ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥ ಮನಸ್ಸೇ ಸಾಕ್ಷ್ಯ ನುಡಿದಾಗ...

Last Updated 24 ಜೂನ್ 2017, 20:27 IST
ಅಕ್ಷರ ಗಾತ್ರ

‘guilty conscious needs no accuser’ ಎನ್ನುವುದು ಇಂಗ್ಲಿಷ್‌ನ ಜನಪ್ರಿಯ ಗಾದೆ. ‘ತಪ್ಪಿತಸ್ಥ ಮನಃಸಾಕ್ಷಿಗೆ ಆರೋಪಿಸುವವರು ಬೇಕಿಲ್ಲ’ ಎನ್ನುವುದು ಇದರ ಅರ್ಥ. ಮನುಷ್ಯನನ್ನು ಒಳಗೊಳಗೇ ಕೊಲ್ಲುವ ಈ ತಪ್ಪಿತಸ್ಥ ಮನಸ್ಸು ನೀಡುವ ಶಿಕ್ಷೆಗಿಂತ ಘೋರವಾದ ಶಿಕ್ಷೆ ಮತ್ತೊಂದಿರಲು ಸಾಧ್ಯವಿಲ್ಲ. ಈ ಶಿಕ್ಷೆಗೆ ಇರುವುದು ಒಂದೇ ಪರಿಹಾರ, ಅದೆಂದರೆ ತಪ್ಪೊಪ್ಪಿಕೊಳ್ಳುವುದು.

ನಾನು ಹೇಳಲು ಹೊರಟಿರುವ ಈ ಪ್ರಕರಣ ಮನುಷ್ಯನ ಹಲವು ಮುಖಗಳ, ದೌರ್ಬಲ್ಯಗಳ ಪರಿಚಯ ಮಾಡಿಕೊಡುವಂಥದ್ದು.

ಪೌಜರಾಜ ಎಂಬಾತ ಕೊಲೆಯಾದ. ಈ ಕೊಲೆಯ ತನಿಖೆ ನಡೆಸಿದ ಪೊಲೀಸರು ಅಂಬಯ್ಯನನ್ನು ದಸ್ತಗಿರಿ ಮಾಡಿದರು. ಅಂದೇ ಸಂಜೆ ಆತನ ಕಡೆಯವರು ನನ್ನ ಬಳಿ ಬಂದು ಅಂಬಯ್ಯನ ಪರ ವಕಾಲತ್ತು ವಹಿಸಲು ಕೇಳಿಕೊಂಡರು. ಕೊಲೆಯ ವಿವರಗಳನ್ನು, ಅಂಬಯ್ಯನ ಗುಣಗಳನ್ನು ಅವರಿಂದ ಕೇಳಿ ತಿಳಿದುಕೊಂಡೆ. ಅವನ ಗುಣಗಾನ ಕೇಳಿದ ನನಗೆ ಅವನು ಕೊಲೆ ಮಾಡಿರಲು ಸಾಧ್ಯವೇ ಇಲ್ಲ ಎಂದು ಎನಿಸತೊಡಗಿತು. ಆದರೆ ಕೊಲೆಗೆ ಸಂಬಂಧಿಸಿದ ಪೊಲೀಸ್‌ ದಾಖಲೆಗಳನ್ನು ಪರಿಶೀಲಿಸಿದಾಗ ಇವನೇ ಕೊಲೆ ಮಾಡಿರಲಿಕ್ಕೆ ಸಾಕು ಎಂಬ ಸಾಕ್ಷ್ಯಾಧಾರಗಳು ಅದರಲ್ಲಿದ್ದವು.

***
ಅಂಬಯ್ಯನ ಸ್ನೇಹಿತ ಮನೋಜ ಶ್ರೀಮಂತ ಮತ್ತು ಆಕರ್ಷಕ ವ್ಯಕ್ತಿ. ಮನೋಜನಿಗೆ ತನ್ನ ತಂಗಿ ಜಯಂತಿಯನ್ನು ಕೊಟ್ಟು ಮದುವೆ ಮಾಡಬೇಕು ಎಂಬುದು ಅಂಬಯ್ಯನ ಬಯಕೆಯಾಗಿತ್ತು. ಆದರೆ ಜಯಂತಿ ಪೌಜರಾಜ ಎಂಬುವವನನ್ನು ಪ್ರೀತಿಸುತ್ತಿದ್ದಳು. ಮದುವೆಯಾಗುವುದಾದರೆ ಪೌಜರಾಜನನ್ನೇ ಎಂದು ಅವಳು ತೀರ್ಮಾನಿಸಿದ್ದಳು. ಬೇರೆ ಜಾತಿಗೆ ಸೇರಿದವನಾದರೂ ವಿದ್ಯಾವಂತ, ಸಂಭಾವಿತ ಜೊತೆಗೆ ಸ್ಥಿತಿವಂತನೂ ಆಗಿದ್ದ ಪೌಜರಾಜ್‌. ಆದ್ದರಿಂದ ಜಯಂತಿಯ ಪ್ರೇಮಕ್ಕೆ ಮನೆಯವರ ತಕರಾರು ಇರಲಿಲ್ಲ. ಇದರ ಬಗ್ಗೆ ಸ್ವಲ್ಪ ಮಗುಮ್ಮಾಗಿದ್ದವನೆಂದರೆ ಅಂಬಯ್ಯನೇ. ಮನೋಜನನ್ನೇ ಮದುವೆಯಾಗುವಂತೆ ತಂಗಿಯ ಜೊತೆ ಒಂದೆರಡು ಬಾರಿ ಪ್ರಸ್ತಾಪಿಸಿಯೂ ಇದ್ದ. ಆದರೆ ಆಕೆ ಸುತರಾಂ ಒಪ್ಪಲಿಲ್ಲ. 

ಅಷ್ಟರಲ್ಲಿಯೇ ಪೌಜರಾಜ ಕೊಲೆಯಾದ. ತನ್ನ ತಂಗಿಯ ಪ್ರೇಮದಿಂದ ಅಸಮಾಧಾನಗೊಂಡ ಅಂಬಯ್ಯನೇ ಕೊಲೆ ಮಾಡಿದ್ದಾನೆ ಎನ್ನುವುದಕ್ಕೆ ಪೊಲೀಸರಿಗೆ ಸಿಕ್ಕ ಸಾಕ್ಷ್ಯಾಧಾರಗಳು ಸಾರಿಹೇಳುತ್ತಿದ್ದವು. ಇದೇ ದಾಖಲೆಯನ್ನು ನಾನು ಪರಿಶೀಲಿಸಿದ್ದೆ. ಆದರೆ ಪ್ರಕರಣದ ವಿಚಾರಣೆಯ ಆರಂಭಿಕ ಹಂತದಲ್ಲಿ ನನಗೆ ಈ ಮಾಹಿತಿಯ ಸತ್ಯಾಸತ್ಯತೆಯನ್ನು ಕುರಿತು ವಿಚಾರ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಅಂಬಯ್ಯ ಸಂದರ್ಭಗಳ ಬಲಿಪಶುವಾಗಿರಬೇಕು ಎಂದು ನಾನು ನಂಬಿದರೂ ಅವುಗಳನ್ನೆಲ್ಲ ಮುನ್ನೆಲೆಗೆ  ತರಲು ಸಾಧ್ಯವಾಗುವುದು ಕೋರ್ಟ್‌ನಲ್ಲಿ ವಿಚಾರಣೆ ವೇಳೆಯಲ್ಲಿ ಮಾತ್ರ. ಆ ದಿನಕ್ಕಾಗಿ ಕಾದಿದ್ದೆ.

***

ಇತ್ತ, ಅಂಬಯ್ಯನ ಹೆಂಡತಿಯ ತಂಗಿ ಮಣಿಯ ಮದುವೆ ನಿಶ್ಚಯವಾಗಿತ್ತು. ‘ದಾಸೋಹಮೂರ್ತಿ ರಾಗಿಗೌಡ ಕಲ್ಯಾಣ ಮಂಟಪ’ಕ್ಕೆ ಪೂರ್ತಿ ಹಣ ಪಾವತಿಸಿ ಮದುವೆ ತಯಾರಿ ಸಾಗುತ್ತಿತ್ತು. ಮಣಿಗೆ   ತಾಯಿ ಮತ್ತು ಅಕ್ಕ ವಾಣಿ, ಭಾವ ಅಂಬಯ್ಯ ಹೊರತಾಗಿ ಮತ್ತಾವ ಹತ್ತಿರದ ಸಂಬಂಧಿಗಳೂ ಇರಲಿಲ್ಲ. ಮಣಿಯ ಮದುವೆಯ ಸಂಪೂರ್ಣ ಜವಾಬ್ದಾರಿ ಅಕ್ಕ–ಭಾವನ ಮೇಲಿತ್ತು.  ಆದರೆ ಮಣಿ, ಹಸೆಮಣೆ ಏರುವ ಕೆಲವೇ  ದಿನಗಳ  ಮುಂಚೆ  ಭಾವ ಅಂಬಯ್ಯ  ಕೊಲೆ ಆರೋಪದ ಮೇಲೆ ಜೈಲು ಪಾಲಾಗಿದ್ದ.

ಅಂಬಯ್ಯ ತನ್ನ ಗೆಳೆಯ ಮನೋಜನನ್ನು ಜೈಲಿಗೆ ಕರೆಸಿಕೊಂಡ. ನಾದಿನಿಯ ಮದುವೆ ಸಾಂಗವಾಗಿ ನೆರವೇರಿಸುವಂತೆ ವಿನಂತಿಸಿದ. ಮನೋಜ, ಪ್ರಾಣ ಕೊಡಲೂ ಸಿದ್ಧನಿರುವಂತೆ ‘ಎಷ್ಟೇ ಖರ್ಚಾದರೂ ಮದುವೆಯನ್ನು ನಾನು ಮಾಡಿಸುತ್ತೇನೆ. ನೀನು ಭಯಪಡಬೇಡ. ಎಷ್ಟೇ ಖರ್ಚಾದರೂ ಪರವಾಗಿಲ್ಲ’ ಎಂದು ಸ್ನೇಹಿತನಿಗೆ ಅಭಯ ನೀಡಿಬಂದ. ಇದರಿಂದಾಗಿ, ಅಂಬಯ್ಯ ಸ್ವಲ್ಪ ನಿರಾಳನಾದ.

ಆದರೆ ಸಂಬಂಧಿಕರಿಗೆ ಮಣಿಯ ಧಾರೆಯನ್ನು ವಾಣಿ–ಅಂಬಯ್ಯ ದಂಪತಿಯೇ ನಡೆಸಬೇಕು ಎಂಬ ಹಂಬಲ. ಆದ್ದರಿಂದ ಅಂಬಯ್ಯನನ್ನು ಜಾಮೀನಿನ ಮೇಲೆ ಮದುವೆಯ ಸಂದರ್ಭದಲ್ಲಿ ಹೇಗಾದರೂ ಹೊರತರುವಂತೆ ಬಂದಿದ್ದವರು ನನ್ನನ್ನು ಕೋರಿದರು. ಅವರ ಮಾತುಗಳಲ್ಲಿ ಕಾನೂನು ತೊಡಕಿನ ವಿಚಾರವಿರಲಿಲ್ಲ, ಏನು-ಎತ್ತಗಳ ಹಂಗಿರಲಿಲ್ಲ. ಬಿಕ್ಕಟ್ಟಿನ ಸ್ಥಿತಿಯಲ್ಲಿ ಒಂದು ಪುಣ್ಯದಕೆಲಸ ಆಗಬೇಕೆನ್ನುವುದೊಂದೇ ಅವರ ಇಂಗಿತವಾಗಿತ್ತು.

ನನ್ನ ತಲೆ ಗೊಂದಲದ ಗೂಡಾಯಿತು. ಅಂಬಯ್ಯ ದಸ್ತಗಿರಿಯಾಗಿರುವುದು ‘ಕೊಲೆ’ ಎಂಬ ಗಂಭೀರ ಪ್ರಕರಣದಲ್ಲಿ. ಕೊಲೆ ಆರೋಪಿಗೆ ತನಿಖೆಯ ಸಂದರ್ಭದಲ್ಲಿ ಜಾಮೀನು ಮಂಜೂರು ಮಾಡಬಾರದು ಎನ್ನುತ್ತದೆ ಕಾನೂನು. ಆದರೆ ಮದುವೆಯ ವಿಷಯವನ್ನು ಕೋರ್ಟ್‌ ಮುಂದಿಟ್ಟು, ಈ ಮದುವೆಯಲ್ಲಿ ಅಂಬಯ್ಯನ ಹಾಜರಾತಿ ಅನಿವಾರ್ಯ ಎಂದು ನ್ಯಾಯಾಧೀಶರಿಗೆ ಹೇಗಾದರೂ ಮಾಡಿ ಮನವರಿಕೆ ಮಾಡಿಕೊಡಲು ತೀರ್ಮಾನಿಸಿದೆ. ಆದ್ದರಿಂದ ತಾತ್ಕಾಲಿಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದೆ.

ಇದರ ವಿಚಾರಣೆ ಕೋರ್ಟ್‌ ಮುಂದೆ ಬಂತು. ಪಬ್ಲಿಕ್  ಪ್ರಾಸಿಕ್ಯೂಟರ್‌ ಅವರು ಜಾಮೀನಿಗೆ ವಿರುದ್ಧವಾಗಿ ಸ್ವಲ್ಪ ಹೆಚ್ಚೇ ಎನ್ನುವಂತೆ ವಾದ ಮಂಡಿಸಿದರು.

‘ಇಂಥವರಿಗೆ ಜಾಮೀನು  ನೀಡಲೇಬಾರದು. ಆರೋಪಿಯ ಮೇಲಿರುವ ಆರೋಪಕ್ಕೆ ಗಲ್ಲು ಇಲ್ಲವೇ  ಜೀವಾವಧಿ ಶಿಕ್ಷೆಯಿದೆ. ಇದೇ ಭಯದಿಂದ ಆತ ತಲೆ ಮರೆಸಿಕೊಳ್ಳಬಹುದು. ಆತ ತಲೆ ಮರೆಸಿಕೊಂಡರೆ ತನಿಖಾಧಿಕಾರಿಯು ತನಿಖೆಯನ್ನು ಬಿಟ್ಟು ಆತನನ್ನು ಹುಡುಕಲು ಹೊರಡಬೇಕಾಗುತ್ತದೆ, ತನಿಖೆ ಶಿಥಿಲಗೊಂಡು ದಿಕ್ಕು ತಪ್ಪಬಹುದು. ಹೀಗಾಗುವುದನ್ನು ತಪ್ಪಿಸಬೇಕಾದರೆ ನ್ಯಾಯಾಲಯ ಆರೋಪಿಯ ಅರ್ಜಿಯನ್ನು ನಿರ್ದಯವಾಗಿ ತಿರಸ್ಕರಿಸಬೇಕು’ ಎಂದು ಒತ್ತಾಯಪೂರ್ವಕವಾಗಿ ವಾದಿಸಿದರು.

ಅದಕ್ಕೆ ನಾನು, ‘ಪಬ್ಲಿಕ್  ಪ್ರಾಸಿಕ್ಯೂಟರ್‌ ಅವರ ವಾದವು ಸರಿಯಾದ ದಿಕ್ಕಿನಲ್ಲಿದೆ ಮತ್ತು ಅರ್ಥಪೂರ್ಣವಾಗಿದೆ ಎಂದು ನಾನು ಮನಸಾರೆ ಒಪ್ಪುತ್ತೇನೆ. ಆದರೆ ನನ್ನ ಅರ್ಜಿ ತಾತ್ಕಾಲಿಕ  ಜಾಮೀನಿನ ಕುರಿತಾಗಿದೆ.  ಅಂಬಯ್ಯನನ್ನು  ಇಬ್ಬರು  ಅಥವಾ ಮೂವರು ಪೊಲೀಸ್‌ ಬೆಂಗಾವಲಿನಲ್ಲಿ  ಮೂರು  ದಿನಗಳ  ಮಟ್ಟಿಗೆ  ಮದುವೆ  ಮನೆಗೆ  ಕಳುಹಿಸಿಕೊಡುವ ಆದೇಶವನ್ನು  ಜೈಲು  ಅಧಿಕಾರಿಗಳಿಗೆ ಕೊಡುವುದಾದರೆ ಪಬ್ಲಿಕ್ ಪ್ರಾಸಿಕ್ಯೂಟರ್‌ ಸಂದೇಹವನ್ನು ಕೊನೆಗಾಣಿಸಬಹುದು’ ಎಂದು ನ್ಯಾಯಾಲಯವನ್ನು ಕೇಳಿಕೊಂಡೆ. ಮೂರು  ದಿನಗಳ (ಹಗಲು ಮತ್ತು ರಾತ್ರಿ) ಪೊಲೀಸ್‌ ಉಸ್ತುವಾರಿಗೆ ತಗಲುವ ವೆಚ್ಚವನ್ನು ಆರೋಪಿಯೇ ಭರಿಸುವುದಾಗಿಯೂ ಹೇಳಿದ ನಾನು ಇದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ಕೆಲವು  ಬೆಂಬಲಿತ ತೀರ್ಪುಗಳನ್ನು ಉಲ್ಲೇಖಿಸಿ  ವಾದ ಮುಗಿಸಿದೆ. ನನ್ನ ಮಾತನ್ನು ಸಮ್ಮತಿಸಿದ ನ್ಯಾಯಾಧೀಶರು ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರಿಗೆ ‘ಆರೋಪಿಯನ್ನು   ಜೈಲಿನಿಂದ ಮೂರು ದಿನಗಳ ಮಟ್ಟಿಗೆ  ಪೊಲೀಸ್‌ ಕಾವಲಿನ ಜೊತೆಗೆ ಹೊರಗೆ ಕಳಿಸಿ ಅವನ ವಾಸ್ತವ್ಯವನ್ನು ಕಲ್ಯಾಣ  ಮಂಟಪದಲ್ಲಿಯೇ ಮಾಡಿಸಿ, ಅದಕ್ಕೆ ತಗುಲುವ ವೆಚ್ಚವನ್ನು ಅವನೇ ಭರಿಸುವಂತೆ ಮಾಡಿ  ಷರತ್ತುಬದ್ಧ ತಾತ್ಕಾಲಿಕ ಜಾಮೀನನ್ನು ಕೊಡುವುದಾದರೆ ನೀವು ಒಪ್ಪುವಿರೇನು?’ ಎಂದು ನೇರವಾಗಿ ಪ್ರಶ್ನಿಸಿದರು. ಆಗ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರು ನೇರವಾಗಿ ಉತ್ತರಿಸದೆ, ‘ಸ್ವಾಮಿ,  ಪೊಲೀಸ್‌ ಬಂದೋಬಸ್ತ್ ಇದ್ದೂ ಆರೋಪಿ ತಲೆ ತಪ್ಪಿಸಿಕೊಂಡು ಹೋದರೆ ಹೊಣೆಗಾರರು ಯಾರಾಗಬೇಕಾಗುತ್ತದೆ?’ ಎಂದು ಮರುಪ್ರಶ್ನಿಸಿದರು. ಸಿಡಿಮಿಡಿಗೊಂಡ ನ್ಯಾಯಾಧೀಶರು ‘ನಿಮ್ಮ ಪೊಲೀಸರು ಅಷ್ಟೊಂದು ಅಸಮರ್ಥರಾದರೆ ಬೆಂಗಾವಲಿಗೆ ನಾನು ಹೋಗಲೇನು?’ ಎಂದಾಗ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರು ಸ್ವಲ್ಪ ಗಲಿಬಿಲಿಗೊಂಡು ‘ನನ್ನ  ಪ್ರಶ್ನೆಯಲ್ಲಿ ಅಂಥ  ಅರ್ಥವಿರಲಿಲ್ಲ’ ಎಂದು  ನಗುತ್ತಾ  ತಲೆಯಾಡಿಸಿದರು.  

‘ಆರೋಪಿಯು ಮೂರು ದಿನಗಳ ಕಾಲ ಮೂವರು ಪೊಲೀಸರ ಬೆಂಗಾವಲಿನಲ್ಲಿ ಕಲ್ಯಾಣ ಮಂಟಪದಲ್ಲಿ ಇರಬೇಕು. ಅದಕ್ಕೆ  ತಗಲುವ  ವೆಚ್ಚವನ್ನು  ಆರೋಪಿ ಕಡೆಯಿಂದ ಪಡೆದು ಕೊಳ್ಳಲು ಬಂದಿಖಾನೆಯ ಸಂಬಂಧಪಟ್ಟ ಅಧಿಕಾರಿಗಳು ಏರ್ಪಾಡು ಮಾಡಬೇಕು’ ಎಂದು ನ್ಯಾಯಾಧೀಶರು ಆದೇಶಿಸಿದರು. ಬೆಂಗಾವಲಿಗೆ ಪೊಲೀಸ್‌ ಸಮವಸ್ತ್ರದಲ್ಲಿ  ಹೋದರೆ ಕಲ್ಯಾಣ  ಮಂಟಪದಲ್ಲಿ ಕಸಿವಿಸಿ ಏರ್ಪಡುವ ಸಾಧ್ಯತೆಯಿದ್ದು ಮಫ್ತಿಯಲ್ಲಿ ಹೋಗಿಬರಲು ಅನುಮತಿಸುವಂತೆ ಮಾಡಿದ ನನ್ನ  ಮನವಿಗೆ ನ್ಯಾಯಾಲಯ  ಒಪ್ಪಿತು.

ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಮದುವೆಯ ಆರತಕ್ಷತೆ ಕಾರ್ಯಕ್ರಮ, ಭಾನುವಾರ ಬೆಳಿಗ್ಗೆ ಮುಹೂರ್ತ ಮತ್ತು ಸಂಜೆ ಪ್ರಸ್ತದ ಶಾಸ್ತ್ರಗಳಿದ್ದವು. ಕಲ್ಯಾಣ ಮಂಟಪದ ವ್ಯಾಪ್ತಿಗೆ ಬರುವ ಪೊಲೀಸ್‌ ಠಾಣೆಯ ಒಬ್ಬ ಹೆಡ್‌ಕಾನ್‌ಸ್ಟೆಬಲ್‌ ಮತ್ತು  ಇಬ್ಬರು ಕಾನ್‌ಸ್ಟೆಬಲ್‌ ಬೆಂಗಾವಲಿನಲ್ಲಿ ಅಂಬಯ್ಯನನ್ನು ಜೈಲು ಅಧಿಕಾರಿಗಳು ಕಲ್ಯಾಣ ಮಂಟಪಕ್ಕೆ ಶುಕ್ರವಾರದಂದು ಕಳುಹಿಸಿಕೊಟ್ಟರು.

ಮದುವೆಯ ಎರಡೂ ದಿನಗಳಲ್ಲಿ ಅಂಬಯ್ಯನ ಗೆಳೆಯ ಮನೋಜನದ್ದೇ ಕಾರುಬಾರು. ತನ್ನ ಹಿಂದೆ ಒಂದಷ್ಟು ಜನರನ್ನು ಕಟ್ಟಿಕೊಂಡು ತನ್ನಿಂದಲೇ ಈ ಮದುವೆ ನಡೆಯುತ್ತಿದೆ ಎನ್ನುವಂತೆ ಪೋಸ್ ಕೊಡುತ್ತಿದ್ದ. ದುಃಖಿತಳಾಗಿದ್ದ ಜಯಂತಿಯನ್ನು ಆಗಾಗ್ಗೆ ಮಾತನಾಡಿಸುತ್ತಾ, ಅವಳಿಗೆ ಧೈರ್ಯ ತುಂಬತ್ತಾ, ಭರವಸೆಗಳನ್ನು ಕೊಡುತ್ತಾ ಮದುವೆ ಮಂಟಪದ ತುಂಬಾ ಓಡಾಡುತ್ತಿದ್ದ. ಮಂಟಪ ತುಂಬಾ ಮನೋಜ ಮತ್ತು ಅವನ ಹಿಂಬಾಲಕರೇ ಆಕ್ರಮಿಸಿಕೊಂಡಿದ್ದರು. ತನ್ನ ಸ್ನೇಹಿತ ಇಷ್ಟೆಲ್ಲಾ ಮುತುವರ್ಜಿ ವಹಿಸಿ ಓಡಾಡಿಕೊಂಡಿದ್ದನ್ನು ಕಂಡ ಅಂಬಯ್ಯ ತಾನು ಇಂಥ ಸ್ನೇಹಿತನನ್ನು ಪಡೆದುಕೊಂಡಿರುವುದಕ್ಕೆ ಧನ್ಯನಾದೆ ಎಂದುಕೊಳ್ಳುತ್ತಿದ್ದ.
ಶನಿವಾರ ಮತ್ತು ಭಾನುವಾರ ನಿಗದಿಯಾದಂತೆ ಆರತಕ್ಷತೆ, ಮುಹೂರ್ತ, ಪ್ರಸ್ತದ ಶಾಸ್ತ್ರ ಎಲ್ಲಾ ಮುಗಿಯಿತು. ಒಂದು ಕೋಣೆಯಲ್ಲಿ ನವ ವಧುವರರು, ಅದರ ಎದುರು ಕೋಣೆಯಲ್ಲಿ ಅಂಬಯ್ಯ ದಂಪತಿ ಮತ್ತು ಇತರ ಸಂಬಂಧಿಗಳಿಗೆ ಉಳಿದುಕೊಳ್ಳಲು ಬೇರೆ ಕೋಣೆಗಳಲ್ಲಿ ವ್ಯವಸ್ಥೆಯಾಗಿತ್ತು. ಅದರಂತೆ ಭಾನುವಾರ ರಾತ್ರಿ ಹತ್ತು ಗಂಟೆಗೆ ಎಲ್ಲರೂ ತಮಗೆ ನಿಗದಿಯಾಗಿದ್ದ ಕೋಣೆಗಳಿಗೆ ಮಲಗಲು ಹೋದರು. ಬೆಂಗಾವಲಿಗೆ ಬಂದಿದ್ದ ಪೊಲೀಸರು  ಅಂಬಯ್ಯ ಮತ್ತು ಅವನ ಹೆಂಡತಿ ಮಲಗಿದ್ದ ರೂಮಿನ ಹೊರಗೆ ವರಾಂಡದಲ್ಲಿ ಮಲಗಿದ್ದರು. 

ರಾತ್ರಿ ಹನ್ನೊಂದು ಗಂಟೆಯ ಮೇಲೆ ಕೋಣೆಯೊಂದರಿಂದ ಜೋರಾಗಿ ಸದ್ದುಗದ್ದಲವಾಗುತ್ತಿತ್ತು. ಇದನ್ನು ಕೇಳಿಸಿಕೊಂಡ ಬೆಂಗಾವಲಿಗೆ ಬಂದಿದ್ದ ಹೆಡ್‌ ಕಾನ್‌ಸ್ಟೆಬಲ್‌ ಗಲಾಟೆ ಶಬ್ದ ಕೇಳಿಬರುತ್ತಿದ್ದ ಕೋಣೆಯ ಹತ್ತಿರ ಹೋದ. ತೆರೆದಿದ್ದ ಕಿಟಕಿಯೊಂದರಿಂದ ಇಣುಕಿ ನೋಡಿದಾಗ ಮನೋಜ್ ಮತ್ತು  ಅವನ  ಹಿಂಬಾಲಕರು ಕುಡಿಯುತ್ತಾ ಸಿಗರೇಟು ಸೇದುತ್ತಿದ್ದರು. ವಿಪರೀತ ಕುಡಿದಿದ್ದ ಮನೋಜ್ ಅಮಲಿನಲ್ಲಿ ಏನೇನೋ ಬಡಬಡಾಯಿಸುತ್ತಿದ್ದ. ಮಾತಿನ ನಡುವೆ ಅಂಬಯ್ಯನ ಬಗ್ಗೆ ಹೇಳುತ್ತಾ, ‘ಅಂಬಯ್ಯನಿಗೆ ಈ ಗತಿ ಬರಬಾರದಿತ್ತು. ಅವನೊಬ್ಬ ಅಮಾಯಕ. ಪಾಪ, ಅವನು ಜೈಲೊಳಗಿರುವುದು ನನ್ನನ್ನು ಸೀಳಿ ತಿನ್ನುತ್ತಿದೆ. ಅವನ ಜಾಗದಲ್ಲಿ ಇರಬೇಕಾದ ನಾನು ಕುಡಿದು  ಕುಪ್ಪಳಿಸುತ್ತಿದ್ದೇನೆ. ಪಾಪ ಆತ...  ಪೌಜರಾಜನ ಕೊಲೆ ಮಾಡಿದ್ದು ನಾನೇ ಎಂದು ಒಂದು ಕ್ಷಣವೂ ಆತ ಅನುಮಾನಿಸಲಿಲ್ಲ. ಆ ನಿಯತ್ತಿಗಾಗಿ ಅವನ ನಾದಿನಿಯ ಮದುವೆಗೆ ನಾನೇ ಲಕ್ಷಾಂತರ ರೂಪಾಯಿ ಚೆಲ್ಲುತ್ತಿದ್ದೇನೆ. ಇದರಿಂದ  ಅಂಬಯ್ಯನಿಗೆ  ಸಂತೋಷವಾಗಿದ್ದರೆ ಅಷ್ಟೇ ಸಾಕು. ಮುಂದೆ ನಾನು ಅಂಬಯ್ಯನನ್ನು ಕೈಬಿಡೊಲ್ಲ. ಇದೇ ವಕೀಲರನ್ನು ಮುಂದುವರೆಸಿ ಅವನನ್ನು ಬಿಡುಗಡೆ ಮಾಡಿಸಿಕೊಂಡು ಬರುವವರೆಗೆ ಸುಮ್ಮನಿರುವವನಲ್ಲ. ಅವನು ಹೊರಗೆ ಬರಲಿ, ಆಮೇಲೆ ಅವನ ತಂಗಿ ಜಯಂತಿ ವಿಚಾರ ನೋಡಿಕೊಂಡರಾಯಿತು. ಅವಳು ಯಾವತ್ತಿದ್ದರೂ ನನ್ನ ಪಾಲೇ’ ಎನ್ನುತ್ತಿದ್ದ.

ಈ ಮಾತುಗಳನ್ನು ಕೇಳಿಸಿಕೊಂಡ ಹೆಡ್‌ಕಾನ್‌ಸ್ಟೆಬಲ್‌, ಬೆಂಗಾವಲಿನ ಕೆಲಸ ಮುಗಿದ ಮೇಲೆ ತನಿಖಾಧಿಕಾರಿಗೆ ಅದನ್ನು  ಚಾಚೂತಪ್ಪದೆ ಒಪ್ಪಿಸಿದ. ಈ ಮಾಹಿತಿ ಪಡೆದ ತನಿಖಾಧಿಕಾರಿ ಮನೋಜನ ದಸ್ತಗಿರಿ ಮಾಡಿ ಅವನ ಸ್ವ-ಇಚ್ಛಾ ಹೇಳಿಕೆ ಮತ್ತು ಇತರ ಸಾಕ್ಷಿದಾರರ ಹೇಳಿಕೆಗಳನ್ನು ಪಡೆದು ಅವನನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸಿದರು.

ಇನ್ನು ಏನೂ ಉಳಿದಿರಲಿಲ್ಲ. ಸತ್ಯ ಎಲ್ಲರ ಮುಂದಿತ್ತು. ತನಿಖೆ ಪಡೆದುಕೊಂಡ ಈ ತಿರುವಿನಿಂದಾಗಿ ಅಂಬಯ್ಯ, ಕೊಲೆ ಮಾಡಿಲ್ಲ ಎಂದು ಸಾಬೀತಾಯಿತು. ಆದ್ದರಿಂದ  ಆರೋಪಪಟ್ಟಿಯಿಂದ ಅವನ ಹೆಸರನ್ನು ತೆಗೆಯಲಾಯಿತು.

ತನ್ನ ಕಣ್ಣಮುಂದೆ ನೇತಾಡುವ ನೇಣುಕುಣಿಕೆಯ ಕಲ್ಪನೆಯಿಂದ ತತ್ತರಿಸುತ್ತಿದ್ದ ಅಂಬಯ್ಯ, ಒಂದು ಕ್ಷಣವೂ ಮನೋಜನ ಮಿತ್ರದ್ರೋಹವನ್ನು ಎಣಿಸಿರಲಿಲ್ಲ. ಮನೋಜನ ಧಿಮಾಕು, ಉಡಾಫೆಯನ್ನು ಜಯಂತಿ ಗುರುತಿಸಿದಷ್ಟು ಸೂಕ್ಷ್ಮವಾಗಿ ಅಂಬಯ್ಯ ಗ್ರಹಿಸಲು ಸಾಧ್ಯವಾಗಿರಲೇ ಇಲ್ಲ. ಅವನಿಗೆದುರಾದ ಎಲ್ಲಾ ಎಡವಟ್ಟುಗಳಿಗೂ ಅವನ ಈ ದೌರ್ಬಲ್ಯವೇ ಕಾರಣವಾಗಿತ್ತು. ಜೈಲಿನಿಂದ ಬಿಡುಗಡೆಗೊಂಡ ಅಂಬಯ್ಯ, ಸೀದಾ ಪೊಲೀಸ್ ಠಾಣೆಗೆ ಹೋಗಿ, ಬೆಂಗಾವಲಿಗೆ ಬಂದಿದ್ದ ಆ ಮೂರು ಜನ ಕಾನ್‌ಸ್ಟೆಬಲ್‌ಗಳಿಗೆ ಕೈಮುಗಿದು ಬಂದ.

(ಹೆಸರುಗಳನ್ನು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT