ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರೆಂದು ಗುರುತಿಸಿ, ಸೌಲಭ್ಯ ಕಲ್ಪಿಸಿ

ಅಡುಗೆ ಮಾಡುವವರ, ಸಹಾಯಕರ ವಿಶೇಷ ಸಭೆಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರ ಮನವಿ
Last Updated 24 ಜೂನ್ 2017, 4:52 IST
ಅಕ್ಷರ ಗಾತ್ರ

ದಾವಣಗೆರೆ:‘ನಮ್ಮನ್ನು ಕಾರ್ಮಿಕರು ಎಂದು ಗುರುತಿಸಿ, ನಮಗೂ ಸರ್ಕಾರದ ಸೌಲಭ್ಯ ಕಲ್ಪಿಸಿ’ ಎಂದು ಕರ್ನಾಟಕ ರಾಜ್ಯ ಅಡುಗೆ ಕೆಲಸ ಮಾಡುವವರ ಮತ್ತು ಸಹಾಯಕರ ಅಸಂಘಟಿತ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಜಿ.ಶಂಕರ್‌ರಾವ್ ನಾಡಿಗರ್‌ ಮನವಿ ಮಾಡಿದರು.

ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಮಿಕರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಡುಗೆ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಸರ್ಕಾರ ಕಾರ್ಮಿಕರೆಂದು ಇದುವರೆಗೂ ಗುರುತಿಸಿಲ್ಲ. ಇದರಿಂದ ಸರ್ಕಾರದ ವಿವಿಧ ಸೌಲಭ್ಯ
ಗಳು ನಮಗೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅಡುಗೆ ಕಾರ್ಮಿಕರು ಹಾಗೂ ಸಹಾಯಕರಿಗೆ ಸರ್ಕಾರ ಗುರುತಿನ ಚೀಟಿ ವಿತರಿಸಬೇಕು. ಇಎಸ್‌ಐ, ಪಿಂಚಣಿ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ, ವಿವಾಹಕ್ಕೆ ಪ್ರೋತ್ಸಾಹಧನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಮಿಕರನ್ನು ಸಂಘಟಿಸುವುದು ದೊಡ್ಡ ಸವಾಲು. ಕಳೆದ ಹತ್ತು ವರ್ಷಗಳ ಹಿಂದೆ ಸಂಘ ಸ್ಥಾಪನೆ ಮಾಡಿದರೂ ದೊಡ್ಡ ಸಂಘಟನೆಯಾಗಿ ಬೆಳೆಯಲು ಇದುವರೆಗೂ ಸಾಧ್ಯವಿಲ್ಲ. ಕಾರ್ಮಿಕರು ಜಾಗೃತರಾಗಿ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕ ಮಾತನಾಡಿದ ಸಂಘದ ಸಂಚಾಲಕ ಕೆ.ಎನ್‌.ರವಿಕುಮಾರ್‌,  ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳೂ ಅಡುಗೆ ಕಾರ್ಮಿಕರಿಗೆ ಲಭ್ಯವಾಗಬೇಕು. ಕಟ್ಟಡ ಕಾರ್ಮಿಕರಿಗೆ ಸರ್ಕಾರ ಕಲ್ಯಾಣ ಮಂಡಳಿ ರಚಿಸಿದಂತೆ ಅಡುಗೆ ಕಾರ್ಮಿಕರಿಗೂ ಕಲ್ಯಾಣ ಮಂಡಳಿ ರಚಿಸಬೇಕು.

ಅದ್ಧೂರಿ ಮದುವೆಗೆ, ಶಾಮಿಯಾನಗಳಿಗೆ ಸೆಸ್‌ ಹಾಕಬೇಕು. ಗುತ್ತಿಗೆದಾರರು, ಕಲ್ಯಾಣ ಮಂಟಪದ ಮಾಲೀಕರಿಂದಲೂ ತೆರಿಗೆ ಸಂಗ್ರಹಿಸಬೇಕು. ಇದೇ ಹಣದಿಂದ ಅಡುಗೆ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಬೇಕು ಎಂದು ಮನವಿ ಮಾಡಿದರು. 

ಅಡುಗೆ ಕೆಲಸಗಾರರಿಗೆ ತಿಂಗಳಿನ ಎಲ್ಲ ದಿನವೂ ಕೆಲಸಸಿಗುವುದಿಲ್ಲ. ಹಾಗಾಗಿ, ಸರ್ಕಾರದ ಸೌಲಭ್ಯ ಪಡೆಯಲು ತಾಂತ್ರಿಕವಾಗಿ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ಹೋರಾಟ ರೂಪಿಸಬೇಕು. ಅದಕ್ಕೂ ಮೊದಲು ಕಾರ್ಮಿಕರ ಸಂಘಟನೆಯಾಗಬೇಕು ಎಂದು ಅವರು ಹೇಳಿದರು.

ದಿ ನ್ಯೂ ಇಂಡಿಯನ್‌ ಇನ್ಶೂರೆನ್ಸ್ ಕಂಪೆನಿ ವಿಭಾಗೀಯ ವ್ಯವಸ್ಥಾಪಕ ನಾಗರಾಜ್ ಮಾತನಾಡಿ, ಅಸಂಘಟಿತ ಕಾರ್ಮಿಕರಿಗಾಗಿ ಅಪಘಾತ ವಿಮೆ ಇದೆ. ವರ್ಷಕ್ಕೆ ₹60 ಕಂತಿನ ₹1ಲಕ್ಷದ ಪರಿಹಾರ ಇದೆ. ಜನತಾ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯನ್ನು ಪ್ರತಿಯೊಬ್ಬ ಮಾಡಿಸಬೇಕು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ರೈತ ಸಂಘಟನೆ ಮುಖಂಡ ಎಚ್‌.ಕೆ.ವೆಂಕಟೇಶ್, ಚಿಕ್ಕಮಗಳೂರು ಜಿಲ್ಲಾ ಸಂಘದ ಅಧ್ಯಕ್ಷ ಆನಂದರಾಮ್, ಅಡುಗೆ ಗುತ್ತಿಗೆದಾರರ ಪ್ರವೀಣ್ ಪವಾರ್, ದಿ ನ್ಯೂ ಇಂಡಿಯನ್‌ ಇನ್ಶೂರೆನ್ಸ್ ಕಂಪೆನಿ ಅಭಿವೃದ್ಧಿ ಅಧಿಕಾರಿ ಆರ್‌.ಟಿ.ಮೃತ್ಯುಂಜಯ, ಸಂಘಟನೆಯ ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT