ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಫಲಾನುಭವಿಗಳಿಗೆ ₹125 ಕೋಟಿ ಸಾಲ ವಿತರಣೆ ಗುರಿ

Last Updated 24 ಜೂನ್ 2017, 10:21 IST
ಅಕ್ಷರ ಗಾತ್ರ

ತುಮಕೂರು: ‘ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಕಳೆದ 3 ವರ್ಷಗಳಲ್ಲಿ ಜಿಲ್ಲೆಯ 354 ಫಲಾನುಭವಿಗಳು ಸಾಲ ಸೌಲಭ್ಯ ಪಡೆದಿದ್ದಾರೆ. ಒಟ್ಟು ₹ 1.49 ಕೋಟಿ ಸಾಲ ವಿತರಿಸಲಾಗಿದೆ. ಈ ವರ್ಷ 190 ಫಲಾನುಭವಿಗಳಿಗೆ ₹ 1.25 ಕೋಟಿ ಸಾಲ ವಿತರಿಸುವ ಗುರಿ ಇದೆ’ ಎಂದು ನಿಗಮದ ಅಧ್ಯಕ್ಷ ಎನ್.ನಂದಕುಮಾರ್ ಹೇಳಿದರು.

ಶುಕ್ರವಾರ ನಿಗಮದ ಜಿಲ್ಲಾ ಕಚೇರಿಯಲ್ಲಿ ನೇರ ಸಾಲ ಯೋಜನೆಯಡಿ ಸಾಂಕೇತಿಕವಾಗಿ ಐವರು ಫಲಾನುಭವಿಗಳಿಗೆ ತಲಾ ₹ 40 ಸಾವಿರದ ಚೆಕ್‌ ವಿತರಿಸಿ ಮಾತನಾಡಿದರು.

‘ಈಗಾಗಲೇ ವಿವಿಧ ಯೋಜನೆಗಳಿಗೆ 800 ಅರ್ಜಿಗಳು ಸ್ವೀಕೃತವಾಗಿವೆ. ಆಗಸ್ಟ್ 31ರೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.
‘ನಿಗಮದಿಂದ ಸಮುದಾಯ ಅಭಿವೃದ್ಧಿಗೆ ವಿವಿಧ ಯೋಜನೆ ರೂಪಿಸಲಾಗಿದೆ.

ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ನೀರಾವರಿ ಸೌಲಭ್ಯ ಕಲ್ಪಿಸಲು ಸಾಲ ಕೊಡಲಾಗುತ್ತಿದೆ. ಕುಲಕಸುಬಿಗೆ ಉತ್ತೇಜನ ನೀಡಲು ಪಂಚವೃತ್ತಿ ಅಭಿವೃದ್ಧಿ ಯೋಜನೆಯಡಿ ಸಾಲ ಒದಗಿಸಲಾಗುವುದು’ ಎಂದು ಹೇಳಿದರು.

ಹೆಚ್ಚುವರಿ ಅನುದಾನಕ್ಕೆ ಮುಖ್ಯಮಂತ್ರಿಗೆ ಮನವಿ: ‘ನಿಗಮಕ್ಕೆ ₹ 25 ಕೋಟಿ ಅನುದಾನವನ್ನು ಈ ವರ್ಷ ಸರ್ಕಾರ ಮಂಜೂರು ಮಾಡಿದೆ. ಹೆಚ್ಚುವರಿಯಾಗಿ ₹ 50 ಕೋಟಿ ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಕೇಂದ್ರದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಅಭಿವೃದ್ಧಿ ನಿಗಮದಿಂದ ರಾಜ್ಯಕ್ಕೆ ₹10 ಕೋಟಿ ಮಂಜೂರಾಗುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

‘ತುಮಕೂರು ನಗರದ ಸರಸ್ವತಿಪುರಂನಲ್ಲಿ ಸಮುದಾಯದ ಮುಖಂಡರು ಶಾಸಕರ ನಿಧಿಯಲ್ಲಿ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿ ನಿಲಯ ನಿರ್ಮಿಸುತ್ತಿದ್ದು, ಪ್ರಗತಿಯಲ್ಲಿದೆ. ಶಾಸಕರು ₹10 ಲಕ್ಷ ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ₹ 2.5 ಲಕ್ಷ ನೀಡಿದ್ದಾರೆ.

₹ 7.5 ಲಕ್ಷ  ಶೀಘ್ರ ಒದಗಿಸುವ ಭರವಸೆ ಕೊಟ್ಟಿದ್ದಾರೆ. ಸರ್ಕಾರದಿಂದ ಇನ್ನಷ್ಟು ಹಣ ದೊರಕಿಸಲು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು’ ಎಂದು ಹೇಳಿದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ಆರ್.ಭಕ್ತಕುಚೇಲ, ಸಮುದಾಯದ ಮುಖಂಡರಾದ ಕೆ.ವಿ.ಕೃಷ್ಣಮೂರ್ತಿ, ಹೊನ್ನಾಚಾರ್, ಗಂಗಾರಾಜಾಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT