡುತ್ತವೆ ಎನ್ನುವ ನಂಬಿಕೆಯಂತೂ ಬಹಳ ಹಳೆಯದು.

ಅಮ್ಮ ಹಚ್ಚುತ್ತಿದ್ದ ಕುಂಕುಮದ ಕೆಳಗೆ ದೃಷ್ಟಿಗೆನ್ನುವಂತೆ ಕಾಣುತ್ತಿದ್ದ ದಟ್ಟ ನೀಲಿಬಣ್ಣದ ಚುಕ್ಕಿ ಆಗಿನ ಹೆಚ್ಚಿನ ಹೆಂಗಸರ ಗುರುತು. ಅಮ್ಮನಲ್ಲಿ ವಿಚಾರಿಸಿದ್ದಾಗ ‘ಹೀಗೆ ಸಣ್ಣ ಚುಕ್ಕಿಯಾದರೂ ಇರಬೇಕಂತೆ, ಇಲ್ಲದೇ ಹೋದರೆ ಮನುಷ್ಯ ಸತ್ತ ಮೇಲೆ ಮೇಲಿನ ಲೋಕದಲ್ಲಿ ಹಾವು ಬಂದು ಕಚ್ಚುತ್ತೆ – ಎಂದು ಯಾರೋ ಹೇಳಿದ್ದಕ್ಕೆ ನಾವೆಲ್ಲ ಸ್ನೇಹಿತೆಯರು ನಾವು ನಾವೇ ಚುಚ್ಚಿಕೊಂಡು ಈ ಹಚ್ಚೆ ಮಾಡಿಕೊಂಡಿದ್ದು’ ಎಂದಾಗ ಬಿದ್ದು ಬಿದ್ದು ನಕ್ಕಿದ್ದೆವು.

ನಮ್ಮ ದೇಶದ ಪ್ರತಿಯೊಂದು ರಾಜ್ಯದ ಪ್ರತಿಯೊಂದು ಭಾಗದಲ್ಲೂ ಇರುವ ಜನರ ಸಂಸ್ಕೃತಿಗೆ ಅನುಗುಣವಾಗಿ ಹಚ್ಚೆಯನ್ನಂತೂ ನೋಡಿಯೇ ಇರುತ್ತೇವೆ. ನವಿಲು, ಕಮಲ, ನಾಲ್ಕು ಚುಕ್ಕಿ, ಮೀನು, ಸ್ವಸ್ತಿಕ, ದ್ರೌಪದಿ ಮತ್ತವಳ ಪಂಚಪಾಂಡವರ ಗುರುತಾಗಿ ಐದು ಮತ್ತೊಂದು ನಡುವೆ ಚುಕ್ಕಿ, ಅಷ್ಟದಳದಂತಹ ವಿನ್ಯಾಸಗಳೂ ಅತ್ಯಂತ ಶುಭವೆನ್ನುವುದೂ ಇದೆ.

ರಜಪೂತ ಹೆಂಗಸರು ಕೈಮೇಲೆ ಮೂಡಿಸಿಕೊಳ್ಳುವ ‘ಕೃಷ್ಣನ ಮುಕುಟ’ ಎಂಬ ಹೆಸರಿನ ವಿನ್ಯಾಸವಂತೂ ಅವರಿಗೆ ಕುಲಪ್ರತಿಷ್ಠೆಯಾಗಿದೆ ಎನ್ನುವ ಮಾತು ಆ ವಿನ್ಯಾಸದಷ್ಟೇ ಜನಪ್ರಿಯ. ಇಷ್ಟು ಇತಿಹಾಸ ತನ್ನೊಡಲಲ್ಲಿ ಹುದುಗಿಸಿಕೊಂಡಿರುವ ಹಚ್ಚೆ ಉರುಫ್ ಟ್ಯಾಟೂ ಈಗ ಕೂಲ್ ಫ್ಯಾಕ್ಟರ್ ಆಗಿದ್ದರೂ ಹೆಣ್ಣುಮಕ್ಕಳು ಟ್ಯಾಟೂ ಹಾಕಿಸಿಕೊಂಡಾಗ ಅಪರಾಧ ಎನ್ನುವಂತೆ ಅವರತ್ತ ನೋಡುತ್ತಾರೆ.

ಹೆಣ್ಣಿನ ಪ್ರತಿ ನಡೆ–ನುಡಿಯನ್ನೂ ಪರೀಕ್ಷಕ ದೃಷ್ಟಿಯಿಂದ ಸೂಕ್ಷ್ಮವಾಗಿ ಮತ್ತು ಅನಗತ್ಯವಾಗಿ ಗಮನಿಸುವ ಅಭ್ಯಾಸ ನಮ್ಮದು. ಅವಳ ಉಡುಗೆಯನ್ನು, ಅಲಂಕಾರವನ್ನು, ಆಭರಣಗಳನ್ನು, ಮೂಗಿನ ನತ್ತಿನ ವಿನ್ಯಾಸವನ್ನು, ಹಣೆಗಿಡುವ ತಿಲಕದಿಂದ ತುಟಿಗೆ ಆಸೆಯಿಂದ ಹಚ್ಚುವ ಬಣ್ಣ – ಎಲ್ಲವೂ ಆಕೆಯ ಅಸ್ತಿತ್ವ, ವ್ಯಕ್ತಿತ್ವವನ್ನು ಅಳೆಯುವ ಮಾಪನಗಳಾಗಿವೆ. ಈ ಎಲ್ಲ ಲಕ್ಷಣಗಳ ಜೊತೆಗೆ ಈಗೀಗ ಹಾಕಿಕೊಳ್ಳುವ ಟ್ಯಾಟೂ ಕೂಡ ಸೇರಿಕೊಂಡಿದೆ.

ಆಕರ್ಷಕ ವಿನ್ಯಾಸದ ಟ್ಯಾಟೂವನ್ನು ಸಾಕಷ್ಟು ಜನರು ಹಾಕಿಸಿಕೊಳ್ಳುತ್ತಿರುವುದು ಸದ್ಯದ ಟ್ರೆಂಡ್. ತಮ್ಮಿಷ್ಟದವರ ಹೆಸರೋ, ಇಷ್ಟದ ಚಿಹ್ನೆಗಳೋ ದೇಹದ ಮೇಲೆ ಅರಳುತ್ತಿವೆ. ಒಂದಷ್ಟು ಜನರು ಸಂತಸಪಟ್ಟರೆ ಇನ್ನೂ ಒಂದಷ್ಟು ಜನರು ಆ ಟ್ಯಾಟೂಗಳ ಆಧಾರದ ಮೇಲೆ ಹಾಕಿಸಿಕೊಂಡವರ ವ್ಯಕ್ತಿತ್ವವನ್ನು ಅಳೆಯಲೂ ಆರಂಭಿಸುತ್ತಾರೆ. ಹೀಗೆ ಅಳೆಯುವವರಲ್ಲಿ ಮಹಿಳೆಯರೇನೂ ಹಿಂದಿಲ್ಲ. ಇದು ಕೇವಲ ನಮ್ಮ ದೇಶದ ಸಮಸ್ಯೆಯಾಗಿಲ್ಲ ಎನ್ನುವ ಸತ್ಯವೂ ಫ್ರಾನ್ಸಿನ ಮನಃಶಾಸ್ತ್ರಜ್ಞೆ ನಿಕೋಲಸ್ ಮಾಡಿದ ಅಧ್ಯಯನ–ಸಮೀಕ್ಷೆಯಿಂದ ಗೊತ್ತಾಗುತ್ತದೆ.

ಟ್ಯಾಟೂ ಹಾಕಿಕೊಂಡ ಮತ್ತು ಹಾಕಿಕೊಳ್ಳದ ಮಹಿಳೆಯರ ಚಿತ್ರಗಳನ್ನು ಗಂಡಸರಿಗೆ ತೋರಿಸಿ ಆಕೆ ಮಾಡಿದ ಸಮೀಕ್ಷೆಯ ಫಲಿತವನ್ನು ನೋಡಿದಾಗ ವಿದ್ಯೆ, ನಾಗರಿಕತೆ, ಬುದ್ಧಿವಂತಿಕೆಗೂ ಕೀಳು ಅಭಿರುಚಿಯ ಮನಃಸ್ಥಿತಿಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಅರಿವಾಗುತ್ತದೆ. ಆಕೆಯ ಅಧ್ಯಯನದ ಪ್ರಕಾರ ಅಲ್ಲಿ ಸಮೀಕ್ಷೆಗೆ ಆಯ್ಕೆ ಮಾಡಿದ ಹೆಚ್ಚಿನ ಗಂಡಸರು ಟ್ಯಾಟೂ ಹಾಕಿಕೊಂಡಿದ್ದ ಮಹಿಳೆಯರನ್ನು ಸ್ವಚ್ಛಂದ ಪ್ರವೃತ್ತಿಯವರೆಂದು ಪರಿಗಣಿಸಿದ್ದರಂತೆ.

ಇತ್ತೀಚೆಗೆ ಬಂದ ‘ಉಡ್ತಾ ಪಂಜಾಬ್’ ಹಿಂದಿ ಚಲನಚಿತ್ರದಲ್ಲಿ ನಾಯಕ ಶಾಹಿದ್ ಕಪೂರ್‌ನ ಮೈಮೇಲೆ ಇದ್ದ ಟ್ಯಾಟೂಗಳು ಅವನ ಕೂಲ್ ಆಟಿಟ್ಯೂಡ್ ಪ್ರತಿಬಿಂಬಿಸುತ್ತದೆ. ಅಂತೆಯೇ ಇತರ ಚಿತ್ರಗಳಲ್ಲಿ ಹೆಣ್ಣು ಸ್ವತಂತ್ರಳಾಗಿ ಬದುಕುವ ಪಾತ್ರವನ್ನು ಟ್ಯಾಟೂ ಮುಂತಾದ ವಿಶೇಷತೆಗಳಿಂದ ತೋರಿಸುವ ಮೂಲಕ ಸಮಾಜದ ಮನಸ್ಸಿನಲ್ಲಿರುವ ಭೇದವನ್ನು ಅನಾವರಣ ಮಾಡುತ್ತಾರೆ.

ಅವಳ ಮುಕ್ತ, ಮುಗ್ಧ ಮನಸ್ಸನ್ನು ಸ್ವಚ್ಛಂದತೆಯ ಲೇಪದೊಂದಿಗೆ ನೋಡುವ ನಾವು ಅದರ ಹೊರತಾದ ಹೆಣ್ಣಿನ ವ್ಯಕ್ತಿತ್ವದ ಅನಾವರಣ ಮಾಡುವ ಗೋಜಿಗೆ ಹೋಗುವುದಿಲ್ಲ. ಭಾರೀ ಚರ್ಚೆಗೆ ಒಳಗಾಗಿದ್ದ ‘ಪಿಂಕ್’ ಚಲನಚಿತ್ರದ ಮುಖ್ಯಭೂಮಿಕೆಯಲ್ಲಿದ್ದ ನಟಿ ತಾಪ್ಸಿ ಪನ್ನು ಕಂಠದ ಬಳಿ ಹಾಕಿದ್ದ ‘ಹಾರುವ ಹಕ್ಕಿಗಳು’ ಟ್ಯಾಟೂವಿಗೆ ‘ಫ್ರೀ ಹರ್’ ಅನ್ನುವ ವಿಶೇಷ ಅರ್ಥ ನೀಡಲಾಗಿತ್ತು.

ವಿಷಾದವೆಂದರೆ ಇದೆಲ್ಲವನ್ನೂ ಹೇಳಿಕೊಡಬೇಕಾಗಿ ಬಂದಿದ್ದು. ಮುಕ್ತತೆ ಎನ್ನುವುದು ಉಪಕಾರವಾಗಿ ಅಲ್ಲ, ಉಸಿರಾಟದಂತೆ ಸಹಜತೆಯಾಗಿ ಇರಬೇಕು. ಆಗ ಮಾತ್ರ ಜೀವನ ಸುಲಭವಾಗುವುದು, ಹಗುರವಾಗುವುದು. ಯಾರೂ ಯಾರ ಜವಾಬ್ದಾರಿಯನ್ನು ಹೊರಬೇಕಾಗಿಲ್ಲ. ಪ್ರಕೃತಿ, ಸಹಜವಾಗಿ ಅವರವರಿಗೆ ಅವರವರ ಹೊಣೆಗಳನ್ನು ಕಲಿಸುತ್ತದೆ.

ಎಂಜಿನಿಯರಿಂಗ್ ಓದುತ್ತಿರುವ ವಿಭಾ, ಓದಿನಲ್ಲಿ ಜಾಣೆ. ಕ್ಲಾಸಿನ ಕೊನೆಯ ಬೆಂಚಿನ ಹುಡುಗರಿಗೆ ಪರೀಕ್ಷೆ ಹತ್ತಿರ ಬಂತು ಎನ್ನುವಾಗ ಮುಖ್ಯಪ್ರಶ್ನೆಗಳನ್ನು ನೋಟ್ ಮಾಡಿಕೊಟ್ಟು ಪಾಸ್ ಆಗುವಂತೆ ನೋಡಿಕೊಳ್ಳುತ್ತಿದ್ದ ವಿಭಾ ಅವರಿಗೆ ಒಂದರ್ಥದಲ್ಲಿ ಗೈಡ್.  ಹಿತಮಿತ ಅಲಂಕಾರವನ್ನಷ್ಟೇ ಮಾಡಿಕೊಂಡು ಹೋಗುವ ವಿಭಾ, ಹುಡುಗರ ಪ್ರಕಾರ ಸ್ವಲ್ಪ ಬೋರ್.

ವಿಭಾಳ ಒಂದೇ ಆಸೆಯಾಗಿದ್ದುದು ಟ್ಯಾಟೂ ಹಾಕಿಸಿಕೊಳ್ಳುವುದು. ಒಂದು ದಿನ ಸಹಜವಾಗಿ ಇದನ್ನು ಸ್ನೇಹಿತರೊಂದಿಗೆ ಹಂಚಿಕೊಂಡ ವಿಭಾಳ ಆಸೆ ನೋಡಿ, ಈ ಹುಡುಗರು, ‘ಟ್ಯಾಟೂ!! ನೀನಾ.. ನೋ..ನೋ.. ಅದೆಲ್ಲ ನಿನ್ನಂಥ ಹುಡುಗಿಯರಿಗೆ ಅಲ್ಲ ಕಣಮ್ಮಾ’ ಎಂದಾಗ ವಿಭಾಳಿಗೆ ಅಚ್ಚರಿ.

‘ಇಲ್ಲ, ಅದಕ್ಕೆಲ್ಲಾ ತುಂಬಾ ಕೂಲ್ ಆಟಿಟ್ಯೂಡ್ ಇರಬೇಕು, ನೀನು ಬರೀ ನರ್ಡ್‌, ಯು ಕಾಂಟ್ ಕ್ಯಾರಿ ಸಚ್ ಥಿಂಗ್ಸ್ ಯು ನೋ, ನಿನ್ನ ಹಾಗಿನ ಸೀರಿಯಸ್ ಹುಡುಗಿಗೆ ಅವೆಲ್ಲ ಅಲ್ಲ’ ಎಂದವರಿಗೆ ಈಗ ವಿಭಾ, ಮನುಷ್ಯ ಸಹಜ ಆಕಾಂಕ್ಷೆಗಳ ಪರಿಚಯವನ್ನೂ, ಹೆಣ್ಣನ್ನು ಕೆಟಗರಿಗಳಲ್ಲಿ ನೋಡುವ ಮನಃಸ್ಥಿತಿಗೂ ಪಾಠ ಕಲಿಸಬೇಕಾಗಿದೆ.

ಹುಡುಗರ ಈ ಮಾತನ್ನು ಕಡೆಗಣಿಸಬಹುದು. ಏಕೆಂದರೆ ಅವರಿಗೆ ಸಿಕ್ಕಿದ ಪಾಠವೇ ಅಂಥದ್ದು. ನಮ್ಮ ಮನೆಗಳಲ್ಲಿ ಬಹುತೇಕ ಜನರೂ ಮಾತಾಡುವ ರೀತಿಯೂ ಹೀಗೆ ಅಲ್ಲವೇ! ಉಡುಗೆ, ಅಲಂಕಾರದ ನೆಲೆಗಳಿಂದಲೇ ವ್ಯಕ್ತಿತ್ವವನ್ನು ತೂಗುವ ನಾವು ಅದನ್ನು ಮೀರಿ ಹೆಣ್ಣನ್ನೂ ಸಹಜವಾಗಿ, ಮನುಷ್ಯಳಂತೆಯೇ ನೋಡುವ ಗುಣ ಅಭ್ಯಾಸವಾದರೆ ಇಷ್ಟು ಯೋಚನೆ ಮಾಡುವ ಕಷ್ಟ ಬಾರದು.

ಇಷ್ಟೆಲ್ಲ ಜನರ ಕಣ್ಣುಗಳಿಗೆ, ಕುಹುಕ ನೋಟಗಳಿಗೆ ಬಲಿಯಾಗುತ್ತಲೇ ತಮಗಿಷ್ಟ ಬಂದಂತೆ ಇರುವವರ ಆತ್ಮವಿಶ್ವಾಸಕ್ಕೆ ‘ಉಘೇ’ ಎನ್ನಬೇಕು. ಅಲಂಕಾರ, ಹೆಣ್ಣಿಗಷ್ಟೇ ಅಲ್ಲ ಹಿತಮಿತವಾಗಿ ಗಂಡಿಗೂ ಹಿತವೇ. ಟ್ಯಾಟೂವಿನಂಥ ಚುಚ್ಚಿಸಿಕೊಂಡು, ನೋಯಿಸಿಕೊಂಡು ಮಾಡಿಕೊಳ್ಳುವ ಅಲಂಕಾರ ಅತ್ಯಂತ ವೈಯಕ್ತಿಕ ಆಯ್ಕೆ.

ಇಷ್ಟಿದ್ದೂ ವಿದ್ಯಾರ್ಥಿಗಳು ಟ್ಯಾಟೂ ಮಾಡಿಸಿಕೊಳ್ಳುವ ಮುನ್ನ ಹಲವಾರು ರೀತಿಗಳಲ್ಲಿ ಮುಂದಿನ ಭವಿಷ್ಯದ ಕುರಿತೂ ಯೋಚಿಸಬೇಕು. ಸೇನಾ ಸಂಬಂಧಿತ ಉದ್ಯೋಗಿಗಳಲ್ಲಿ ಆದಿವಾಸಿಗಳಿಗೆ ಹೊರತು ಪಡಿಸಿ ಉಳಿದವರಿಗೆ ಈ ಟ್ಯಾಟೂ ನಿಷೇಧವಿದ್ದರೆ ನಾಗರಿಕ ಸೇವೆಯ ಪರೀಕ್ಷಾ ಸಂದರ್ಶನಗಳಲ್ಲಿ ಕೂಡ ಪ್ರಶ್ನೆ ಮಾಡಲಾಗುತ್ತದೆ ಎನ್ನುತ್ತಾರೆ.

ಹಚ್ಚೆಯ ದೊಡ್ಡ ಇತಿಹಾಸವಿರುವ ನಮ್ಮ ದೇಶದ ದೊಡ್ಡ ನಗರಗಳಲ್ಲೀಗ ಟ್ಯಾಟೂ ಮೂಡಿಸುವ ಅನೇಕ ಪಾರ್ಲರ್‌ಗಳು ಆರಂಭವಾಗಿವೆ. ಒಂದು ಸಾವಿರದಿಂದ ಅನೇಕ ಸಾವಿರಗಳ ವಿನ್ಯಾಸಗಳೂ ಚಾಲ್ತಿಯಲ್ಲಿವೆ. ಟ್ಯಾಟೂ ಹಾಕಿಕೊಳ್ಳುವ ಮುನ್ನ ಪಾರ್ಲರುಗಳ ವಿಶ್ವಾಸಾರ್ಹತೆ, ಸ್ವಚ್ಛತೆ, ಕಲಾವಿದರ ವೃತ್ತಿನೈಪುಣ್ಯತೆಯ ಅನುಭವ ಎಲ್ಲವನ್ನೂ ಸರಿಯಾಗಿ ವಿಚಾರಿಸಿಕೊಂಡು ಹೋಗುವುದೂ ಅಗತ್ಯ.

ಮೂವತ್ತು, ಮೂವತ್ತೈದು ವರ್ಷಗಳ ಹಿಂದೆ ನೋಡಿದ್ದ, ಬಳೆ ಮಾರಿಕೊಂಡು ಬರುತ್ತಿದ್ದ ಲಕ್ಷ್ಮಿಯ ರಾಶಿ ಬಳೆಗಳ ನಡುವೆ ಮುಚ್ಚಿಹೋಗುತ್ತಿದ್ದ ಕೈಮೇಲಿದ್ದ ಹಚ್ಚೆ ಇನ್ನೂ ಕಣ್ಣಿಗೆ ಕಟ್ಟಿದಂತೆ ಹಸಿರಾಗಿದೆ. ಜೊತೆಯಲ್ಲೇ ಅಮ್ಮನ ಮಾತಿನ್ನೂ ಕಿವಿಯಲ್ಲಿ ಗುಂಯ್‌ಗುಡುತ್ತಿದೆ, ಹಾಗೆ ಮೇಲಿನ ಲೋಕದಲ್ಲಿ ಹಾವಿನಿಂದ ಕುಟುಕಿಸಿಕೊಳ್ಳಲು ಇಷ್ಟವಿಲ್ಲದೇ ನಾನೂ ಟ್ಯಾಟೂ ಹಾಕಿಸಿಕೊಳ್ಳಬೇಕೆಂದಿದ್ದೇನೆ!

ಉಡುಪು, ಅಲಂಕಾರ ಗಂಡು–ಹೆಣ್ಣು ಅನ್ನುವ ಭೇದವಿಲ್ಲದೆ ಸಂತಸವನ್ನು ಮೂಡಿಸುವ ಬದುಕಿನ ಅಗತ್ಯ ಸಂಭ್ರಮಗಳು. ಯಾರ ಮಿತಿಗೆಷ್ಟು ದಕ್ಕುವುದೋ ಅಷ್ಟನ್ನು ಆನಂದಿಸುವ ಸಹಜ ಹಕ್ಕು ಪ್ರತಿಯೊಬ್ಬರಿಗೂ ಇದೆ. ಇವುಗಳ ನೆಲೆಗಳಲ್ಲಿ ನಾವು ಮನುಷ್ಯರನ್ನು ಅಳೆಯದೇ ಗುಣಗ್ರಾಹಿಗಳಾಗುವತ್ತ ನಡೆವುದೇ ಚೆನ್ನ.

ನಿಮಗೆ ಯಾವ ಟ್ಯಾಟೂ ಇಷ್ಟ?
ಗೆಳತಿಯರೇ, ನೀವೂ ಟ್ಯಾಟೂ ಹಾಕಿಸಿಕೊಂಡಿರಬಹುದು. ನಿಮಗೆ ಯಾವ ಟ್ಯಾಟೂ ಇಷ್ಟ? ಏಕೆ? ನಿಮ್ಮ ಮೊದಲ ಟ್ಯಾಟೂ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 250 ಪದಗಳಿಗೆ ಮೀರದಂತೆ ನಮಗೊಂದು ಚೆಂದದ ಬರಹ ಕಳುಹಿಸಿ. ಆಯ್ದ ಲೇಖನಗಳನ್ನು ‘ಭೂಮಿಕಾ’ದಲ್ಲಿ ಪ್ರಕಟಿಸಲಾಗುವುದು.

ನಮ್ಮ ವಿಳಾಸ: ಸಂಪಾದಕರು, ಭೂಮಿಕಾ ಪುರವಣಿ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560 001. ನುಡಿ, ಬರಹ ಅಥವಾ ಯೂನಿಕೋಡ್‌ಗಳಲ್ಲಿ ಪ್ರಬಂಧಗಳನ್ನು  ಇ–ಮೇಲ್‌ ಮೂಲಕವೂ ಕಳುಹಿಸಬಹುದು.
ಇ–ಮೇಲ್: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT