ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯನ ಕರ್ತವ್ಯ ಸಮರ್ಪಣೆ

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ಇದು ನನ್ನ ವೈದ್ಯಕೀಯ ವೃತ್ತಿಯಲ್ಲಿನ ಅನುಭವ. ಸಾವು ಬದುಕಿನಲ್ಲಿದ್ದ ರೋಗಿಯೊಬ್ಬನ ಪ್ರಾಣ ಉಳಿಸಿದ್ದಕ್ಕಾಗಿ ಹೆಮ್ಮೆ ಮತ್ತು ಸಂತೋಷ. ಈ ಘಟನೆ ನಡೆದದ್ದು 1979 ರಲ್ಲಿ. ನಾನು ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದಾಗ. ಆ ದಿನಗಳಲ್ಲಿ ಪ್ರಖ್ಯಾತರಾದ ಡಾ.ಜಾಧವ್‌ ಮೆಡಿಸಿನ್‌ ಪ್ರೊಫೆಸರ್‌. ಅವರ ಮಾರ್ಗದರ್ಶನದಲ್ಲಿ ಬಹಳಷ್ಟು ಕಲಿತೆ.

ಒಂದು ದಿನ ತುರ್ತು ಚಿಕಿತ್ಸಾ ವಿಭಾಗದಿಂದ ಮೆಡಿಕಲ್‌ ‘ಎ’ ಯುನಿಟ್‌ ವಾರ್ಡ್‌ಗೆ ದಾಖಲಾದ ರೈತ ರೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಫಾಲಿಡಾಲ್‌ ಕುಡಿದು ವಿಷಮ ಸ್ಥಿತಿಯಲ್ಲಿದ್ದ. ಆತನ ಸಂಕುಚಿತಗೊಂಡ ಕಣ್ಣಿನ ಗೊಂಬೆ (ಪ್ಯೂಪಿಲ್‌), ಸ್ನಾಯು ಸೆಳೆತ ಮತ್ತು ಮಂದಗತಿಯ ನಾಡಿಬಡಿತ– ಇವೆಲ್ಲ ದೇಹಸ್ಥಿತಿ ಕ್ಷೀಣಿಸುತ್ತಿರುವ ಲಕ್ಷಣಗಳು. ಇದೇ ಯುನಿಟ್‌ಗೆ ನನ್ನ ಪೋಸ್ಟಿಂಗ್ಸ್‌ ಆಗಿತ್ತು. ಆ ದಿನದ ನೈಟ್‌ ಡ್ಯೂಟಿ ನನ್ನದು. ಹಿರಿಯ ವೈದ್ಯರು ಸಲಹೆಗಳನ್ನೂ ಕೊಟ್ಟಿದ್ದರು. ಆ ರೋಗಿಯನ್ನು ಉಳಿಸುವುದು ದೊಡ್ಡ ಸವಾಲಾಗಿತ್ತು. ಜೊತೆಗೆ ನಾನು ಹೊಸ ಇಂಟರ್ನಿ ಬೇರೆ. ರಾತ್ರಿಯೆಲ್ಲ ಆತನಿಗೆ ಹೆಚ್ಚಿನ ಗಮನ ಕೊಟ್ಟಿದ್ದೆ. ಅರ್ಧ ಗಂಟೆಗೊಮ್ಮೆ ಪರೀಕ್ಷಿಸುವುದು, ಇಂಜೆಕ್ಷನ್‌ ಅಟ್ರೋಪಿನ್‌ ಕೊಡುವುದು, ಇದು ಎಲ್ಲಿಯವರೆಗೆಂದರೆ– ಕಣ್ಣಿನ ಗೊಂಬೆ ಹಿಗ್ಗುವವರೆಗೆ. ಆಗ ಈಗಿನಂತೆ ಆಧುನಿಕ ಉಪಕರಣಗಳಾಗಲಿ, ತೀವ್ರ ನಿಗಾ ಘಟಕಗಳಾಗಲಿ ಇರಲಿಲ್ಲ. ರೋಗಿ ಬಡ ರೈತ ಸಾಮಾನ್ಯ ವಾರ್ಡ್‌ನಲ್ಲಿದ್ದ.

ಆ ದಿನ ರಾತ್ರಿಯೆಲ್ಲ ನಾನು ಮಲಗಲಿಲ್ಲ. ಗಂಟೆಗಳು ಉರುಳಿದಂತೆ ಆತ ಚೇತರಿಸಿಕೊಳ್ಳತೊಡಗಿದ. ಬೆಳಿಗ್ಗೆ ಪ್ರೊಫೆಸರ್‌ ವಾರ್ಡ್‌ ರೌಂಡ್‌್ಸಗೆ ಬರುವಷ್ಟರಲ್ಲಿ ರೋಗಿ ಸಾಕಷ್ಟುಮಟ್ಟಿಗೆ ಅಪಾಯದಿಂದ ಪಾರಾಗಿದ್ದ. ತುಸು ಲವಲವಿಕೆಯಿಂದ ಇದ್ದ. ಆತನಿಗೆ ಮತ್ತೊಂದು ಇಂಜೆಕ್ಷನ್‌– ಫಾಲಿಡಾಲ್‌ಗೆ ಸ್ಪೆಸಿಫಿಕ್‌ ಆ್ಯಂಟಿಡೋಟ್‌ ಅನ್ನು ತುರ್ತಾಗಿ ತಂದುಕೊಟ್ಟರೆ ರೋಗಿಯು ಬೇಗ ಚೇತರಿಸಿಕೊಂಡು ಬದುಕುಳಿಯುತ್ತಾನೆ ಎಂದು ರೋಗಿಯ ಸಂಗಡ ಬಂದವರಿಗೆ ಹಿರಿಯ ವೈದ್ಯರು ಹೇಳಿದರು.

ಇಂಜೆಕ್ಷನ್‌ ಅನ್ನು ಹೊರಗಡೆಯಿಂದ ತರಬೇಕಾಗಿತ್ತು. ಆ ದಿನಗಳಲ್ಲಿ ಈ ಇಂಜೆಕ್ಷನ್‌ ಮೈಸೂರಿನಲ್ಲಿ ಸಿಗುವುದು ಖಾತರಿ ಇರಲಿಲ್ಲ. ಸಾಕಷ್ಟು ಬಾರಿ ಬೆಂಗಳೂರಿನಿಂದಲೇ ತರಬೇಕಾಗಿತ್ತು. ಅಂತೂ ಆತ ಶರವೇಗದಲ್ಲಿ ತಂದುಕೊಟ್ಟ. ತಕ್ಷಣ ಅದನ್ನು ಕೊಟ್ಟ ಮೇಲೆ ರೋಗಿ ಪೂರ್ತಿ ಗುಣಮುಖನಾದ.

ಇದು ಮೆಡಿಕೋ ಲೀಗಲ್‌ ಕೇಸ್‌. ಪೊಲೀಸರು ಬಂದು ವಿವರ ಕೇಳುತ್ತಾರೆ. ಧೈರ್ಯದಿಂದ ಉತ್ತರ ಕೊಡು. ಹೆದರಬೇಡ ಎಂದು ಆತನಿಗೆ. ಆದರೆ, ಅವನು ಅದಕ್ಕೆ ಹೆದರಿಯೋ ಏನೋ ವಾರ್ಡ್‌ನಿಂದ ಪರಾರಿಯಾಗಿದ್ದ. ರಾತ್ರಿಯೆಲ್ಲ ನಿದ್ದೆಗೆಟ್ಟು ಅವನ ಪ್ರಾಣ ಉಳಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸದೆ ಒಂದು ಮಾತೂ ಹೇಳದೆ ಹೊರಟು ಹೋಗಿದ್ದಕ್ಕೆ ತುಂಬಾ ಬೇಸರವಾಯಿತು.

ಅರಿಯೂರು ಡಾ. ಎಸ್‌. ನಟರಾಜ್‌, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT