ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಹೋರಾಟಗಾರ, ಚಿಂತಕ ಹೇಮಂತ್‌ ಕುಮಾರ್‌ ಪಾಂಚಾಲ್‌

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ಗಾಂಧಿ ಯುಗ ಮುಗಿದು ಮೂರು ದಶಕಗಳ ನಂತರ ಆ  ವಿಚಾರಧಾರೆಯನ್ನು ಮನ ತುಂಬಿಕೊಂಡು ಆ ಹಾದಿಯಲ್ಲೇ ನಡೆದವರು ಹೇಮಂತ್‌ ಕುಮಾರ್‌ ಪಾಂಚಾಲ್‌. ರೈತರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಹತ್ತು ಹಲವು ಕನಸು ಕಾಣುತ್ತಾ, ರೈತಾಪಿ ಯುವಜನರಲ್ಲಿ ವೈಚಾರಿಕ ಪ್ರಜ್ಞೆಯ ಬೆಳಕು ಚೆಲ್ಲುತ್ತಾ ಬದುಕಿದ್ದ ಇವರು ವಾರದ ಹಿಂದೆ ನಿಧನರಾದಾಗ ದೇಶದ ಅನೇಕ ರಾಜ್ಯಗಳಲ್ಲಿ ಇವರ ಗೌರವಾರ್ಥ ಸಭೆಗಳು ನಡೆದು ಇವರ ವಿಚಾರವನ್ನು ಸ್ಮರಿಸಿಕೊಂಡ ಸುದ್ದಿಗಳು ಬಂದಿವೆ.

ಬೆಂಗಳೂರಿನಲ್ಲೇ ನಾಲ್ಕು ದಿನಗಳ ಹಿಂದೆ ನಡೆದ ಹೇಮಂತ್‌ ನುಡಿನಮನ ಕಾರ್ಯಕ್ರಮಕ್ಕೆ ಕೇರಳ, ಆಂಧ್ರ, ತಮಿಳುನಾಡು, ಪಂಜಾಬ್‌, ದೆಹಲಿಯಿಂದ ಅನೇಕ ಮಂದಿ ಬಂದು ಇವರ ಜತೆಗಿನ ನೆನಪಿನ ಬುತ್ತಿ ಬಿಚ್ಚಿಟ್ಟಾಗ ಬೆಂಗಳೂರಿನ ಮಂದಿ ಅಚ್ಚರಿಗೊಂಡಿದ್ದರು.

ಹೇಮಂತ್‌ ಅವರು ಸಿಪಿಐ ಪಕ್ಷದ ಮುಖಂಡ ಸಿದ್ದನಗೌಡ ಪಾಟೀಲರ ಸಮಕಾಲೀನರು. ‘ಎಂಬತ್ತರ ದಶಕದ ಆರಂಭದ ದಿನಗಳಲ್ಲಿ ಹೇಮಂತ್‌ ಅವರು ರೈತ ಚಳವಳಿಯ ಮುಂಚೂಣಿಯಲ್ಲಿದ್ದರು. ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ನವಲಗುಂದದಲ್ಲಿ ಸಹಸ್ರಾರು ರೈತರನ್ನು ಸಂಘಟಿಸಿದ್ದರು. ಅಲ್ಲಿ ಪ್ರತಿಭಟನೆ ತಾರಕಕ್ಕೆ ಏರಿತ್ತು. ಪೊಲೀಸ್‌ ಗೋಲಿಬಾರ್‌ನಲ್ಲಿ ರೈತರು ಸತ್ತರು. ಆ ಕಿಡಿಯೇ ರಾಜ್ಯದಾದ್ಯಂತ ಭುಗಿಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಹೊಸ ಆಯಾಮ ಕಂಡುಕೊಂಡಿತು’ ಎಂದು ಸಿದ್ದನಗೌಡರು ನುಡಿನಮನ ಕಾರ್ಯಕ್ರಮದಲ್ಲಿ ತಮ್ಮ ಗೆಳೆಯನ ಹೋರಾಟದ ದಿನಗಳನ್ನು ನೆನಪಿಸಿಕೊಂಡರು.

ಹೇಮಂತ್‌, ತಮ್ಮ ಬದುಕಿನ ಉದ್ದಕ್ಕೂ ‘ಸುದ್ದಿಜೀವಿ’ಯಾಗಿರಲಿಲ್ಲ. ಯಾವುದೇ ಅಧಿಕಾರದ ಕುರ್ಚಿಗಾಗಿ ಹಂಬಲಿಸಲಿಲ್ಲ. ಮಾರ್ಕ್‌ ಟೆಲಿ, ಭಾರತದ ಮಾಧ್ಯಮ ಲೋಕದಲ್ಲಿ ಬಲು ದೊಡ್ಡ ಹೆಸರು. ಹಿಂದೆ ಬಿಬಿಸಿಯ ಭಾರತದ ವರದಿಗಾರರಾಗಿದ್ದ ಇವರು ಈ ದೇಶದ ಉದ್ದಗಲಕ್ಕೂ ಸಂಚರಿಸಿದವರು. ಸ್ವಾತಂತ್ರ್ಯಾನಂತರ ಮತ್ತು ಟೆಲಿವಿಷನ್‌ ಕ್ರಾಂತಿ ಪ್ರಖರಗೊಳ್ಳುವ ಮೊದಲು ಈ ದೇಶದ ಅನೇಕ ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿದ್ದವರು. ಇವರ ‘ಇಂಡಿಯಾ ಇನ್‌ ಸ್ಲೊ ಮೋಷನ್‌’ ಕೃತಿಯಲ್ಲಿ ಹೇಮಂತ್‌ ಕುರಿತು ಒಂದಷ್ಟು ಬರೆದಿದ್ದಾರೆ.

‘ಎಪ್ಪತ್ತು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನದಲ್ಲಿ ಡಾಕ್ಟರೆಟ್‌ ಪಡೆದು ಬಂದು ಧಾರವಾಡ ಮತ್ತು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ವೈ.ಎಸ್‌.ಪಾಂಚಾಲ್‌ ಅವರ ಮಗ ಹೇಮಂತ್‌. ಇವರು ಎಪ್ಪತ್ತರ ದಶಕದ ಕೊನೆಯಲ್ಲಿ ಮದ್ರಾಸ್‌ ಐಐಟಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಲ್ಲಿಗೆ ಸೇರಿದರು. ಆರಂಭದಲ್ಲಿ ಮಾರ್ಕ್ಸ್‌ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. ಆದರೆ ಗಾಂಧಿಯನ್ನು ಓದುತ್ತಾ, ಗ್ರಾಮೀಣರೊಂದಿಗೆ ಬೆರೆಯುತ್ತಾ ಎಲ್ಲವನ್ನು ಗಮನಿಸತೊಡಗಿದ ಅವರಿಗೆ ಕಮ್ಯುನಿಸ್ಟ್‌ ವಿಚಾರಧಾರೆಯ ಚಳವಳಿಗೆ ಈ ನೆಲದಲ್ಲಿ ಸಾಮಾಜಿಕ ಬೇರುಗಳಿಲ್ಲ ಎಂದು ಅರ್ಥವಾಯಿತೇನೋ. ನಂತರ ಗಾಂಧೀಜಿಯವರ ಎಲ್ಲಾ ಬರಹಗಳನ್ನು ಓದಿದರು. ಏಕಾಏಕಿ ಐಐಟಿಯನ್ನು ತೊರೆದರು. ನವಲಗುಂದದಿಂದ ಐದು ಕಿ.ಮೀ. ದೂರದಲ್ಲಿರುವ ಬೆಳವಟಗಿಯಲ್ಲಿ ಆರು ಎಕರೆ ಜಮೀನು ಖರೀದಿಸಿ ಅಲ್ಲಿ ಕೃಷಿ ಕೆಲಸದಲ್ಲಿ ತಲ್ಲೀನರಾದರು. ಜತೆಗೆ ಅದೇ ಊರಿನ ರೈತರಲ್ಲಿ ಅರಿವಿನ ಬೆಳಕು ಚೆಲ್ಲಿದರು. ನಂತರದ ದಿನಗಳಲ್ಲಿ ಸುತ್ತಮುತ್ತಲ ಹಳ್ಳಿಯ ರೈತರನ್ನು ಸಂಘಟಿಸಿದರು. ತಮ್ಮ ನ್ಯಾಯಬದ್ಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯ ಹಾದಿ ತುಳಿಯುವಂತೆ ರೈತರನ್ನು ಪ್ರೇರೇಪಿಸಿದರು’ ಎಂದು ದಶಕದ ಹಿಂದೆಯೇ ಮಾರ್ಕ್‌ ಟೆಲಿ ಬರೆದಿದ್ದಾರೆ.

ಬೆಳವಟಗಿಯವರೇ ಆದ ಮರೀಶ್‌ ನಾಗಣ್ಣವರ್‌ ಈಗ ಧಾರವಾಡದಲ್ಲಿ ವಾಣಿಜ್ಯೋದ್ಯಮಿ. ಸ್ನಾತಕೋತ್ತರ ಪದವೀಧರ. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ. ಅವರೊಡನೆ ಮಾತಿಗಿಳಿದಾಗ, ‘ಹೇಮಂತ್‌ ಸರ್‌ ನಮ್ಮೂರಿಗೆ ಬರದಿದ್ದರೆ ನಾನು ಬೆಳವಟಗಿಯಲ್ಲೇ ಯಾರದೋ ಹೊಲದಲ್ಲಿ ಜೀತಗಾರನಾಗಿರುತ್ತಿದ್ದೆ. ಎಳವೆಯಲ್ಲೇ ನನ್ನನ್ನು ಧಾರವಾಡಕ್ಕೆ ಕರೆತಂದು, ಸರ್ಕಾರಿ ಹಾಸ್ಟೆಲ್‌ನಲ್ಲಿ ಸೀಟು ಕೊಡಿಸಿ ಶಿಕ್ಷಣ ಮುಂದುವರಿಸಲು ನೆರವು ನೀಡಿದರು. ಅವರು ಸಾಯುವ ಹಿಂದಿನ ದಿನ ಕೂಡಾ ಹೊಲದಲ್ಲಿ ಇಡೀ ದಿನ ಬೆಳವಟಗಿಯ ತೋಟದಲ್ಲಿ ದುಡಿದು ಬಂದಿದ್ದರು. ಉತ್ತರ ಕರ್ನಾಟಕದಲ್ಲಿ ನನ್ನಂತಹ ನೂರಾರು ಬಡವರ ಮನೆಗಳಲ್ಲಿ ಅವರು ದೀಪವಾಗಿದ್ದಾರೆ’ ಎಂದು ಕಣ್ಣೀರಾದರು.

ಹೇಮಂತ್‌ ಅವರ ಆತ್ಮೀಯರ ಬಳಗದಲ್ಲಿ ಪರಿಸರ ಚಿಂತಕ ಯಲ್ಲಪ್ಪ ರೆಡ್ಡಿಯವರೂ ಒಬ್ಬರು. ‘ಅಪಾರವಾಗಿ ಓದಿಕೊಂಡಿದ್ದ ಹೇಮಂತ್‌ ಅವರಿಂದ ನಾನು ಬಹಳಷ್ಟು ಕಲಿತ್ತಿದ್ದೇನೆ. ಅವರು ಮಾತಿಗಿಳಿದರೆ ಅಂಕಿಅಂಶಗಳೊಂದಿಗೆ ಅದ್ಭುತವಾಗಿ ವಿಷಯ ಮಂಡಿಸುತ್ತಿದ್ದರು. ಈ ನೆಲದ ಪರಿಸರವನ್ನು ಕಾಪಾಡುವ ಬಗ್ಗೆ, ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕುರಿತು ನಿತ್ಯವೂ ಚಿಂತಿಸುತ್ತಿದ್ದರು. ನನಗೆ ಗೊತ್ತಿದ್ದ ಮಟ್ಟಿಗೆ ಎರಡು ದಶಕಗಳಲ್ಲಿ ಹೈಕೋರ್ಟ್‌ನ ಅನೇಕ ಗೌರವಾನ್ವಿತ ನ್ಯಾಯಮೂರ್ತಿಗಳು ಇವರೊಡನೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ಹೇಮಂತ್‌ ಅವರಲ್ಲಿ ಯಾವುದೇ ವಿಚಾರದ ಬಗ್ಗೆ ಗೊಂದಲ ಇರುತ್ತಿರಲಿಲ್ಲ. ಅವರು ಕೃಷಿ ವಿಶ್ವವಿದ್ಯಾಲಯದ ಕೆಲವು ಸಮಿತಿಗಳಲ್ಲಿ ಇದ್ದರು. ಉಪನ್ಯಾಸಕರಿಗೇ ಅವರು ಉಪನ್ಯಾಸ ನೀಡುತ್ತಿದ್ದರು’ ಎಂದು ರೆಡ್ಡಿಯವರು ಹೇಮಂತ್‌ ವ್ಯಕ್ತಿತ್ವದ ಚಿತ್ರಣ ನೀಡಿದರು.

‘ಉತ್ತರ ಕರ್ನಾಟಕದ ನದಿಗಳ ಬಗ್ಗೆ, ಕೆರೆತೊರೆಗಳ ಕುರಿತು, ನೀರಿನ ಸಮಸ್ಯೆ ಬಗ್ಗೆ ಅಪಾರ ಮಾಹಿತಿ ಸಂಗ್ರಹಿಸಿದ್ದ ಹೇಮಂತ್‌ ಅವುಗಳನ್ನು ಸರ್ಕಾರದ ವಿವಿಧ ಸಮಿತಿಗಳ ಮುಂದಿರಿಸಿ ವಾದ ಮಂಡಿಸುತ್ತಿದ್ದರು.  ಇವರ ಕನಸುಗಳೇ ಕೆಲವುಕಡೆ ಅನುಷ್ಠಾನಕ್ಕೆ ಬಂದಾಗ ಅದರ ಯಶಸ್ಸು ಪಡೆಯಲು ನಾಮುಂದು ತಾಮುಂದು ಎಂದು ನಿಂತವರು ಅನೇಕ ಮಂದಿ. ಹಿಂದೆ ಕೇಂದ್ರ ಸರ್ಕಾರ ಇವರನ್ನು ಕೆಲವು ಸಮಿತಿಗೆ ನೇಮಕ ಮಾಡಿಕೊಂಡು ಇವರ ಜ್ಞಾನದ ಲಾಭ ಪಡೆದಿದೆ. ನಾನು ಲೋಕ್‌ ಅದಾಲತ್‌ ಸದಸ್ಯನಾಗಿದ್ದಾಗ ಹೇಮಂತ್‌ ಅವರು ಮಹಾದಾಯಿ ನದಿ ನೀರಿಗೆ ಸಂಬಂಧಿಸಿದಂತೆ ಅದ್ಭುತವಾಗಿ ಅಧ್ಯಯನ ನಡೆಸಿ ಅಫಿಡವಿಟ್‌ ಸಲ್ಲಿಸಿದ್ದರು. ನಂತರ ಟ್ರಿಬ್ಯುನಲ್‌ ಕೂಡಾ ಅವರ ವಾದವನ್ನೇ ಎತ್ತಿಹಿಡಿಯಿತು. ಇವತ್ತು ಗುತ್ತಿಗೆದಾರರ ಮತ್ತು ರಾಜಕಾರಣಿಗಳ ಸಖ್ಯದಿಂದ ಯೋಜನೆಗಳು ರೂಪುಗೊಳ್ಳುತ್ತಿವೆ.  ಇಂತಹ ಸಖ್ಯದ ಸತ್ಯಾಸತ್ಯತೆಯನ್ನು ಹೇಮಂತ್‌ ಜನರ ಮುಂದಿಡುತ್ತಿದ್ದರು’ ಎಂದೂ ರೆಡ್ಡಿಯವರು ಈ ಸಮಾಜಕ್ಕೆ ಹೇಮಂತ್‌ ಕೊಡುಗೆಯ ಕುರಿತು ಮಾತನಾಡಿದರು.

ಹೇಮಂತ್‌ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಶಿರೋಮಣಿ ಅಕಾಲಿದಳದ ಸದಸ್ಯ, ಸಂಸದ ಹರಿಂದರ್‌ ಸಿಂಗ್‌ ಖಾಲ್ಸಾ, ಅಖಿಲ ಭಾರತ ಕಿಸಾನ್‌ ಕೋಆರ್ಡಿನೇಶನ್‌ ಸಮಿತಿಯ ಅಧ್ಯಕ್ಷ ಭೂಪಿಂದರ್‌ ಸಿಂಗ್‌ ಮಾನ್‌ ಬೆಂಗಳೂರಿಗೆ ಬಂದರು. ಹೇಮಂತ್‌ ಗೆಳೆಯರ ಬಳಗದ ಎದುರು ಬಿಕ್ಕಿ ಬಿಕ್ಕಿ ಅತ್ತರು. ಭೂಪಿಂದರ್‌ ಸಿಂಗ್‌ ಎರಡು ಅವಧಿಗೆ ಸಂಸದರಾಗಿದ್ದವರು. ಪಂಜಾಬ್‌ನ ಅತ್ಯಂತ ಗೌರವಾನ್ವಿತ ರಾಜಕಾರಣಿ. ‘ನಾನು ಹೇಮಂತ್‌ ಜತೆಗೆ ಉತ್ತರ ಭಾರತದ ಹಲವಾರು ಹಳ್ಳಿಗಳಿಗೆ ಹೋಗಿದ್ದೇನೆ. ಅನೇಕ ಸೆಮಿನಾರ್‌ಗಳಲ್ಲಿ ರೈತರ ಪರ ವಿಚಾರ ಮಂಡಿಸಿದ್ದೇವೆ. ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗಂತೂ ಹೇಮಂತ್‌ ಬಗ್ಗೆ ಅಪಾರ ಪ್ರೀತಿ ಮತ್ತು ಅಭಿಮಾನ ಇತ್ತು. ಆದರೆ ಇವರು ಉನ್ನತ ಅಧಿಕಾರದಲ್ಲಿರುವ ಯಾರನ್ನು ಭೇಟಿಯಾದರೂ ದೇಶದ ರೈತರ ಸಮಸ್ಯೆ ಬಗ್ಗೆಯೇ ತರ್ಕಬದ್ಧವಾಗಿ ಮಾತನಾಡುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಪರಿಹಾರೋಪಾಯವನ್ನೂ ನೀಡುತ್ತಿದ್ದರು. ಆದರೆ  ವೈಯಕ್ತಿಕ ನೆಲೆಯಲ್ಲಿ ಏನನ್ನೂ ಕೇಳಲಿಲ್ಲ. ಅವರ ಬಳಿ ಸರಳ ಊಟಕ್ಕಾಗುವಷ್ಟು ಹಣ, ಎರಡು ಜತೆ ಉಡುಪು, ರೈಲು ಟಿಕೇಟು ಬಿಟ್ಟರೆ ಇನ್ನೇನು ಇರುತ್ತಿರಲಿಲ್ಲ’ ಎಂದು  ಹೇಮಂತ್‌ ಅವರ ಬದುಕಿನ ಇನ್ನೊಂದು ಮುಖವನ್ನು ಭೂಪಿಂದರ್‌ ಸಿಂಗ್‌  ಕಟ್ಟಿಕೊಟ್ಟರು.

ಅಣ್ಣಾ ಹಜಾರೆ, ರಾಜಸ್ಥಾನದ ಜಲತಜ್ಞ ರಾಜೇಂದ್ರ ಸಿಂಗ್‌ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬಂದು, ಅವರೊಡನೆ ಹಲವು ಕಡೆ ಯುವಕರಿಗಾಗಿ ಅಧ್ಯಯನ ಶಿಬಿರಗಳನ್ನು ನಡೆಸಿದ್ದರು. ಭ್ರಷ್ಟಾಚಾರ, ಭೂಕಬಳಿಕೆಗಳ ವಿರುದ್ಧ  ಸ್ವಾತಂತ್ರ್ಯ ಯೋಧ ಎಚ್‌.ಎಸ್‌.ದೊರೆಸ್ವಾಮಿಯವರ ನೇತೃತ್ವದಲ್ಲಿ ನಡೆದ ಬಹುತೇಕ ಹೋರಾಟಗಳಲ್ಲಿ ಹೇಮಂತ್‌ ಹೆಗಲು ನೀಡಿದ್ದರು. ಗಾಂಧಿ ವಿಚಾರಧಾರೆಯ ಮಹತ್ವವನ್ನು ಜನರಿಗೆ ತಿಳಿಸುತ್ತಿದ್ದರು.  ಇವರು ಎಂದೂ ಮದ್ಯಪಾನ, ಧೂಮಪಾನ ಮಾಡಿದವರಲ್ಲ. ಮದುವೆಯಾಗಲಿಲ್ಲ. ತನ್ನ ಅಗತ್ಯಕ್ಕಿಂತ ಹೆಚ್ಚಿನ ನಯಾಪೈಸೆಯನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. 

ಅವರು ತೀರಿಕೊಂಡಾಗ ಮಂಡ್ಯದ ರೈತ ಹೋರಾಟಗಾರ್ತಿ ಸುನಂದಾ ಜಯರಾಮ್‌, ‘ಮಾನವತೆಯ ಮೌಲ್ಯಗಳೇ ಮೂರ್ತಿವೆತ್ತಂತಿದ್ದ ಹೇಮಂತ್‌ ಅವರನ್ನು ಈ ನಾಡಿನ ರೈತ ಸಂಘಟನೆಗಳು  ಪ್ರೀತಿಯಿಂದ ಕಾಣಲಿಲ್ಲವೇ?  ಎಂಬ ಪ್ರಶ್ನೆ ಎತ್ತಿದ್ದು ಅರ್ಥಪೂರ್ಣ ಎನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT