ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಶುದ್ಧೀಕರಣದ ಜತೆಗೆ ಮನಸ್ಥಿತಿಗಳೂ ಪ್ರಬುದ್ಧವಾಗಬೇಕು

Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

ಭಾರತದ ಕ್ರಿಕೆಟ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಈಚೆಗಿನ ಬೆಳವಣಿಗೆಗಳು ಮತ್ತೆ ಸಾಬೀತುಪಡಿಸುತ್ತಿವೆ. ಹಿಂದೆ ಮೋಸದಾಟದ ಪ್ರಕರಣಗಳು ಕ್ರಿಕೆಟ್‌ ಕುರಿತ ಜನರ ನಂಬಿಕೆಯ ಬೇರುಗಳನ್ನೇ ಅಲುಗಾಡಿಸಿದ್ದವು. ಆಗ ಸ್ವತಃ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ.ಲೋಧಾ ಸಮಿತಿಯನ್ನು ನೇಮಿಸಿದ್ದಲ್ಲದೆ, ಅದರ ಶಿಫಾರಸುಗಳ ಅನ್ವಯ ಕ್ರಿಕೆಟ್‌ ಆಡಳಿತದ ಶುದ್ಧೀಕರಣದ ಹಾದಿಯಲ್ಲಿ ದಾಪುಗಾಲಿಟ್ಟಿತು. ನಂತರದ ವಿದ್ಯಮಾನಗಳು ದೇಶ–ವಿದೇಶಗಳ ಕ್ರಿಕೆಟ್‌ ವಲಯದಲ್ಲಿ ಬಹುಚರ್ಚಿತ ಸಂಗತಿಗಳಾಗಿವೆ. ಈ ನಡುವೆ ರಾಷ್ಟ್ರೀಯ ತಂಡಕ್ಕೆ ಕೋಚ್‌ ಆಗಿದ್ದ  ಅನಿಲ್‌ ಕುಂಬ್ಳೆ ಅವರನ್ನು ಬದಲಿಸಿ ಹೊಸಬರನ್ನು ನೇಮಿಸುವ ಇರಾದೆಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ವ್ಯಕ್ತಪಡಿಸಿತ್ತು.

ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗಿಯುತ್ತಿದ್ದಂತೆಯೇ  ಕುಂಬ್ಳೆಯವರು ಕೋಚ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ವಿರಾಟ್‌ ಕೊಹ್ಲಿ ಜತೆಗಿನ ಭಿನ್ನಾಭಿಪ್ರಾಯವೇ ತಮ್ಮ ರಾಜೀನಾಮೆಗೆ ಕಾರಣ  ಎಂಬ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿದೆ. ಭಾರತ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆ ಹಿಂದಿನಿಂದಲೂ ಮುಳ್ಳಿನ ಮೇಲಣ ಸುಂದರ ಆಸನ ಇದ್ದಂತೆ. ಒಂದಿಲ್ಲಾ ಒಂದು ವಿವಾದ ಇದ್ದದ್ದೇ. ಕಪಿಲ್‌ದೇವ್‌, ಮದನ್‌ಲಾಲ್‌, ಅನ್ಶುಮನ್‌ ಗಾಯಕ್‌ವಾಡ್‌, ಸಂದೀಪ್‌ ಪಾಟೀಲ್‌, ಗ್ರೆಗ್‌ ಚಾಪೆಲ್‌, ಡಂಕನ್‌ ಫ್ಲೆಚರ್‌ ಅವರಂತಹ ಕೋಚ್‌ಗಳಿಗೂ ವಿವಾದಗಳು ಅಂಟಿಕೊಂಡಿದ್ದವು. ರವಿಶಾಸ್ತ್ರಿಅವರೂ ವಿಷಾದದಿಂದಲೇ ‘ನಿರ್ದೇಶಕ’ ಹುದ್ದೆಯನ್ನು ತೊರೆದಿದ್ದರು. ಇದೀಗ ಕುಂಬ್ಳೆ  ಅವರ ಸರದಿ. ಇವರು ತಾವು ಆಡುತ್ತಿದ್ದ ಕಾಲದಲ್ಲಿ ಜಗತ್ತಿನಾದ್ಯಂತ ಬಲು ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದರು. ಅಪ್ರತಿಮ ಸಾಧಕ. ನೇರ ನಡವಳಿಕೆಯ ಸಜ್ಜನ. ಅವರ ಮಾರ್ಗದರ್ಶನದಲ್ಲಿ ಇದೀಗ ಭಾರತ ತಂಡ ಗಮನಾರ್ಹ ಸಾಧನೆಯನ್ನೇ ಮಾಡಿದೆ. ಇವುಗಳಾವುವೂ ಈಗ ಪರಿಗಣನೆಗೆ ಬಂದಿಲ್ಲ.

ರಾಷ್ಟ್ರೀಯ ತಂಡದ ಆಟಗಾರರು ಮತ್ತು ನೆರವು ಸಿಬ್ಬಂದಿಯ ಸಂಭಾವನೆಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಏರಿಸಬೇಕು ಎಂದು ಬಿಸಿಸಿಐಗೆ ಕುಂಬ್ಳೆ  ಪತ್ರ ಬರೆದಿದ್ದರು.  ಜತೆಗೆ ತಂಡದ ನಾಯಕನ ಗಳಿಕೆಯ ಶೇಕಡ 60ರಷ್ಟು ಮೊತ್ತವನ್ನು ಕೋಚ್‌ಗೇ ನೀಡಬೇಕೆಂದು ಸಲಹೆ ನೀಡಿರುವ ಅಂಶವೂ ಆ ಪತ್ರದಲ್ಲಿದೆ. ಈ ಸಂಗತಿ ಇದೀಗ ಕ್ರಿಕೆಟ್‌ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ಐಸಿಸಿಯ ಆದಾಯ ಹಂಚಿಕೆಗೆ ಸಂಬಂಧಿಸಿದಂತೆ ನೂತನ ನಿಯಮದಿಂದ ಬಿಸಿಸಿಐಗೆ ಭಾರೀ ನಷ್ಟ ಉಂಟಾಗುತ್ತದೆ ಎಂದು ಎರಡು ತಿಂಗಳ ಹಿಂದೆ ಬಿಸಿಸಿಐ ತೀವ್ರ ಅಸಮಾಧಾನ ವ್ಯಕ್ತ ಪಡಿಸಿತ್ತು. ಪ್ರತಿಭಟನೆಯ ದ್ಯೋತಕವಾಗಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಭಾರತದ ತಂಡವನ್ನೇ ಕಳಿಸಿಕೊಡುವುದಿಲ್ಲ ಎಂದೂ ಬಿಸಿಸಿಐ ಹೇಳಿತ್ತು. ಅಂತಹ ಸಂದಿಗ್ಧದಲ್ಲಿ ಕುಂಬ್ಳೆ ಅವರು ‘ಅದೇನೇ ಭಿನ್ನಾಭಿಪ್ರಾಯಗಳಿದ್ದರೂ ಆ ಟೂರ್ನಿಗೆ ತಂಡವನ್ನು ಕಳುಹಿಸಲೇಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕುಂಬ್ಳೆ ಅವರ ಆ ನಿಲುವು ಬಿಸಿಸಿಐನ ಕಣ್ಣು ಕೆಂಪಗಾಗಿಸಿತ್ತು. ಈ ನಡುವೆ ಬಿಸಿಸಿಐನ ತಾತ್ಕಾಲಿಕ ಉಸ್ತುವಾರಿಗೆಂದು ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ಆಡಳಿತಗಾರರ ಸಮಿತಿಯ ಸದಸ್ಯರಾಗಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಸಮಿತಿಗೆ ರಾಜೀನಾಮೆ ನೀಡಿದರು. ತಮ್ಮ ಇಂತಹದ್ದೊಂದು ನಿರ್ಧಾರಕ್ಕೆ ಕಾರಣಗಳನ್ನು ಪಟ್ಟಿ ಮಾಡಿದ್ದ ಅವರು ‘ರಾಷ್ಟ್ರೀಯ ತಂಡದಲ್ಲಿ ತಾರಾ ಸಂಸ್ಕೃತಿಯ ಅಬ್ಬರ ಕಂಡುಬರುತ್ತಿದೆ’ ಎಂದಿದ್ದರು. ಆದರೆ ಅವರು ಕುಂಬ್ಳೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗುಹಾ ಅವರು ಹೇಳಿದ್ದ ‘ತಾರಾ ಸಂಸ್ಕೃತಿ’ಗೆ ಕುಂಬ್ಳೆ  ಮುಖಾಮುಖಿಯಾದಾಗ ಸಹಜವಾಗಿಯೇ ‘ಸಂಘರ್ಷ’ಕ್ಕೆ ಎಡೆ ಉಂಟಾಗಿದೆ ಎನ್ನಬಹುದು.

ಕೊಹ್ಲಿ ಮತ್ತು ಕುಂಬ್ಳೆ ಅವರ ‘ವೈಮನಸ್ಸು’ ತಂಡದ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹದ್ದೇ. ಕುಂಬ್ಳೆ ಅವರು ಮಾಡಿದ ನೇರ ಆರೋಪಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಕೊಹ್ಲಿಯವರು ತಾವು ವರ್ಷದ ಹಿಂದೆ ಕುಂಬ್ಳೆಯವರಿಗೆ ಶುಭ ಕೋರಿದ್ದ ಟ್ವಿಟರ್‌ ಒಕ್ಕಣೆಯನ್ನೇ ಅಳಿಸಿ ಹಾಕಿದ್ದಾರೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ. ಕ್ರಿಕೆಟ್‌ ಮಟ್ಟಿಗೆ ವ್ಯಕ್ತಿ ಪ್ರತಿಷ್ಠೆಗಿಂತ ಆಟ ದೊಡ್ಡದು, ಸಾಧನೆ ಮಾತ್ರ ಮಹತ್ವದ್ದು ಎಂಬುದಷ್ಟೇ ಸತ್ಯ. ‘ತಾರಾ ಸಂಸ್ಕೃತಿ’ಯ ಮನಸ್ಥಿತಿಗಳನ್ನು ಮೊಳಕೆಯಲ್ಲಿಯೇ ಚಿವುಟುವ ಕೆಲಸವನ್ನು ಕ್ರಿಕೆಟ್‌ ಆಡಳಿತಗಾರರು ಮಾಡಬೇಕಾಗಿತ್ತು. ಮುಂದಿನ ದಿನಗಳಲ್ಲಿ ಇಂತಹ ಪ್ರಸಂಗ ಮರುಕಳಿಸದಂತಹ ವಾತಾವರಣ ನಿರ್ಮಿಸಬೇಕಾದ ಜವಾಬ್ದಾರಿಯೂ ಕ್ರಿಕೆಟ್‌ ಆಡಳಿತಗಾರರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT