ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದ್ಯತೆಯಲ್ಲಿ ಜಿಲ್ಲೆಗೆ ಕೃಷಿ ಪದವಿ ಕಾಲೇಜು

Last Updated 24 ಜೂನ್ 2017, 9:55 IST
ಅಕ್ಷರ ಗಾತ್ರ

ಬ್ರಹ್ಮಾವರ: ರಾಜ್ಯದಲ್ಲಿ ಹೊಸದಾಗಿ ಕೃಷಿ ಪದವಿ ಕಾಲೇಜುಗಳನ್ನು ಆರಂಭಿಸಲು ಬಜೆಟ್ ಸಮಯದಲ್ಲಿ ಚರ್ಚೆ ನಡೆದಿದ್ದು, ಉಡುಪಿ ಜಿಲ್ಲೆಗೆ ಪ್ರಥಮ ಆದ್ಯತೆಯಲ್ಲಿ ಮಂಜೂರು ಮಾಡಲಾಗುವುದು’ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಬ್ರಹ್ಮಾವರದ  ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ₹4.8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ  ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಮತ್ತು ₹4.8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯಾರ್ಥಿನಿಲಯ ಕಟ್ಟಡಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಗೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಕೃಷಿ ವಿಸ್ತರಣಾ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಕೂಲಿ ಕಾರ್ಮಿಕರ ಸಮಸ್ಯೆ ಇದ್ದು ಇದಕ್ಕಾಗಿ ಕೃಷಿ ಯಾಂತ್ರೀಕರಣವನ್ನು ಪರಿಚಯಿಸಲಾಗಿದೆ’ ಎಂದರು.

ಭತ್ತ ನಾಟಿಯಿಂದ ಕಟಾವು ಕಾರ್ಯದವರೆಗೆ ಯಂತ್ರೋಪಕರಣಗಳ ಬಳಕೆ ಬಗ್ಗೆ 200 ಎಕರೆಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿತ್ತು, ಇದರಿಂದ ಶೇ 30 ವೆಚ್ಚ ಕಡಿಮೆಯಾಗಿದ್ದು, ಭತ್ತ ಕೃಷಿ ಲಾಭದಾಯಕವಾಗಿದೆ, ಇದೇ ಮಾದರಿಯಲ್ಲಿ ಉಳಿದ ಜಿಲ್ಲೆಗಳಲ್ಲಿ ಅಳವಡಿಸಿಕೊಳ್ಳಲು ಚಿಂತನೆ ನಡೆದಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

‘ಕೃಷಿ ಯಾಂತ್ರೀಕರಣಕ್ಕಾಗಿ ₹455 ಕೋಟಿ ವೆಚ್ಚ ಮಾಡಲಾಗಿದೆ, ಕೃಷಿ ಯಂತ್ರಧಾರೆ  ಕೇಂದ್ರಗಳ  ಮೂಲಕ ಮಾರುಕಟ್ಟೆ ದರಕ್ಕಿಂತ ಶೇ 30 ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣ  ಬಾಡಿಗೆ ಸೌಲಭ್ಯ ಒದಗಿಸಿದ್ದು, ಉಡುಪಿ ಜಿಲ್ಲೆಯಲ್ಲಿ 7  ಹೋಬಳಿಗಳಲ್ಲಿ ಸುಮಾರು 10ಸಾವಿರ  ರೈತರು ಇದರ ಪ್ರಯೋಜನ ಪಡೆದಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಯವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ‘ಜಿಲ್ಲೆಯ ರೈತರಿಗೆ ಎಂಒ4 ತಳಿಯ ಭತ್ತದ ಬೀಜ ಹಾಗೂ ಟಾರ್ಪಾಲಿನ್ ಬೇಡಿಕೆ ಅಧಿಕವಾಗಿದೆ ಇದನ್ನು ಪೂರೈಸಬೇಕು’ ಎಂದು ತಿಳಿಸಿದರು. ಕೃಷಿ ಇಲಾಖೆಯ ಕಾರ್ಯಕ್ರಮಗಳ ಮಾಹಿತಿ ಕೈಪಿಡಿಯನ್ನು ಸಚಿವರು ಬಿಡುಗಡೆಗೊಳಿಸಿದರು.

ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಜನಾರ್ದನ ತೋನ್ಸೆ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ       ನಳಿನಿ ಪ್ರದೀಪ್ ರಾವ್, ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ದಿನಕರ ಪೂಜಾರಿ, ಚಾಂತಾರು ಗ್ರಾಮ ಪಂಚಾಯಿತಿ  ಅಧ್ಯಕ್ಷೆ ಸರಸ್ವತಿ ವಿ.ನಾಯ್ಕ, ಕೃಷಿ ಇಲಾಖೆಯ ನಿರ್ದೇಶಕ ಬಿ.ವೈ ಶ್ರೀನಿವಾಸ್, ನಬಾರ್ಡ್‌ನ ಎ.ಜಿ.ಎಂ.ರಮೇಶ್, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ಚಂದ್ರಶೇಖರ್ ನಾಯ್ಕ್, ಸಹಾಯಕ ನಿರ್ದೇಶಕ ಮೋಹನ್ ರಾಜ್,  ವ.ಕೃ.ತೋ.ಸಂ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಹನುಮಂತಪ್ಪ, ಡಾ.ಬಿ. ಧನಂಜಯ,   ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ವಾಸುದೇವಪ್ಪ  ಇದ್ದರು.

* * 

ರೈತರು ₹8165 ಕೋಟಿ ಸಹಕಾರಿ ಸಾಲವನ್ನು ಸರ್ಕಾರ ಮನ್ನಾ ಮಾಡಿದೆ, ಹಿಂದಿನ ಸರ್ಕಾರಗಳು ಈ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಿರುವ ಉದಾಹರಣೆಯಿಲ್ಲ.
ಕೃಷ್ಣ ಬೈರೇಗೌಡ,  ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT