ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಆಹಾರ: ತನಿಖೆಗೆ ಮೇಲುಸ್ತುವಾರಿ ಸಮಿತಿ

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ಸದಸ್ಯರ ಆಕ್ಷೇಪದ ನಂತರ ನಿರ್ಧಾರ
Last Updated 24 ಜೂನ್ 2017, 5:27 IST
ಅಕ್ಷರ ಗಾತ್ರ

ಚಿತ್ರದುರ್ಗ:  ಅಂಗನವಾಡಿ ಕೇಂದ್ರಗಳಿಗೆ ಕಳಪೆ ಧಾನ್ಯಗಳ ಪೂರೈಕೆ, ಧಾನ್ಯಗಳು ಅಕ್ರಮವಾಗಿ ಮಾರಾಟವಾಗುತ್ತಿರು ವುದು, ಆಹಾರ ಪೂರೈಕೆ ಘಟಕಗಳಲ್ಲಿ ಶುಚಿತ್ವದ ಕೊರತೆ, ಸಿಸಿ ಕ್ಯಾಮೆರಾ ಸ್ಥಗಿತಗೊಂಡಿರುವ ಕುರಿತು ತನಿಖೆ ನಡೆಸಲು ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಲು ಶುಕ್ರವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಪಾಲನಾ ವರದಿ ಚರ್ಚೆ ಆರಂಭವಾಗುವ ಮುನ್ನವೇ ಅಂಗನವಾಡಿ ಕೇಂದ್ರಗಳಲ್ಲಿನ ಆಹಾರ ಧಾನ್ಯಗಳ ಮಾರಾಟ ಕುರಿತು ಸದಸ್ಯೆ ಜಯಾ ಪ್ರತಿಭಾ ಸಭೆಯ ಗಮನ ಸೆಳೆದರು. ಬಿಜೆಪಿ ಸದಸ್ಯ ಅಜ್ಜಪ್ಪ ಅವರು ಜಯಾ ಅವರ ನೆರವಿಗೆ ನಿಂತರು.

‘ನೆಹರು ನಗರದ ಅಂಗನವಾಡಿ ಕೇಂದ್ರಗಳಲ್ಲಿ ಹೆಸರು ಕಾಳನ್ನು ಕೆ.ಜಿಗೆ ₹ 50ರಂತೆ ಮಾರಾಟ ಮಾಡುತ್ತಿದ್ದಾರೆ. ನಾನೇ ನೋಡಿದ್ದೇನೆ. ಕೇಂದ್ರಗಳಲ್ಲಿರುವ ಧಾನ್ಯಗಳಿಗೆ ಹುಳು ಬಿದ್ದಿವೆ. ದಾಸ್ತಾನು ಕೊಠಡಿ ಇಲಿ ಹೆಗ್ಗಣ, ಗೊದ್ದ, ಇರುವೆಗಳ ಗೂಡಾಗಿದೆ. ಪೊಟ್ಟಣಗಳಲ್ಲಿ ತೂಕ ಕಡಿಮೆ ಇರುತ್ತದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ದೂರು ನೀಡಿದ್ದೆ. ಅದಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ’ ಎಂದ ಪ್ರಶ್ನಿಸಿದರು.

‘ನೆಹರು ನಗರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಒಂದು ಕೆಜಿ ಹೆಸರುಕಾಳು ಮಾರಾಟ ಮಾಡಿದ್ದಾಗಿ ಅಲ್ಲಿನ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಕಳಪೆ ಧಾನ್ಯಗಳನ್ನು ಯಾರಿಗೂ ವಿತರಿಸದೇ ಪ್ರತ್ಯೇಕವಾಗಿ ಇಟ್ಟಿದ್ದಾರೆ. ಸಿಸಿ ಕ್ಯಾಮೆರಾ ಕೆಟ್ಟು ಹೋಗಿದೆ. ಶೀಘ್ರ ಸರಿಪಡಿಸುತ್ತೇವೆ’ ಎಂದು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ ತಿಳಿಸಿದರು. ‘ಅವರು ಸುಳ್ಳು ಹೇಳುತ್ತಿದ್ದಾರೆ’ ಎಂದು ಸದಸ್ಯೆ ಜಯಾ ಪ್ರತಿಭಾ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರೂ ತಮ್ಮ ತಮ್ಮ ಕ್ಷೇತ್ರದಲ್ಲಿನ ಕೇಂದ್ರಗಳ ಬಗ್ಗೆ ಗಮನ ಸೆಳೆದರು. ಸದಸ್ಯೆ ಶಶಿಕಲಾ, ‘ಕೆಲವು ಕೇಂದ್ರಗಳಲ್ಲಿ ಪೆನ್ಸಿಲ್‌ಗಳಲ್ಲಿ ಹಾಜರಾತಿ ಬರೆಯು ತ್ತಾರೆ’ ಎಂದು ದೂರಿದರು. ಇದಕ್ಕೆ ಡಿಡಿ ಪರಮೇಶ್ವರಪ್ಪ, ‘ಇಲಾಖೆಗಳಲ್ಲಿ ವ್ಯವಸ್ಥೆ ಸುಧಾರಣೆಯಾಗುತ್ತಿದ್ದು, ಕೆಲವು ದಿನ ಪೆನ್ಸಿಲ್‌ಗಳಲ್ಲಿ ಗುರುತು ಹಾಕಿಕೊಳ್ಳಲು ಹೇಳಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.

ಸದಸ್ಯ ಯೋಗೀಶ್ ಬಾಬು, ‘ಅಂಗನವಾಡಿ ಕೇಂದ್ರಗಳಲ್ಲಾಗಿರುವ ಅವ್ಯವಸ್ಥೆಗಳ ತನಿಖೆಗಾಗಿ ಮೇಲುಸ್ತು ವಾರಿ ಸಮಿತಿ ರಚಿಸಿ’ ಸಲಹೆ  ನೀಡಿದರು. ಇದಕ್ಕೆ ಅಧ್ಯಕ್ಷೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಅನುಪಾಲನಾ ವರದಿ ಚರ್ಚೆ ವೇಳೆ ಸದಸ್ಯ ನರಸಿಂಹ ರಾಜು, ‘ಹಿಂದಿನ ಸಭೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ₹10.93 ಕೋಟಿ ಆಹಾರ ಖರೀದಿಸಿದ ವಿಚಾರದ ತನಿಖಾ ವರದಿ ಏನಾಯ್ತು’ ಎಂದು ಪ್ರಶ್ನಿಸಿದರು. ಸದಸ್ಯರು ಇದಕ್ಕೆ ದನಿಗೂಡಿಸಿದರು. ಸಿಇಒ ನಿತೇಶ್ ಪಾಟೀಲ್ ವರದಿ ಮತ್ತು ತನಿಖೆ ಈ ಕುರಿತು ಮಾಹಿತಿ ನೀಡಲು ಪ್ರಯತ್ನಿಸಿದರೂ , ಆಡಳಿತ ಪಕ್ಷದ ಸದಸ್ಯರು, ‘ಇದು ಪುನಃ ತನಿಖೆಯಾಗಬೇಕು’ ಎಂದು ಪಟ್ಟು ಹಿಡಿದರು.

ಎಲ್ಲರೂ ಅಂಗನವಾಡಿ ಕೇಂದ್ರದ ಕುರಿತು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಸೌಭಾಗ್ಯ ಬಸವರಾಜನ್ ‘ಎಲ್ಲರೂ ಒಂದೇ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಈ ಇಲಾಖೆಯ ಯಾವ ಅಧಿಕಾರಿಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ಸದಸ್ಯರು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಲ್ಲವನ್ನೂ ಸದಸ್ಯರೇ ಮಾಡುವುದಾದರೆ, ಅಧಿಕಾರಿಗಳ ಕೆಲಸ ಏನು’? ಎಂದು ಸಿಇಒನಿತೇಶ್ ಪಾಟೀಲ್ ವಿರುದ್ಧ ಹರಿಹಾಯ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT