ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಳಿಬಜೆಯೂ, ದಿಲ್‌ಖುಷ್‌ ಐಸ್‌ಕ್ರೀಂನ ಚೆಂದದ ಸವಿಯೂ

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ಹೊರಗಡೆ ಜಿಟಿಜಿಟಿ ಮಳೆ. ಹೋಟೆಲ್ ಒಳಗೆ ಕುಳಿತ ಮಂಗಳೂರು ಮಂದಿ ಸ್ವಾರಸ್ಯಕರ ಚರ್ಚೆಯಲ್ಲಿ ತೊಡಗಿದ್ದಾರೆಂದರೆ ಅಲ್ಲಿ ಪ್ಲೇಟುಗಟ್ಟಲೇ ಗೋಳಿಬಜೆ ಖಾಲಿಯಾಗುತ್ತಿವೆ ಅಂತಲೇ ಅರ್ಥ. ಇದು ಮಂಗಳೂರಿನ ಬಲ್ಮಠದಲ್ಲಿರುವ ಇಂದ್ರಭವನದಲ್ಲಿ ಪ್ರತಿ ಸಂಜೆ ಕಾಣಸಿಗುವ ದೃಶ್ಯ.

ಇತ್ತ, ಲಾಲ್‌ಬಾಗ್‌ನಲ್ಲೂ ಮಳೆ ಸುರಿಯುತ್ತಿದೆ. ಇಲ್ಲೂ ಚರ್ಚೆಗಳು ನಡೆಯುತ್ತವೆ. ಆದರೆ, ಮಾತಿನಲ್ಲಿ ಅಲ್ಲ. ಕಣ್ಣ ಸನ್ನೆಯಲ್ಲಿ, ತುಟಿಬಟ್ಟಲಿನಿಂದ ತುಳುಕುವ ಹೂ ನಗುವಿನ ಹೊಳಪಿನಲ್ಲಿ. ಪಬ್ಬಾಸ್ ಐಸ್‌ಕ್ರೀಂ ಪಾರ್ಲರಿನಲ್ಲಿ ಕುಳಿತ ಪ್ರೇಮಿಗಳು ದಿಲ್‌ಖುಷ್‌ ಐಸ್‌ಕ್ರೀಂ ಮೆಲ್ಲುತ್ತಾ ಜಗವನ್ನೇ ಮರೆಯುತ್ತಾರೆ.

-ಮಂಗಳೂರಿನಲ್ಲಿರುವ ಇಂದ್ರಭವನ ಮತ್ತು ಪಬ್ಬಾಸ್ ಐಸ್‌ಕ್ರೀಂ ಪಾರ್ಲರ್ ರುಚಿಬೇಟೆ ಆಡುವ ಮಂದಿಗೆ ಇಷ್ಟವಾಗುವ ಎರಡು ನೆಚ್ಚಿನ ಜಾಗಗಳು. ಮಳೆ ಇರಲಿ; ಸೆಕೆ ಇರಲಿ ಇಲ್ಲಿನ ಜನರ ಮಾತಿಗೆ, ಪ್ರೇಮಿಗಳ ಮೌನ ಸಂಭಾಷಣೆಗೆ ಜತೆಯಾಗುವುದು ಗೋಳಿಬಜೆ ಮತ್ತು ಐಸ್‌ಕ್ರೀಂ ಮಾತ್ರ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ತಿಂಡಿ ಗೋಳಿಬಜೆ. ಇದರ ರೆಸಿಪಿ ತುಂಬ ಸರಳವಾದುದು. ಹಾಗಾಗಿ ಇದು ದಿಢೀರ್ ತಿಂಡಿಯಾಗಿಯೂ ಜನಪ್ರಿಯತೆ ಗಳಿಸಿದೆ. ಮೈದಾಹಿಟ್ಟು, ವೃತ್ತಾಕಾರವಾಗಿ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಸ್ವಲ್ಪ ಸಕ್ಕರೆ, ಸೋಡ, ಮೊಸರು, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಹಸಿ ಶುಂಠಿ, ಚಿಟಿಕೆ ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹದವಾಗಿ ಕಲಸಿ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ಚಟ್ನಿ ಜತೆಗೆ ನೆಚ್ಚಿಕೊಂಡು ತಿನ್ನುವಾಗ ಮಜ ಕೊಡುವ ತಿಂಡಿ ಇದು.

‘ಬಲ್ಲವನೇ ಬಲ್ಲ ಗೋಳಿಬಜೆಯ ರುಚಿಯ’ ಎಂಬ ಮಾತು ಈ ತಿಂಡಿಯ ರುಚಿಯ ಗಮ್ಮತ್ತನ್ನು ಹೇಳುತ್ತದೆ. ದಪ್ಪ ಜಾಮೂನಿನ ಗಾತ್ರದ ಗೋಳಿಬಜೆ ಹೊಂಬಣ್ಣದಲ್ಲಿದ್ದು, ಅದನ್ನು ಕೈಯಲ್ಲಿ ಹಿಡಿದರೆ ಮಗುವಿನ ಕೆನ್ನೆಯನ್ನು ಮುಟ್ಟಿದಷ್ಟೇ ಮೃದು ಅನುಭವ ಕೊಡುತ್ತದೆ. ಬಿಸಿಬಿಸಿಯಾದ ಗೋಳಿಬಜೆಯನ್ನು ಕಾಯಿಚಟ್ನಿ ಜತೆಗೆ ಅದ್ದಿ ಬಾಯಲ್ಲಿಟ್ಟು ಕಚ್ಚಿ ಅಗಿದರೆ ಅದರ ರುಚಿ ಚಟ್ನಿಯೊಂದಿಗೆ ನಾಲಗೆಯ ತುಂಬೆಲ್ಲಾ ಹರಡಿಕೊಂಡು ಒಳಗಿರುವ ರುಚಿಮೊಗ್ಗುಗಳನ್ನು ಅರಳಿಸುತ್ತದೆ. ಗೋಳಾಕಾರದಲ್ಲಿರುವ ಗೋಳಿಬಜೆಯೊಳಗಿನ ಹಸಿ ಮೆಣಸಿನ ಚಿಮುಚಿಮು ಕಾರ ಮೊದಲಿಗೆ ತಿನ್ನುವವರ ನಾಲಗೆ ತಾಕುತ್ತದೆ. ಮತ್ತಷ್ಟು ಅಗಿದು ಮೆಲ್ಲುತ್ತಾ ಹೋದಂತೆ ಶುಂಠಿಯ ಕಂಪು, ಸಕ್ಕರೆಯ ಸ್ವಾದ, ಇಂಗು-ಮೊಸರಿನ ಒಗರು ಎಲ್ಲವೂ ಏಕಕಾಲಕ್ಕೆ ಬಿಡುಗಡೆಗೊಂಡು ತಿನ್ನುವವರ ಹೊಟ್ಟೆಗೆ ಹಿತಾನುಭವ ನೀಡುತ್ತದೆ. ಮನದೊಳಗೆ ರಸಸೃಷ್ಟಿ ಉಂಟುಮಾಡುತ್ತದೆ.

ಗೋಳಿಬಜೆ ಹೆಸರು ಕೇಳಿದ ತಕ್ಷಣ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರ ಕಿವಿ ನಿಮಿರುತ್ತದೆ, ಬಾಯಲ್ಲಿ ನೀರೂರುತ್ತದೆ. ಹೊರಗಿನಿಂದ ಬಂದವರಿಗೂ ಗೋಳಿಬಜೆಯ ರುಚಿ ಇಷ್ಟವಾಗುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿನ ಬಹುತೇಕ ಹೋಟೆಲ್‌ಗಳಲ್ಲಿ ಸಂಜೆಯ ತಿಂಡಿಗೆ ಗೋಳಿಬಜೆ ಇರುತ್ತದೆ. ಹಾಗೆಯೇ, ತಾರಾ ಹೋಟೆಲ್‌ಗಳಲ್ಲಿ ನಡೆಯುವ ಬ್ಯುಸಿನೆಸ್ ಮೀಟಿಂಗ್‌ನ ಹೈ ಟೀ ಜತೆಗೆ ಬಿಸಿಬಿಸಿ ಗೋಳಿಬಜೆ ಸರ್ವ್ ಆಗುತ್ತದೆ. ಮಂಗಳೂರಿನ ಬಲ್ಮಠದಲ್ಲಿರುವ ಇಂದ್ರಭವನ ಜನಪ್ರಿಯವಾಗಿರುವುದೇ ಗೋಳಿಬಜೆಗೆ. ಮಂಗಳೂರಿಗೆ ಬಂದವರು ಗೋಳಿಬಜೆ ಸವಿಯುವುದನ್ನು ಮಾತ್ರ ಮರೆಯಬಾರದು. ಇಂದ್ರಭವನದಲ್ಲಿ ಸಿಗುವ ಗೋಳಿಬಜೆ ಬೆಲೆ ಒಂದು ಪ್ಲೇಟ್‌ಗೆ ₹17 ಮಾತ್ರ. ಮೈದಾಹಿಟ್ಟು ಕಲಸಿ, ನಾಲ್ಕೈದು ಬಗೆಯ ಪದಾರ್ಥಗಳನ್ನು ಬಳಸಿ ತಯಾರಿಸುವ ಗೋಳಿಬಜೆ ಅಂದರೆ ಇಲ್ಲಿನ ಜನರಿಗೆ ಅದು ತಿಂಡಿಯಷ್ಟೇ ಅಲ್ಲ, ಅದರೊಂದಿಗೆ ಏನೋ ವಿಶೇಷ ಅಟ್ಯಾಚ್‌ಮೆಂಟು!

ರುಚಿ ನೋಡಿ, ಮಂಗಳೂರು ಬನ್ಸ್‌ಗೆಳತಿಯ ದುಂಡು ಕೆನ್ನೆಯಷ್ಟೇ ಕೆಂಪಾಗಿರುವ ಮಂಗಳೂರು ಬನ್ಸ್‌ನ ರುಚಿ ನಾಲಗೆಯನ್ನು ದಾಟಿ ಹೊಟ್ಟೆಗಿಳಿಯುವಷ್ಟರಲ್ಲಿ ಮತ್ತೊಂದು ಬೇಕು ಅನ್ನಿಸುವಷ್ಟು ಮಜಬೂತಾಗಿರುತ್ತದೆ. ಬಾಳೆ ಹಣ್ಣು, ಮೈದಾಹಿಟ್ಟು, ಮೊಸರು, ಜೀರಿಗೆ, ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹದವಾಗಿ ಕಲೆಸಿ, ಚೆನ್ನಾಗಿ ನೆನೆಸಿ ನಂತರ ಒಂದೂವರೆ ಇಂಚು ದಪ್ಪಕ್ಕೆ ಲಟ್ಟಿಸಿ ಅದನ್ನು ಎಣ್ಣೆಯಲ್ಲಿ ಕೆಂಪುಬಣ್ಣ ಬರುವಂತೆ ಕರೆದಿರುವ ಬಿಸಿ ಬನ್ಸ್ ಅನ್ನು ಮುರಿದು ಬಾಯೊಳಗಿಟ್ಟರೆ ಮೊದಲಿಗೆ ಬಾಳೆಹಣ್ಣಿನ ಸುವಾಸನೆ, ಜೀರಿಗೆ ಕಂಪು ಅಡರುತ್ತದೆ. ಒಂದು ತಿಂದರೆ ಮತ್ತೊಂದು ಬೇಕು ಅನ್ನಿಸುವಂತಿರುತ್ತದೆ. ಬನ್ಸ್‌ಗೆ ಚಟ್ನಿ ಅಥವಾ ಸಾಂಬಾರ್ ಒಳ್ಳೆ ಕಾಂಬಿನೇಷನ್. ಇವೆರಡೂ ಇಲ್ಲದೇ ಬರೀ ಬನ್ಸ್ ಕೂಡ ಸವಿಯಬಹುದು.

ಐಸ್‌ಕ್ರೀಂ ಲವ್ವರ್‌್ಸ್‌ಗೆ ಪಬ್ಬಾಸ್‌ ಐಸ್‌ಕ್ರೀಂ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ವರ್ಷದ ಒಂಬತ್ತು ತಿಂಗಳು ಮೈಯಲ್ಲಿ ಬೆವರಿಳಿಸುವ ಮಂಗಳೂರಿನ ವಾತಾವರಣದಲ್ಲಿ ತಂಪು ಪಾನೀಯಗಳಿಗೆ ವಿಪರೀತ ಡಿಮ್ಯಾಂಡ್. ಅದರಲ್ಲೂ ಇಲ್ಲಿನ ಪಬ್ಬಾಸ್ ಪಾರ್ಲರ್‌ ಐಸ್‌ಕ್ರೀಂ ಪ್ರಿಯರ ನೆಚ್ಚಿನ ತಾಣ. ಪ್ರೇಮಿಗಳ ನಲ್ದಾಣ. ಇಲ್ಲಿನ ತರಹೇವಾರಿ ಸ್ವಾದದ ಐಸ್‌ಕ್ರೀಂ ಸವಿಯಲೆಂದೇ ದೂರದೂರಿನಿಂದ ಬರುವ ಜನರೂ ಇದ್ದಾರೆ. ವೀಕೆಂಡ್‌ಗಳಲ್ಲಿ ಒಮ್ಮೊಮ್ಮೆ ಕ್ಯೂನಲ್ಲಿ ನಿಂತು ಐಸ್‌ಕ್ರೀಂ ತಿಂದು ಹೋಗಬೇಕಾಗುತ್ತದೆ.

ಪಬ್ಬಾಸ್‌ನಲ್ಲಿ ಐಸ್‌ಕ್ರೀಂ ಅನ್ನೂ ಖಾದ್ಯಗಳಂತೆ ಸರ್ವ್ ಮಾಡುತ್ತಾರೆ. ಇದು ಇಲ್ಲಿನ ಮತ್ತೊಂದು ವಿಶೇಷ. ಇಲ್ಲಿ ವೆನಿಲಾ, ಪಿಸ್ತಾ, ಬಾದಾಮ್, ಸ್ಟ್ರಾಬೆರಿಯಂತಹ ಸಾಮಾನ್ಯ ಫ್ಲೇವರ್‌ನ ಐಸ್‌ಕ್ರೀಂ ಜತೆಗೆ ಪಬ್ಬಾಸ್‌ ಸ್ಪೆಶಲ್‌, ಅಮೆರಿಕನ್‌ ಚಾಕೊನೆಟ್‌, ಟ್ರಿಪಲ್ ಸಂಡೇ, ಮಿಲ್ಕಿ ಟ್ರೀಟ್ ಮೊದಲಾದ ಜನಪ್ರಿಯ ಐಸ್‌ಕ್ರೀಂಗಳಿವೆ. ತಿರಮಿಸು, ಚಾಕೊಲೆಟ್ ಡ್ಯಾಡ್, ದಿಲ್‌ಖುಷ್, ಬ್ಯಾಂಬಿನೋ, ಬೀ ಹೈವ್‌ ಇಲ್ಲಿನ ಸ್ಪೆಷಲ್‌ ಐಸ್‌ಕ್ರೀಂಗಳು. ಇಲ್ಲಿಗೆ ಹೋಗುವವರು ಹಸಿದ ಹೊಟ್ಟೆಯಲ್ಲಿ ಹೋದರೇನೇ ಚೆನ್ನ. ಏಕೆಂದರೆ, ಇಲ್ಲಿಗೆ ಹೋದವರ್‌್ಯಾರೂ ಕೇವಲ ಒಂದು ಐಸ್‌ಕ್ರೀಂ ತಿಂದು ಸುಮ್ಮನಾಗುವುದಿಲ್ಲ. ಒಂದರ ಹಿಂದೆ ಮತ್ತೊಂದು ಐಸ್‌ಕ್ರೀಂ ತಿನ್ನದೇ ವಾಪಸಾಗುವುದಿಲ್ಲ!

ಶೈಕ್ಷಣಿಕ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಬಂದರು ನಗರಿ ಮಂಗಳೂರಿಗೆ ಬಂದವರೆಲ್ಲರು ಮಿಸ್‌ ಮಾಡದೇ ತಿನ್ನಬೇಕಾದ ಹತ್ತು ಹಲವು ಜನಪ್ರಿಯ ತಿನಿಸುಗಳ ಪಟ್ಟಿಯನ್ನು ಕೊಡಬಹುದು. ಇಲ್ಲಿನ ಒಂದೊಂದು ತಿಂಡಿಗೂ ಒಂದೊಂದು ಸೊಗಸಿದೆ. ಬಂಟರು, ಬ್ಯಾರಿಗಳು, ಕೆಥೋಲಿಕ್ ಹಾಗೂ ಸಾರಸ್ವತ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಊರಿನ ಆಹಾರ ಸಂಸ್ಕೃತಿಯೂ ಭಿನ್ನವಾದುದು. ಬೆಳಗಿನ ತಿಂಡಿಗೆ ಹೆಚ್ಚಿನವರ ಆಯ್ಕೆ ಮಂಗಳೂರು ಬನ್ಸ್, ನೀರ್ ದೋಸೆ, ಕೋಳಿ ಸುಕ್ಕಾ. ಇಲ್ಲಿನ ಜನರಿಗೆ ಪ್ರತಿದಿನದ ಊಟ ಜತೆಗೆ ಮೀನಿನ ಖಾದ್ಯಗಳು ಇರಲೇಬೇಕು. ಮಂಗಳೂರು ಫಿಶ್ ಕರಿ, ಬಂಗುಡೆ ಫ್ರೈ, ಬೂತಾಯಿ ಗಸಿ ಅಂದರೆ ಅವರಿಗೆ ಅಚ್ಚುಮೆಚ್ಚು. ಚಿಕನ್ ಘೀ ರೋಸ್ಟ್ ಸೇಮಿಗೆ ರಸಾಯನ, ಕೊಟ್ಟೆ ಕಡುಬು, ಪತ್ರೊಡೆ ಕೋರಿ ರೊಟ್ಟಿ ಇವೆಲ್ಲವೂ ಇಲ್ಲಿನ ಕ್ಲಾಸಿಕ್ ತಿನಿಸುಗಳು. ಒಂದರ್ಥದಲ್ಲಿ ಈ ತಿನಿಸುಗಳೆಲ್ಲ ದಕ್ಷಿಣ ಕನ್ನಡದ ಮೆನುವನ್ನು ಶ್ರೀಮಂತಗೊಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT