ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಸೋಗಿನಲ್ಲಿ ₹ 30 ಲಕ್ಷ ದರೋಡೆ

Last Updated 24 ಜೂನ್ 2017, 9:12 IST
ಅಕ್ಷರ ಗಾತ್ರ

ಮೈಸೂರು: ನಗರದ ಗೋಕುಲಂ 3ನೇ ಹಂತದಲ್ಲಿರುವ ಖ್ಯಾತಿ ಸ್ಟೀಲ್‌ ಕಂಪೆನಿಯ ವ್ಯವಸ್ಥಾಪಕರ ಕಚೇರಿಗೆ ನುಗ್ಗಿದ ಏಳು ಮಂದಿ ದುಷ್ಕರ್ಮಿಗಳು ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಹಾಡಹಗಲೇ ₹ 29.66 ಲಕ್ಷ ದರೋಡೆ ಮಾಡಿದ್ದಾರೆ.

ನವೀನಕುಮಾರ್ ಗುಪ್ತಾ ಒಡೆತನದ ಖ್ಯಾತಿ ಸ್ಟೀಲ್‌ ಕಂಪೆನಿಯು ನಂಜನ ಗೂಡು ತಾಲ್ಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆ ಹೊಂದಿದೆ. ಯಾದವಗಿರಿಯಲ್ಲಿ ಕೇಂದ್ರ ಕಚೇರಿ ಯಿದ್ದು, ಲಾರಿ ಚಾಲಕರು, ಗುಜರಿ ಅಂಗಡಿ ಮಾಲೀಕರಿಗೆ ಹಣ ಭಟವಾಡೆ ಮಾಡುವ ಉದ್ದೇಶದಿಂದ ಗೋಕುಲಂನಲ್ಲಿ ಉಪಕಚೇರಿ ತೆರೆಯಲಾಗಿದೆ. ವ್ಯವಸ್ಥಾಪಕ ವಿನೋದಕುಮಾರ್‌ ಇಲ್ಲಿ ಕಾರ್ಯನಿರ್ವಹಿಸುತ್ತಾರೆ.

‘ಹಣ ಭಟವಡೆ ಮಾಡಲು ಕೇಂದ್ರ ಕಚೇರಿಯಿಂದ ವಿನೋದಕುಮಾರ್‌ ₹ 35 ಲಕ್ಷವನ್ನು ತಮ್ಮ ಕಚೇರಿಗೆ ಶುಕ್ರವಾರ ಕೊಂಡೊಯ್ದಿದ್ದರು. ಬೆಳಿಗ್ಗೆ ಸುಮಾರು 11.45ರ ಸುಮಾರಿಗೆ ಧಾವಿಸಿದ ಟಾಟಾ ಸುಮೊದಿಂದ ಏಳು ಮಂದಿ ಇಳಿದಿದ್ದಾರೆ.

ಕಚೇರಿಯತ್ತ ಧಾವಿಸುತ್ತಿರುವುದನ್ನು ಸಿ.ಸಿ ಟಿ.ವಿಯಲ್ಲಿ ಗಮನಿಸಿದ ವ್ಯವಸ್ಥಾಪಕರು ಹೊರಗೆ ಬಂದು ಪ್ರಶ್ನಿಸಿದ್ದಾರೆ. ಒಳಗೆ ಎಳೆದೊಯ್ದು ಸಿಬಿಐ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾರೆ. ಗುರುತಿನ ಚೀಟಿಯನ್ನು ಪ್ರದರ್ಶಿಸುವಂತೆ ಕೇಳಿದಾಗ ಹಲ್ಲೆ ನಡೆಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ದಾಖಲೆ ಇಲ್ಲದ ಹಣ ಹೊಂದಿದ್ದೀರಿ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾಗಿ ಬೆದರಿಸಿದ್ದಾರೆ. ಬಾಗಿಲು ಹಾಕಿಕೊಂಡು ವಿಚಾರಣೆ ನಡೆಸುವವರಂತೆ ನಾಟಕವಾಡಿದ್ದಾರೆ. ಕೀಲಿ ಕಿತ್ತುಕೊಂಡು ಬೀರುವಿನ ಬ್ಯಾಗಿನಲ್ಲಿದ್ದ ₹ 29,66,840 ಎತ್ತಿಕೊಂಡಿದ್ದಾರೆ.

ಹಣ ಪಡೆಯಲು ಬಂದಿದ್ದ ಗುಜರಿ ಅಂಗಡಿಯೊಂದರ ಕೆಲಸಗಾರ ಶಫಿ ಹಾಗೂ ವ್ಯವಸ್ಥಾಪಕರನ್ನು ಕಚೇರಿಯಲ್ಲಿ ಕೂಡಿಹಾಕಿ ಹೊರಗಿನಿಂದ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾರೆ’ ಎಂದು ವಿವರಿಸಿದ್ದಾರೆ.

‘ನಾಲ್ಕು ದಿನಗಳ ಹಿಂದೆಯಷ್ಟೇ ಕಚೇರಿಗೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು. ಹೋಗುವಾಗ ಸಿ.ಸಿ ಟಿ.ವಿ ಹಾರ್ಡ್‌ ಡಿಸ್ಕ್‌ ಕಿತ್ತುಕೊಂಡಿದ್ದಾರೆ. ಆತಂಕಗೊಂಡಿದ್ದ ವ್ಯವಸ್ಥಾಪಕ ಕಿಟಕಿ ತೆರೆದು ನೆರೆಮನೆಯವರ ಸಹಾಯ ಕೋರಿದ್ದಾರೆ. ಬಾಗಿಲು ತೆರೆದ ಬಳಿಕ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.

ಗುಪ್ತಾ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪೊಲೀಸ್ ಕಮಿಷನರ್‌ ಕಚೇರಿಗೆ ದೂರು ನೀಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಹಣ ಇರುವ ವಿಚಾರ ಕೆಲ ಗುಜರಿ ಅಂಗಡಿಯ ಮಾಲೀಕರು ಹಾಗೂ ಲಾರಿಯ ಚಾಲಕರಿಗೆ ಮಾತ್ರ ಗೊತ್ತಿತ್ತು. ಅಲ್ಲದೇ, ಇಷ್ಟು ಪ್ರಮಾಣದ ಹಣ ಇಲ್ಲಿ ಇರುತ್ತಿರಲಿಲ್ಲ. ವಿಚಾರ ಗೊತ್ತಿರುವವರು ಮಾಹಿತಿ ನೀಡಿರುವ ಸಾಧ್ಯತೆ ಇದೆ. ಚಲನವಲನಗಳನ್ನು ಗಮನಿಸಿ ಕೃತ್ಯ ಎಸಗಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT