ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮೈ ವಿನ್ಯಾಸ, ಸ್ವತ್ತು ಸರ್ವೆಗೆ ಟೆಂಡರ್‌

Last Updated 23 ಜೂನ್ 2017, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಾಗವಾರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನನಿಲ್ದಾಣದವರೆಗೆ ‘ನಮ್ಮ ಮೆಟ್ರೊ’ ಮಾರ್ಗ ನಿರ್ಮಿಸಲು ಮುಂದಾಗಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌)  ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ.
ಈ ಮಾರ್ಗ ಹಾದು ಹೋಗುವ ಕಡೆ ಮೇಲ್್ಮೈ ವಿನ್ಯಾಸದ ಅಧ್ಯಯನ ನಡೆಸಲು, ಈ ಮಾರ್ಗಕ್ಕೆ ಬಳಕೆಯಾಗುವ ಜಮೀನುಗಳು, ಸ್ವತ್ತುಗಳ ಅಧ್ಯಯನ ನಡೆಸಲು ಹಾಗೂ ಭೌಗೋಳಿಕ ಅಂಶಗಳ ನಿಖರ ಅಂದಾಜು ಮಾಡುವ ಸಲುವಾಗಿ ಡಿಜಿಪಿಎಸ್‌ ಸರ್ವೆ ನಡೆಸಲು ಟೆಂಡರ್‌ ಆಹ್ವಾನಿಸಲಾಗಿದೆ. ಇದಕ್ಕೆ ಒಟ್ಟು ₹24.42 ಲಕ್ಷ  ವೆಚ್ಚವಾಗಲಿದೆ.

ಈ ಮಾರ್ಗ ಹಾದುಹೋಗುವ ಪ್ರದೇಶಗಳ ಭೂತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕುವುದಕ್ಕೆ ಪ್ರತ್ಯೇಕ ಟೆಂಡರ್‌ ಆಹ್ವಾನಿಸಲಾಗಿದೆ. ಇದಕ್ಕೆ ₹ 15.27 ಲಕ್ಷ  ವೆಚ್ಚವಾಗಲಿದೆ.

ಗುತ್ತಿಗೆ ಪಡೆಯುವ ಸಂಸ್ಥೆ ಆರು ತಿಂಗಳಲ್ಲಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಬೇಕು. ಜಂಟಿ ಸಹಭಾಗಿತ್ವದ ಕಂಪೆನಿಗಳು ಈ ಟೆಂಡರ್‌ನಲ್ಲಿ ಭಾಗವಹಿಸುವಂತಿಲ್ಲ  ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಟೆಂಡರ್‌ ಅರ್ಜಿ ಸಲ್ಲಿಸಲು ಜುಲೈ 12 ಕೊನೆಯ ದಿನ.  
‘ನಮ್ಮ ಮೆಟ್ರೊ’ ಯೋಜನೆಯ  ಎರಡನೇ ಹಂತದಲ್ಲಿ ನಿಗಮವು ಗೊಟ್ಟಿಗೆರೆಯಿಂದ ನಾಗವಾರದವರೆಗೆ ಹೊಸ ಮಾರ್ಗವನ್ನು ನಿರ್ಮಿಸಲಿದೆ.   ಇದು ಸುಮಾರು 13.79 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು (ಡೇರಿ ವೃತ್ತದಿಂದ ನಾಗವಾರದವರೆಗೆ) ಒಳಗೊಂಡಿದೆ.   ಈ ಕಾಮಗಾರಿಗೆ  ಆರ್ಥಿಕ ನೆರವು ನೀಡಲು ಯುರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ತಾತ್ವಿಕ ಒಪ್ಪಿಗೆ ನೀಡಿದೆ. ಇದೇ ಮಾರ್ಗವನ್ನು ವಿಮಾನನಿಲ್ದಾಣದವರೆಗೆ ವಿಸ್ತರಿಸಲು  ನಿರ್ಧರಿಸಲಾಗಿದೆ. 
ನಾಗವಾರದಿಂದ ವಿಮಾನ ನಿಲ್ದಾಣದವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ.  ಥಣಿಸಂದ್ರ ಮುಖ್ಯರಸ್ತೆ– ರಾಮಕೃಷ್ಣ ಹೆಗಡೆ ನಗರ ಮೂಲಕ ಸಾಗುವ ಮಾರ್ಗ ಜಿ.ಕೆ.ವಿಕೆ ಪ್ರಾಂಗಣದ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಸೇರಿ ಅಲ್ಲಿಂದ ಮುಂದೆ ಹೆದ್ದಾರಿ ಪಕ್ಕದಲ್ಲೇ ಸಾಗಲಿದೆ. ಟ್ರಂಪೆಟ್‌ ಮೇಲ್ಸೇತುವೆ ಬಳಿ ಬಲಕ್ಕೆ ತಿರುಗಿ  ವಿಮಾನನಿಲ್ದಾಣದ ಬಳಿ ಕೊನೆಗೊಳ್ಳಲಿದೆ.

ವಾಯುನೆಲೆ ಬಳಿ ಗೊಂದಲ: ವಾಯುನೆಲೆ ಪಕ್ಕದಲ್ಲಿ ಮೆಟ್ರೊ ಮಾರ್ಗ ಹಾದುಹೋಗಲಿದೆ. ಇಲ್ಲಿ  ಎತ್ತರಿಸಿದ ಮಾರ್ಗ ನಿರ್ಮಿಸಲು ಭಾರತೀಯ ವಾಯುಪಡೆಯ ಅನುಮತಿ ಅಗತ್ಯ.  ಅನುಮತಿ ಸಿಗುವ ಬಗ್ಗೆ ಸಂದೇಹಗಳಿವೆ. ಅನಿವಾರ್ಯವಾದರೆ ಇಲ್ಲಿ ಸುರಂಗ ಮಾರ್ಗ ನಿರ್ಮಿಸಬೇಕಾಗುತ್ತದೆ.
‘ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ.  ಡಿಪಿಆರ್‌ ಅಂತಿಮಗೊಂಡ ಬಳಿಕವಷ್ಟೇ ಈ ಬಗ್ಗೆ ಪ್ರತಿಕ್ರಿಯಿಸಬಹುದು’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT