ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಶವಾಹಿಗಳಲ್ಲಿ ಹಠಾತ್‌ ಬದಲಾವಣೆ ಕ್ಯಾನ್ಸರ್‌ಗೆ ಕಾರಣ

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ಆ ಪುಟ್ಟ ಕುಟುಂಬ ಸಂತೃಪ್ತ  ಮತ್ತು ಸುಂದರ ಜೀವನ ನಡೆಸುತ್ತಿತ್ತು. ಉಜ್ವಲ ಬದುಕಿನ ಬಗ್ಗೆ ಹಲವು ಕನಸುಗಳನ್ನೂ ಕಟ್ಟಿಕೊಂಡಿತ್ತು. ಆ ಸಮಯದಲ್ಲಿ  ಕುಟುಂಬದ ಯಜಮಾನ ಕ್ಯಾನ್ಸರ್‌ಗೆ ತುತ್ತಾದರು. ಒಂದೇ ಕ್ಷಣದಲ್ಲಿ  ಕುಟುಂಬದ ಕನಸುಗಳು ನುಚ್ಚುನೂರಾದವು. ಇಂತಹ ಲಕ್ಷಾಂತರ ಪ್ರಕರಣಗಳು ನಮ್ಮ ಮುಂದಿವೆ. ಹತ್ತು  ಹಲವು ಬಗೆಯ ಕ್ಯಾನ್ಸರ್‌ಗಳು ಮನು ಕುಲಕ್ಕೆ, ವೈದ್ಯಲೋಕಕ್ಕೇ ಸವಾಲಾಗಿವೆ.  ಜಗತ್ತಿನ ಎಲ್ಲೆಡೆ  ಕ್ಯಾನ್ಸರ್‌ಗಾಗಿ ಹೊಸ ಔಷಧ, ವಿನೂತನ ಚಿಕಿತ್ಸಾ ವಿಧಾನಗಳ ಅನ್ವೇಷಣೆಯಲ್ಲಿ ಸಂಶೋಧಕರು ತೊಡಗಿದ್ದಾರೆ.  ಕ್ಯಾನ್ಸರ್‌ಗಳ ಪೈಕಿ ಗುದನಾಳದ (co* orecta* ) ಕ್ಯಾನ್ಸರ್‌ ಅತ್ಯಂತ ಅಪರೂಪ.  ಒಂದು ಲಕ್ಷ ಜನರಲ್ಲಿ  ಮೂರರಿಂದ ನಾಲ್ಕು ಜನರಲ್ಲಿ ಇದನ್ನು ಕಾಣಬಹುದು. ಯಾವುದೇ ವ್ಯಕ್ತಿಯಲ್ಲಿ ಈ ಕ್ಯಾನ್ಸರ್‌ ಹರಡುವುದಕ್ಕೆ ಸಾಕಷ್ಟು ಮೊದಲೇ  ಪತ್ತೆ ಮಾಡಬಹುದಾದ ವಿಧಾನವನ್ನು  ಮಣಿಪಾಲದ ‘ಸ್ಕೂಲ್‌ ಆಫ್‌ ಲೈಫ್‌ ಸೈನ್ಸ್’  ಮತ್ತು ಕಸ್ತೂರಬಾ ಮೆಡಿಕಲ್‌ ಕಾಲೇಜಿನ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ರೋಗಿಯ ಡಿಎನ್‌ಎ (ನ್ಯೂಕ್ಲಿಯಿಕ್‌ ಆಸಿಡ್‌) ಅನುಕ್ರಮಣಿಕೆ ಸರಪಳಿಯಲ್ಲಿ ಆಗುವ ಹಠಾತ್‌ ರೂಪಾಂತರ ಕ್ಯಾನ್ಸರ್‌ನ  ಮುನ್ಸೂಚನೆ ನೀಡುತ್ತದೆ.  ಈ ಮಹತ್ವದ ಸಂಶೋಧನೆ ಕುರಿತು   ‘ಸ್ಕೂಲ್‌ ಆಫ್‌ ಲೈಫ್‌ ಸೈನ್ಸಸ್‌’ನ ನಿರ್ದೇಶಕ ಪ್ರೊ. ಸತ್ಯಮೂರ್ತಿ  ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ್ದಾರೆ. 

* ಗುದನಾಳದ (co* orecta* ) ಕ್ಯಾನ್ಸರ್‌  ವ್ಯಕ್ತಿಗೆ ಅತ್ಯಂತ ದಯನೀಯ ಸ್ಥಿತಿ ತಂದೊಡ್ಡುತ್ತದೆ. ಈ ಕ್ಯಾನ್ಸರ್‌ಗೆ ಕಾರಣಗಳೇನು?
ಯಾವುದೇ ವ್ಯಕ್ತಿಯಲ್ಲಿ ಈ ಕ್ಯಾನ್ಸರ್‌ ಕಾಣಿಸಿಕೊಳ್ಳುವುದಕ್ಕೆ  ಮೊದಲು ಪಚನಾಂಗದಲ್ಲಿ ಹುಣ್ಣುಗಳಾಗುತ್ತವೆ. ದೊಡ್ಡ ಕರುಳಿಗೆ ಸಂಬಂಧ ಏರ್ಪಡುವ ಗುದನಾಳದಲ್ಲಿ ಈ ಹುಣ್ಣುಗಳು ದೀರ್ಘಕಾಲದಿಂದ ಇರುತ್ತವೆ. ಆ ಹುಣ್ಣು ಕ್ಯಾನ್ಸರ್‌ಗೆ ತಿರುಗುತ್ತದೆ ಎಂಬುದು ಅರಿವಿಗೆ ಬರುವುದರಲ್ಲಿ ಸಾಕಷ್ಟು ಸಮಯ ಕಳೆದಿರುತ್ತದೆ.  ಈ ಸ್ಥಿತಿಗೆ ಅಲ್ಸರೇಟಿವ್‌ ಕೋಲಿಟೀಸ್‌ ಎಂದು ಕರೆಯಲಾಗುತ್ತದೆ. ಕರುಳಿನ ನಾಳದಲ್ಲಿ ವೃಣ ಆಗುವುದು ಮಾತ್ರವಲ್ಲದೆ, ಒಳಾವರಣದ ಉದ್ದಕ್ಕೂ ರಕ್ತ ಸ್ರಾವವಾಗುತ್ತದೆ.
ಈ ಸ್ಥಿತಿ ಉಲ್ಬಣಿಸಲು ಮನೋ ಒತ್ತಡ ಮತ್ತು ಆಹಾರ ಕ್ರಮದಲ್ಲಿ ಆಗುವ ವ್ಯತ್ಯಾಸಗಳೂ ಕಾರಣ ಎಂದು ಶಂಕಿಸಲಾಗಿದೆ. ರೋಗ ನಿರೋಧಕ ವ್ಯವಸ್ಥೆಯ  ದೋಷಗಳು ಅಥವಾ ನಿರೋಧಕ ವಿಚಕ್ಷಣ ವ್ಯವಸ್ಥೆಯ ಲೋಪಗಳೂ ಕಾರಣವಾಗುತ್ತವೆ ಎಂದು ತರ್ಕಿಸಲಾಗಿದೆ. ಅಲ್ಲದೆ, ವಂಶವಾಹಿ ಬಳುವಳಿಯಾಗಿಯೂ ಬರುತ್ತದೆ. ಅಲ್ಸರೇಟಿವ್‌ ಕೋಲಿಟೀಸ್‌ ಸಾಮಾನ್ಯವಾಗಿ 30 ರಿಂದ 50 ವರ್ಷ ವಯೋಮಾನದವರಲ್ಲಿ ಕಾಣಿಸಿಕೊಳ್ಳುತ್ತದೆ.

* ಭಾರತದಲ್ಲಿ ಈ ಬಗೆಯ ಕ್ಯಾನ್ಸರ್‌  ಪ್ರಮಾಣವೆಷ್ಟು?
ನಮ್ಮ ದೇಶದಲ್ಲಿ ಗುದನಾಳದ ಕ್ಯಾನ್ಸರ್‌ ಪ್ರತಿ ಒಂದು ಲಕ್ಷ ಜನರ ಪೈಕಿ ಪುರುಷರಲ್ಲಿ 4.2 ಮತ್ತು ಮಹಿಳೆಯಲ್ಲಿ 3.2 ರಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ  ಭಾರತದಲ್ಲಿ ಈ ಬಗೆಯ ಕ್ಯಾನ್ಸರ್‌ ಪ್ರಮಾಣ ಹೆಚ್ಚುತ್ತಿದೆ ಎಂದು ಅಧ್ಯಯನ ವರದಿಗಳು (Cancer incidence in Five continents  data base)ಹೇಳುತ್ತವೆ. ದೇಶದ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ನಡೆಸಿರುವ ಅಧ್ಯಯನಗಳ ಪ್ರಕಾರ ಅಂತರ ರಾಷ್ಟ್ರೀಯ ಪ್ರಮಾಣಕ್ಕಿಂತ ಭಾರತದ ಪ್ರಮಾಣ ಹೆಚ್ಚು.

* ನಿಮ್ಮ ಸಂಶೋಧನೆ ಪ್ರಕಾರ, ಕರುಳಿನಲ್ಲಿ ಉಂಟಾಗುವ ದೀರ್ಘಾವಧಿ ಹುಣ್ಣುಗಳು, ಆಂತರಿಕ ರಕ್ತ ಸ್ರಾವಕ್ಕೆ ಕಾರಣಗಳೇನು? ಬಳಿಕ  ಅವು ಕ್ಯಾನ್ಸರ್‌ಗೆ ಏಕೆ ತಿರುಗುತ್ತವೆ?
ಅಲ್ಸರೇಟಿವ್‌ ಕೋಲಿಟೀಸ್‌ನಿಂದ ಬಳಲುವ ವ್ಯಕ್ತಿ 7 ವರ್ಷ ಪಾನ್‌ಕೋಲಿಟೀಸ್‌ (ಹುಣ್ಣುಗಳು) ಅಥವಾ 10 ವರ್ಷ ಎಡ ಭಾಗದಲ್ಲಿ  ಹುಣ್ಣುಗಳಿಂದ ಬಳಲುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ಗುದನಾಳದ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ.

ಭಾರತದಲ್ಲಿ ಈ ಬಗೆಯ ಕ್ಯಾನ್ಸರ್‌ ಹೆಚ್ಚಲು ಮುಖ್ಯ ಕಾರಣ ಕಲಬೆರಕೆ ಆಹಾರ ಸೇವನೆ ಹೆಚ್ಚಾಗಿರುವುದು. ಕಳೆದ ಹಲವು ವರ್ಷಗಳಿಂದ ನಮ್ಮ ಸಂಸ್ಥೆಯು    ಕ್ಯಾನ್ಸರ್‌ಗೆ ಕಾರಣವಾಗುವ ಜೈವಿಕ ಅಂಶಗಳನ್ನು ಪತ್ತೆ ಮಾಡುವ ಬಯೋ ಮಾರ್ಕರ್‌, ಕಾಯಿಲೆಯ ಯಾಂತ್ರಿಕ ವ್ಯವಸ್ಥೆ, ಕ್ಯಾನ್ಸರ್‌ ಮಾದರಿ ಮತ್ತು ನಿರ್ದಿಷ್ಟ ಕೋಶಕ್ಕೆ ಔಷಧವನ್ನು ತಲುಪಿಸಿ ಕೋಶಗಳನ್ನು ನಾಶಪಡಿಸುವ ವ್ಯವಸ್ಥೆ ಬಗ್ಗೆ ಸಾಕಷ್ಟು ಕೆಲಸ ಮಾಡಿದೆ.

ದೀರ್ಘಾವಧಿ  ಪಚನಾಂಗದಲ್ಲಿ ಮತ್ತು ದೊಡ್ಡ ಕರುಳಿನ ಉದ್ದಕ್ಕೂ ಹುಣ್ಣುಗಳು ಉಳಿದುಕೊಳ್ಳುವುದರ ಕಾರಣಗಳನ್ನು  ಪತ್ತೆ ಮಾಡಲು ನಮ್ಮ ತಂಡ ನಿರ್ಧರಿಸಿತು. ಕರುಳಿನಲ್ಲಿ ಹುಣ್ಣುಗಳಾಗಿ, ಅವು ಕ್ಯಾನ್ಸರ್‌ಗೆ ರೂಪಾಂತರಗೊಳ್ಳುವ ಹಂತದಲ್ಲಿದ್ದ ವಂಶವಾಹಿಗಳ ಅಭಿವ್ಯಕ್ತಿಯ ಅನುಕ್ರಮದ ಮೂಲಕ ಡಿಎನ್‌ಎ ವಿಶ್ಲೇಷಣೆ ನಡೆಸಲಾಯಿತು.

ಕ್ಯಾನ್ಸರ್‌ಕಾರಕ ಜೀನ್‌ಗಳಲ್ಲಿ ಮತ್ತು  ಟ್ಯೂಮರ್‌ ಆಗದಂತೆ ತಡೆಯುವ ಜೀನ್‌ಗಳಲ್ಲಿ  ಹಠಾತ್ತನೆ ಅನುವಂಶಿಕ ಲಕ್ಷಣಗಳು ಬದಲಾವಣೆ ಆಗುವುದನ್ನು ಪತ್ತೆ ಹಚ್ಚಿದೆವು.

ನಮ್ಮ ಈ ಸಂಶೋಧನೆಯಿಂದ ಹಲವಾರು ಪ್ರಯೋಜನಗಳಿವೆ. ಮುಖ್ಯವಾಗಿ, ಜಠರದ ಹುಣ್ಣುಗಳು ಮತ್ತು  ಗುದನಾಳದ ಕ್ಯಾನ್ಸರ್‌ ಬೆಳವಣಿಗೆಯನ್ನು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಬಹುದು.  ಬೇಗನೆ ಕ್ಯಾನ್ಸರ್‌ ಪತ್ತೆಗೆ ಚಿಕಿತ್ಸಾ ವಿಧಾನ ಅಭಿವೃದ್ಧಿಪಡಿಸಬಹುದು. ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸಾ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ನಮ್ಮ ಸಂಶೋಧನಾ ಪ್ರಬಂಧವು ಬ್ರಿಟಿಷ್‌ ಜರ್ನಲ್‌ ಆಫ್‌ ಕ್ಯಾನ್ಸರ್‌ನಲ್ಲಿ ಪ್ರಕಟಗೊಂಡಿದೆ.

* ಅನುವಂಶಿಕ ಲಕ್ಷಣಗಳ ಹಠಾತ್‌ ಬದಲಾವಣೆ ಮತ್ತು ಕಲಬೆರಕೆ ಆಹಾರ ಸೇವನೆಗೆ ಇರುವ ಸಂಬಂಧವನ್ನು ವಿವರಿಸಿ?
ನಿಮಗೆ ಗೊತ್ತಿರಲಿ, ಆಹಾರದಲ್ಲಿ ಅನುವಂಶಿಕ ಲಕ್ಷಣಗಳನ್ನು ರೂಪಾಂತರಗೊಳಿಸುವ ವಾಹಕಗಳು ಇರುತ್ತವೆ. ಇವು ಡಿಎನ್‌ಎಯಲ್ಲಿ ಹಠಾತ್‌ ಮಾರ್ಪಾಡುಗಳನ್ನು ಮಾಡುತ್ತವೆ.  ಡಿಎನ್‌ಎಯಲ್ಲಿರುವ ನ್ಯೂಕ್ಲಿಯಿಕ್‌ ಆಸಿಡ್‌ ಅನುಕ್ರಮದಲ್ಲಿ ಈ ಬದಲಾವಣೆ ಆಗುತ್ತವೆ.

ಅಲ್ಸರೇಟೀವ್‌ ಕೋಲಿಟೀಸ್‌  ಬಹುರೀತಿಯ ಕಾಯಿಲೆಗಳನ್ನು ಉಂಟು ಮಾಡುವ ಶಕ್ತಿಯನ್ನು ಹೊಂದಿದೆ ಮತ್ತು  ಅದು ಇರುವ ಸ್ಥಳ, ಪರಿಸರದ ಕಾರಣದಿಂದ ರೂಪಾಂತರಗೊಳ್ಳುವ (ಮ್ಯುಟೇಷನ್‌) ಸಾಮರ್ಥ್ಯವನ್ನೂ ಪಡೆದಿದೆ. ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡದೇ ಇದ್ದರೆ ಕ್ಯಾನರ್‌ ಕಟ್ಟಿಟ್ಟ ಬುತ್ತಿ.

* ಅಧ್ಯಯನದ ಸಂದರ್ಭದಲ್ಲಿ ಯಾವೆಲ್ಲ ರೀತಿಯ ಸವಾಲುಗಳು ಎದುರಾದವು?
ಅಲ್ಸರೇಟಿವ್ ಕೋಲಿಟೀಸ್‌ ರೋಗಿಗಳನ್ನು  ದೀರ್ಘಾವಧಿ ಮತ್ತು ನಿರಂತರ ಅಧ್ಯಯನಕ್ಕೆ ಒಳಪಡಿಸುವುದು ನಮಗೆ ಎದುರಾದ ದೊಡ್ಡ ಸವಾಲು.  ಅವರ ಮೇಲೆ ನಿಗಾ ಇಡಬೇಕಾಗುತ್ತಿತ್ತು. ಅವರು ಕೊಲೊನೊಸ್ಕೋಪಿ ಪರೀಕ್ಷೆಗೆ ಒಪ್ಪುತ್ತಿರಲಿಲ್ಲ. ರೋಗಿಗಳ ಪಾಲಿಗೆ ಇದು ಯಾತನೆಯ ಪರೀಕ್ಷೆ ಆಗಿತ್ತು. ಪದೇ ಪದೇ ಈ ಪರೀಕ್ಷೆಗೆ ಒಳಪಡಲು ಬಯಸುತ್ತಿರಲಿಲ್ಲ. ಹೆಚ್ಚಿನ ಪ್ರಮಾಣದ ದತ್ತಾಂಶಗಳ  ವಿಶ್ಲೇಷಣೆ ಮತ್ತು ಅಧ್ಯಯನ ಸುಸ್ಥಿರತೆಯೂ ಸವಾಲಾಗಿತ್ತು.

* ನಿಮ್ಮ ತಂಡ ನಡೆಸಿರುವ ಅಧ್ಯಯನ  ಇತರ ಕಡೆಗಳಲ್ಲಿ ನಡೆದಿದೆಯೇ ಅಥವಾ ಇದೇ ಪ್ರಥಮವೇ?
ಜಗತ್ತಿನ ಬೇರೆ ದೇಶಗಳಲ್ಲಿ  ಗುದನಾಳದ ಕ್ಯಾನ್ಸರ್‌ಗೆ ಕಾರಣವಾಗುವ ಜಠರದ ಹುಣ್ಣುಗಳ ಕಾಯಿಲೆಗೆ ಸಂಬಂಧಿಸಿದಂತೆ ಕೆಲವು ಆಣ್ವಿಕ ವಂಶವಾಹಿ ಸರಪಳಿ ಅನುಕ್ರಮ ಕುರಿತು ಅಧ್ಯಯನಗಳು ನಡೆದಿವೆ. ನಮ್ಮ ದೇಶದಲ್ಲೂ ಹಲವು ತಂಡಗಳು ಅಧ್ಯಯನದಲ್ಲಿ ನಿರತವಾಗಿವೆ. ಅಲ್ಸರೇಟಿವ್‌ ಕೋಲಿಟೀಸ್‌ನಲ್ಲಿ ಗುದನಾಳದ ಕ್ಯಾನ್ಸರ್‌ಗೆ ಸಂಬಂಧಿಸಿದ ಆಣ್ವಿಕ ಗುರುತುಗಳನ್ನು ಪತ್ತೆ ಹಚ್ಚಿವೆ. ಆದರೆ, ನಮ್ಮ ತಂಡವು ಭಾರತದಲ್ಲಿ ಪ್ರಥಮ ಬಾರಿಗೆ ‘ಎಕ್ಸೋಮ್‌ ಸಿಕ್ವೆನ್ಸಿಂಗ್‌’  ಪ್ರಕ್ರಿಯೆ ಅನುಸರಿಸಿದ್ದೇವೆ.  ಎಕ್ಸೋಮ್‌ ಸಿಕ್ವೆನ್ಸಿಂಗ್‌ ಎಂದರೆ, ಆರ್‌ಎನ್‌ಎ(ರೈಬೊ ನ್ಯೂಕ್ಲಿಯಿಕ್‌ ಆಮ್ಲ)  ಆಣ್ವಿಕದಲ್ಲಿರುವ ಎಲ್ಲ ಸಂದೇಶವಾಹಕಗಳ ಅಭಿವ್ಯಕ್ತಿ, ಸಂವೇದನೆ ಮತ್ತು ಸಂಕೇತಗಳ ಅನುಕ್ರಮ (ಆರ್‌ಎನ್‌ಎ ಸಿಕ್ವೆನ್ಸಿಂಗ್‌). ನಮ್ಮ ಅಧ್ಯಯನ ಮೌಲಿಕವಾದ ಮಾಹಿತಿಯನ್ನು ಒಳಗೊಂಡಿದೆ. ಇದು ಭವಿಷ್ಯದಲ್ಲಿ ಹೊಸ ರೋಗ ಪತ್ತೆ ವಿಧಾನಕ್ಕೆ ನಾಂದಿ ಹಾಡಲಿದೆ.

ಈ ಮಹತ್ವದ ಸಂಶೋಧನೆಯಲ್ಲಿ  ಡಾ. ಪ್ರದ್ಯುಮ್ನ, ಡಾ.ಗಣೇಶ್‌ಪೈ, ಡಾ. ಸಂಜೀಬನ್‌ ಚಕ್ರವರ್ತಿ, ಪ್ರಣೋಯ್‌ ಸಾಹು ಅವರೂ ಭಾಗವಹಿಸಿದ್ದರು. ಇದೊಂದು ತಂಡದ ಪ್ರಯತ್ನ.

**

ಕೊಲೆರೆಕ್ಟಲ್‌ ಕ್ಯಾನ್ಸರ್‌ (ಸಿಆರ್‌ಸಿ): ಕೊಲೆರೆಕ್ಟಲ್‌ ಕ್ಯಾನ್ಸರ್‌ಗೆ  ಮುಖ್ಯ ಕಾರಣ ದೊಡ್ಡ ಕರುಳಿನಿಂದ ಗುದನಾಳಕ್ಕೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಕೋಶಗಳ  ಅಸಹಜ ಬೆಳವಣಿಗೆ ಉಂಟಾಗುತ್ತದೆ. ಇದು ಕ್ರಮೇಣ ಬೇರೆ ಭಾಗಗಳಿಗೆ ಹರಡುವ ಸಾಮರ್ಥ್ಯವನ್ನು ಹೊಂದಿದೆ. ರಕ್ತ ಸೋರುವಿಕೆ, ಕರುಳಿನ ಚಲನೆಯಲ್ಲಿ ವ್ಯತ್ಯಾಸ, ದೇಹದ ತೂಕ ಇಳಿಕೆ, ಎಲ್ಲ ಸಮಯದಲ್ಲೂ ಬಳಲಿಕೆ ಪ್ರಧಾನ ಲಕ್ಷಣ. ಈ ಕ್ಯಾನ್ಸರ್‌ಗೆ ಸಾಮಾನ್ಯವಾಗಿ ವೃದ್ಧಾಪ್ಯ ಮತ್ತು ಜೀವನ ಶೈಲಿಯಲ್ಲಿ ಆಗುವ ಬದಲಾವಣೆಯೇ ಪ್ರಮುಖ ಕಾರಣ. ಸಣ್ಣ ಪ್ರಮಾಣದ ಪ್ರಕರಣಗಳಲ್ಲಿ ವಂಶವಾಹಿ ದೋಷಗಳೂ ಕಂಡು ಬಂದಿವೆ.  ಆಹಾರ, ಬೊಜ್ಜು, ಧೂಮಪಾನ, ದೈಹಿಕ ಚಟುವಟಿಕೆ ಕೊರತೆಯೂ ಕಾರಣವಾಗಬಲ್ಲದು. ಕೆಂಪು ಮತ್ತು ಸಂಸ್ಕರಿಸಿದ ಮಾಂಸ ಸೇವನೆ ಮತ್ತು ಮದ್ಯ ಸೇವನೆಯಿಂದಲೂ ಅಪಾಯವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಈ ಕ್ಯಾನ್ಸರ್‌ ಕಂಡು ಬರುತ್ತಿದೆ.

ಈ ಕ್ಯಾನ್ಸರ್‌ಗೆ ಶಸ್ತ್ರ ಚಿಕಿತ್ಸೆ, ವಿಕಿರಣ ಥೆರಪಿ, ಕಿಮೋಥೆರಪಿ ಮತ್ತು ಟಾರ್ಗೆಟೆಡ್‌ ಥೆರಪಿ ವಿಧಾನ ಅನುಸರಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಸರ್ಜರಿಯಿಂದ ಕ್ಯಾನ್ಸರ್‌ ಗುಣಪಡಿಸಬಹುದು. ದೇಹದ ಇತರ ಭಾಗಗಳಿಗೆ ಹರಡಿದರೆ ಗುಣಪಡಿಸುವುದು ಕಷ್ಟ. ಸರಿಯಾದ ನಿರ್ವಹಣೆಯಿಂದ ಗುಣಮಟ್ಟದ ಜೀವನ ಸಾಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT